ಇದು ಯಾರಿಗೂ ತಿಳಿಯದ ಮೈಸೂರು ಅರಮನೆ..! ಇದಕ್ಕಿದೆ ಕುತೂಹಲಕಾರಿ ಇತಿಹಾಸ
1 min read
ಮೈಸೂರು ಅಂದರೆ ದೇಶ-ವಿದೇಶಗಳ ಜನರಿಗೂ ನೆನಪಾಗುವುದು ಮೈಸೂರು ಅರಮನೆ, ಅದಕ್ಕೂ ಮೀರಿ ಮೈಸೂರಿನಲ್ಲಿರುವ ಪ್ರಮುಖ ಅರಮನೆಗಳು ಯಾವುದು ಅಂದರೆ ತಲೆಗೆ ಹಲವಾರು ಹೆಸರುಗಳು ಬರುತ್ತವೆ. ಮೈಸೂರಿನಲ್ಲಿರುವ ಎಷ್ಟೋ ಅರಮನೆಗಳು ಇನ್ನೂ ಪ್ರಸಿದ್ಧವಾಗಿಲ್ಲ. ಜನರಿಗೆ ತಿಳಿಯದ ವಿಚಾರಗಳನ್ನು ಲೆಕ್ಕ ಹಾಕಿದರೆ ಎಷ್ಟೋ ಆಗುತ್ತದೆ. ಅದರ ಪೈಕಿ ಒಂದು ಈ ಅಲೋಕ ಪ್ಯಾಲೆಸ್.

ಅಲೋಕ ಪ್ಯಾಲೆಸ್ ಬಗ್ಗೆ ನೀವು ಕೇಳಿರದೇ ಇರಬಹುದು. ಆದರೆ ಅದನ್ನ ನೋಡಿರದಿರಲು ಸಾಧ್ಯವೇ ಇಲ್ಲ. ರಾಜಕುಮಾರ ಚಿತ್ರದ ಅನಾಥಾಶ್ರಮವೇ ಈ ಅಲೋಕ ಪ್ಯಾಲೇಸ್. ಇದು ಕೂಡಾ ಮೈಸೂರಿನ ಹೆಮ್ಮೆಯ ಅರಮನೆಗಳಲ್ಲೊಂದು. ಅರಮನೆ ನಗರಿ ಎಂದು ಮೈಸೂರಿಗೆ ಬಿರುದು ಬರಲು ಅಲೋಕ ಪ್ಯಾಲೆಸ್ ನ ಕೊಡುಗೆಯೂ ಗಮನಾರ್ಹ. ಇದರ ಹಿಂದೆ ಭವ್ಯ ಇತಿಹಾಸವಿದೆ. ಮೈಸೂರು ರಾಜಮನೆತನದ ಕುತೂಹಲಕಾರಿ ಕಥೆಗಳಿವೆ. ನೀವು ತಿಳಿಯಲೇಬೇಕಾದ ಕೆಲವು ಅಂಶಗಳಿವೆ.
ಅಲೋಕ ಪ್ಯಾಲೆಸ್ ಇರುವುದು ಮೈಸೂರಿನ ಇಲವಾಲ ಹೋಬಳಿಯಲ್ಲಿ. ಮೈಸೂರು ನಗರದಿಂದ ಸುಮಾರು 12 ಕಿ.ಮೀ. ದೂರವಿರುವ ಇದು ನಿರ್ಮಾಣವಾಗಿದ್ದು 1806-1810ರ ಸಂದರ್ಭದಲ್ಲಿ. ಆಗ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದುದು ಮುಮ್ಮಡಿ ಕೃಷ್ಣರಾಜ ಒಡೆಯರ್. ಆಗ ಈ ಸ್ಥಳಗಳೆಲ್ಲಾ ಪೂರ್ತಿಯಾಗಿ ಕಾಡಾಗಿತ್ತು. ಮಹಾರಾಜರು ಇಲ್ಲಿಗೆ ಬರುತ್ತಿದ್ದುದು ಬೇಟೆಯಾಡಲು ಮಾತ್ರ. ಅಂದು ಮಹಾರಾಜರು ಬೇಟೆಗೆ ಎಂದು ಈ ಸ್ಥಳಕ್ಕೆ ಬಂದಿರುತ್ತಾರೆ. ಅಂದಾಜಿನಲ್ಲಿ ಒಂದು ಬೇಟೆಯನ್ನ ಹೊಡೆದುರುಳಿಸುತ್ತಾರೆ. ಆದರೆ ಅದು ಹದ್ದಾಗಿರುತ್ತದೆ. ಅನ್ಯಾಯವಾಗಿ ಒಂದು ಹದ್ದಿನ ಜೀವ ಬಲಿ ತೆಗೆದುಕೊಂಡಹಾಗಾಯಿತಲ್ಲ ಎಂಬ ಪಾಪಪ್ರಜ್ಞೆ ಅವರನ್ನ ಕಾಡುತ್ತದೆ. ತನ್ನಿಂದಾಗಿ ಪ್ರಾಣಬಿಟ್ಟ ಹದ್ದಿಗೆ ಹೇಗಾದರೂ ನ್ಯಾಯ ದೊರಕಿಸಿಕೊಡಬೇಕು ಎಂದು ಈ ಕಟ್ಟಡವನ್ನ ಹದ್ದಿನ ಆಕಾರದಲ್ಲೇ ಕಟ್ಟಬೇಕೆಂದು ತಾಕೀತು ಮಾಡುತ್ತಾರೆ. ನೀವು ಈಗಲೂ ಈ ಕಟ್ಟಡವನ್ನ ಗಮನಿಸಿ ನೋಡಿದರೆ, ಅಥವಾ ಮೇಲಿನಿಂದ ನೋಡಿದರೆ ಅದರ ಆಕಾರ ತಿಳಿಯುತ್ತದೆ. ಮಧ್ಯ ಭಾಗ ಹದ್ದಿನ ದೇಹದಂತೆ, ಅತ್ತ-ಇತ್ತಲಿನ ಜಾಗ ರೆಕ್ಕೆಗಳಂತೆ ನಿರ್ಮಿಸಲಾಗಿದೆ. ಇದನ್ನ ನೋಡಿದಾಗ ಎರಡು ಶತಮಾನಗಳ ಹಿಂದೆಯೇ ನಮ್ಮಲ್ಲಿ ಅದೆಂತಹ ನುರಿತ ಕೆಲಸಗಾರರಿದ್ದರು ಎಂಬುದು ತಿಳಿಯುತ್ತದೆ.



ಇದನ್ನು ಕಟ್ಟಿಸಿದ ನಂತರ ರಾಜರು ಇತ್ತ ಬಂದಾಗ ಇಲ್ಲೇ ತಂಗಲು ಶುರುಮಾಡುತ್ತಾರೆ. ಜೊತೆಗೆ ಯುದ್ಧಕ್ಕೆ ಸಂಬಂಧಪಟ್ಟ ಅತಿಮುಖ್ಯ ಶಸ್ತ್ರಾಸ್ತ್ರಗಳನ್ನು ಇಡಲು ಇದನ್ನೇ ಕೇಂದ್ರಸ್ಥಳವನ್ನಾಗಿ ಮಾಡಿಕೊಳ್ಳುತ್ತಾರೆ. ನಿರ್ಮಾಣವಾಗಿರುವುದು ಬರೋಬ್ಬರಿ 538 ಎಕರೆ ಜಾಗದಲ್ಲಿ. ಆಗಿನ ಕಾಲದಲ್ಲಿ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನ ನಿಷೇಧ ಮಾಡಲಾಗಿತ್ತು. ರಾಜಮನೆತನದವರು ಬಿಟ್ಟು ಮತ್ಯಾರಿಗೂ ಇಲ್ಲಿಗೆ ಬರಲು ಅವಕಾಶವಿರಲಿಲ್ಲ.
ಕ್ರಮೇಣ ಕಾಲ ಬದಲಾಯಿತು. ರಾಜರ ಆಳ್ವಿಕೆ ಹೋಗಿ ಸರ್ಕಾರ ಬಂತು. ಆಗ ಈ ಕಟ್ಟಡವನ್ನ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಆದರೂ ಅಲ್ಲಿ ಆಗಿರುವ ಅಭಿವೃದ್ಧಿ ಅಷ್ಟರಲ್ಲೇ ಇದೆ. ನಂತರ ಈ ಸ್ಥಳದಲ್ಲಿ ಕೆಲವು ದಿನಗಳ ಕಾಲ ಕಾವಾ ಕಾಲೇಜು ನಡೆಯಿತು. ಆನಂತರ ಕಾವಾ ಕಾಲೇಜನ್ನ ಸಯ್ಯಾಜಿರಾವ್ ರಸ್ತೆಗೆ ಸ್ಥಳಾಂತರಿಸಲಾಯಿತು. ನಂತರದ ದಿನಗಳಲ್ಲಿ ಸಿನಿಮಾ ಶೂಟಿಂಗ್, ಎನ್.ಸಿ.ಸಿ ಕ್ಯಾಂಪ್ ಗೆ ಈ ಸ್ಥಳ ಮೀಸಲಾಯಿತು. ಆಗಾಗ ಪ್ರವಾಸಿಗರೂ ಕೂಡಾ ಇಲ್ಲಿ ಬಂದು ಹೋಗಲು ಶುರುಮಾಡಿದರು.
ಈಗ ಅಲೋಕ ಪ್ಯಾಲೇಸ್ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಸಿನಿಮಾ ಶೂಟಿಂಗ್ ಗೆ ಬಂದವರು ಸುಣ್ಣ-ಬಣ್ಣ ಹೊಡೆಸಿದರೆ ಮಾತ್ರ ಇದಕ್ಕೆ ದುರಸ್ತಿ ಭಾಗ್ಯ. ಅಲ್ಲಿ ಹೋದರೆ ಕಾಣಸಿಗುವುದು ವರ್ಷಾನುಗಟ್ಟಲೆಯಿಂದ ಸುಣ್ಣ ಕಾಣದ ಗೋಡೆಗಳು, ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿ ಸೊರಗಿ ಹೋಗಿರುವ ವಾತಾವರಣ, ಅವ್ಯವಸ್ಥೆ ಅಷ್ಟೇ. ಬಂದ ಪ್ರವಾಸಿಗರಿಗೆ ಬಳಸಲು ಶೌಚಾಲಯ ಕೂಡಾ ಇಲ್ಲ. ಕೆಲವು ವರ್ಷಗಳ ಹಿಂದೆ 50 ಲಕ್ಷ ರೂ ವೆಚ್ಚದಲ್ಲಿ ಇಲ್ಲಿ ಟ್ರೀ ಪಾರ್ಕ್ ಒಂದನ್ನ ನಿರ್ಮಿಸಲಾಗಿದೆ. ಬರೀ ಮರದಿಂದ ಮಾಡಿದ ವಿವಿಧ ಬಗೆಯ ಆಟವಾಡುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ. ಆದರೆ ಪ್ರಚಾರದ ಕೊರತೆಯಿಂದ ಇಲ್ಲಿಗೆ ಯಾರೂ ಬರುತ್ತಿಲ್ಲ, ಅದು ಯಾರ ಪ್ರಯೋಜನಕ್ಕೂ ಬಂದಿಲ್ಲ ಎಂಬುದೇ ದುರ್ದೈವ. ‘ಎಷ್ಟೋ ಜನ ಬರುತ್ತಾರೆ ಹೋಗುತ್ತಾರೆ. ಆದರೆ ಈ ಸ್ಥಳ ಮಾತ್ರ ಅಭಿವೃದ್ಧಿಯಾಗಿಲ್ಲ. ಯಾವ ಭರವಸೆಗಳು ಕೂಡಾ ನಿಜವಾಗಿಲ್ಲ. ಚಿರತೆ ಸಮಸ್ಯೆಯೂ ಹಾಗಯೇ ಇದೆ. ಜೀವಭಯದಲ್ಲಿ ಜೀವನ ಸಾಗಿಸುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಅಲ್ಲಿನ ಸಿಬ್ಬಂದಿ.