ರಾಜಮುಡಿ ಅಕ್ಕಿಗೂ ಮೈಸೂರು ರಾಜಮನೆತನಕ್ಕೂ ಐತಿಹಾಸಿಕ ಸಂಬಂಧ.
1 min read
ಈಗಿನ ಬಹುಪಾಲು ಜನರು ಇಷ್ಟಪಡೋದು ಮಾಲ್ ಸಂಸ್ಕೃತಿಯನ್ನೇ. ದಿನನಿತ್ಯ ಬಳಸುವ ಅಕ್ಕಿಯನ್ನೂ ಅಷ್ಟೇ. ಅವರು ಇಟ್ಟಿರುವ ಸ್ಯಾಂಪಲ್ ನೋಡಿ ಕೊಳ್ಳಬೇಕು. ಅದೂ ಪ್ಯಾಕ್ ಆಗಿರುತ್ತದೆ. ಫಳ ಫಳ ಅಂತ ಹೊಳೆಯುತ್ತಿರುತ್ತದೆ. ಪಾಲಿಷ್ಡ್ ಅಕ್ಕಿ, ಸಿಂಗಲ್ ಸ್ಟೀಮ್ ಅಕ್ಕಿ ಅಂದರೆ ಮುಗಿಬಿದ್ದು ಕೊಳ್ಳುತ್ತಾರೆ ಜನ. ಮುಂಚೆ ಭತ್ತವನ್ನ ಸಾಮಿಲ್ಲಿನಲ್ಲಿ ಹೊಟ್ಟು ಬಿಡಿಸಿ ಅಕ್ಕಿ ಮಾಡಿಸಿದರಾಯಿತು..ಅದೇ ಪರಿಶುದ್ಧ ಅಕ್ಕಿ. ಪಾಶ್ಚಿಮಾತ್ಯರು ಅನ್ನವನ್ನ ಅವರು ವೈಟ್ ರೈಸ್ ಎನ್ನುತ್ತಿದ್ದರು. ಆ ಕಾರಣಕ್ಕಾಗಿ ನಮ್ಮಲ್ಲಿ ಬೆಳೆಯುತ್ತಿದ್ದ ಭಾಗಶಃ ಕೆಂಪು ಬಣ್ಣದ ಅಕ್ಕಿಯನ್ನ ಪಾಲಿಷ್ ಮಾಡಿಸುವ ಸಂಸ್ಕೃತಿ ಬಂತು. ದಿನಕಳೆದಂತೆ ಬೆಳ್ಳಗಿರುವ ಅಕ್ಕಿ ಮಾತ್ರ ಪರಿಶುದ್ಧ ಎಂಬ ಪರಿಕಲ್ಪನೆ ಬಂತು.
ನೋಡುವುದಕ್ಕೆ ಭಾಗಶಃ ಕೆಂಪು ಬಣ್ಣ. ಮಾಮೂಲಿ ಅಕ್ಕಿಗಿಂತ ಕೊಂಚ ದಪ್ಪ ಆಕಾರ, ಬಿಸಿನೀರಿನಲ್ಲಿ ಬೇಯಿಸುತ್ತಿದ್ದರೆ ನಾಲ್ಕು ಮನೆಗೆ ಪಸರಿಸುವ ಘಮ, ತಿನ್ನುವಾಗ ವಿಶಿಷ್ಟ ರುಚಿ. ಇದೇ ರಾಜಮುಡಿ ಅಕ್ಕಿಯ ವಿಶೇಷತೆ. ಅದು ಮೈಸೂರಿನಲ್ಲಿ ರಾಜರ ಆಳ್ವಿಕೆಯಿದ್ದ ಕಾಲ. ಈ ಅಕ್ಕಿಯನ್ನ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಜನ ಅದನ್ನ ಇಷ್ಟಪಟ್ಟು ಕೊಂಡು ತಿನ್ನುತ್ತಿದ್ದರು. ಅಕ್ಕಿಯನ್ನು ಪಾಲಿಷ್ ಮಾಡಿಸುವ ಪ್ರತೀತಿ ಬಂದಮೇಲೆ ಎಲ್ಲರೂ ಬಿಳಿ ಅಕ್ಕಿ ಇಷ್ಟಪಡಲು ಶುರುಮಾಡಿದರು. ಹೀಗಾಗಿ ಈ ಅಕ್ಕಿಗೆ ಬೆಲೆ ಕಡಿಮೆಯಾಗುತ್ತಾ ಎಕರೆಗಟ್ಟಲೆ ಪ್ರದೇಶದಲ್ಲಿ ಅಕ್ಕಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಬೆಳೆದ ಬೆಳೆಗೆ ಬೆಲೆ, ಮಾರುಕಟ್ಟೆ ಎರಡೂ ಸಿಗದೆ ಕಂಗಾಲಾಗಿದ್ದರು. ಈ ಮಧ್ಯೆ ಅವರು ರಾಜರಿಗೆ ಕಟ್ಟಬೇಕಾಗಿದ್ದ ತೆರಿಗೆಯನ್ನು ಕಟ್ಟಲು ಕೂಡ ಹಣ ಇರುತ್ತಿರಲಿಲ್ಲ. ಆಗಲೇ ರೈತರ ಸಮಸ್ಯೆ ರಾಜರ ಗಮನಕ್ಕೆ ಬಂದಿದ್ದು.
ರೈತರು ಹಲವಾರು ತಿಂಗಳುಗಳ ಕಾಲ ಸುಂಕ ಕೊಡದೇ ಉಳಿದಿದ್ದರು. ಇದನ್ನು ಗಮನಿಸಿದ ಮೈಸೂರು ಅರಮನೆ ಅಧಿಕಾರಿಗಳು ಈ ವಿಷಯವನ್ನ ರಾಜರ ಗಮನಕ್ಕೆ ತಂದರು. ಇದರಿಂದ ಚಿಂತೆಗೀಡಾದ ರಾಜರು ರೈತರನ್ನ ತಮ್ಮ ಬಳಿ ಮಾತನಾಡಲು ಕರೆಸಿಕೊಳ್ಳುತ್ತಾರೆ. ‘ನಾವು ಕೆಂಪು ಅಕ್ಕಿಯನ್ನು ಬೆಳೆಯುತ್ತಿದ್ದೇವೆ. ಆದರೆ ಇತ್ತೀಚೆಗೆ ಅದನ್ನು ಕೊಳ್ಳುವವರೇ ಇಲ್ಲ. ನಾವು ಹೂಡಿಕೆ ಮಾಡಿದ ಹಣ ತಿರುಗಿ ಬರುತ್ತಿಲ್ಲ. ಸುಂಕ ಕಟ್ಟಲು, ಮನೆ ನಡೆಸಲು ಹಣವಿಲ್ಲ. ಏನು ಮಾಡುವುದು ತಿಳಿಯುತ್ತಿಲ್ಲ’ ಎಂದು ರಾಜರ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಆಗ ರಾಜರು, ಒಂದು ತೀರ್ಮಾನಕ್ಕೆ ಬರುತ್ತಾರೆ. ‘ಈಗ ಬೆಳೆದಿರುವ ಬೆಳೆಯನ್ನು ನನಗೆ ಕೊಡಿ. ಅದನ್ನು ನಾವೇ ಕೊಳ್ಳುತ್ತೇವೆ. ನೀವು ಚಿಂತಿಸಬೇಡಿ’ ಎಂದು ಅಭಯ ನೀಡುತ್ತಾರೆ. ಅಂದಿನಿಂದ ರಾಜಮನೆತನದವರಿಗಾಗಿಯೇ ಈ ಅಕ್ಕಿಯನ್ನು ಬೆಳೆಯಲು ಶುರುಮಾಡುತ್ತಾರೆ. ರಾಜಮನೆತನದವರು ಬಳಸುತ್ತಿದ್ದ ಅಕ್ಕಿಯಾದ್ದರಿಂದ ಅದಕ್ಕೆ ‘ರಾಜಮುಡಿ’ ಅಕ್ಕಿ ಎಂದು ಹೆಸರಿಡಲಾಗುತ್ತದೆ. ಇದಕ್ಕೇ ಇದರ ಹೆಸರು “ರಾಜಮುಡಿ” .
ರಾಜಮುಡಿ ಅಕ್ಕಿಯನ್ನು ತಿಂದರೆ ಆರೋಗ್ಯಕ್ಕೆ ಆಗುವ ಉಪಯೋಗಗಳನ್ನ ನೀವು ತಿಳಿದುಕೊಳ್ಳಲೇಬೇಕು.
- ರಾಜಮುಡಿ ಅಕ್ಕಿಯಲ್ಲಿ ಕೊಬ್ಬಿನಂಶ ಇರುವುದಿಲ್ಲ
- ನಾರಿನಂಶ ಯತೇಚ್ಛವಾಗಿರುತ್ತದೆ
- ಜೀವಸತ್ವಗಳು ಮತ್ತು ಖನಿಜಗಳು..ಅಂದರೆ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳು ಇದರಲ್ಲಿ ಹೆಚ್ಚಾಗಿರುತ್ತವೆ.
- ಉತ್ತಮ ಚರ್ಮಕ್ಕೂ ಸಹಾಯಕಾರಿ
- ಅಸ್ತಮಾ ಗುಣಮುಖವಾಗಲು ಅತ್ಯಂತ ಸಹಾಯಕಾರಿ
- ಈ ಅಕ್ಕಿ ಸೇವಿಸಿದರೆ ಹೆಚ್ಚು Anti-oxidant ಅಂಶ ದೇಹವನ್ನು ಸೇರುತ್ತದೆ

ಇಷ್ಟು ಮಾತ್ರವಲ್ಲ, ಈ ಅಕ್ಕಿಯಿಂದ ಸಾಕಷ್ಟು ಉಪಯೋಗಗಳಿವೆ. ಮುಂಚೆ ಈ ಅಕ್ಕಿಯನ್ನು ಕೇಳುವವರೇ ಇರಲಿಲ್ಲ. ಈಗ ಇದರ ಬೆಲೆ ಕೆ.ಜಿ.ಗೆ 60 ರೂಪಾಯಿ. ಈಗ ಜನರೆಲ್ಲರೂ ಮತ್ತೆ ರಾಜಮುಡಿ ಅಕ್ಕಿಯತ್ತ ಮುಖ ಮಾಡುತ್ತಿದ್ದಾರೆ. ಆರ್ಗಾನಿಕ್ ಅಂಗಡಿಗಳಲ್ಲಿ ರಾಜಮುಡಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಅದು ಎಷ್ಟು ಪರಿಶುದ್ಧವೋ ಗೊತ್ತಿಲ್ಲ. ಆದರೆ ಜನ ಅದನ್ನೇ ಕೊಳ್ಳುತ್ತಿದ್ದಾರೆ. ದುರದೃಷ್ಟವಶಾತ್ ಅದನ್ನು ಬೆಳೆಯುವವರು ಕಾಣಸಿಗುವುದೇ ಅಪರೂಪ. ಆದ್ದರಿಂದ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಇದ್ದಾಗ ಬೆಲೆ ಕೊಡದ ಜನ ಇಲ್ಲದಾಗ ಕೊಳ್ಳಲು ಮುಗಿಬೀಳುತ್ತಿದ್ದಾರೆ.