Fri. Jan 22nd, 2021

Namma Mysuru

History, News, Stories and much more

ಮತದಾನ ಪದ್ಧತಿ ಶುರುವಾಗಿದ್ದು ಯಾವಾಗ..? 1951 ಅಲ್ಲ, 1892…!

1 min read
498 Views

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ರಾಜಕೀಯ, ನಾಯಕರು, ಜನಸಾಮಾನ್ಯರು ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಪ್ರಭುಗಳನ್ನು ಪ್ರಜೆಗಳೇ ಆಯ್ಕೆ ಮಾಡುವ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದ ಹೆಮ್ಮೆ. ಈ ಹಕ್ಕು ನಮಗಿರುವುದಕ್ಕೆ ನಾವೇ ಧನ್ಯರು ಎಂದೆಲ್ಲಾ ಅನಿಸುವುದು ಸಹಜ. ಈ ಒಂದು ಪದ್ಧತಿಯಿಂದ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತದೆ. ಕಳೆದ ಆರೇಳು ದಶಕಗಳಿಂದ ನಾವು ಮತ ಹಾಕುತ್ತಲೇ ಬಂದಿದ್ದೀವಿ. ಆದರೆ ಮತದಾನದ ಪದ್ಧತಿ ಮೊದಲು ಎಲ್ಲಿ ಬಂದಿದ್ದು ಎಂಬುದರ ಬಗ್ಗೆ ಸುಮಾರು ಜನಕ್ಕೆ ತಿಳಿದಿಲ್ಲ. ಕೇಳಿದರೆ ಬಹುಶಃ ಅರ್ಧಂಬರ್ಧ ಮಾಹಿತಿ ತಿಳಿದಿರಬಹುದು. ಆದರೆ ಇಲ್ಲಿ ಖಚಿತ ಮಾಹಿತಿ ಇದೆ.  ಮೊದಲು ಮತದಾನದ ಪದ್ಧತಿ ಬಂದಿದ್ದು ಯಾವಾಗ ಅಂದರೆ 1951ರಲ್ಲಿ ಎನ್ನುತ್ತೀವಿ. ಸತ್ಯ ಇರುವುದೇ ಬೇರೆ. ಮತದಾನ ಮೊದಲ ಬಾರಿಗೆ ಆಗಿದ್ದು 1892ರಲ್ಲಿ. ಇಷ್ಟೇ ಆಗಿದ್ದರೆ ವಿಷಯ ಇಷ್ಟು ಸ್ವಾರಸ್ಯಕರವಾಗಿರುತ್ತಿರಲಿಲ್ಲ. ಇದರ ವಿಶೇಷತೆ ಏನೆಂದರೆ ಮೊದಲ ಮತದಾನವಾಗಿದ್ದು ನಮ್ಮ ಮೈಸೂರಿನಲ್ಲಿ.!

ಅದು 1861ರ ಸಮಯ. ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆಗ ನಗರಗಳಿಗೆ ಮೂಲ ಸೌಕರ್ಯ ಒದಗಿಸುವುದು, ನಗರವನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವುದು  ಬ್ರಿಟಿಷ್ ಸರ್ಕಾರದ ಮೊದಲ ಆದ್ಯತೆ. ಅದಕ್ಕಾಗಿಯೇ  ಪೌರಸಭೆಗಳನ್ನ ಸ್ಥಾಪಿಸಲು ಎಲ್ಲಾ ಸಂಸ್ಥಾನಗಳಿಗೂ ಆದೇಶಿಸಲಾಗಿತ್ತು. ಅದರಂತೆಯೇ 1862ರಲ್ಲಿ ಮೈಸೂರಿನಲ್ಲಿ ಪೌರಸಭೆ ಶುರುವಾಯಿತು. ಅದಾದ ಬಳಿಕ ಪೌರಸಭೆಯ ನಾಯಕತ್ವದಲ್ಲಿ ಸಂಸ್ಥಾನ ಸುಭೀಕ್ಷವಾಗಿ ನಡೆದುಕೊಂಡು ಹೋಗುತ್ತಿತ್ತು. ಆನಂತರ 20 ವರ್ಷಗಳ ಬಳಿಕ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ರಿಗೆ ಹೊಸ ಉಪಾಯವೊಂದು ಹೊಳೆಯಿತು. ಅವರಿಗೆ ಆ ಉಪಾಯ ಹೊಳೆದ ಕ್ಷಣವೇ “ಮತದಾನ” ಎಂಬ ಅದ್ಭುತ ಪದ್ಧತಿ ಹುಟ್ಟಿದ ಕ್ಷಣ. ಎಲ್ಲ ನಾಯಕರನ್ನು, ಪೌರಸಭೆ ಸದಸ್ಯರನ್ನು ನಾವೇ ಏಕೆ ಆಯ್ಕೆ ಮಾಡಬೇಕು..? ಈ ಕೆಲಸವನ್ನು ಗಣ್ಯರ ಬಳಿ ಏಕೆ ಮಾಡಿಸಬಾರದು ಎಂಬ ಯೋಚನೆ ಚಾಮರಾಜ ಒಡೆಯರ್ ರಿಗೆ ಬಂತು. ವಿಶೇಷ ಅಂದರೆ ಈಗಿನಂತೆ ಆಗ ಎಲ್ಲಾ ಪ್ರಜೆಗಳಿಗೂ ಮತದಾನದ ಹಕ್ಕು ಇರಲಿಲ್ಲ. ನಗರದಲ್ಲಿರುವ ಗಣ್ಯರ ಬಳಿ ಮಾತ್ರ ಮತದಾನ ಮಾಡಿಸಲು ನಿರ್ಧರಿಸಲಾಗಿತ್ತು. ಮೈಸೂರು ಮಹಾರಾಜರು, ತೆರಿಗೆದಾರರ ಸಂಘದ  ಅಧ್ಯಕ್ಷರು, ಮರಿಮಲ್ಲಪ್ಪ ಶಾಲೆಯ ಮುಖ್ಯೋಪಾಧ್ಯಾಯರು, ಅರಮನೆ ನಿವಾಸಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರ ಗಣ್ಯರು ಮಾತ್ರ ಮತದಾನ ಮಾಡಿ ಪೌರಸಭೆಗೆ ಸದಸ್ಯರನ್ನು ಆರಿಸಬಹುದಾಗಿತ್ತು. ಇವರೆಲ್ಲಾ ಸೇರಿ ಇದ್ದಿದ್ದು 250 ಮಂದಿ ಮಾತ್ರ..! ಮತದಾನ ಹಾಗೂ ಆಡಳಿತಕ್ಕೆ ಸುಲಭವಾಗಲಿ ಎಂದು ಮಹಾರಾಜರು ಮತ್ತೊಂದು ಹೆಜ್ಜೆ ಮುಂದಿಟ್ಟು ಆಗ ಮೈಸೂರನ್ನು 7 ಭಾಗಗಳಾಗಿ ವಿಂಗಡಣೆ ಮಾಡಿದರು. ಈಗ ನಾವು ವಿಧಾನಸಭಾ, ಲೋಕಸಭಾ ಕ್ಷೇತ್ರಗಳು, ವಾರ್ಡ್ ಗಳು ಎನ್ನುತ್ತೀವಿ. ಆದರೆ ಆ ಪರಿಕಲ್ಪನೆ ಆಗಲೇ ಇತ್ತು ನೋಡಿ. ಇದು ನಮ್ಮ ಮೈಸೂರನ್ನಾಳಿದ ಒಡೆಯರ್ ರವರ ದೂರದೃಷ್ಟಿಗೆ ನಿದರ್ಶನ ಹಾಗೂ ಸಣ್ಣದೊಂದು  ಉದಾಹರಣೆಯಷ್ಟೇ. ಕಾರಣಕ್ಕಾಗಿ ಮೈಸೂರು ನಗರವನ್ನು ದೇವರಾಜ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಮಂಡಿ ಮೊಹಲ್ಲಾ, ಚಾಮರಾಜ, ಕೃಷ್ಣರಾಜ, ಪೋರ್ಟ್ ಮೊಹಲ್ಲಾ ಹಾಗೂ ನಜರ್ ಬಾದ್ ಎಂದು ಏಳು ಭಾಗಗಳಾಗಿ ವಿಂಗಡಣೆ ಮಾಡಲಾಯಿತು. ಇದೇ ಪದ್ಧತಿ ಮುಂದೆಯೂ ನಡೆದುಕೊಂಡು ಬಂತು. ಈಗಲೂ ನಡೆದುಕೊಂಡು ಬರುತ್ತಿದೆ. ವಿಶೇಷವೆಂದರೆ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರಗಳ ಹೆಸರು ಇನ್ನೂ ಹಾಗೆಯೇ ಇದೆ. ಜೊತೆಗೆ  ಲಷ್ಕರ್ ಮೊಹಲ್ಲಾ, ಮಂಡಿ ಮೊಹಲ್ಲಾ, ನಜರ್ ಬಾದ್ ಏರಿಯಾಗಳ ಹೆಸರನ್ನೂ ಹಾಗೇ ಉಳಿಸಿಕೊಳ್ಳಲಾಗಿದೆ. ಈ ಹೆಸರುಗಳು ಕೂಡಾ ಪರಂಪರೆಯ ಕುರುಹುಗಳು ಎಂದರೆ ಅತಿಶಯೋಕ್ತಿಯಲ್ಲ.

ಹೀಗೆ ಮೈಸೂರು ಮಹಾರಾಜರು ಶತಮಾನದ ಹಿಂದೆಯೇ ಮತದಾನದ ಪದ್ಧತಿ ಪರಿಚಯಿಸಿದ್ದರು ಎಂದು ಹೇಳಿಕೊಳ್ಳುವುದಕ್ಕೆ ಇಡೀ ಕರ್ನಾಟಕಕ್ಕೆ ಹೆಮ್ಮೆಯಾಗುತ್ತದೆ. ಈಗಿರುವ ಮತದಾನ ಪದ್ಧತಿಯ ಉಗಮಕ್ಕೆ ಇದೇ ಕಾರಣ, ಇದೇ ಸ್ಫೂರ್ತಿ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಾತಂತ್ರ್ಯಾನಂತರ ರಾಷ್ಟ್ರದ ನಾಯಕರಲ್ಲಿ ಬಂದ ಮತದಾನದ ಪರಿಕಲ್ಪನೆ ಅಷ್ಟು ವರ್ಷಗಳ ಹಿಂದೆ ನಮ್ಮ ರಾಜರಿಗೆ ಇತ್ತು ಎಂಬುದು ಸೋಜಿಗದ ಸಂಗತಿ. ಅಷ್ಟು ದೂರದೃಷ್ಟಿ ಹೊಂದಿ, ಎಲ್ಲಾ ವಿಭಾಗಗಳಲ್ಲೂ ಮೈಸೂರನ್ನು ಮಾದರಿ ನಗರ ಮಾಡಿದ ಮಹಾರಾಜರಿಗೆ ನನ್ನದೊಂದು ಕೃತಜ್ಞತೆ.  

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!