ಮೈಸೂರಿನಲ್ಲೇ ಶುರುವಾಗಿದ್ದು ಮೊಟ್ಟಮೊದಲ ಶಿಶುವಿಹಾರ. ಮಕ್ಕಳ ಮನೆಯ ಇತಿಹಾಸವೇ ಸ್ವಾರಸ್ಯಕರ..!
1 min read
ಈಗೆಲ್ಲಾ ಮನೆಯಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡುತ್ತಿರುತ್ತಾರೆ. ಕೆಲಸಕ್ಕೆ ಹೋಗಬೇಕಾಗಿ ಬಂದಿರುವುದರಿಂದ ಮಕ್ಕಳನ್ನು ಶಿಶುವಿಹಾರಗಳಲ್ಲಿ ಬಿಡಲೇಬೇಕಾಗುತ್ತದೆ. ಆದ್ದರಿಂದ ಶಿಶುವಿಹಾರ ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿಹೋಗಿದೆ. ಈಗ ಇಷ್ಟು ಜನಪ್ರಿಯ ಹಾಗೂ ಅವಶ್ಯಕವಾಗಿಹೋಗಿರುವ ಶಿಶುವಿಹಾರದ ಪರಿಕಲ್ಪನೆ ಬಂದಿದ್ದು ಹೇಗೆ ಎಂದು ನೀವು ಎಂದಾದರೂ ಯೋಚಿಸಿದ್ದೀರ..? ಬಹುಶಃ ಇರಲಿಕ್ಕಿಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಮೈಸೂರು.
ಹೌದು..ಈ ಶಿಶುವಿಹಾರ ಎಂಬ ಪರಿಕಲ್ಪನೆ ಶುರುವಾಗಿದ್ದು ನಮ್ಮ ಮೈಸೂರಿನಲ್ಲಿ ಅದೂ ಆಕಾಶವಾಣಿಯ ಸೃಷ್ಟಿಕರ್ತರಾದ ಎಂ.ವಿ.ಗೋಪಾಲಸ್ವಾಮಿಯವರಿಂದ. ಗೋಪಾಲಸ್ವಾಮಿ ಮೂಲತಃ ತಮಿಳುನಾಡಿನವರು. ಮದ್ರಾಸಿನಲ್ಲಿ ಪದವಿ ಮುಗಿಸಿ ಉನ್ನತ ವ್ಯಾಸಾಂಗಕ್ಕೆ ಇಂಗ್ಲೆಂಡ್ ಗೆ ತೆರಳಿದರು. ಲಂಡನ್ ನಲ್ಲಿ ಬಿಎಸ್ಸಿ ಪದವಿ ಪಡೆದರು. ನಂತರ ಮನಃಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನೂ ಮಾಡಿದರು. ಇಷ್ಟೆಲ್ಲಾ ಆದ ನಂತರ ಗೋಪಾಲಸ್ವಾಮಿ ಮೈಸೂರಿಗೆ ಬರುತ್ತಾರೆ. ಮನಃಶಾಸ್ತ್ರಜ್ಞರಾಗಿದ್ದ ಇವರಿಗೆ ಮಕ್ಕಳ ಮನೋವಿಕಾಸದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಮಕ್ಕಳಿಗಾಗಿ, ಮಕ್ಕಳ ಮನೋವಿಕಾಸಕ್ಕಾಗಿ ಏನನ್ನಾದರೂ ಮಾಡಲೇಬೇಕೆಂದು ನಿರ್ಧರಿಸುತ್ತಾರೆ. ನಂತರ ತಮ್ಮ ತಾಯಿ ರಾಜಮ್ಮ ಹಾಗೂ ಪತ್ನಿ ಕಮಲಾ ಗೋಪಾಲಸ್ವಾಮಿಯ ಸಹಕಾರದೊಂದಿಗೆ ಮೈಸೂರಿನ ಲಕ್ಷ್ಮೀಪುರಂ ನಲ್ಲಿ ಶಿಶುವಿಹಾರವೊಂದನ್ನು ಸ್ಥಾಪಿಸಿದರು. . ಶಿಶುವಿಹಾರ ಎಂಬಬ ಪರಿಕಲ್ಪನೆಯ ಜೊತೆಗೆ ಶಿಶುವಿಹಾರ ಎಂಬ ಹೆಸರು ಕೂಡಾ ಇವರೇ ಕೊಟ್ಟಿದ್ದು. ಮಕ್ಕಳನ್ನು ಸೇರಿಸಿ ಅವರಿಗೆ ಒಳ್ಳೆಯ ವಿಚಾರಗಳು, ಒಳ್ಳೆಯ ನಡವಳಿಕೆ, ಪ್ರಬುದ್ಧತೆಯ ಬಗ್ಗೆ ತಿಳಿಸಿಕೊಡುತ್ತಾರೆ. ಒಟ್ಟಿನಲ್ಲಿ ಮಕ್ಕಳ ಮನೋವಿಕಾಸವೇ ಅವರ ಪರಮಗುರಿಯಾಗಿರುತ್ತದೆ. ಅಲ್ಲಿಗೆ ಆಗಾಗ ವಿಶೇಷ ಅತಿಥಿಗಳನ್ನು ಕರೆಸುವುದು ವಾಡಿಕೆಯಾಗುತ್ತದೆ. ಆ ಪೈಕಿ ಜಿ.ಪಿ.ರಾಜರತ್ನಂ ಪ್ರಮುಖರು. ಅವರೂ ಬಂದು ಮಕ್ಕಳೊಂದಿಗೆ ಮಗುವಾಗಿ, ಮಕ್ಕಳಿಗೆ ಕಿವಿಮಾತು ಹೇಳಿ ಹೋಗುತ್ತಾರೆ. ಈಗಲೂ ಆ ಶಿಶುವಿಹಾರ ಮೈಸೂರಿನ ಲಕ್ಷ್ಮೀಪುರಂನಲ್ಲಿದೆ. ಇದನ್ನು ಗೋಪಾಲಸ್ವಾಮಿ ಶಿಶುವಿಹಾರ ಎಂದು ಹೆಸರಿಸಲಾಗಿದೆ.

ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳುವಷ್ಟು ಸಮಯವೂ ಜನರಿಗೆ ಇರುವುದಿಲ್ಲ ಎಂಬುದನ್ನು ಗೋಪಾಲಸ್ವಾಮಿ ಮನಗಂಡಿದ್ದರೇನೋ..! ಆದ್ದರಿಂದ ಆಗಲೇ ಇಂತಹ ಪರಿಕಲ್ಪನೆ ಅವರಿಗೆ ಹೊಳೆದಿದ್ದು. ಆದರೆ ಅವರು ಶುರುಮಾಡಿದ ಉದ್ದೇಶ ಮಕ್ಕಳ ಮನೋವಿಕಸನ. ಅದು ಒಳ್ಳೆಯದೇ ಆಗಿತ್ತು. ಹಾಗೆಯೇ ಇದು ಶುರುವಾಗಿದ್ದು ಮೈಸೂರಿನಲ್ಲಿ ಎಂಬುದು ಮೈಸೂರಿಗೆ ಹೆಮ್ಮೆಯ ಗರಿಯೇ ಸರಿ..!