ಮೈಸೂರಿನ ಹೆಗ್ಗಳಿಕೆ ಹೋಟೆಲ್ ಹನುಮಂತು..!
1 min read
ಮೈಸೂರಿನಲ್ಲಿ ಹಲವಾರು ಖಾದ್ಯಗಳು ಫೇಮಸ್. ಹೋಟೆಲ್’ಗಳು ಕೂಡ ಫೇಮಸ್. ಮೈಸೂರಿನ ಹೋಟೆಲ್ ಉದ್ಯಮಕ್ಕೆ ಸುದೀರ್ಘವಾದ ಇತಿಹಾಸವೇನೂ ಇಲ್ಲ. 70-80 ವರ್ಷಗಳ ಇತಿಹಾಸ ಇದೆ ಅಷ್ಟೇ. ಆದರೆ ಮೈಸೂರಿನ ಕೆಲವು ಅತ್ಯಂತ ಜನಪ್ರಿಯ ಹೋಟೆಲ್ ಗಳಿಗೆ ಸುದೀರ್ಘವಾದ ಇತಿಹಾಸ ಇದೆ. ಅದು ಇನ್ನೂ ಹೆಚ್ಚು ಹೋಟೆಲ್ ಗಳು ಚಾಲ್ತಿಯಲ್ಲಿರಲಿಲ್ಲ. ಎಲ್ಲವೂ ಸರ್ಕಾರದಿಂದ ಸ್ಥಾಪಿತವಾದ ಹೋಟೆಲ್ ಗಳು. ಆದರೆ ಅಲ್ಲಲ್ಲಿ ಸಾರ್ವಜನಿಕರೇ ಶುರುಮಾಡಿ ನಡೆಸುತ್ತಿದ್ದ ಹೋಟೆಲ್’ಗಳಿದ್ದವು. ಅಂತಹ ಕೆಲವು ಹೋಟೆಲ್ ಗಳು ಜನಪ್ರಿಯವಾಗಿದ್ದು ಇನ್ನು ಹಾಗೇ ಇವೆ. ಮೈಸೂರಿನ ನಾನ್ ವೆಜ್ ಪ್ರಿಯರಿಗೆ ಹೋಟೆಲ್ ಅಂದ ತಕ್ಷಣ ನೆನಪಾಗೋದು ಹೋಟೆಲ್ ಹನುಮಂತು. ಮೈಸೂರಿಗೆ ಬಂದು ಹನುಮಂತು ಬಿರಿಯಾನಿ ತಿನ್ನದೇ ಹೋದ ಮಾಂಸಾಹಾರಪ್ರಿಯರೇ ಇಲ್ಲ. ಈ ಹೋಟೆಲ್ ಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ಇಲ್ಲಿಗೆ ಬಂದಾಗಲೆಲ್ಲಾ ಒಮ್ಮೆ ಹನುಮಂತು ಬಿರಿಯಾನಿ ತಿಂದರೆ ಅಲ್ಲಿಗೆ ಜೀವನ ಸಾರ್ಥಕ. ಮೈಲಾರಿ ದೋಸೆಗೆ ಒಂದಷ್ಟು ನಕಲಿ ಅಂಗಡಿಗಳು ಇರುವಂತೆ ಹನುಮಂತು ಎನ್ನುವ ಹೆಸರಿನಲ್ಲೂ ಕೂಡ ಸಾಕಷ್ಟು ಹೋಟೆಲ್ ಗಳಿವೆ. ಆದರೆ ನಿಜವಾದ ಹನುಮಂತು ಹೋಟೆಲ್ ಇರುವುದು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ. ಹೊರಗಿನಿಂದ ನೋಡುವುದಕ್ಕೆ ಪುಟ್ಟ ಹೋಟೆಲ್. ಒಳಗೆ ಹೋದರೆ ಮಾಂಸಾಹಾರದ ಘಮ. ಆರ್ಡರ್ ಮಾಡಿ ಕುಳಿತರೆ ಸ್ವಲ್ಪ ಹೊತ್ತಿನಲ್ಲೇ ರುಚಿ ರುಚಿ ಆಹಾರ ನಿಮ್ಮ ಮುಂದೆ ಬಂದಿರುತ್ತದೆ. ದೇಸಿ ಶೈಲಿಯಲ್ಲಿ ಬಾಳೆಎಲೆ ಅಥವಾ ಮುತ್ತಗದ ಎಲೆಯಲ್ಲಿ ಬಿಸಿ ಬಿಸಿ ಬಿರಿಯಾನಿ. ಉದುರು-ಉದುರಾಗಿ ಕಾಣುವ ಬಾಸುಮತಿ ಅಕ್ಕಿಯ ಅನ್ನ. ಮೇಲೆ ಒಂದಷ್ಟು ಪೀಸ್ ಗಳು. ಮೂಗಿಗೆ ಬಡಿಯುವ ಮರಾಠಿ ಮೊಗ್ಗು, ಏಲಕ್ಕಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಚಿಕನ್ ಘಮ. ಬಿರಿಯಾನಿಗೆ ನೆಂಚಿಕೊಳ್ಳಲು ರುಚಿರುಚಿ ಗ್ರೇವಿ. ಗ್ರೇವಿ ಇಷ್ಟವಾಗುವುದಿಲ್ಲ ಎನ್ನುವವರಿಗೆ ಮೊಸರು ಪಚ್ಡಿ. ಪಕ್ಕದಲ್ಲಿ ಚೂರು ಈರುಳ್ಳಿ ಹಾಗೂ ಒಂದು ಪೀಸ್ ನಿಂಬೆಹಣ್ಣು. ಈ ಬಿರಿಯಾನಿ ತಿನ್ನಲು ಶುರು ಮಾಡಿದರೆ ಮೊದಲು ಪೀಸ್ ಖಾಲಿ ಮಾಡುವುದೋ ರೈಸ್ ಖಾಲಿ ಮಾಡುವುದೋ ಎಂದು ಗೊಂದಲ ಶುರುವಾಗುತ್ತದೆ. ಆ ಗೊಂದಲದಲ್ಲಿ ಎಲೆ ಖಾಲಿಯಾಗಿರುವುದೇ ತಿಳಿದಿರುವುದಿಲ್ಲ. ಕೊನೆಗೆ ಮುಗಿದೇ ಹೋಯಿತಾ ಎನಿಸುತ್ತದೆ. ಅಷ್ಟರಲ್ಲಿ ‘ಇನ್ನೊಂದ್ ಪ್ಲೇಟ್ ಬಿರಿಯಾನಿ’ ಎನ್ನಲು ಮನಸ್ಸು ಹಾತೊರೆಯುತ್ತಿರುತ್ತದೆ.
ಇದು ಮೈಸೂರಿನ “ಹೋಟೆಲ್ ಹನುಮಂತು ಒರಿಜಿನಲ್”ನ ಚಿತ್ರಣ. ಹೋಟೆಲ್ ಹನುಮಂತು ಸ್ಥಾಪನೆಯ ಹಿಂದೆ ಕಥೆಯೊಂದಿದೆ. ದೊಡ್ಡ ಹೆಸರು ಮಾಡಿರುವ ಈ ಹೋಟೆಲ್ ನ ಪುಟ್ಟ ಇತಿಹಾಸವನ್ನ ನೀವು ತಿಳಿಯಲೇ ಬೇಕು. ಹೋಟೆಲ್ ಹನುಮಂತು ಶುರುವಾಗಿದ್ದು 1930ರಲ್ಲಿ. ಮೈಸೂರಿನಲ್ಲಿ ಹೋಟೆಲ್ ಉದ್ಯಮ ಆಗತಾನೆ ಚುರುಕುಗೊಳ್ಳುತ್ತಿತ್ತು. ಆಗ ಹುಟ್ಟಿದ್ದು ಈ ಹೋಟೆಲ್. ಈಗ ಇದನ್ನ ನಡೆಸಿಕೊಂಡು ಹೋಗುತ್ತಿರುವವರ ಮುತ್ತಾತ ಕಟ್ಟಿದ ಸಂಸ್ಥೆ ಹೋಟೆಲ್ ಹನುಮಂತು. ಅವರ ಹೆಸರೇ ಹನುಮಂತು. ಆ ಕಾರಣಕ್ಕೆ ಇದಕ್ಕೆ ‘ಹೋಟೆಲ್ ಹನುಮಂತು’ ಎಂದು ಹೆಸರಿಡಲಾಯಿತು. ಆಗ ಇವರ ಮುತ್ತಾತ ಕಟ್ಟಿದ ಸಂಸ್ಥೆಯನ್ನ ಅವರ ಮುಂದಿನ ಪೀಳಿಗೆಯವರು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆಗ ಅವರ ಮನೆಯಲ್ಲಿ ಮಾಡುತ್ತಿದ್ದ ಬಿರಿಯಾನಿಯನ್ನು ತಿನ್ನುತ್ತಿದ್ದಾಗ ಯಾಕೆ ಹೋಟೆಲ್ ಮಾಡಬಾರದು ಎಂಬ ಯೋಚನೆ ಇವರಿಗೆ ಬಂತಂತೆ. ಇನ್ನೇಕೆ ತಡ ಎಂದು ಹೋಟೆಲ್ ಶುರು ಮಾಡಿಯೇಬಿಟ್ಟರು. ಮೊದಮೊದಲು ಸುತ್ತಮುತ್ತಲ ಜನರನ್ನು ಮಾತ್ರ ಆಕರ್ಷಿಸಿದ್ದ ಈ ಹೋಟೆಲ್ ದಿನಕಳೆದಂತೆ ಪ್ರಚಾರ ಪಡೆಯುತ್ತಾ ಹೋಯಿತು. ಇಲ್ಲಿ ಮಾಡುವ ಬಿರಿಯಾನಿ ರುಚಿಗೆ ಮಾರುಹೋದ ಜನ ತಮ್ಮ ಸ್ನೇಹಿತರು, ಕುಟುಂಬದವರನ್ನು ಕರೆದುಕೊಂಡು ಇಲ್ಲಿಗೆ ಬರಲು ಶುರುಮಾಡಿದರು. ಆ ಕಾರಣದಿಂದ ಇಡೀ ನಗರದಲ್ಲಿ ಏನೇ ಬದಲಾವಣೆ ಆದರೂ ಈ ಹೋಟೆಲ್ ಮಾತ್ರ ಮುಚ್ಚಲಿಲ್ಲ. ವ್ಯಾಪಾರ ಚೆನ್ನಾಗಿಯೇ ಆಗುತ್ತಿದುದರಿಂದ ಅವರ ಮುಂದಿನ ಪೀಳಿಗೆಯವರು ಸಹ ಇದೇ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈಗ ಇಲ್ಲಿ ಹೋಟೆಲ್ ನೋಡಿಕೊಳ್ಳುತ್ತಿರುವುದು ಅವರ ಕುಟುಂಬದ ನಾಲ್ಕನೇ ಪೀಳಿಗೆಯವರು. ಇಂದಿಗೂ ಕೂಡಾ ಈ ಹೋಟೆಲ್ ನ ಬಿರಿಯಾನಿ ಮಾಂಸಾಹಾರ ಪ್ರಿಯರ ಮನಸ್ಸಿನಲ್ಲಿ ಖಾಯಂ ಸ್ಥಾನ ಗಳಿಸಿದೆ. ಅದೇ ಬೇಡಿಕೆ, ಪ್ರಸಿದ್ಧಿಯನ್ನು ಉಳಿಸಿಕೊಂಡು ಬಂದಿದೆ.

ಆಗಲೇ ಹೇಳಿದ ಹಾಗೆ ಇಲ್ಲಿ ಜನಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳೂ ಬಂದು, ಬಿರಿಯಾನಿ ತಿಂದು ಮನಸೋತಿದ್ದಾರೆ. ನಟರಾದ ಡಾಕ್ಟರ್ ರಾಜ್, ವಿಷ್ಣುವರ್ಧನ್, ಅಂಬರೀಶ್, ದರ್ಶನ್, ದುನಿಯಾ ವಿಜಯ್, ನಿರ್ಮಾಪಕ ಸಂದೇಶ್ ನಾಗರಾಜ್, ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಬ್ರೆಟ್ ಲೀ, ಡಿನ್ ಜಾನ್ಸ್ ಕೂಡಾ ಇಲ್ಲಿನ ಬಿರಿಯಾನಿಗೆ ಮನಸೋತಿದ್ದಾರೆ. ಇನ್ನೂ ಕೆಲವರು ಇಲ್ಲಿನ ಬಿರಿಯಾನಿಯನ್ನು ಪಾರ್ಸಲ್ ತೆಗೆದುಕೊಂಡು ಹೋಗುವ ಅಭ್ಯಾಸ ಕೂಡ ಇಟ್ಟುಕೊಂಡಿದ್ದಾರೆ. ಇದು ಹನುಮಂತು ಹೋಟೆಲ್ ನ ಹೆಗ್ಗಳಿಕೆ. ಇಲ್ಲಿ ಚಿಕನ್ ಹಾಗೂ ಮಟನ್ ಪಲಾವ್, ಚಿಕನ್ ಲೆಗ್ ಹಾಗೂ ಫ್ರೈ, ಮಟನ್ ಚಾಪ್ಸ್ ಹಾಗೂ ಲಿವರ್, ಕಾಲು ಸೂಪ್, ಕೈಮ, ಬೋಟಿ, ಗೀ ರೈಸ್ ನಂತಹ ಅತ್ಯುನ್ನತ ರುಚಿಯ ದೇಸಿ ಮಾಂಸಾಹಾರ ಖಾದ್ಯಗಳು ಸಿಗುತ್ತದೆ. ಈ ಹೋಟೆಲ್ ಶುರುವಾದಾಗಿನಿಂದ ಇಂದಿನವರೆಗೂ ಇಲ್ಲಿಗೆ ಯಾವ ಭಟ್ಟರೂ ಇಲ್ಲವಂತೆ. ಸ್ವತಃ ಅವರೇ ಅಡುಗೆ ಮಾಡುತ್ತಾರೆ. ಇದು ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ವಿಶೇಷ. ಇಲ್ಲಿನ ಬಿರಿಯಾನಿ ತಯಾರಿಸುವ ವಿಧಾನವನ್ನು ಯಾರಿಗೂ ಹೇಳುವ ಹಾಗಿಲ್ಲ. ಆ ರೆಸಿಪಿ ಟ್ರೇಡ್ ಸೀಕ್ರೆಟ್ ಅಂತಾರೆ ಇಲ್ಲಿನ ಮಾಲಿಕರು.

ಮೈಸೂರಿನಾದ್ಯಂತ ಹಲವಾರು ಹನುಮಂತು ಹೋಟೆಲ್ ಗಳಿವೆ. ಅವೆಲ್ಲವನ್ನೂ ನಡೆಸಿಕೊಂಡು ಹೋಗುತ್ತಿರುವುದು ಅದೇ ಕುಟುಂಬದವರು. ಆದರೆ ಒರಿಜಿನಲ್ ಹನುಂತು ಹೋಟೆಲ್ ಇರುವುದು ಮಾತ್ರ ಒಂದೇ. ಅದು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ.ಇಂದಿಗೂ ಮೈಸೂರಿಗೆ ಬರುವ ಮಾಂಸಾಹಾರ ಪ್ರಿಯರು ಹನುಮಂತು ಬಿರಿಯಾನಿ ತಿನ್ನದೇ ಮರಳುವುದಿಲ್ಲ. ಸಿನಿಮಾ ನಟರು, ರಾಜಕಾರಣಿಗಳು, ಕ್ರಿಕೆಟಿಗರು..ಹೀಗೆ ಹಲವಾರು ಜನರಿಗೆ ಇಲ್ಲಿ ಸಿಗುವ ಖಾದ್ಯವೇ ಅಚ್ಚುಮೆಚ್ಚು. ಹೋಟೆಲ್ ಹನುಮಂತು ಕೂಡ ಮೈಸೂರಿನ ಹೆಮ್ಮೆಯ ಬ್ರ್ಯಾಂಡ್. ಏಕೆಂದರೆ ಬೇರೆಲ್ಲೂ ಇದರ ಶಾಖೆಗಳಿಲ್ಲ. ನೀವು ಮುಂದಿನ ಬಾರಿ ಮೈಸೂರಿಗೆ ಬಂದಾಗ ಹನುಮಂತು ಬಿರಿಯಾನಿ ತಿನ್ನದೇ ವಾಪಸ್ ಹೊರಡಬೇಡಿ. ಇಲ್ಲವಾದಲ್ಲಿ ಜೀವನದಲ್ಲಿ ನೀವು ತಿನ್ನಬಹುದಾದ ಅತ್ಯುತ್ತಮ ಬಿರಿಯಾನಿಯನ್ನು ಮಿಸ್ ಮಾಡಿಕೊಳ್ಳುತ್ತೀರ.
ವಿಳಾಸ: #720, ಅಕ್ಬರ್ ರಸ್ತೆ, ಮಂಡಿ ಮೊಹಲ್ಲಾ, ಮೈಸೂರು – 570001