Sun. Jan 10th, 2021

Namma Mysuru

History, News, Stories and much more

ಉರುಳುತ್ತಿರುವ ಮುಳ್ಳುಗಳು, ಉರುಳಿಹೋದ ಸಮಯ, ಅಚ್ಚಳಿಯದ ಇತಿಹಾಸ.

1 min read
562 Views

ಮೈಸೂರು ಅರಸರ ಜೊತೆ ಬ್ರಿಟಿಷ್ ಅಧಿಕಾರಿಗಳು ಉತ್ತಮ ಸಂಬಂಧವನ್ನೇ ಹೊಂದಿದ್ರು. ಇಲ್ಲಿಗೆ ಬ್ರಿಟಿಷ್ ಅಧಿಕಾರಿಗಳು ಆಗಾಗ ಬಂದು ಹೋಗ್ತಿದ್ರು. ಎಷ್ಟೋ ಜನ ವೈಸೆರಾಯ್‌ಗಳು ಇಲ್ಲಿಗೆ ಭೇಟಿ ನೀಡಿದಾಗಲೆಲ್ಲಾ ಒಂದೊಂದು ಕಟ್ಟಡವನ್ನೋ ಸ್ಮಾರಕನ್ನೋ ಉದ್ಘಾಟನೆ ಮಾಡಿ ಹೋಗ್ತಿದ್ರು. ಅವೆಲ್ಲಾ ಇಂದಿಗೂ ಜೀವಂತಾಗಿವೆ. ಅವುಗಳಲ್ಲಿ ಒಂದು ಚಿಕ್ಕ ಗಡಿಯಾರ ಹಾಗೂ ಮತ್ತೊಂದು ದೊಡ್ಡ ಗಡಿಯಾರ. ಅದರ ಕಥೆಯನ್ನ ಅವುಗಳೇ ಹೇಳುತ್ತವೆ.

ಚಿಕ್ಕ ಗಡಿಯಾರ: ಅತ್ತಿತ್ತ ನೋಡಿದ್ರೆ ತಂತಮ್ಮ ಯೋಚನೆಗಳಲ್ಲಿ ಮುಳುಗಿ ಓಡಾಡೋ ಜನ, ತಮ್ಮಲ್ಲಿರುವ ವಸ್ತುಗಳು ವ್ಯಾಪಾರ ಮಾಡಲು ಕೂಗಿ ಕೂಗಿ ಜನರನ್ನು ಕರೆಯುವ ಬೀದಿಬದಿ ವ್ಯಾಪಾರಿಗಳು, ತಮ್ಮ ಗುರಿ ತಲುಪಲು ಎಲ್ಲಾ ಕಡೆಯಿಂದಲೂ ನುಗ್ಗಿ ಬರುವ ಬಸ್ಸುಗಳು. ಒಂದಷ್ಟು ದೂರ ನಡೆದು ಹೋದರೆ ಅಂಬಾವಿಲಾಸ ಅರಮನೆ, ಸಿಟಿ ಬಸ್ ನಿಲ್ದಾಣ ಹಾಗೂ ದೇವರಾಜ ಮಾರುಕಟ್ಟೆ. ಇವೆಲ್ಲವನ್ನೂ ನೋಡುತ್ತಾ ಒಂದು ಶತಮಾದಿಂದ ಅಲ್ಲೇ ನಿಂತಿರುವ ಒಂದು ಬೃಹತ್ ಆಕೃತಿ ನಾನು. ನಾನು ಉರುಳುವ ನನ್ನ ಮುಳ್ಳುಗಳ ಜೊತೆ ಈಗಾಗಲೇ ಉರುಳಿ ಹೋದ ಕಾಲದ ಮುಳ್ಳನ್ನು ಒಮ್ಮೆ ಮೆಲುಕು ಹಾಕಿಸುತ್ತೀನಿ. ನನ್ನ ಹೆಸರು ಚಿಕ್ಕಗಡಿಯಾರ. ಮೈಸೂರಿನ ಪ್ರಮುಖ ಸ್ಮಾರಕಗಳಲ್ಲಿ ನಾನೂ ಒಬ್ಬ. ನನ್ನನ್ನು ‘ಡಫರಿನ್ ಕ್ಲಾಕ್ ಟವರ್’ ಎಂದು ಕೂಡಾ ಕರೀತಾರೆ. ನನಗೆ ಸುಮಾರು 90 ವರ್ಷಗಳ ಇತಿಹಾಸವಿದೆ.

ಲಾರ್ಡ್ ಡಫರಿನ್ ಎಂಬ ಅಧಿಕಾರಿ 1884ರಿಂದ 1888ರವರೆಗೆ ಭಾರತದ ವೈಸೆರಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಗಿನ ಸಮಯದಲ್ಲಿ ಮೈಸೂರಿನಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರ ಅಧಿಕಾರ ನಡೆಯುತ್ತಿತ್ತು. ಆ ಸಮಯದಲ್ಲಿ ಒಡೆಯರ್ ಅವರ ಆಮಂತ್ರಣದ ಮೇರೆಗೆ ಡಫರಿನ್ ಮೈಸೂರಿಗೆ ಭೇಟಿಕೊಟ್ಟಿದ್ದ. ಆ ಭೇಟಿಯ ಗುರುತಾಗಿ ನನಗೆ ಡಫರಿನ್ ಕ್ಲಾಕ್ ಟವರ್ ಎಂದು ನಾಮಕರಣ ಮಾಡಲಾಯಿತು. ಈ ಭೇಟಿ ನಡೆದಿದ್ದು ಹಾಗೂ ನಾನು ಜನಿಸಿದ್ದು 1886ರಲ್ಲಿ. ಆಗಿನ ಕಾಲದಲ್ಲಿ ನನಗೆ 2012ರಲ್ಲಿ ಮರುಜೀವ ಕೊಟ್ಟರು. ಅದು. ಆನಂತರ ನನಗೆ ಮತ್ತಷ್ಟು ಮೆರುಗು ಬಂತು. ನಾನು ಈಗಲೂ ಅಲ್ಲೇ ನಿಂತಿದ್ದೇನೆ. ಉರುಳುವ ಸಮಯಕ್ಕೆ, ಬದಲಾಗುವ ಕಾಲಕ್ಕೆ, ಮೈಸೂರಿನ ವೈಭವಕ್ಕೆ ಸಾಕ್ಷಿಯಾಗಿದ್ದೀನಿ. ಜೊತೆಗೆ ಅದರ ಪ್ರಮುಖ ಭಾಗವಾಗಿದ್ದೀನಿ ಎಂಬುದು ನನಗೆ ಹೆಮ್ಮೆಯ ಸಂಗತಿ.  

ದೊಡ್ಡ ಗಡಿಯಾರ: ಮೈಸೂರು ನಗರದ ಕೇಂದ್ರ ಸ್ಥಾನವಾದ ಟೌನ್‌ಹಾಲ್ ಬಳಿ ಇದ್ದಾನಲ್ಲ, ಅವನೇ ದೊಡ್ಡಗಡಿಯಾರ. ಅವನಿಗೂ ನನ್ನಂತೆ ಎರಡು ಹೆಸರು. ಅವನನ್ನ ‘ಸಿಲ್ವರ್ ಜುಬ್ಲೀ ಕ್ಲಾಕ್ ಟವರ್’ ಅಂತ ಕೂಡಾ ಕರೀತಾರೆ. 91 ವರ್ಷಗಳ ಇತಿಹಾಸ ಇರುವ ಅವನು ಜನ್ಮ ತಾಳಿದ್ದು 1927ರಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಗೆ 25 ವರ್ಷಗಳು ತುಂಬಿದ ನೆನಪಿಗೆ ಅವನನ್ನ ನಿರ್ಮಿಸಲಾಯ್ತು. ಇನ್ನೂ ಕುತೂಹಲಕಾರಿಯಾದ ವಿಷಯ ಎಂದರೆ ಇದರ ನಿಮಾಣದ ವೆಚ್ಚವನ್ನು ಭರಿಸಿದವರು ಅಂದಿನ ಅರಮನೆ ಸಿಬ್ಬಂದಿ.

ದೊಡ್ಡಗಡಿಯಾರವನ್ನು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅವನು 75 ಅಡಿ ಎತ್ತರವಿದ್ದಾನೆ. ಅಲ್ಲಿನ ಅಂಕಿಗಳು ಕನ್ನಡದಲ್ಲಿರೋದು ವಿಶೇಷ. ಅವನನ್ನು 2.5ಅಡಿ ವೃತ್ತದಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ ಅವನ ಆರೋಗ್ಯ ಕ್ಷೀಣಿಸುತ್ತಾ ಬಂದಿದೆ. ಅವನಿಗೆ ಸರಿಯಾದ ಸಮಯ ತೋರಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ಬಳಿ ನನ್ನ ಹಾಗೂ ನನ್ನ ಅಣ್ಣ ದೊಡ್ಡಗಡಿಯಾರದ ಬಗ್ಗೆ ಹೇಳಿಕೊಂಡಿದಕ್ಕೆ ನನ್ನ ಮನಸ್ಸು ಕೊಂಚ ಹಗುರವಾಯ್ತು. ಕೇಳಿದ್ದಕ್ಕೆ ಧನ್ಯವಾದಗಳು. ಮೈಸೂರಿನ ಕಡೆ ಬಂದಾಗ ಒಮ್ಮೆ ನನ್ನನ್ನು ಬೇಟಿಯಾಗೋದನ್ನ ಮರೆಯಬೇಡಿ ಆಯ್ತಾ?

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!