ಮೈಲಾರಿ ದೋಸೆ, ಮತ್ತೆ ಮತ್ತೆ ತಿನ್ನುತ್ತಿರಲು ಆಸೆ..! ದೋಸೆಯ ಹಿಂದಿದೆ ರುಚಿಕರ ಕಥೆ.
1 min read
ಮೈಸೂರು ಅಂದ್ರೆ ನೆನಪಾಗೋದು ಒಂದೆರಡು ವಿಷಯನಾ? ಖಂಡಿತ ಇಲ್ಲ.. ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ, ಮೈಸೂರು ಸಿಲ್ಕ್ ಇತ್ಯಾದಿ. ಇವೆಲ್ಲಾ ಒಂದು ರೀತಿ ಮೈಸೂರು ಬ್ರ್ಯಾಂಡ್ ಆಗಿಹೋಗಿದೆ. ಹಾಗೆ ಮೈಸೂರು ಅಂದ್ರೆ ಥಟ್ ಅಂತ ನೆನಪಾಗೋ ಇನ್ನೊಂದು ವಿಚಾರ ಮೈಸೂರು ಮೈಲಾರಿ ದೋಸೆ. ಮೈಲಾರಿ ದೋಸೆ. ಬಿಸಿ ಬಿಸಿ ದೋಸೆ. ಅದರ ಮೇಲೆ ಕರುಗುತ್ತಿರೋ ಬೆಣ್ಣೆ. ದೋಸೆ ಒಳಗೆ ರುಚಿರುಚಿಯಾದ ಪಲ್ಯ ಹಾಗೂ ನೆಂಚಿಕೊಳ್ಳೋಕೆ ಕೊಬ್ಬರಿ ಚಟ್ನಿ. ಮೈಸೂರಿಗೆ ಬಂದೋರು ಒಮ್ಮೆ ಮೈಲಾರಿ ದೋಸೆ ತಿನ್ನದೇ ಹೋಗೋದಿಲ್ಲ. ಈ ಮೈಲಾರಿ ದೋಸೆ ಇಂದು ನೆನ್ನೆಯದಲ್ಲ. ಇದಕ್ಕೆ ಬರೋಬ್ಬರಿ 80 ವರ್ಷಗಳ ಇತಿಹಾಸ ಇದೆ. ಅಂದಿನಿಂದ ಇಂದಿನವರೆಗೂ ಇಲ್ಲಿನ ದೋಸೆಯ ರುಚಿ ಒಂಚೂರೂ ಬದಲಾಗಿಲ್ಲ. ಈ ಹೋಟೆಲ್ಲನ್ನ ನಡೆಸುತ್ತಿರುವವರು ಅಷ್ಟು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಆಗಲೇ ಹೇಳಿದ ಹಾಗೆ ಮೈಲಾರಿ ದೋಸೆಗೆ 80 ವರ್ಷಗಳ ಇತಿಹಾಸ ಇದೆ. ಅದು ಸಿಗೋದು ಮೈಸೂರಿನ ನಜರ್ ಬಾದ್ ನಲ್ಲಿ. ಈ ಹೋಟೆಲ್ ನ ಒರಿಜಿನಲ್ ಹೆಸರು ‘ಒರಿಜಿನಲ್ ವಿನಾಯಕ ಮೈಲಾರಿ’. ಅದೇ ನಜರ್ ಬಾದ್ ನಲ್ಲಿ ಇದೇ ಮೈಲಾರಿ ಹೋಟೆಲ್ ಜೊತೆಗೆ ಮತ್ತೊಂದು ಮೈಲಾರಿ ಹೋಟೆಲ್ ಇದೆ. ಅದನ್ನ ನಡೆಸುತ್ತಿರೋದು ಇವರ ಸಹೋದರರೇ. ಆದರೆ ನಿಜವಾದ ಮೈಲಾರಿ ಹೋಟೆಲ್ ವಿನಾಯಕ ಮೈಲಾರಿ. ಇದನ್ನ ಶುರುಮಾಡಿದ್ದು ಈಗಿರುವ ಮಾಲಿಕರಾದ ಚಂದ್ರಶೇಖರ್ ಎಂಬುವವರ ಮುತ್ತಾತ ಹಾಗೂ ಮುತ್ತಜ್ಜಿ. ಆಗಿನ ಕಾಲದಲ್ಲಿ ಅವರು ಹೊಟ್ಟೆಪಾಡಿಗಾಗಿ ಶುರುಮಾಡಿದ ಈ ಹೋಟೆಲ್ ಈಗ ಅತ್ಯಂತ ಪ್ರಸಿದ್ಧವಾಗಿದೆ.

ಆಗ ಹೋಟೆಲ್ ಶುರುಮಾಡಿದವರ ಇಷ್ಟದೇವರ ಹೆಸರು ‘ಮೈಲಾರಿ’ಯಂತೆ. ಆದ್ದರಿಂದಲೇ ಇಲ್ಲಿಗೆ ಆ ಹೆಸರು ಬಂದದ್ದು. ಆಗಿನ ಕಾಲದಲ್ಲಿ ಈ ಹೋಟೆಲ್ ನಲ್ಲಿ ಬರೀ ಇಡ್ಲಿ, ದೋಸೆ ಮಾತ್ರ ಮಾಡಲಾಗ್ತಿತ್ತಂತೆ. ಜೊತೆಗೆ ಬಂದವರು ಕುಳಿತುಕೊಳ್ಳೋಕೂ ಹೆಚ್ಚು ಜಾಗ ಇರಲಿಲ್ಲವಂತೆ. ದಿನ ಕಳೆಯುತ್ತಾ ಕಳೆಯುತ್ತಾ ಹೋಟೆಲ್ ಪ್ರಸಿದ್ಧಿಯಾಗುತ್ತಾ ಹೋಯಿತು. ಜನರು ಹೆಚ್ಚಾಗಲು ಶುರುವಿಟ್ಟುಕೊಂಡರು. ಆಗಿನ ಕಾಲದಲ್ಲಿ ರಾಜಮನೆತನದವರು ಅರಮನೆಗೆ ದೋಸೆಯನ್ನ ತರಿಸಿಕೊಳ್ಳುತ್ತಿದ್ದರಂತೆ. ಜೊತೆಗೆ ಅಮಿತಾಭ್ ಬಚ್ಚನ್, ರಾಜ್ ಕುಮಾರ್, ವಿಷ್ಣುವರ್ಧನ್, ಚಿರಂಜೀವಿ ಸೇರಿದಂತೆ ಇತ್ತೀಚಿನ ನಟರಾದ ದರ್ಶನ್, ತಮನ್ನಾ, ಕಾಜಲ್ ಅಗರ್ ವಾಲ್, ಎಲ್ಲರೂ ಇಲ್ಲಿಗೆ ಬಂದು ದೋಸೆ ಸವಿದಿದ್ದಾರೆ. ಇಲ್ಲಿನ ದೋಸೆಯ ವೈಶಿಷ್ಟ್ಯ ಅಂದ್ರೆ ಆ ಮೃದು ಸ್ವಭಾವ. ಬೇರೆಲ್ಲಾ ಕಡೆ ದೋಸೆ ಗರಿಗರಿಯಾಗಿದ್ರೆ ಇಲ್ಲಿ ಮಾತ್ರ ಮೆತ್ತಗೆ ಇರುತ್ತದೆ. ಎಲ್ಲಾ ಕಡೆಯೂ ಸಿಗೋದು ಅದೇ ದೋಸೆ. ಆದರೆ ಒಳಗಿರೋ ಪಲ್ಯ ಇದರ ವಿಶೇಷ. ಜೊತೆಗೆ ಕಾಯಿ ಚಟ್ನಿ ಅಥವಾ ಕೊಬ್ಬರಿ ಚಟ್ನಿ. ಇದೇ ಮೈಲಾರಿ ದೋಸೆಯ ವಿಶೇಷತೆ. ಈ ಹೋಟೆಲ್ ಎಷ್ಟೇ ಜನಪ್ರಿಯವಾದ್ರೂ ಎಲ್ಲೂ ಕೂಡಾ ಇದರ ಶಾಖೆಗಳನ್ನ ತೆರೆದಿಲ್ಲ. ಜೊತೆಗೆ ಹೋಟೆಲ್ ಅನ್ನ ಹೆಚ್ಚು ವಿಸ್ತಾರ ಮಾಡಲಾಗಿಲ್ಲ. ಅಂದು ಇದ್ದ ಕ್ವಾಲಿಟಿಯನ್ನೇ ಇಂದೂ ಕೂಡಾ ಕಾಪಾಡಿಕೊಂಡು ಬರುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಹೆಚ್ಚು ವಿಧವಿಧವಾದ ಅಡುಗೆ ಸಿಗೋದಿಲ್ಲ. ಸಿಗೋದು ದೋಸೆ, ಇಡ್ಲಿ ಮಾತ್ರ. ಅದರೊಂದಿಗೆ ಇಲ್ಲಿಗೆ ಬರೋ ಜನ ಎಷ್ಟು ಹೊತ್ತಾದರೂ ಕಾಯೋಕೆ ಸಿದ್ಧರಿರುತ್ತಾರೆ. ಒಂದು ದೋಸೆ ಖಾಲಿಯಾಗುತ್ತಿದ್ದಂತೆ ತಟ್ಟೆ ಮೇಲೆ ತಟ್ಟೆ ಹೊತ್ತು ಬಿಸಿ ಬಿಸಿ ದೋಸೆ ತರುತ್ತಾರೆ.

ಈಗ ಇದನ್ನ ನಡೆಸಿಕೊಂಡು ಬರುತ್ತಿರೋದು ಅವರ ಮುಂದಿನ ತಲೆಮಾರಿನವರೇ. ಅವರ ಹೆಸರು ಚಂದ್ರಶೇಖರ್. ‘ನಮ್ಮ ಹೋಟೆಲ್ ಗೆ ಬೇರೆ ಯಾವುದೇ ಬ್ರ್ಯಾಂಚ್ ಇಲ್ಲ. ಇಲ್ಲಿ ನಾವು ಮಾಡುವ ದೋಸೆಯ ರೆಸಿಪಿಯನ್ನ ಯಾರಿಗೂ ಬಹಿರಂಗಪಡಿಸೋದಿಲ್ಲ. ರಾಷ್ಟ್ರೀಯ ವಾಹಿನಿಗಳು ಇಲ್ಲಿ ಬಂದು ಕಾರ್ಯಕ್ರಮ ಮಾಡಿವೆ. ಈಗ ಹೋಟೆಲ್ ನಲ್ಲಿ ಸ್ವಲ್ಪ ಹೆಚ್ಚು ಜನ ಕೂರಲು ವ್ಯವಸ್ಥೆ ಮಾಡಲಾಗಿದೆ. ಬೇರೆ ರಾಜ್ಯದ ಹಾಗೂ ನಮ್ಮ ರಾಜ್ಯದ ನಟರು, ಗಣ್ಯವ್ಯಕ್ತಿಗಳು ಮೈಸೂರಿಗೆ ಬಂದಾಗ ಇಲ್ಲಿಗೆ ಬರೋದನ್ನ ಮಿಸ್ ಮಾಡೋದಿಲ್ಲ. ಅದು ನಮಗೆ ಖುಷಿಯ ವಿಚಾರ’ ಎಂದು ಹೇಳಿಕೊಂಡರು. ಇಲ್ಲಿ ಪ್ರತಿದಿನ ಜನ ಗಿಜಿಗುಟ್ಟುತ್ತಲೇ ಇರುತ್ತಾರೆ. ಬೆಳ್ಳಂಬೆಳಿಗ್ಗೆಯೇ ಜನ ಬಂದು ದೋಸೆಗೆ ಕಾಯುತ್ತಿರುತ್ತಾರೆ. ಎಷ್ಟು ತಡವಾದರೂ ದೋಸೆ ತಿನ್ನದೇ ಹಿಂದಿರುಗೋದಿಲ್ಲ. ಜೊತೆಗೆ ಈ ಮೈಲಾರಿಗೆ ಪ್ರತಿ ಬುಧವಾರ ರಜಾ ಇರುತ್ತದೆ. ದಸರಾ ಹಾಗೂ ಬೇರೆ ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಜನ ಮತ್ತಷ್ಟು ಹೆಚ್ಚಾಗುತ್ತಾರೆ. ಬೆಳಿಗ್ಗೆ 6:30ಕ್ಕೆ ಶುರುವಾಗೋ ಹೋಟೆಲ್ ಮದ್ಯಾಹ್ನ 1:30ರವರೆಗೂ ತೆರೆದಿರುತ್ತೆ. ಮತ್ತೆ ಮದ್ಯಾಹ್ನ 3ಕ್ಕೆ ಶುರುವಾದರೆ ರಾತ್ರಿ 9ರ ವರೆಗೂ ನಡೆಯುತ್ತದೆ. ಇದು ಮೈಲಾರಿ ದೋಸೆಯ ನಿಜವಾದ ಕಥೆ.
ಮೈಸೂರಿಗೆ ಬಂದಾಗ ಇಲ್ಲಿಗೆ ಭೇಟಿ ಕೊಡೋದನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ.
ವಿಳಾಸ #79, ಹೋಟೆಲ್ ವಿನಾಯಕ ಮೈಲಾರಿ,ನಜರ್ಬಾದ್ ಮುಖ್ಯರಸ್ತೆ, ಪೊಲೀಸ್ ಠಾಣೆ ಬಳಿ, ಮೈಸೂರು. ದೂರವಾಣಿ ಸಂಖ್ಯೆ: 9448608710