ಸಾಂಸ್ಕೃತಿಕ ನಗರಿಯಲ್ಲಿ ಸಮೂಹಿಕ ಅತ್ಯಾಚಾರ. ಜನಪ್ರತಿನಿಧಿಗಳೇ, ಇದಕ್ಕೆ ನಿಮ್ಮ ಉತ್ತರವೇನು?
1 min read
ಮೈಸೂರಿನಲ್ಲಿ ಯುವತಿಯೋರ್ವಳ ಮೇಲೆ ಆರು ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಹೌದು..ಮೈಸೂರು ಅಂದರೆ ಸಾಂಸ್ಕೃತಿಕ ನಗರಿ, ಜನರು ಸಂಸ್ಕೃತಿಯನ್ನು ಉಳಿಸಿಕೊಂಡಿರುವ ನಗರಿ, ಜನರು ಇನ್ನೂ ಕೂಡ ಮಾನವೀಯತೆ ಉಳಿಸಿಕೊಂಡಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲಿಯೂ ಕೂಡಾ ಅಮಾನವೀಯ ಘಟನೆಗಳು ಇತ್ತೀಚೆಗೆ ನಡೆಯುತ್ತಲೇ ಇವೆ.
ಮೈಸೂರಿನ ದಟ್ಟಗಳ್ಳಿ ಸಮೀಪ, ಅಂದರೆ ನಂಜನಗೂಡು ರಸ್ತೆಯ ಬಳಿ ಇರುವ ಲಿಂಗಾಂಬುದಿ ಪಾಳ್ಯ ಎಂಬಲ್ಲಿ ಈ ಕೃತ್ಯ ನಡೆದಿದೆ. ಬುಧವಾರ ರಾತ್ರಿ ಆ ಯುವತಿ ತನ್ನ ಪ್ರಿಯತಮನ ಜೊತೆ ಕುಳಿತು ಯಾರೂ ಇಲ್ಲದ ಸ್ಥಳದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಬಂದಿದ್ದಾರೆ. ನಂತರ ಅವರ ಮಧ್ಯೆ ಏನು ನಡೆದಿದೆಯೋ ಗೊತ್ತಿಲ್ಲ. ಆನಂತರ ಆತನ ಪ್ರಿಯತಮನ ಕಾಲಿಗೆ ಕಲ್ಲಿನಿಂದ ಜಜ್ಜಿ ಗಾಯಮಾಡಿದ್ದಾರೆ. ನಂತರ ಯುವಕನ ಮುಂದೆಯೇ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಅಪರಾಧಿಗಳ ಪತ್ತೆ ಇನ್ನೂ ಆಗಿಲ್ಲ. ಈಗ ಆ ಹುಡುಗಿ ಹಾಗೂ ಹುಡುಗ ಇಬ್ಬರೂ ತೀವ್ರ ಅಸ್ತವ್ಯಸ್ತಗೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಹೊಸ ತಂಡವೊಂದನ್ನು ರಚಿಸಿ ಅಪರಾಧಿಗಳಿಗೆ ಶೋಧ ನಡೆಸುತ್ತಿದ್ದಾರೆ.
ಎಷ್ಟೋ ಅಪ್ರಾಪ್ತ ಯುವತಿಯರಿಗೆ ಈ ರೀತಿ ಅನ್ಯಾಯ, ಶೋಷಣೆಯಾದಾಗ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತದೆ. ಅವರಿಗೆ ನ್ಯಾಯ ಕೊಡಿಸಬೇಕೆಂದು ಎಲ್ಲರೂ ಆಗ್ರಹಿಸುತ್ತಾರೆ. ಆದರೆ ಕೆಲವು ದಿನಗಳಾದ ಮೇಲೆ ಎಲ್ಲರೂ ಎಲ್ಲವನ್ನೂ ಮರೆತುಬಿಡುತ್ತಾರೆ. ಆ ಪ್ರಕರಣ ಎಲ್ಲಿಯವರೆಗೂ ಬಂತೆಂದು ತಿಳಿದುಕೊಳ್ಳುವ ವ್ಯವಧಾನ ಕೂಡಾ ಯಾರಿಗೂ ಇರುವುದಿಲ್ಲ. ಈ ಪ್ರಕರಣವೂ ಹಾಗೆಯೇ ಆಗಬಾರದು. ಮೈಸೂರಿನಲ್ಲಿ ಈ ರೀತಿ ಘಟನೆ ನಡೆದಿದೆ ಎಂದರೆ ಅದು ಕೆಟ್ಟ ಮುನ್ಸೂಚನೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಇದನ್ನೂ ಹತ್ತರಲ್ಲಿ ಹನ್ನೊಂದು ಎಂದು ಬಿಟ್ಟರೆ ಈ ಯುವತಿಗೆ ನ್ಯಾಯ ಸಿಗುವುದಿಲ್ಲ. ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾದಾಗ ಮಾತ್ರ ಮುಂದೆ ಯಾರೂ ಇಂತಹ ಕೃತ್ಯಗಳನ್ನು ಮಾಡುವುದಕ್ಕೆ ಧೈರ್ಯ ಮಾಡುವುದಿಲ್ಲ. ಜನಪ್ರತಿನಿಧಿಗಳೇ, ಸ್ವಚ್ಛತೆ, ನಗರ ನಿರ್ವಹಣೆ, ನೀರು, ವಿದ್ಯುತ್ ನಂತಹ ವಿಚಾರಗಳಲ್ಲಿ ತೋರಿಸುವ ನಿರ್ಲಕ್ಷ್ಯವನ್ನ ಇದರಲ್ಲೂ ತೋರಿಸಿದರೆ ಜನ ಸುಮ್ಮನಿರುವುದಿಲ್ಲ. ಎಚ್ಚರ