ರಾಮಸ್ವಾಮಿ ವೃತ್ತಾಂತ…
1 min read
ಭಾರತ ಸ್ವಾತಂತ್ರ್ಯ ಪಡೆದು ಏಳೆಂಟು ದಶಕಗಳಾಗುತ್ತಾ ಬಂತು. ಈಗಲೂ ಕೂಡಾ ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಮರೆತಿಲ್ಲ. ನಮಗಾಗಿ ಪ್ರಾಣ ತೆತ್ತವರನ್ನ ಸ್ಫೂರ್ತಿಯಾಗಿ ಪಡೆಯುತ್ತೇವೆ. ಜೊತೆಗೆ ಸರ್ಕಾರದ ವತಿಯಿಂದ ಕೂಡಾ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ಗೌರವ ಸಲ್ಲುತ್ತದೆ. ಇಷ್ಟೆಲ್ಲಾ ಹೇಳುತ್ತಿರುವುದು ಏಕೆಂದರೆ ನಮ್ಮ ಮೈಸೂರಿನಲ್ಲೂ ಸ್ವಾತಂತ್ರ್ಯ ಹೋರಾಟಗಾರರಿದ್ದರು. ನಮಗಾಗಿ, ನಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಗುರುತಾಗಿ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಅಚಾನಕ್ ಆಗಿ ಅಸುನೀಗಿದವರಿಗೂ ಕೂಡ ಕೃತಜ್ಞತೆಯ ಗುರುತಾಗಿ ಹಲವು ಸ್ಥಳಗಳಿವೆ.
ಮೈಸೂರಿನ ರಾಮಸ್ವಾಮಿ ವೃತ್ತದ ಬಗ್ಗೆ ನಿಮಗೆಲ್ಲಾ ತಿಳಿದಿರಬೇಕು. ರಾಮಸ್ವಾಮಿ ಸರ್ಕಲ್ ಅಂದ್ರೆ ಮೈಸೂರಿನ ಪ್ರಮುಖ ಸ್ಥಳ. ಇಲ್ಲಿಂದ ನಗರ ಬಸ್ ನಿಲ್ದಾಣಕ್ಕೆ, ರೈಲ್ವೇ ನಿಲ್ದಾಣಕ್ಕೆ ಹೋಗಲು ತುಂಬಾ ಹೊತ್ತು ಬೇಕಿಲ್ಲ. ಜೊತೆಗೆ ನಗರದಲ್ಲಿ ಬರುವ ಮುಕ್ಕಾಲು ಪಾಲು ಬಸ್ ಗಳೆಲ್ಲಾ ಈ ರಸ್ತೆಯ ಮೂಲಕವೇ ಸಂಚರಿಸುವುದು. ಇಲ್ಲಿ ಅಂಗಡಿ ಮಳಿಗೆಗಳಿವೆ, ಹೋಟೆಲ್, ಬ್ಯಾಂಕ್, ಕಚೇರಿ..ಹೀಗೆ ಎಲ್ಲವೂ ಇದೆ. ದಿನದ ಬಹುಪಾಲು ಸಮಯ ರಾಮಸ್ವಾಮಿ ಸರ್ಕಲ್ ಗಿಜಿಗುಟ್ಟುತ್ತಿರುತ್ತದೆ. ಜನರಿಂದ, ಬಸ್ ಗಳಿಂದ ತುಂಬಿ ತುಳುಕುತ್ತಿರುತ್ತದೆ. ರಾಮಸ್ವಾಮಿ ಸರ್ಕಲ್ ನಿಂದ ಕೊಂಚ ಮುಂದೆ ಹೋದರೆ ಅಲ್ಲಿ ಸಿಗುವುದು ಹಾರ್ಡ್ವಿಕ್ ಶಾಲೆ. ಅನಾದಿಕಾಲದಿಂದಲೂ ಇರುವ ಶಾಲೆ ಅದು. ಹಾರ್ಡ್ವಿಕ್ ಶಾಲೆಗೆ ಹೆಚ್ಚೂಕಡಿಮೆ ಶತಮಾನದ ಇತಿಹಾಸ ಇದೆ. ಆಗಿನ ಕಾಲದಲ್ಲಿ ಇದು ನಗರದ ಪ್ರಮುಖ ಶಾಲೆ. ಇಂದಿನ ಕಾಲದ ಪರಿಸ್ಥಿತಿ ಆಗ ಇರಲಿಲ್ಲ. ಶಾಲೆಗಳ ಸಂಖ್ಯೆಯೇ ಕಡಿಮೆಯಿತ್ತು. ಎಲ್ಲರೂ ತಮ್ಮ ಮಕ್ಕಳನ್ನ ಇದೇ ಶಾಲೆಗೆ ಸೇರಿಸುತ್ತಿದ್ದರು. ಅಲ್ಲಿ ಓದುತ್ತಿದ್ದ ಹುಡುಗನೊಬ್ಬನ ಹೆಸರೇ ರಾಮಸ್ವಾಮಿ. ಅಲ್ಲೇ ಓದುತ್ತಿದ್ದ ಹುಡುಗ ಅದೇ ಜಾಗಕ್ಕೆ ಹೆಸರಾದ. ಇದಕ್ಕೆ ಮುಂಚೆ ಈ ಜಾಗವನ್ನು ಫೈವ್ ಲೈಟ್ ಜಂಕ್ಷನ್ ಎಂದು ಕರೆಯಲಾಗುತ್ತಿತ್ತಂತೆ. ಇದರ ಹೆಸರು ಬದಲಾಗಿದ್ದು ರೋಚಕ ಕಥೆ.
ಅದು 1947ರ ಸಮಯ. ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಅದೆಷ್ಟೋ ಜನರ ಜೀವ, ಜೀವನ ಎಲ್ಲವೂ ಸ್ವಾತಂತ್ರ್ಯಕ್ಕಾಗಿ ಬಲಿಯಾಗಿತ್ತು. 100 ವರ್ಷಗಳ ಹೋರಾಟದ ನಂತರ ಕೊನೆಗೂ ಸ್ವಾತಂತ್ರ್ಯ ಸಿಕ್ಕಿತ್ತು. ಆಗ ಹೋರಾಟಕ್ಕಿಳಿದ ಮೈಸೂರಿಗರು ಮೈಸೂರು ಚಲೋ ಚಳುವಳಿಯನ್ನ ಹುಟ್ಟುಹಾಕುತ್ತಾರೆ. ಇಲ್ಲಿಯೂ ಪ್ರಜಾಪ್ರಭುತ್ವ ಚಾಲ್ತಿಗೆ ಬರಬೇಕು ಎಂದು ಒತ್ತಾಯಿಸಿ ಚಳುವಳಿಯನ್ನು ತೀವ್ರಗೊಳಿಸುತ್ತಾರೆ. ಮೈಸೂರು ಚಲೋ ಚಳುವಳಿ ಶುರುವಾಗಿದ್ದು ಸೆಪ್ಟೆಂಬರ್ 1, 1947ರಲ್ಲಿ. ಆಗ ವಿದ್ಯಾರ್ಥಿಗಳು, ಸ್ಥಳೀಯರು ಎಲ್ಲರೂ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಎಲ್ಲರ ಉದ್ದೇಶ ಮೈಸೂರು ರಾಜ್ಯದಲ್ಲೂ ಕೂಡ ಸರ್ಕಾರದ ಆಳ್ವಿಕೆ ಬರಬೇಕು, ಪ್ರಜಾಪ್ರಭುತ್ವ ಶುರುವಾಗಬೇಕು ಎಂಬುದಾಗಿತ್ತು. ಯಾವ ಬೇಧ-ಭಾವ ನೋಡದೆ ಎಲ್ಲರೂ ಹೋರಾಡುತ್ತಿದ್ದರು. ಸೆಪ್ಟೆಂಬರ್ 1 ರಂದು ಶುರುವಾದ ಮೈಸೂರು ಚಲೋ ಚಳುವಳಿ 8 ದಿನಗಳ ನಂತರ ಉಗ್ರಸ್ವರೂಪ ಪಡೆದುಕೊಂಡಿತ್ತು. ಅಲ್ಲಲ್ಲಿ ಹೋರಾಟಗಳು, ಕಲ್ಲು ತೂರಾಟ, ಗಲಾಟೆ, ಜಗಳ, ಪೊಲೀಸರ ಲಾಠಿಯೇಟು ಸಾಮಾನ್ಯವಾಗಿ ಹೋಗಿತ್ತು. ಅಲ್ಲಿಯವರೆಗೂ ಬರೀ ಶಾಂತಿಯನ್ನೇ ಕಂಡಿದ್ದ ಮೈಸೂರಿಗೆ ಇದು ಅಗ್ನಿಪರೀಕ್ಷೆಯ ಸಂದರ್ಭ. ಹೋರಾಡದಿದ್ದರೆ ನಮ್ಮ ಅಸ್ತಿತ್ವಕ್ಕೆ ಕುಂದು ಬರುತ್ತದೆ ಎಂದು ಅರಿತ ಜನ ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಟಕ್ಕೆ ಧುಮುಕಿದರು. ಎಂಟು ದಿನಗಳ ನಂತರ..ಅಂದರೆ ಸೆಪ್ಟೆಂಬರ್ 9 ನೇ ತಾರೀಖು ಮೈಸೂರಿನಲ್ಲಿ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತ್ತು. ಫೈವ್ ಲೈಟ್ ಜಂಕ್ಷನ್ ಬಳಿ ಜನರು ಗಲಾಟೆ ಮಾಡಲು ಶುರು ಮಾಡಿದರು. ಆಗ ಪೊಲೀಸರು ಬೇರೆ ವಿಧಿ ಇಲ್ಲದೆ ಲಾಠಿ ಪ್ರಹಾರ ಮಾಡಬೇಕಾಯಿತು. ಆದರೂ ಪರಿಸ್ಥಿತಿ ಹತೋಟಿಗೆ ಬರದ ಕಾರಣ ಫೈರಿಂಗ್ ಮಾಡಲು ಶುರುಮಾಡಿದರು. ಆಗ ಅಲ್ಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾಗಿ ಓಡಿದರು. ದುರದೃಷ್ಟವಶಾತ್ ಅಚಾನಕ್ ಘಟನೆಯೊಂದು ಸಂಭವಿಸಿತ್ತು. ಆಗ ತಾನೆ ಶಾಲೆ ಮುಗಿಸಿ ಹಾರ್ಡ್ವಿಕ್ ಶಾಲೆಯಿಂದ ಬರುತ್ತಿದ್ದ ಮೂವರು ಯುವಕರು ಅನ್ಯಾಯವಾಗಿ ಗುಂಡಿಗೆ ಬಲಿಯಾದರು. ಯಾವ ತಪ್ಪೂ ಮಾಡದಿದ್ದರೂ ಅವರು ತಮ್ಮ ಜೀವ ನೀಡುವಂತಾಯಿತು. ಅದರಲ್ಲಿ ಒಬ್ಬ ರಾಮಸ್ವಾಮಿ. ಆತ ಸುಬ್ಬರಾಯನಕೆರೆಯವನು. ತಕ್ಷಣ ಅವನನ್ನು ಬದುಕಿಸುವ ಪ್ರಯತ್ನ ನಡೆದರೂ ಅದು ಸಫಲವಾಗಲಿಲ್ಲ. ಜೀವ ಅದಾಗಲೇ ಹೋಗಿತ್ತು.
ಅಂದು ರಾಮಸ್ವಾಮಿ ಹಾಗೆ ಇದ್ದಕ್ಕಿದ್ದಂತೆ ಗುಂಡಿಗೆ ಬಲಿಯಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ನಂತರ ಹೋರಾಟವೆಲ್ಲಾ ಮುಗಿದ ಮೇಲೆ ಮೈಸೂರಿನವನೇ ಆದ ಆತನ ನೆನಪಿಗೆ ಏನಾದರೂ ಮಾಡಬೇಕೆಂದು ಸ್ವಾತಂತ್ರ್ಯ ಹೋರಾಟಗಾರರು ನಿರ್ಧರಿಸಿದರು. ಅವನು ತನ್ನ ಜೀವ ಬಿಟ್ಟಿದ್ದು ಇದೇ ಸ್ಥಳದಲ್ಲಾದ್ದರಿಂದ ಇಲ್ಲಿಗೆ “ರಾಮಸ್ವಾಮಿ ವೃತ್ತ” ಎಂದು ಹೆಸರಿಡಲಾಯಿತು. ಸುಮಾರು 1950ರ ಸಂದರ್ಭದಲ್ಲಿ ನಾಮಫಲಕವನ್ನು ಕೂಡಾ ಅಳವಡಿಸಲಾಯಿತು. ರಾಮಸ್ವಾಮಿ ವೃತ್ತದ ಬಳಿಯೇ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವೂ ಇದೆ. ರಾಮಸ್ವಾಮಿ ಜೊತೆಗೆ ಜೀವ ತೆತ್ತ ಮತ್ತಿಬ್ಬರು ಯುವಕರ ಹೆಸರನ್ನೇಕೆ ಇಡಲಿಲ್ಲ ಎಂಬುದು ನಿಮ್ಮ ಪ್ರಶ್ನೆಯಾದರೆ ಬಹುಶಃ ಅದಕ್ಕೆ ಉತ್ತರ ಯಾರ ಬಳಿಯೂ ಸಿಗುವುದಿಲ್ಲ. ಈತ ನಮ್ಮದೇ ಊರಿನವನು ಎಂಬ ಒಲವಿನಿಂದ ಈ ನಿರ್ಧಾರ ಕೈಗೊಂಡಿರಬಹುದು. ಅಥವಾ ಬೇರೆ ಯಾವ ಕಾರಣಗಳೂ ಇರಬಹುದು.
ಅದೇನೇ ಆಗಲಿ, ತಾವು ನಿತ್ಯ ಓಡಾಡುವ ಈ ರಸ್ತೆಯ ಇತಿಹಾಸ ಇಷ್ಟು ದಿನ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಬಹುಶಃ ಮುಂದಿನ ಬಾರಿ ಅಲ್ಲಿ ಓಡಾಡುವಾಗ ಮೈಸೂರು ಚಲೋ ಚಿತ್ರಣ ನಿಮ್ಮ ಕಣ್ಮುಂದೆಯೂ ಬರಬಹುದು. ರಾಮಸ್ವಾಮಿಯ ಸಾವಿನ ಸಂದರ್ಭ ನೆನೆದು ನೀವೂ ಮರುಗಬಹುದು. ಇವೆಲ್ಲಾ ಅನಿಸದಿದ್ದರೂ ಈ ಸರ್ಕಲ್ ಗೆ ಈ ಹೆಸರು ಯಾಕೆ ಬಂತು ಎಂಬುದನ್ನು ತಿಳಿದುಕೊಂಡ ಹೆಮ್ಮೆಯಂತೂ ಇರುತ್ತದೆ. ಆಗ ನಿಮ್ಮೊಂದಿಗೆ ಬರುತ್ತಿರುವವರಿಗೂ ಅದನ್ನ ತಿಳಿಸಿ, ಇತಿಹಾಸವನ್ನು ಹೇಳಿ ಎಲ್ಲರಿಗೂ ತಿಳಿಯುವಂತೆ ಮಾಡಿ.