ದ್ರೋಣಗಾಥೆ.
1 min read
ಮೈಸೂರಿಗರಿಗೆ ಆನೆಗಳೆಂದರೆ ವಿಪರೀತ ಪ್ರೀತಿ. ಪ್ರತಿವರ್ಷ ದಸರಾಗೆ ಗಜಪಡೆ ಮೈಸೂರಿಗೆ ಬಂತೆಂದರೆ ಅದೇನೋ ಸಂಭ್ರಮ. ಅವುಗಳನ್ನ ಸ್ವಾಗತಿಸುವುದೆಂದರೆ ಮನೆ ಮಕ್ಕಳನ್ನ ಸ್ವಾಗತಿಸಿದಂತೆ. ಅವುಗಳಿಗೆ ತಾಲೀಮು ಕೊಡುವ ಅಷ್ಟೂ ದಿನ ಜನ ಬಂದು ಅವುಗಳನ್ನ ನೋಡಿ ಖುಷಿಪಡುತ್ತಾರೆ. ಇದು ಮೈಸೂರಿಗರು ಆನೆಗಳಿಗೆ ಕೊಡುವ ಗೌರವ, ಪ್ರೀತಿ. ಹೀಗೆ ಒಂದು-ಒಂದೂವರೆ ತಿಂಗಳು ನಮ್ಮ ಜೊತೆಗಿದ್ದು ನಮ್ಮಲ್ಲಿ ಒಂದಾಗಿರುವ ಆನೆಗಳಿಗೆ ಏನಾದರೂ ಅಪಾಯವಾದರೆ ನಮಗೇ ಬೇಸರವಾಗುತ್ತದೆ. ಈಗಷ್ಟೇ ಆಗಿದ್ದೂ ಅದೇ. ನಮ್ಮ ಗಜಪಡೆಯ ಸದಸ್ಯನಾಗಿದ್ದ ದ್ರೋಣ ನಮ್ಮನ್ನೆಲ್ಲಾ ಅಗಲಿದ್ದಾನೆ. ಆದರೆ ಇದು 37 ವರ್ಷದ ದ್ರೋಣ. ಅಂಬಾರಿ ಹೊತ್ತಿದ್ದ ದ್ರೋಣನಲ್ಲ. ಈ ಬಗ್ಗೆ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ಈಗ ಸತ್ತಿದ್ದು ಅಂಬಾರಿ ಹೊತ್ತಿದ್ದ ದ್ರೋಣ ಎಂದುಕೊಂಡಿದ್ದಾರೆ. ಆದರೆ ಇವನೇ ಬೇರೆ ದ್ರೋಣ.
ಈಗ ನಮ್ಮನ್ನಗಲಿದ ದ್ರೋಣನಿಗೆ 37 ವರ್ಷ ವಯಸ್ಸಾಗಿತ್ತು. ಈ ದ್ರೋಣ ಜೂನಿಯರ್ ದ್ರೋಣ. ಈತ ಕಳೆದ ಬಾರಿ ಗಜಪಡೆಯಲ್ಲಿ ಭಾಗವಹಿಸಿದ್ದ. ಆರೋಗ್ಯ ಕೂಡಾ ಚೆನ್ನಾಗಿಯೇ ಇತ್ತು. ತಿತಿಮತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ದ್ರೋಣನನ್ನು ಬೆಳೆಸಲಾಗುತ್ತಿತ್ತು. ನೀರು ಕುಡಿಯುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದ ದ್ರೋಣ ಅಲ್ಲೇ ಮೃತಪಟ್ಟಿದ್ದ. ನಂತರ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ದ್ರೋಣನಿಗೆ ತೀವ್ರ ಹೃದಯಾಘಾತವಾಗಿತ್ತು ಎಂದು ತಿಳಿಸಿದರು. ಈ ದ್ರೋಣನ ಸಾವಿಗೆ ಇಡೀ ಕರ್ನಾಟಕ ಮರುಗುತ್ತಿದೆ.
ಅಂಬಾರಿ ಹೊತ್ತಿದ್ದವನು ಸೀನಿಯರ್ ದ್ರೋಣ. ಆತ ಹುಟ್ಟಿದ್ದು 1936ರಲ್ಲಿ. ಸತತವಾಗಿ ದಸರಾ ಗಜಪಡೆಯ ಭಾಗವಾಗಿದ್ದ. 1981ರಿಂದ 1997ರ ವರೆಗೂ..ಅಂದರೆ ಬರೋಬ್ಬರಿ 18 ಬಾರಿ ಅಂಬಾರಿಯನ್ನು ಹೊತ್ತಿದ್ದ. ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಆನೆ ದ್ರೋಣ. ಏನು ಹೇಳಿದರೂ ಕೇಳುತ್ತಾ, ಅಕ್ಷರಶಃ ಗಜಗಾಂಭೀರ್ಯದಿಂದ ಅಂಬಾರಿ ಹೊರುತ್ತಿದ್ದ. ಸಾಯುವ ವೇಳೆಗೆ ದ್ರೋಣನಿಗೆ 62 ವರ್ಷ ವಯಸ್ಸಾಗಿತ್ತು. ಸಾಯುವ ಹಿಂದಿನ ವರ್ಷ ಕೂಡಾ ದ್ರೋಣ ಅಂಬಾರಿ ಹೊತ್ತಿದ್ದ. 1998ರಲ್ಲಿ ಒಮ್ಮೆ ನಾಗರಹೊಳೆ ಅಭಯಾರಣ್ಯದಲ್ಲಿ ಮೇಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ. ಅಂದು ದ್ರೋಣನ ಅಗಲಿಕೆಗೆ ಎಲ್ಲರೂ ಮರುಗಿದ್ದರು. ನಮ್ಮ ದಸರಾ ಪಡೆಯ ಆನೆಗಳನ್ನು ನಾವು ಪ್ರೀತಿಸುವ ರೀತಿ ನೋಡಿದರೆ ನಮ್ಮ ಸಂಸ್ಕೃತಿಗೆ, ಪರಂಪರೆಗೆ ನಾವು ನೀಡುವ ಗೌರವ, ಪ್ರೀತಿ ಗೋಚರವಾಗುತ್ತದೆ.
ಇದನ್ನು ನೋಡಿದರೆ ನಮ್ಮ ಜನರಿಗೆ ಆನೆಗಳ ಮೇಲಿರುವ ಗೌರವ, ಪ್ರೀತಿ ಎಲ್ಲವೂ ತಿಳಿಯುತ್ತದೆ. ಆದರೆ ಎಲ್ಲರೂ ಜೂನಿಯರ್ ಹಾಗೂ ಸೀನಿಯರ್ ದ್ರೋಣ ಇಬ್ಬರ ಬಗ್ಗೆಯೂ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ಈ ಸತ್ತಿದ್ದು ಅಂಬಾರಿ ಹೊತ್ತಿದ್ದ ದ್ರೋಣ ಎಂಬ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ವಿಷಯಗಳನ್ನು ಸರಿಯಾಗಿ ತಿಳಿಸಬೇಕಾದವರೇ ಹೀಗೆ ಮಾಡಿದರೆ ಹೇಗೆ..? ಇನ್ನಾದರೂ ಎಲ್ಲರೂ ಸತ್ಯ ತಿಳಿದುಕೊಳ್ಳಲಿ. ಜನರಿಗೆ ಸರಿಯಾದ ಮಾಹಿತಿ ನೀಡಲಿ.