Sun. Jan 24th, 2021

Namma Mysuru

History, News, Stories and much more

ಆಕಾಶವಾಣಿಯ ಹಿಂದಿದೆ ನೀವು ಕೇಳಲೇಬೇಕಾದ ಇತಿಹಾಸ.

1 min read
725 Views

ರೇಡಿಯೋಗೆ ಕನ್ನಡದಲ್ಲಿ ಏನನ್ನುತ್ತಾರೆ ಎಂದರೆ ಎಲ್ಲರೂ ಕೊಡುವ ಉತ್ತರ ‘ಆಕಾಶವಾಣಿ’. ಅಸಲಿಗೆ ಆಕಾಶವಾಣಿ ಪದ ಬಂದಿದ್ದು ಎಲ್ಲಿಂದ ಎಂದು ಹುಡುಕಿದರೆ ಅದು ನಮ್ಮ ಮೈಸೂರಿನಲ್ಲಿ ಶುರುವಾದ ಭಾರತದ ಪ್ರಪ್ರಥಮ ಬಾನುಲಿ ಕೇಂದ್ರ. ಈ ಕೇಂದ್ರ ಹಾಗೂ ಇದರ ಹೆಸರು ಎಷ್ಟರ ಮಟ್ಟಿಗೆ ಜನಜನಿತವಾಗಿದೆ ಎಂದರೆ ಈಗ ಎಲ್ಲಾ ಎಫ್.ಎಂ., ರೇಡಿಯೋ ಗಳಿಗೂ ಕನ್ನಡದಲ್ಲಿ ಆಕಾಶವಾಣಿ ಎನ್ನುತ್ತಾರೆ. ಇನ್ನು ಮೈಸೂರು ಆಕಾಶವಾಣಿಯೇ ಇದಕ್ಕೆಲ್ಲಾ ಜನಕ.  ಆಗಲೇ ಹೇಳಿದ ಹಾಗೆ ಮೈಸೂರು ಆಕಾಶವಾಣಿ ಇಡೀ  ಭಾರತಕ್ಕೆ ಮೊದಲನೆಯ ಬಾನುಲಿ ಕೇಂದ್ರ. ಇದು ಶುರುವಾಗಿದ್ದು ಹೇಗೆ ಎಂಬುದರ ಹಿಂದೆ ಒಂದು ಕುತೂಹಲಕಾರಿ ಇತಿಹಾಸ ಇದೆ. ಆಕಾಶವಾಣಿಯನ್ನು ಶುರುಮಾಡಿದ್ದು ಎಂ.ವಿ.ಗೋಪಾಲಸ್ವಾಮಿ ಎಂಬುವವರು. ಗೋಪಾಲಸ್ವಾಮಿ ಮೂಲತಃ ತಮಿಳುನಾಡಿನವರು. ಮದ್ರಾಸಿನಲ್ಲಿ ಪದವಿ ಮುಗಿಸಿ ಉನ್ನತ ವ್ಯಾಸಾಂಗಕ್ಕೆ ಇಂಗ್ಲೆಂಡ್ ಗೆ ತೆರಳಿದರು. ಲಂಡನ್ ನಲ್ಲಿ ಬಿಎಸ್ಸಿ ಪದವಿ ಪಡೆದರು. ನಂತರ ಮನಃಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನೂ ಮಾಡಿದರು. ಇಷ್ಟೆಲ್ಲಾ ಆದ ನಂತರ ಗೋಪಾಲಸ್ವಾಮಿ ಮೈಸೂರಿಗೆ ಬರುತ್ತಾರೆ. ಮಹಾರಾಜ ಕಾಲೇಜಿನಲ್ಲಿಮನಃಶಾಸ್ತ್ರದ ಪ್ರಾಧ್ಯಾಪಕರಾಗಿ, ಮುಂದೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾರೆ.

ಇಂತಹ ಉನ್ನತ ಮಟ್ಟದ ಮನಃಶಾಸ್ತ್ರಜ್ಞರಾದ ಗೋಪಾಲಸ್ವಾಮಿ ಬಾನುಲಿ ಕೇಂದ್ರ ಸ್ಥಾಪಿಸಿದ್ದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಪಡಬಹುದು. ಅದರ ಹಿಂದೆ ಸ್ವಾರಸ್ಯಕರ ಕಥೆಯೊಂದಿದೆ. ಒಮ್ಮೆ ಗೋಪಾಲಸ್ವಾಮಿಯವರು ವಿಜ್ಞಾನಿಗಳ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹಾಲೆಂಡ್ ಗೆ ತೆರಳಿದ್ದರು. ಅಲ್ಲಿಂದ ಮರಳಿ ಬರುವಾಗ ಒಂದು ಪುಟ್ಟ ಫಿಲಿಪ್ಸ್ 30 ವಾಟ್ಸ್ ಟ್ರಾನ್ಸ್’ಮಿಟರ್ ತಂದಿದ್ದರು. ಅದನ್ನು ಬಳಸುವುದು ಹೇಗೆಂದು ಆಗ ಅವರಿಗೆ ತಿಳಿದಿರಲಿಲ್ಲ. ಅಮೇರಿಕನ್ ಜರ್ನಲ್ ಒಂದನ್ನು ಓದಿ ಅದನ್ನು ಬಳಸುವುದು ಹೇಗೆ ಎಂದು ತಿಳಿದುಕೊಂಡರು. ನಂತರ ಅದನ್ನು ಬಳಸಿ ಪ್ರತಿದಿನ ರೇಡಿಯೋ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಶುರುಮಾಡಿಯೇಬಿಟ್ಟರು. ಕಾಲೇಜು ಮುಗಿದ ನಂತರ ಸಂಜೆ 6 ಗಂಟೆಗೆ ಶುರುವಾದರೆ ರಾತ್ರಿ ಸುಮಾರು 12-1 ಗಂಟೆಯವರೆಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದರು. ಆಗ ಅವರು ಇದ್ದಿದ್ದು ಒಂಟಿಕೊಪ್ಪಲಿನ ‘ವಿಠಲ್ ವಿಹಾರ್’ ಎಂಬ ಬಾಡಿಗೆ ಮನೆಯಲ್ಲಿ. ಪ್ರತಿದಿನ ಸಂಜೆಯಿಂದ ರಾತ್ರಿ ಅದೇ ಮನೆಯ ಉಪ್ಪರಿಗೆ ಕೋಣೆಯಿಂದ ಕಾರ್ಯಕ್ರಮಗಳು ಪ್ರಸಾರವಾಗುತ್ತಿತ್ತು. 1935ರಲ್ಲಿ ಶುರುವಾದ ಪ್ರಾಯೋಗಿಕ ರೇಡಿಯೋ ಕೇಂದ್ರದಲ್ಲಿ ಮೊದಲು ಮಾತನಾಡಿದ್ದು ರಾಷ್ಟ್ರಕವಿ ಕುವೆಂಪು ಎಂಬುದು  ಎಷ್ಟೋ ಜನಕ್ಕೆ ತಿಳಿಯದ ವಿಚಾರ.

ಆಕಾಶವಾಣಿಯಲ್ಲಿ ಮೊದಮೊದಲು ಹೆಚ್ಚಾಗಿ ಸಂಗೀತ ಕಾರ್ಯಕ್ರಮಗಳೇ ಪ್ರಸಾರವಾಗುತ್ತಿತ್ತು. ಅಂದಿನ ಮೈಸೂರು ಸಂಸ್ಥಾನದ ವಿದ್ವಾಂಸರು ಖುಷಿಯಿಂದ ಬಂದು ಕಾರ್ಯಕ್ರಮ ಕೊಟ್ಟು ಹೋಗುತ್ತಿದ್ದರು. ಈಗೆಲ್ಲಾ ಯಾವುದಾದರೂ ಕಾರ್ಯಕ್ರಮ ಕೊಟ್ಟರೆ ದುಡ್ಡು ಪಡೆದು, ನಮಗೂ ನಿಮಗೂ ಸಂಬಂಧ ಇಲ್ಲ ಎಂಬಂತೆ ಹೋಗಿಬಿಡುವ ಕಲಾವಿದರು, ದುಡ್ಡು ಕೊಟ್ಟ ಮೇಲೆ ವ್ಯವಹಾರ ಮುಗಿಯಿತು ಎನ್ನು ಮಾಲಿಕರೂ ಇದ್ದಾರೆ. ಆದರೆ ಆಗ ಕಾಲ ಹೀಗಿರಲಿಲ್ಲ. ಗೋಪಾಲಸ್ವಾಮಿಯವರು ಬಂದು ಕಾರ್ಯಕ್ರಮ ಕೊಟ್ಟವರಿಗೆಲ್ಲಾ  ಬಿಸಿ ಕಾಫಿ, ತಿಂಡಿ ಕೊಟ್ಟು ಉಪಚರಿಸಿ ಹೊರಡುವಾಗ ಎಲೆ, ಅಡಿಕೆ, ತೆಂಗಿನಕಾಯಿ ನೀಡಿ ಕಳುಹಿಸುತ್ತಿದ್ದರು. ಬಂದು ಕಾರ್ಯಕ್ರಮ ಕೊಟ್ಟವರೂ ಸಹ ಅವರ ಮೇಲಿನ ಗೌರವ ಹಾಗೂ ತಮಗೆ ಸಿಕ್ಕ ಅವಕಾಶಕ್ಕಾಗಿ ಖುಷಿಪಟ್ಟು ಕಾರ್ಯಕ್ರಮವನ್ನು ಉಚಿತವಾಗಿ ಮಾಡಿಕೊಟ್ಟು ಹೋಗುತ್ತಿದ್ದರು. ಹೀಗೆ ದಿನಕಳೆಯುತ್ತಾ ಬಾನುಲಿ ಕೇಂದ್ರ ಪ್ರಸಿದ್ಧವಾಗುತ್ತಾ ಬಂತು. ಬೆಳಿಗ್ಗೆ, ಮಧ್ಯಾಹ್ನದ ಕಾರ್ಯಕ್ರಮಗಳೂ ಶುರುವಾದವು. ಹೀಗೆ ಕಾರ್ಯಕ್ರಮಗಳು ಹೆಚ್ಚಾದಂತೆ ಅವರ ಮನೆಯಲ್ಲಿನ ಕೋಣೆಯಲ್ಲಿ ಇದಕ್ಕೆ ಸ್ಥಳಾವಕಾಶ ಕಡಿಮೆಯಾಯಿತು. ಆಗ ಹಳೆಯ ದಸರಾ ವಸ್ತುಪ್ರದರ್ಶನ  ಕಟ್ಟಡದ ಮೊದಲನೇ ಮಹಡಿಯಲ್ಲಿ ಬಾನುಲಿ ಕೇಂದ್ರ ಕಾರ್ಯಾರಂಭವಾಯಿತು. ಆನಂತರ ಗೋಪಾಲಸ್ವಾಮಿಯವರು ಒಮ್ಮೆ ಕುದುರೆ ಮೇಲೆ ಸವಾರಿ ಹೋಗುತ್ತಿದ್ದಾಗ ಯಾದವಗಿರಿಯ ಬಳಿ ಖಾಲಿ ಜಾಗವೊಂದನ್ನ ನೋಡಿ ಅಲ್ಲಿಯೇ ಬಾನುಲಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ಜಾಗ ಖರೀದಿ ಮಾಡಿಯೇ ಬಿಟ್ಟರು. ಜರ್ಮನ್ ಆರ್ಕಿಟೆಕ್ಟ್ ಕೋನಿಂಗ್ಸ್ ಬರ್ಗರ್ ರವರಿಂದ ವಿನ್ಯಾಸ ಮಾಡಿಸಿ ಕಟ್ಟಡ ಕಟ್ಟಲಾಯಿತು.

‘ಆಕಾಶವಾಣಿ’ ಹೆಸರು  ಬಂದ ಬಗೆ:

ನಾ.ಕಸ್ತೂರಿ ರವರು ಗೋಪಾಲಸ್ವಾಮಿಯವರ ಆಪ್ತರು. ಅವರ ಹಾಗೂ ಅವರ ಸ್ನೇಹಿತರೆಲ್ಲರೂ ನಾ.ಕಸ್ತೂರಿಯವರ ಮನೆಯಲ್ಲಿ ಅವರ ಕುಟುಂಬದವರೊಡನೆ  ಕುಳಿತು ವಿಚಾರ ವಿನಿಯಮ ಮಾಡಿಕೊಳ್ಳುತ್ತಿದ್ದರು. ಹಾಗೇ ಒಮ್ಮೆ ಬಾನುಲಿ ಕೇಂದ್ರಕ್ಕೆ ಏನು ಹೆಸರಿಡುವುದು ಎಂಬ ಚರ್ಚೆ ನಡೆಯತ್ತಿತ್ತು. ಆಗ ಅಶರೀರವಾಣಿ, ಬಾನುಲಿ ಎಂಬ ಹೆಸರುಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಕಸ್ತೂರಿ ರವರ ಅಮ್ಮ ‘ಆಕಾಶವಾಣಿ’ ಎಂದು ಇಟ್ಟರೆ ಹೇಗೆ ಎಂದು ಸೂಚಿಸಿದರಂತೆ. ಅದರ ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರ ಗೋಪಾಲಸ್ವಾಮಿಯವರಿಗೆ ತಿಳಿಸಿ ಅವರ ಒಪ್ಪಿಗೆ ಪಡೆದರಂತೆ. ‘ಆಕಾಶವಾಣಿ’ ಎಂದರೆ ಶುಭದ ಸಂಕೇತ, ಹಿಂದೂ ಧರ್ಮ, ಕಾವ್ಯ ಮತ್ತು ಪುರಾಣಗಳ ಧ್ವನಿ ಎಂದು ತಿಳಿದು ಇದೇ ಹೆಸರನ್ನು ಅಂತಿಮ ಮಾಡಿದರು. ಮುಂದೆ ಆಕಾಶವಾಣಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ನಂತರವೂ ಎಲ್ಲಾ ಬಾನುಲಿ ಕೇಂದ್ರಗಳಿಗೂ ಇದೇ ಹೆಸರು ಇಡಲಾಯಿತು. ಆದರೆ ನಾ.ಕಸ್ತೂರಿಯವರು ಇದಕ್ಕೆ ಪೇಟೆಂಟ್ ಮಾಡಿಸಿಕೊಳ್ಳಲೇ ಇಲ್ಲ.

ಹೀಗೆ 1935ರಲ್ಲಿ ಗೋಪಾಲಸ್ವಾಮಿಯವರ ಬಾಡಿಗೆ ಮನೆಯ ಪುಟ್ಟ ಕೋಣೆಯೊಂದರಲ್ಲಿ ಶುರುವಾದ ಬಾನುಲಿ ಕೇಂದ್ರ ತನ್ನ ವಿಸ್ತಾರವನ್ನು ಹೆಚ್ಚು ಮಾಡುತ್ತಲೇ ಬಂತು. ದಿನದಿಂದ ದಿನಕ್ಕೆ ಕಾರ್ಯಕ್ರಮಗಳೂ ಶುರುವಾದವು. ರೇಡಿಯೋದಲ್ಲಿ ಸಂಗೀತ, ಮಾತು, ಚರ್ಚೆ, ಹಾಡುಗಳ ಜೊತೆಗೆ ನಾಟಕ,  ಸಿನಿಮಾ, ಸಂದರ್ಶನ, ರೈತರ ಜೊತೆ ಸಂವಾದಗಳು ಬರುವುದಕ್ಕೂ ಶುರುವಾಯಿತು. ಎಷ್ಟೋ ಪ್ರತಿಭೆಗಳಿಗೆ ಆಕಾಶವಾಣಿ ವೇದಿಕೆಯಾಯಿತು. ತಮ್ಮ ಧ್ವನಿಯ ಮೂಲಕವೇ ರೇಡಿಯೋದಲ್ಲಿ ಮಾತನಾಡುವವರು ಜನಪ್ರಿಯರಾದರು. ಜೊತೆಗೆ ಈ ಅವಕಾಶದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡರು ಎಂಬುದು ಖುಷಿಯ ವಿಚಾರ. ನಂತರ ಆಕಾಶವಾಣಿಯನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಎಫ್.ಎಂ ಗಳು ಬಂದವು. ಈಗ ಅದೆಷ್ಟೇ ಎಫ್.ಎಂ ಇದ್ದರೂ, ಅದೇನೇ ಆದರೂ ಆಕಾಶವಾಣಿ ತನ್ನ ಬೆಲೆ ಉಳಿಸಿಕೊಂಡಿದೆ. ಜನರಿಗೆ ಉತ್ತಮ ಮಾಹಿತಿ ತಲುಪಿಸುವಲ್ಲಿ, ವೈಭವೀಕರಣವಿಲ್ಲದೆ, ಭಾಷೆ ಹಾಳು ಮಾಡದೇ ತನ್ನತನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಜನರ ಮನ ಗೆದ್ದಿದೆ. ಇಷ್ಟೆಲ್ಲಾ ವಿಚಾರಗಳಿಗೆ ಕಾರಣರಾದ ಎಂ.ವಿ.ಗೋಪಾಲಸ್ವಾಮಿಯವರಿಗೆ ನಾವು ಆಭಾರಿಯಾಗಿರಬೇಕು. ಅವರ ಕೊಡುಗೆ ಇಡೀ ದೇಶ ನೆನಪಿಸಿಕೊಳ್ಳುವಂತಹದ್ದು. ಜೊತೆಗೆ ಅಮರವಾಗಿರುವಂತಹದ್ದು.    

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!