ಬದುಕು ಮುಗಿಯುವ ಜಾಗದಲ್ಲಿ ಬದುಕು ಕಟ್ಟಿಕೊಂಡ ನಮ್ಮ ಮೈಸೂರಿನ ದಿಟ್ಟ ಮಹಿಳೆ.
1 min read
ಮೈಸೂರಿನ ಎಷ್ಟೋ ಜನ ಪದವಿ, ಸ್ನಾತಕೋತ್ತರ ಪದವಿ ಮಾಡಿಕೊಂಡು ಬೆಂಗಳೂರಿಗೋ ಇಲ್ಲ ಬೇರೆ ಬೇರೆ ಊರುಗಳಿಗೋ ಹೋಗಿಬಿಡುತ್ತಾರೆ. ಇಲ್ಲಿದ್ದು ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ತಲೆಕೆಡಿಸಿಕೊಂಡು ಇಷ್ಟವಿಲ್ಲದಿದ್ದರೂ ಊರು ಬಿಡುವ ಮಂದಿಗೆ ಮೈಸೂರಿನಲ್ಲಂತೂ ಕೊರತೆಯಿಲ್ಲ. ಕೆಲವೊಬ್ಬರು ದುಡ್ಡು ಸಂಪಾದನೆ ಮಾಡಿ ವಾಪಸ್ ಬಂದರೆ ಬಹುಪಾಲು ಜನ ಅಲ್ಲೇ ಉಳಿದುಕೊಳ್ಳುತ್ತಾರೆ. ಆದರೆ ಮೈಸೂರಿನಲ್ಲೇ ಉಳಿದುಕೊಂಡವರು ಸಾಧನೆ ಮಾಡಿದ ನಿದರ್ಶನಗಳೂ ಬೇಕಾದಷ್ಟಿವೆ. ಹೌದು.. ಮೈಸೂರು ಕೂಡಾ ಸಾಧಕರಿಗೆ ಊರು, ಸಾಧಿಸಲು ಹಂಬಲಿಸುವವರಿಗೆ ಸೂರು. ಸಾಧನೆ ಎಂದರೆ ಪದಕ ಎತ್ತಿ ಹಿಡಿಯುವುದು, ಹೊಸ ಸಂಶೋಧನೆ ಮಾಡಿ ವಿಶ್ವದ ಗಮನ ಸೆಳೆಯುವುದು, ಕಲೆಯಲ್ಲಿ ಉನ್ನತ ಮಟ್ಟಕ್ಕೆ ಏರುವುದು ಮಾತ್ರವೇ? ಖಂಡಿತ ಇಲ್ಲ. ಸಾಧನೆಗೆ ಇಂತಹುದೇ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲು ಎಷ್ಟೋ ಜನ ಸಾಧಕರಿದ್ದಾರೆ. ಅವರನ್ನು ಹುಡುಕಿ ತೋರಿಸಿದರೆ ಎಂತಹವರಿಗೂ ಅವರ ಮೇಲೆ ಗೌರವ ಹುಟ್ಟಿ ಅವರು ಮಾಡಿರುವ ಸಾಧನೆ ಯಾವುದಕ್ಕೂ ಕಡಿಮೆಯಿಲ್ಲ ಎನಿಸುತ್ತದೆ. ಮೈಸೂರಿನಲ್ಲಿಯೂ ಅಂತಹ ಹಲವಾರು ಜನರಿದ್ದಾರೆ. ತಮ್ಮ ಬದುಕಿನ ಮಟ್ಟಿಗೆ ಅಸಾಧಾರಣ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅದರಲ್ಲೂ ಕೆಲವರಂತೂ ಸಮಾಜದ ಪದ್ಧತಿ, ನಂಬಿಕೆಗಳ ವಿರುದ್ಧ ನಿಂತು ಗೆದ್ದು ತೋರಿಸಿದ್ದಾರೆ. ಇದು ಅಂತಹುದೇ ನಿದರ್ಶನ. ಅದು ಭಣಗುಟ್ಟುತ್ತಿರುವ ಪ್ರದೇಶ. ಆಗಾಗ ಅವರಿವರ ಆಕ್ರಂದನ ಕೇಳಿಸುತ್ತದೆ. ಆಗ ತಾನೆ ತಮ್ಮನ್ನು ಅಗಲಿದವರನ್ನ ನೆನೆದು ನೋವು ತಾಂಡವವಾಡುತ್ತದೆ. ಆದರೆ ಮಿಕ್ಕ ಸಮಯದಲ್ಲಿ ಮೌನ. ಇದು ಅಕ್ಷರಶಃ ಸ್ಮಶಾನ ಮೌನ. ಏಕೆಂದರೆ ನಾನು ಹೇಳುತ್ತಿರುವುದು ಸಾಕ್ಷಾತ್ ಸ್ಮಶಾನದ ಬಗ್ಗೆ. ಸ್ಮಶಾನದಲ್ಲಿ ಜೀವನ ಕಟ್ಟಿಕೊಂಡ ನಮ್ಮ ಮೈಸೂರಿನ ದಿಟ್ಟ ಮಹಿಳೆ ಬಗ್ಗೆ. ಜೀವನ ಮುಗಿದ ಮೇಲೆ ಬರುವ ಸ್ಥಳ ಇದು. ಇಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಖಂಡಿತ ಹೌದು. ಇಲ್ಲಿ ಜೀವನವನ್ನು ಕಟ್ಟಿಕೊಳ್ಳಬಹುದು. ಹದಗೆಟ್ಟಿರುವ ಜೀವನವನ್ನ ಸರಿಹಾದಿಗೆ ತರಬಹುದು. ಅದಕ್ಕೆ ಜೀವಂತ ಸಾಕ್ಷಿ ಈ ದಿಟ್ಟ ಮಹಿಳೆ ನೀಲಮ್ಮ.


ನೀಲಮ್ಮನ ಪೂರ್ವಾಪರ:
ನೀಲಮ್ಮ ಜೀವಿಸುತ್ತಿರುವುದು ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಲಿಂಗಾಯತರ ರುದ್ರಭೂಮಿಯಲ್ಲಿ. ರುದ್ರಭೂಮಿ ಎಂದರೆ ಆಡುಭಾಷೆಯಲ್ಲಿ ಸ್ಮಶಾನ. ಮನುಷ್ಯನ ಜೀವನದ ಕೊನೆಯ ಕೊನೆಯ ನಿಲ್ದಾಣ. ಆದರೆ ಇವರಿಗೆ, ಇವರ ಕುಟುಂಬದವರಿಗೆ ಇಲ್ಲೇ ದಿನನಿತ್ಯದ ಜೀವನ. ಇದು ಇವರಿಗೆ ಅಚಾನಕ್ ಆಗಿ ಬಂದ ಪರಿಸ್ಥಿತಿಯಲ್ಲ. ಇವರೇ ಆರಿಸಿಕೊಂಡಿರುವ ಜೀವನಶೈಲಿ ಎಂಬುದು ಹೆಮ್ಮೆಯ ವಿಚಾರ.ನೀಲಮ್ಮ ಕಳೆದ 13 ವರ್ಷದಿಂದ ಈ ರುದ್ರಭೂಮಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಇಲ್ಲಿಗೆ ಬರುವವರಿಗೆ ಗುಂಡಿಗಳನ್ನು ತೋಡುವ ಕೆಲಸವನ್ನು ಕೂಡಾ ನೀಲಮ್ಮ ಅವರೇ ಮಾಡುತ್ತಾರೆ. ಇದರ ಬಗ್ಗೆ ಅವರಿಗೆ ಯಾವುದೇ ಬೇಸರ, ಮುಜುಗರ ಇಲ್ಲ. ತಮ್ಮ ಕೆಲಸವನ್ನು ನಿಷ್ಟೆಯಿಂದ ಮಾಡುವ ಈಕೆಗೆ ಆಕೆಯ ಕಾಯಕವೇ ಕೈಲಾಸ. ನೀಲಮ್ಮ ಹೀಗೆ ಜೀವಿಸುತ್ತಿರುವುದು ಕಳೆದ 13 ವರ್ಷಗಳಿಂದ. ಈಕೆ ಮೂಲತಃ ಮೈಸೂರು ಜಿಲ್ಲೆಯ ಸರಗೂರಿನವರು. 1975ರಲ್ಲಿ ಮದುವೆಯಾಗಿ ಮೈಸೂರು ನಗರಕ್ಕೆ ಬರುತ್ತಾರೆ. ಅವರ ಪತಿ ಟೆಕ್ಸ್ ಟೈಲ್ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ಜೊತೆಗೆ ಸ್ಮಶಾನದಲ್ಲಿ ಗುಂಡಿ ತೆಗೆಯುವ ಕೆಲಸವನ್ನೂ ಮಾಡುತ್ತಿರುತ್ತಾರೆ. ಹೀಗೆ ಜೀವನ ಸಾಗಿಸುತ್ತಿದ್ದ ನೀಲಮ್ಮನ ಬದುಕಿನಲ್ಲಿ ವಿಧಿಯ ಕೈವಾಡದಿಂದ ಅಚಾನಕ್ ಅನಾಹುತವೊಂದು ಸಂಭವಿಸುತ್ತದೆ. ಅದೇ ನೀಲಮ್ಮನ ಪತಿಯ ಸಾವು. ಹೃದಯಾಘಾತದಿಂದ 2005ರಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ ನೀಲಮ್ಮನ ಪತಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಅಗಲುತ್ತಾರೆ. ಇದರಿಂದ ಧೃತಿಗೆಡದ ನೀಲಮ್ಮ ಬರುವುದು ಈ ದಿಟ್ಟ ನಿರ್ಧಾರಕ್ಕೆ. ಪತಿಯ ಸಾವಿನ ನಂತರ ನೀಲಮ್ಮ ಪತಿಯ ಕಾಯಕವನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ. ಯಾರು ಏನು ಮಾಡಲು ಹೊರಟರೂ ಮೂಗು ಮುರಿಯುವ ಸಮಾಜ ಇವರ ಈ ನಡೆಯ ಬಗ್ಗೆ ಟೀಕೆ ಮಾಡದೇ ಇರುತ್ತದಾ? ಆದರೆ ಯಾರು ಏನು ಮಾತನಾಡಿದರೂ ನೀಲಮ್ಮ ಹೆದರುವುದಿಲ್ಲ. ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯದೆ ತನ್ನ ಪತಿಯ ಕಾಯಕವನ್ನು ತಾವೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಮಗ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಇಲ್ಲೇ ವಾಸ ಮಾಡುತ್ತಿದ್ದಾರೆ. ಜೀವನದ ಮಾಗಿದ ಅನುಭವದಿಂದ ಬರುವ ನೀಲಮ್ಮನ ಮಾತುಗಳು ನಮ್ಮನ್ನು ಒಂದು ಕ್ಷಣ ಯೋಚಿಸುವಂತೆ ಮಾಡುತ್ತವೆ.
“ನಮ್ಮ ಮನೆಯವರಿಗೆ ಸುಖವಾದ ಸಾವು ಬಂತು. ಒಂದು ಕ್ಷಣ ಎದೆ ನೋವು ಎಂದರು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲೇ ಮೃತಪಟ್ಟರು. ಅಂತಹ ಸುಖವಾದ ಸಾವು ಅದು. ನನ್ನ ಪತಿ ಸತ್ತ ನಂತರ ನಾನು ಈ ಕೆಲಸ ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದೆ. ಆದರೆ ಜನ ಬಾಯಿಗೆ ಬಂದದ್ದನ್ನ ಮಾತನಾಡಲು ಶುರುಮಾಡಿದ್ರು. ಅವರು ಮಾತನಾಡುತ್ತಾರೆ ಅಂತ ನಾನು ಸುಮ್ಮನಾಗಲಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆಡಿಕೊಳ್ಳುವವರು, ಸುಳ್ಳು ಹೇಳುವವರು ಎಲ್ಲರೂ ಏನಿದ್ದರೂ ಇಲ್ಲಿಂದ ಹೊರಗೆ ಮಾತ್ರ. ಇಲ್ಲಿ ಒಳಗೆ ಬರುವವರು ಅದ್ಯಾವುದನ್ನೂ ಮಾಡುವುದಿಲ್ಲ.” – ನೀಲಮ್ಮ

ನೀಲಮ್ಮನಿಗೆ ಇಬ್ಬರು ಮಕ್ಕಳು. ದೊಡ್ಡವ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆಗಾಗ ಮನೆಗೆ ಬರುತ್ತಾನೆ. ಚಿಕ್ಕವನು ಮದುವೆಯಾಗಿ ಎರಡು ಮಕ್ಕಳು ಹಾಗೂ ಪತ್ನಿಯೊಂದಿಗೆ ಇವರ ಜೊತೆಯಲ್ಲಿಯೇ ಇದ್ದಾನೆ. ಅವರ ಜೀವನೋಪಾಯಕ್ಕೆ ಇಷ್ಟು ಸಾಕು. ನೀಲಮ್ಮನ ಜೊತೆಯಿರುವ ಸೊಸೆ ನಂದಿನಿ ಕೂಡಾ ಖುಷಿಯಾಗಿದ್ದಾರೆ. ‘ನಾನು ಮದುವೆಯಾಗುವಾಗ ಯಾಕೆ ಇಂತಹ ಕುಟುಂಬಕ್ಕೆ ಮದುವೆಯಾಗುತ್ತಿದ್ದೀರ ಎಂದು ಕೇಳುವವರು ಇದ್ದರು. ಆದರೆ ನನ್ನ ಅತ್ತೆ ಮಾಡುವ ಕೆಲಸ ನನಗೆ ಖುಷಿ ಕೊಡುತ್ತದೆ. ಆದ್ದರಿಂದ ಇಲ್ಲಿಗೆ ಮದುವೆಯಾಗಿ ಬಂದೆ. ಈಗ ಇಲ್ಲಿಯೇ ಖುಷಿಯಾಗಿದ್ದೇವೆ’ ಎನ್ನುತ್ತಾರೆ ಅವರ ಸೊಸೆ ನಂದಿನಿ. ಸ್ಥಳೀಯರು ಕೂಡ ನೀಲಮ್ಮನವರ ಕೆಲಸದ ಬಗ್ಗೆ ಖುಷಿ ಪಡುತ್ತಾರೆ. ಹೆಣ್ಣುಮಕ್ಕಳು ಈ ರೀತಿ ಮುಂದೆ ಬರುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ. ಇದರಿಂದ ನಮಗೆ ಹೆಮ್ಮೆಯಾಗುತ್ತದೆ ಎಂದು ಎಲ್ಲರೂ ಖುಷಿಪಡುತ್ತಾರೆ. ಸ್ಮಶಾನ ಅಂದರೆ ಹೆದರಿಕೊಳ್ಳುವ ಜನರೇ ಹೆಚ್ಚು. ಅಲ್ಲಿಗೆ ಹೋದರೆ ಅಪಶಕುನ, ಕೆಟ್ಟ ಸೂಚನೆ ಎಂದೆಲ್ಲಾ ಹೇಳುತ್ತಾರೆ. ಅಂತಹದ್ದರಲ್ಲಿ ಈಕೆ ಅಲ್ಲಿಯೇ ಜೀವನ ಕಟ್ಟಿಕೊಂಡಿದ್ದಾಳೆ. ಸ್ತ್ರೀಯರಿಗೂ ಪುರುಷರಂತೆ ಸಮಾಜದಲ್ಲಿ ಸ್ಥಾನ ಸಿಗಬೇಕು, ಜನ ಲಿಂಗಬೇಧ ಮಾಡಬಾರದು ಎಂದೆಲ್ಲಾ ಬಾಯಿಮಾತಿಗೆ ಬೊಬ್ಬೆ ಹೊಡೆಯುವವರು ಇವರಿಂದ ಕಲಿಯುವುದು ಸಾಕಷ್ಟಿದೆ. ನಿಜವಾದ ಸಮಾನತೆ ಸಾರುತ್ತಿರುವವರು ಇಂತಹ ಹೆಣ್ಣುಮಕ್ಕಳು. ನಾನು ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಾ ತನ್ನ ಪತಿಯಂತೆ ಸ್ಮಶಾನದಲ್ಲಿ ಗುಂಡಿ ತೋಡಿ ಜೀವನ ಕಟ್ಟಿಕೊಂಡಿರುವ ನೀಲಮ್ಮ ಪ್ರಸ್ತುತ ಸಮಾಜಕ್ಕೆ ಮಾದರಿ. ಇವರನ್ನು ನೋಡಿ ನಾವು ನೀವು ಕೂಡ ಸಾಕಷ್ಟು ವಿಚಾರ ಕಲಿಯಬೇಕು. ಇವರು ನಮ್ಮ ಹೆಮ್ಮೆ, ನಮ್ಮೆಲ್ಲರ ಹೆಮ್ಮೆ. ನಮ್ಮ ಮೈಸೂರಿನ ಹೆಮ್ಮೆ ಮಾತ್ರವಲ್ಲ, ಇಡೀ ಮನುಕುಲದ ಹೆಮ್ಮೆ..!! ನನ್ನ ಬಗ್ಗೆ ಮಾತುನಾಡುವವರೇನಿದ್ದರೂ ಇಲ್ಲಿಂದ ಹೊರಗಷ್ಟೇ. ಒಳಗೆ ಬಂದಮೇಲೆ ಯಾರೂ ಮಾತನಾಡುವುದಿಲ್ಲ ಎಂಬ ನೀಲಮ್ಮನ ಮಾತು ಪ್ರತಿದಿನ ತಪ್ಪದೇ ಕಿವಿಯಲ್ಲಿ ಮಾರ್ದನಿಸುತ್ತದೆ, ಮತ್ತೆ ಮತ್ತೆ ಕಾಡುತ್ತದೆ.