ರೋಡ್ ಕಿಂಗ್ ನ ರೋಚಕ ಸ್ಟೋರಿ..! ಜಾವಾ ಜಮಾನದಲ್ಲೊಂದು ಸುತ್ತು.
1 min read
ರಸ್ತೆಯಲ್ಲಿ ಹೋಗುತ್ತಿದ್ದರೆ ಇದರದ್ದೇ ಹವಾ. ಯಾರು ಗಾಡಿ ಕೊಳ್ಳಬೇಕೆಂದ್ರು ಇದಕ್ಕೇ ಮೊದಲ ಆದ್ಯತೆ. ಹುಡುಗಿಯರ ಎದೆಬಡಿತ ಹೆಚ್ಚಾಗುವಂತೆ ಮಾಡುತ್ತಿದ್ದ, ಹುಡುಗರಿಗೆ ಗಾಡಿ ಓಡಿಸುವಾಗ ಎದೆಯುಬ್ಬಿಸಿಕೊಂಡು ಹೆಮ್ಮೆಯಿಂದ ಹೋಗುವಂತೆ ಮಾಡುತ್ತಿದ್ದ ಗಾಡಿ ಅಂದರೆ ಇದೇ. ಇದರ ಉಗಮಸ್ಥಾನ ಮೈಸೂರು ಅನ್ನೋದು ಮೈಸೂರಿಗರಿಗೆ ಹೆಮ್ಮೆಯ ವಿಚಾರ. ಆಗಿನ ಕಾಲದಲ್ಲಿ ಕಾರುಗಳನ್ನ ಬಿಟ್ಟು ಜನ ಬೈಕುಗಳತ್ತ ತಿರುಗಿ ನೋಡುವಂತೆ ಮಾಡಿ, ಬೈಕ್ ನಲ್ಲಿ ಓಡಾಡೋದನ್ನ ಟ್ರೆಂಡ್ ಗೆ ತಂದ ಜಾವಾ ಉಗಮಸ್ಥಾನ ನಮ್ಮ ಮೈಸೂರು. ನಮ್ಮ ಮೈಸೂರಿನಲ್ಲೇ ಜಾವಾ ಕಾರ್ಖಾನೆ ಇದ್ದಿದ್ದು. ಬೇರೆಲ್ಲಾ ಕಡೆಗೂ ಜಾವಾ ಬೈಕ್ ಗಳು ಇಲ್ಲಿಂದಲೇ ರಫ್ತಾಗುತ್ತಿದ್ದುದು. ಆಗಿನ ಕಾಲ ಹೇಗಿತ್ತೆಂದರೆ ಮದುವೆ ಸಂದರ್ಭದಲ್ಲಿ ಹೆಣ್ಣು ಕೊಡುವಾಗ ಹುಡುಗನ ಬಳಿ ಜಾವಾ ಬೈಕ್ ಇತ್ತೆಂದರೆ ಆತನ ಮನೆಗೆ ಕಣ್ಣು ಮುಚ್ಚಿಕೊಂಡು ಹೆಣ್ಣು ಕೊಡುತ್ತಿದ್ದರು. ಡುಗ್ ಡುಗ್..ಡುಗ್ ಡುಗ್ ಎಂದು ಸದ್ದು ಮಾಡಿಕೊಂಡು ರಸ್ತೆಗಿಳಿದರೆ ಸಾಕು, ಇದನ್ನ ತಡೆಯೋರೇ ಇರುತ್ತಿರಲಿಲ್ಲ. ಅಷ್ಟರಮಟ್ಟಿಗಿತ್ತು 90ರ ದಶಕದಲ್ಲಿನ ಜಾವಾ ಹವಾ.
ಜಾವಾದ ಇತಿಹಾಸ:
ಜಾವಾದ ವಿಸ್ತ್ರತ ರೂಪ “ಜಯಚಾಮರಾಜೇಂದ್ರ ಒಡೆಯರ್” (‘JA’yachamarajendra ‘WA’diyar = JAWA). ಜಾವಾ ಕಾರ್ಖಾನೆ ಮೊದಲು ಶುರುವಾಗಿದ್ದು ಮೈಸೂರಿನಲ್ಲಿ. ಅದು 1960ರಲ್ಲಿ. 60ರ ದಶಕದಲ್ಲಿ ಜೆಕೋಸ್ಲೋವಾಕಿಯಾ ದೇಶದ ಸಹಯೋಗದೊಂದಿಗೆ ಸ್ಥಾಪಿಸಲ್ಪಟ್ಟ ಜಾವಾ ಕಾರ್ಖಾನೆ ಇದ್ದದ್ದು ಯಾದವಗಿರಿಯಲ್ಲಿ. 1960ರಲ್ಲಿ ಶುರುವಾದ ಕಾರ್ಖಾನೆ 1961ರಲ್ಲಿ ಕಾರ್ಯಾರಂಭ ಮಾಡಿತು. ಆಗ ಮೈಸೂರು ನಗರದಲ್ಲಿ ಹೆಚ್ಚು ಉದ್ಯಮಿಗಳು, ಹೂಡಿಕೆದಾರರು ಇರಲಿಲ್ಲ. ಇದ್ದದ್ದು ಕೆಲವರು ಮಾತ್ರ. ಅದರಲ್ಲಿ ಎಫ್.ಕೆ.ಇರಾನಿಯವರು ಪ್ರಮುಖರು. ಕೋಟ್ಯಾಂತರ ರುಪಾಯಿ ವ್ಯಾಪಾರ ವಹಿವಾಟುಗಳನ್ನ ಮಾಡಿದ್ದವರು ಇರಾನಿ. ಜಾವಾ ಕಾರ್ಖಾನೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇದೇ ಎಫ್.ಕೆ.ಇರಾನಿ. ಈ ಕಂಪನಿ ಶುರುಮಾಡುವಾಗ ಅಂದಿನ ಮೈಸೂರು ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎರಡೂ ಸೇರಿ ಉತ್ತೇಜನ ನೀಡಿ ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಸೇರಿದ ಕೆಲವು ಭಾಗಗಳನ್ನ ಇದರ ಉಪಯೋಗಕ್ಕೆ ನೀಡಿತು. ಕೊನೆಗೂ “ದಿ ಐಡಿಯಲ್ ಜಾವಾ ಲಿಮಿಟೆಡ್ ಕಂಪನಿ (ಇಂಡಿಯಾ)” ಮೂರು ಅಂತಸ್ತಿನ ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಜಾವಾ ಕಂಪನಿಯ ಉದ್ದೇಶ ಒಂದೇ. ನಮ್ಮ ದೇಶದಲ್ಲೇ ತಯಾರಾದ ಕಚ್ಚಾ ವಸ್ತುಗಳನ್ನ ಉಪಯೋಗಿಸಿ ಪಕ್ಕಾ ದೇಸೀ ಮೋಟಾರನ್ನ ತಯಾರು ಮಾಡಬೇಕೆಂಬುದು. ಈ ನಿಟ್ಟಿನಲ್ಲಿ ಕೆಲಸ ಶುರುಮಾಡಿದ ಜಾವಾ ಕಂಪನಿಯ ಕೀರ್ತಿ ಕೇವಲ ಎರಡೇ ವರ್ಷಗಳಲ್ಲಿ ಎಲ್ಲೆಡೆ ಹಬ್ಬಲು ಶುರುವಾಯ್ತು. ಕಾರ್ಖಾನೆಯಲ್ಲಿದ್ದ ವಿದ್ಯುತ್ ಲೇಪನ ವಿಭಾಗ ಸೇರಿದಂತೆ ಮತ್ತೊಂದಿಷ್ಟು ವಿಚಾರಗಳು ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಉತ್ತಮ ಗುಣಮಟ್ಟದ್ದಾಗಿತ್ತು. ಬೈಕ್ ತಯಾರಿಕೆಗಾಗಿ ಬೇರೆ ದೇಶಗಳಿಂದ ಅತ್ಯುನ್ನತ ಯಂತ್ರೋಪಕರಣಗಳನ್ನ ಅಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲಿನ ಕಾರ್ಮಿಕರ ಶ್ರಮ ಹಾಗೂ ಆಡಳಿತ ಮಂಡಳಿಯ ಉತ್ತೇಜನದಿಂದ ಜಾವಾ ಅತ್ಯಂತ ಕಡಿಮೆ ಸಮಯದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು. ಚಲನಚಿತ್ರಗಳಲ್ಲೂ ಕೂಡಾ ಜಾವಾ ಬೈಕ್ ನದ್ದೇ ಕಾರುಬಾರು. ಆಗಿನ ಕಾಲದಲ್ಲಿ ಈ ಕಂಪನಿಯಲ್ಲಿ ಕೆಲಸ ಮಾಡುವುದೆಂದರೆ ಪ್ರತಿಷ್ಟೆಯ ಸಂಕೇತ. ಸರ್ಕಾರಿ ಉದ್ಯೋಗಿಗಳಿಗೂ ಸಿಗದ ಸವಲತ್ತು, ಬೆಲೆ ಜಾವಾ ಉದ್ಯೋಗಿಗಳಿಗೆ ಸಿಗುತ್ತಿತ್ತು ಎಂದರೆ ನೀವು ನಂಬಲೇಬೇಕು. ಒಂದಷ್ಟು ವರ್ಷ ಜಾವಾ ಅಕ್ಷರಶಃ ರೋಡ್ ಕಿಂಗ್ ಆಗಿ ಮೆರೆದಾಡಿತು. ಎಫ್.ಕೆ.ಇರಾನಿಯವರ ಗೌರವಾರ್ಥವಾಗಿ ಮೈಸೂರಿನ ಒಂದು ವೃತ್ತಕ್ಕೆ ಅವರ ಹೆಸರನ್ನು ಇಡಲಾಗಿದೆ.

ನೇಪಥ್ಯಕ್ಕೆ ಸರಿದ ಜಾವಾ ಹವಾ:
ಸೂರ್ಯನು ಎಂದೂ ಮುಳುಗನು ಎಂಬಂತಹ ಸಾಮ್ರಾಜ್ಯವನ್ನು ಸ್ಥಾಪಿಸುವ ಸನಿಹದಲ್ಲಿದ್ದ ಜಾವಾ ಕಂಪನಿಗೆ ದಿನೇ ದಿನೇ ಸಮಸ್ಯೆಗಳು ಎದುರಾಗಲು ಶುರುವಾಯ್ತು. ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಗೆ ತಲುಪಿಸಲು ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮುಂಬೈಯಿಂದ ಕಾರ್ಖಾನೆಗೆ ಬರಬೇಕಾದ ಭಾರೀ ಪ್ರಮಾಣದ ಯಂತ್ರೋಪಕರಣಗಳನ್ನ ತರಿಸಿಕೊಳ್ಳಲು ಬ್ರಾಡ್ ಗೇಜ್ ರೈಲ್ವೇ ಹಳಿ ಇರಲಿಲ್ಲ. ಆದರೂ ಕಾರ್ಮಿಕರು ಸಂಸ್ಥೆಯನ್ನ ಉಳಿಸಿಕೊಳ್ಳಲು ಪ್ರಯತ್ನ ಪಟ್ಟರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಫ್.ಕೆ.ಇರಾನಿಯವರು ಇದ್ದಕ್ಕಿದ್ದಂತೆ ನಿಧನರಾದರು. ನಂತರದ ದಿನಗಳಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಯಾವುದೂ ಸರಿಹೋಗುತ್ತಿರಲಿಲ್ಲ. ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಕೆಲಸ ಮಾಡುತ್ತಿರಲಿಲ್ಲ. ಕಾರ್ಮಿಕರು ಹಿಂದೆಂದೂ ಮಾಡದಂತೆ ಮುಷ್ಕರಗಳನ್ನ ಮಾಡಲು ಶುರುವಿಟ್ಟರು. ತಮ್ಮ ಸಂಸ್ಥೆ ನಷ್ಟದಲ್ಲಿದ್ದರೂ ಬೇರೆ ಕಂಪನಿಯೊಂದಿಗೆ ಸಹಭಾಗಿತ್ವ ಪಡೆದುಕೊಳ್ಳಲು ಆಡಳಿತ ಮಂಡಳಿ ಮನಸ್ಸು ಮಾಡಲಿಲ್ಲ. ಯಾರೇ ಬಂದರೂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ. ಇದೇ ಸಮಯಕ್ಕೆ ಜಾವಾಗೆ ಪ್ರತಿಸ್ಪರ್ಧಿಗಳಾಗಿದ್ದ, ಜಾವಾ ಎಡವುವುದನ್ನೇ ಕಾಯುತ್ತಿದ್ದ ಜಪಾನ್ ನ ಸುಜುಕಿ ಹಾಗೂ ಇನ್ನಿತರ ಕಂಪನಿಗಳು ಬೆಳೆಯಲಾರಂಭಿಸಿದವು. ಈ ಕಂಪನಿಗಳು ಜಾವಾದ ಸಮಾಧಿ ಮೇಲೆ ತಮ್ಮ ಸಾಮ್ರಾಜ್ಯವನ್ನ ಕಟ್ಟಿಕೊಂಡವು. ಕೊನೆಗೂ ಆ ದುರ್ಘಟನೇ ನಡೆದೇ ಹೋಯಿತು. ಜಾವಾ ಸಂಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿ 1996ರಲ್ಲಿ ಕಂಪನಿಯನ್ನ ಮುಚ್ಚಲಾಯಿತು.
ಜಾವಾದ ಸದ್ಯದ ಪರಿಸ್ಥಿತಿ:
ಡುಗ್ ಡುಗ್ ಸದ್ದು ಮಾಡುತ್ತಿದ್ದ, ರೋಡ್ ಕಿಂಗ್ ಎನಿಸಿಕೊಳ್ಳುತ್ತಿದ್ದ ಜಾವಾ ತಯಾರಾಗುತ್ತಿದ್ದ ಸ್ಥಳದಲ್ಲಿ ಈಗ ಇರುವುದು ಖಾಸಗಿ ಕಂಪನಿಯೊಂದರ ವಸತಿ ಸಮುಚ್ಛಯವಷ್ಟೇ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ಬರೋಬ್ಬರಿ 1500 ಜನ ಕಾರ್ಮಿಕರು ರಾತ್ರಿ ಬೆಳಗಾಗುವುದರೊಳಗೆ ನಿರುದ್ಯೋಗಿಗಳಾದರು. ಅವರನ್ನೇ ನಂಬಿಕೊಂಡಿದ್ದ ಅವರ ಕುಟುಂಬ ಮುಂದಿನ ದಾರಿ ತಿಳಿಯದೇ ಕಂಗಾಲಾಯ್ತು. ಇಂದಿಗೂ ಕೂಡಾ ಈ ಕಂಪನಿ ಮುಚ್ಚಿದ್ದರಿಂದ ಸಂಕಷ್ಟ ಅನುಭವಿಸುತ್ತಿರುವ ಎಷ್ಟೋ ಜನ ನಮ್ಮ ನಡುವೆಯೇ ಇದ್ದಾರೆ. ಅದಾದ ನಂತರ ಯಾರೂ ಎಷ್ಟೇ ಪ್ರಯತ್ನ ಪಟ್ಟರೂ ಕಂಪನಿ ಮತ್ತೆ ಪ್ರಾರಂಭವಾಗಲಿಲ್ಲ. ಆ ಹೊಡೆತದಿಂದ ಈಚೆ ಬರಲು ಕಾರ್ಮಿಕರಿಗೆ ದಶಕಗಳೇ ಬೇಕಾಯ್ತು. ಈಗಲೂ ಅಲ್ಲಿನ ಎಷ್ಟೋ ಕಾರ್ಮಿಕರು ಕಂಪನಿಯನ್ನ ಮತ್ತೆ ಪ್ರಾರಂಭಿಸಬೇಕೆಂಬ ಬೇಡಿಕೆಯನ್ನ ಸರ್ಕಾರದ ಮುಂದಿಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ, ಕಾರ್ಯರೂಪಕ್ಕೆ ಬರುತ್ತೆ ಎಂಬುದು ಕಾದು ನೋಡಬೇಕಾದ ವಿಚಾರ.
ನ್ಯೂ ಮಾಡೆಲ್ ಜಾವಾ:
ಇತ್ತೀಚೆಗೆ ಜಾವಾದ ಮತ್ತೊಂದು ಬೈಕ್ ಕೂಡಾ ಮಾರುಕಟ್ಟೆಗೆ ಬಂದಿದೆ. ಆದರೆ ವಿದೇಶಿ ಸರಕುಗಳನ್ನ, ಮೋಟಾರುಗಳನ್ನ ಬೆಳೆಸುತ್ತಿರುವ ನಮ್ಮ ಜನ ನಮ್ಮದೇ ಆದ ಜಾವಾ ಬೈಕನ್ನ ಮರೆತಿದ್ದಾರೆ. ಈಗ ಬಂದಿರೋ ಹೊಸ ಜಾವಾಗೆ ಆಯಸ್ಸೆಷ್ಟು? ಜನ ಅದನ್ನ ಎಷ್ಟರ ಮಟ್ಟಿಗೆ ಬೆಳೆಸುತ್ತಾರೆ ಅಂತ ಕಾದು ನೋಡಬೇಕಷ್ಟೇ. ಅದೇನೇ ಆದ್ರೂ ಕೂಡಾ ಹಳೆಯ ಜಾವಾ ಫ್ಯಾಕ್ಟರಿ ಮುಚ್ಚಿದ್ದರಿಂದ ಕಷ್ಟ ಅನುಭವಿಸುತ್ತಿರುವ ಕಾರ್ಮಿಕರ ಗೋಳು ಮಾತ್ರ ಹೇಳತೀರದಾಗಿದೆ. ಇಂದು ಬಂದಿರುವ ಹೊಸ ಹೊಸ ಶೋಕಿಯ ಗಾಡಿಗಳ ಕಿರ್ರೋ…… ಎನ್ನುವ ಕರ್ಕಶ ಶಬ್ದದ ಹಿಂದೆ ರೋಡ್ ಕಿಂಗ್ ಜಾವಾದ ಡುಗ್ ಡುಗ್ ಎಂಬ ಪಾರಂಪರಿಕ ಸದ್ದು ಮರೆಯಾಗಿ ಹೋಯಿತಲ್ಲ ಎಂಬುದು ಬೇಜಾರಿನ ಸಂಗತಿ. ಜಾವಾ ಮೈಸೂರಿನ ಹೆಮ್ಮೆಯ ಬ್ರ್ಯಾಂಡ್.