Wed. Jan 20th, 2021

Namma Mysuru

History, News, Stories and much more

ಮೈಸೂರು ಪಾಕ್ ತಯಾರಿಕೆಯ ಹಿಂದೊಂದು ಸ್ವಾರಸ್ಯಕರ ಕಥನ. ಜಗತ್ತನ್ನೇ ಮರುಳು ಮಾಡಿರುವ ಸಿಹಿತಿಂಡಿಗೆ ಶತಮಾನದ ಸಂಭ್ರಮ.

1 min read
804 Views

‘ನೋಡೋಕೆ ಕಂದು ಬಣ್ಣ. ಮುಟ್ಟೋಕಂತೂ ಮೈಸೂರು ಮಲ್ಲಿಗೆಯಷ್ಟು ಮೃದು. ತುಪ್ಪದಿಂದಾವೃತ್ತವಾದ ತುಂಡೊಂದನ್ನ ಬಾಯಲ್ಲಿಟ್ರೆ ಕರಗೋದೇ ಗೊತ್ತಾಗಲ್ಲ. ಆಹಾ..!  ಇದು ನಿಜವಾದ ಸಿಹಿ ಅಂದ್ರೆ’. ಅದೇ ಮೈಸೂರ್ ಪಾಕ್. ಮೈಸೂರಲ್ಲಿ ಹುಟ್ಟಿದ ಮೈಸೂರ್ ಪಾಕ್ ರುಚಿ ಬಗ್ಗೆ ಈಗ ಇಡೀ ಜಗತ್ತೇ ಹೇಳುತ್ತೆ. ಈ ಸಿಹಿ ಮೊದಲ ಬಾರಿಗೆ ತಯಾರಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅನ್ನೋದು ಬಹುಶಃ ಎಲ್ಲರಿಗೂ ಗೊತ್ತಿರಬೇಕು. ಆದರೆ ಈ ಸಿಹಿ ಕಂಡುಹಿಡಿದುದರ ಹಿಂದೆ ಸ್ವಾರಸ್ಯಕರ ಕಥೆಯೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದಿನ ಮೈಸೂರಿನ ನಿರ್ಮಾತೃ. ಕೆ.ಆರ್.ಎಸ್,  ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಮಹಾರಾಣಿ ಕಾಲೇಜು, ಗಂಧದೆಣ್ಣೆ ಕಾರ್ಖಾನೆ, ಕನ್ನಡ ಸಾಹಿತ್ಯ ಪರಿಷತ್..ಹೀಗೆ ಹೇಳುತ್ತಾ ಹೋದ್ರೆ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತೆ. ಇವೆಲ್ಲಾ ಅವರು ರಾಜ್ಯದ ಒಳಿತಿಗಾಗಿ ಯೋಚಿಸಿ, ಯೋಜನೆ ರೂಪಿಸಿ ಮಾಡಿದ ಕೆಲಸಗಳು. ಆದ್ರೆ ಅವರು ಕೊಟ್ಟಿರೋ ಈ ಒಂದು ಸಿಹಿ ಕೊಡುಗೆ ನಾವು ದಿನನಿತ್ಯದ ಜೀವನದಲ್ಲಿ ನೆನಪಿಟ್ಟುಕೊಳ್ಳುವಂತಹದ್ದು. ಮೈಸೂರು ಪಾಕ್ ಗೆ ಬರೋಬ್ಬರಿ ನೂರು ವರ್ಷಗಳ ಇತಿಹಾಸವಿದೆ.

ಬಂದ ಅತಿಥಿಗಳೇ ಮೈಸೂರು ಪಾಕಕ್ಕೆ ಕಾರಣ:

ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಸುಮ್ಮನಿದ್ದು ಬೇಸರವಾಗುತ್ತಿತ್ತೋ ಏನೋ. ಅರಮನೆಯಲ್ಲೇ ಅಡ್ಡಾಡಿಕೊಂಡಿದ್ರು. ನಾಲ್ವಡಿಯವರಿಗೆ ಬಿಡುವು ಸಿಗುತ್ತಿದ್ದುದೇ ಕಡಿಮೆ. ಅವರು ಮನೆಯಲ್ಲಿದ್ರೂ ಕೂಡ ಅವರನ್ನ ನೋಡಲು ಯಾರಾದರೊಬ್ಬರು ಬರುತ್ತಿದ್ದರು. ಅದೊಂದು ದಿನ ರಾಜರನ್ನ ನೋಡಲು ಜನ ಬಂದಿದ್ದರು. ಆಗ ನಾಲ್ವಡಿಯವರಿಗೆ ಏನನ್ನಿಸಿತೋ ಏನೋ, ತಮ್ಮ ಬಾಣಸಿಗನಿಗೆ ಕೆಲಸವೊಂದನ್ನ ವಹಿಸಿದ್ರು. ಬಂದ ಅತಿಥಿಗಳ ಮುಂದೆ ಆತನನ್ನ ಕರೆದು, ‘ಮಾದಪ್ಪ, ಇವತ್ತು ಯಾವುದಾದ್ರೂ ಹೊಸ ಸಿಹಿತಿಂಡಿ ಮಾಡಿಕೊಂಡು ಬಾ’ ಎಂದ್ರಂತೆ.

ಕಾಕಾಸುರ ಮಾದಪ್ಪ ಅಂದ್ರೆ ಅರಮನೆಯ  ಅತ್ಯುನ್ನತ ಬಾಣಸಿಗ ಎಂದು ಹೆಸರು ಪಡೆದಿದ್ದವ. ಮಾದಪ್ಪನಿಗೆ ಈ ಮಾತು ಕೇಳಿದೊಡನೆ ಭಯ ಶುರುವಾಯ್ತು. ಇದ್ದಕ್ಕಿದ್ದಂತೆ ಹೀಗೆ ಹೇಳಿದ್ರೆ ಏನು ಮಾಡೋದು ಅಂತ ಯೋಚಿಸಿದ ಮಾದಪ್ಪ ಅಡುಗೆಮನೆಯೆಲ್ಲಾ ಹುಡುಕಾಡಿದ. ಆಗ ಮಾಡುತ್ತಿದ್ದುದು ಪಾಯಸ, ಕೊಬ್ಬರಿ ಮಿಠಾಯಿ, ಹಲ್ವಾ ಅಂಥವಷ್ಟೇ. ಅಂಥದ್ದರಲ್ಲಿ ಹೊಸ ಸಿಹಿ ಹೇಗೆ ಮಾಡೋದು? ಅದಕ್ಕೆ ಏನು ಬಳಸೋದು ಅಂತ ತಲೆಗೆ ಕೆಲಸ ಕೊಟ್ಟ ಮಾದಪ್ಪ. ಆಗ ಕಾಣಿಸಿದ್ದೇ ಕಡಲೆ ಹಿಟ್ಟು. ಕಡಲೆ ಹಿಟ್ಟಲ್ಲಿ ಏನು ಮಾಡಬಹುದೆಂದು ಯೋಚಿಸಿದ ಮಾದಪ್ಪ ಅದಕ್ಕೆ ಸಕ್ಕರೆ ಪಾಕ ಬೆರೆಸಿ ಹಿಂದೆಂದೂ ಮಾಡಿರದಂತಹ ಸಿಹಿಯೊಂದನ್ನ ಮಾಡಿದ. ಅದೂ ಅಕ್ಷರಶಃ ಅಚಾನಕ್ ಆಗಿ ಆದ ಸಿಹಿತಿಂಡಿ. ಮಾಡಿದ ನಂತರ ಅದು ಖೋವಾ ರೀತಿಯ ರೂಪವನ್ನ ಪಡೆದುಕೊಂಡಿತು. ಅದನ್ನ ರಾಜರಿಗೆ ತೋರಿಸುವ ಮುಂಚೆಯೂ ಮಾದಪ್ಪನಿಗೆ ಹೆದರಿಕೆಯಾಗುತ್ತಿತ್ತು. ಭಯದಿಂದಲೇ ನಾಲ್ವಡಿಯವರಿಗೆ ಸಿಹಿ ತಂದು ಕೊಟ್ಟ.

ಅದರ ರುಚಿ ನೋಡಿದಾಗ ನಾಲ್ವಡಿಯವರಿಗೆ ಪರಮಾನಂದವಾಯ್ತು !! ಇಷ್ಟು ದಿನ ಮಾಡಿರಲಿಲ್ಲ. ಎಷ್ಟು ಚೆನ್ನಾಗಿದೆ ಈ ತಿನಿಸು ಎನ್ನುತ್ತಾ ಮಹಾರಾಜರು ಕಾಕಾಸುರ ಮಾದಪ್ಪನನ್ನು ಹೊಗಳಿದ್ದೇ ಹೊಗಳಿದ್ದು. ನಂತರ ಯಾವುದಿದು ಹೊಸ ಸಿಹಿ ಎಂದು ಮಾದಪ್ಪನನ್ನ ನಾಲ್ವಡಿಯವರು ಕೇಳಿದ್ರಂತೆ. ನಾನಿನ್ನು ಅದಕ್ಕೆ ಹೆಸರಿಟ್ಟಿಲ್ಲ ಎಂದಾಗ ನಾಲ್ವಡಿಯವರು ಒಂದು ಕ್ಷಣ ಯೋಚಿಸಿದ್ರಂತೆ. ಇದು ಮೈಸೂರಿನಲ್ಲಿ ಮಾಡಿರೋ ತಿನಿಸು. ಅದನ್ನ ಪಾಕದಲ್ಲಿ ತಯಾರಿಸಿರೋದು. ಅದಕ್ಕೆ  ಮೈಸೂರ್ ಪಾಕ ಅಂತ ಹೆಸರಿಟ್ಟರೆ ಹೇಗೆ ಎಂದು ಯೋಚಿಸಿದ್ರಂತೆ. ಕೊನೆಗೆ ಮೈಸೂರ್ ಪಾಕ ಅನ್ನೋ ಹೆಸರೇ ಫೈನಲ್ ಆಗಿಹೋಯ್ತು. ಅದನ್ನ ತಿಂದ ಅತಿಥಿಗಳಿಗೂ ಪರಮಾನಂದವಾಗಿಹೋಯ್ತು.  ಅಂದಿನಿಂದ ಅರಮನೆಯಲ್ಲಿ ತಯಾರಾಗುವ ಪ್ರಮುಖ ಸಿಹಿತಿಂಡಿಗಳಲ್ಲಿ ಇದೂ ಒಂದಾಯ್ತು. ಜೊತೆಗೆ ಮೈಸೂರ್ ಪಾಕ್ ಕೀರ್ತಿ ಎಲ್ಲೆಡೆ ಹಬ್ಬಲು ಶುರುವಾಯ್ತು. ಮದುವೆ-ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ಇದನ್ನ ಮಾಡಲು ಶುರುಮಾಡಿದ್ರು. ಮೈಸೂರ್ ಪಾಕ್ ಕೀರ್ತಿ ಜಗತ್ತಿನಾದ್ಯಂತ ಪಸರಿಸಿತು. ಈಗಂತೂ ದೇಶ-ವಿದೇಶದ ಜನರಿಗೂ ಮೈಸೂರು ಪಾಕ್ ಎಂದರೆ ಅಚ್ಚುಮೆಚ್ಚು. ಈಗ ಮೈಸೂರ್ ಪಾಕ್ ಎಲ್ಲಾ ಕಡೆಯಲ್ಲೂ ಸಿಗುತ್ತೆ. ಸ್ಪೆಷಲ್ ಮೈಸೂರ್ ಪಾಕ್, ತುಪ್ಪದ ಮೈಸೂರ್ ಪಾಕ್, ಹಾರ್ಲಿಕ್ಸ್ ಮೈಸೂರ್ ಪಾಕ್, ಸಾದಾ ಮೈಸೂರ್ ಪಾಕ್..ಅವರವರು ಮಾಡುವ ವಿಧಾನಕ್ಕೆ ತಕ್ಕಂತೆ ಅದನ್ನ ಹೆಸರಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಮಾತ್ರ ಸಿಗುವುದು ಒರಿಜಿನಲ್ ಮೈಸೂರು ಪಾಕ್:

ಮೈಸೂರು ಪಾಕನ್ನ ಎಲ್ಲರೂ ಮನೆಯಲ್ಲೂ ಮಾಡುತ್ತಾರೆ. ಆದರೆ ಕಾಕಾಸುರ ಮಾದಪ್ಪ ಮಾಡಿದಂಥದ್ದೇ ರುಚಿ ಬೇಕಂದ್ರೆ ನೀವು ಮೈಸೂರಿಗೇ ಬರಬೇಕು. ಅದೂ ಇಲ್ಲಿನ ಗುರು ಸ್ವೀಟ್ಸ್ ನಲ್ಲೇ ಮೈಸೂರ್ ಪಾಕ್ ರುಚಿ ನೋಡ್ಬೇಕು. ಒರಿಜಿನಲ್ ಗುರು ಸ್ವೀಟ್ ಇರೋದು ಸಯ್ಯಾಜಿರಾವ್ ರಸ್ತೆ ಬಳಿ. ಈ ಅಂಗಡಿ ನಡೆಸುತ್ತಿರೋದು ಮೈಸೂರು ಪಾಕಿನ ಸೃಷ್ಟಿಕರ್ತ ಕಾಕಾಸುರ ಮಾದಪ್ಪನ ಮುಂದಿನ ಪೀಳಿಗೆಯವರು.

ಅವರ ಕುಟುಂಬದ ಪ್ರತಿ ಪೀಳಿಗೆಯಲ್ಲೂ ಒಬ್ಬರು ಈ ವೃತ್ತಿಗೆ ಬಂದೇ ಬರುತ್ತಾರೆ. ಹಾಗಂತ ಅವರು ಬರೀ ಇದೇ ವೃತ್ತಿಯನ್ನ ನಂಬಿಕೊಂಡಿದ್ದಾರೆ ಎಂದಲ್ಲ. ಡಾಕ್ಟರ್, ಇಂಜಿನಿಯರ್ ಗಳು ಆದವರೂ ಇವರ ಕುಟುಂಬದಲ್ಲಿದ್ದಾರೆ. ಇವರ ಮತ್ತೊಂದು ಅಂಗಡಿ ಅಶೋಕ ರಸ್ತೆಯಲ್ಲೂ ಕೂಡಾ ಇದೆ. ಅವರು ಎರಡು ರೀತಿಯ ಮೈಸೂರ್ ಪಾಕ್ ತಯಾರಿಸುತ್ತಾರೆ. ಒಂದು ಸಾಧಾರಣ ಮೈಸೂರು ಪಾಕ್, ಮತ್ತೊಂದು ಸ್ಪೆಷಲ್ ಮೈಸೂರು ಪಾಕ್. ಸ್ಪೆಷಲ್ ಮೈಸೂರ್ ಪಾಕನ್ನ ಬರೀ ತುಪ್ಪದಲ್ಲಿ ತಯಾರು ಮಾಡಿದ್ರೆ  ಮತ್ತೊಂದು ಮೈಸೂರ್ ಪಾಕನ್ನ ವನಸ್ಪತಿ ಬೆರೆಸಿ ತಯಾರಿಸುತ್ತಾರೆ. ಆದರೆ ಇದರ ಅಸಲಿ ರೆಸಿಪಿ ಇನ್ನೂ ಕೂಡಾ ಯಾರಿಗೂ ತಿಳಿದಿಲ್ಲ.  ಅದು ಅವರ ಕುಟುಂಬದ ಟ್ರೇಡ್ ಸೀಕ್ರೆಟ್. ಆ ಕಾಲದಿಂದ ಅದೇ ರುಚಿ ಕಾಪಾಡಿಕೊಂಡಿರುವ ಕಾಕಾಸುರ ಮಾದಪ್ಪನ ವಂಶಸ್ಥರಿಗೆ ಭಾರೀ ಬೇಡಿಕೆ ಇದೆ. ಈಗ ಆ ಅಂಗಡಿಯನ್ನು ನೋಡಿಕೊಳ್ಳುತ್ತಿರುವ ಮಾದಪ್ಪನ ವಂಶಸ್ಥರು ಹೇಳೋ ಪ್ರಕಾರ ಮುಂಚಿನ ರುಚಿಯನ್ನು ಈಗಲೂ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಅವಾಗ ಸಿಗುತ್ತಿದ್ದಂತಹ ಶುದ್ಧ ಪರಿಕರಗಳು ಈಗ ಸಿಗಲ್ಲ. ದಸರಾ ಸಂದರ್ಭದಲ್ಲಂತೂ ಇಲ್ಲಿ ಜನ ಗಿಜಿಗುಟ್ಟುತ್ತಿರುತ್ತಾರೆ. ಇಲ್ಲಿ ಮೈಸೂರು ಪಾಕನ್ನ ಉಂಡೆಯಾಗಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಅದೇ ಇಲ್ಲಿನ ವಿಶೇಷ.  ಇಂದಿಗೂ ಸಣ್ಣದೊಂದು ಮಳಿಗೆಯಲ್ಲೇ ಅಂಗಡಿ ನಡೆಸುತ್ತಿರೋ ಇವರಿಗೆ ರಾಜಮನೆತನದ ಮೇಲೆ ಅಪಾರ ಗೌರವ ಇದೆ. ಇಂದಿಗೂ ಕೂಡಾ ಪ್ರತಿದಿನ ಇಲ್ಲಿ ಜನ ಗಿಜಿಗುಡುತ್ತಲೇ ಇರುತ್ತಾರೆ.

ಸಿಕ್ಕದ್ದನ್ನೆಲ್ಲಾ ತಿಂದು ಕೆಟ್ಟ ರುಚಿಯನ್ನೆಲ್ಲಾ ಸಹಿಸಿಕೊಳ್ಳುವ ನಿಮ್ಮ ನಾಲಗೆಗೆ 100 ವರ್ಷ ಇತಿಹಾಸವಿರೋ ಈ ಮೈಸೂರ್ ಪಾಕ್ ನಿಜವಾದ ಇನಾಮು. ನೀವು ಮೈಸೂರಿಗೆ ಬಂದರೆ ಗುರು ಸ್ವೀಟ್ಸ್ ಗೆ ಬಂದು ಮೈಸೂರ್ ಪಾಕ್ ತಿಂದು ಹೋಗಿಲ್ಲ ಅಂದ್ರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ.         

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!