ಸದಾ ಮಿನುಗುವ ಮೀನಾ ಬಜಾರ್ ನ ದರ್ಬಾರ್ ರಂಜಾನ್ ಸಮಯದಲ್ಲಿ ಇನ್ನೂ ಜೋರು..!
1 min read
ಇದು ಬೇಸಿಗೆ ಕಾಲ ಮುಗಿಯುವ ಸಮಯ. ಅಂದರೆ ರಂಜಾನ್ ತಿಂಗಳು.. ಜಗತ್ತಿನಾದ್ಯಂತ ಮುಸಲ್ಮಾನರು ಸಂಭ್ರಮ, ಸಡಗರ, ಭಕ್ತಿ, ಶ್ರದ್ಧೆಯಿಂದ ರಂಜಾನ್ ಆಚರಿಸುತ್ತಿದ್ದಾರೆ. ರಂಜಾನ್ ತಿಂಗಳು ಬಂತೆಂದರೆ ಮೊದಲು ನೆನಪಾಗುವುದು ಉಪವಾಸ. ಮುಸಲ್ಮಾನರ ಸಂಪ್ರದಾಯದ ಪ್ರಕಾರ ಸೂರ್ಯೋದಯವಾದಾಗಿನಿಂದ ಸೂರ್ಯ ಮುಳುಗುವವರೆಗೂ ಉಪವಾಸ ಮಾಡುತ್ತಾರೆ. ಉಪವಾಸದಲ್ಲಿ ಒಂದು ತೊಟ್ಟು ನೀರು ಕೂಡ ಕುಡಿಯುವಂತಿಲ್ಲ. ಅಷ್ಟೇ ಏಕೆ, ಉಗುಳು ಕೂಡ ನುಂಗುವಂತಿಲ್ಲ. ಜೊತೆಗೆ ದಿನಕ್ಕೆ ಐದು ಬಾರಿ ನಮಾಜ್ (ಪ್ರಾರ್ಥನೆ) ಮಾಡಬೇಕು, ಪಾಪಕಾರ್ಯಗಳನ್ನು ಮಾಡಬಾರದು, ಕುರಾನ್ ಪಠಿಸಬೇಕು, ಕೈಲಾದಷ್ಟು ದಾನ-ಧರ್ಮ ಮಾಡಿ ಪುಣ್ಯ ಹೆಚ್ಚಿಸಿಕೊಳ್ಳಬೇಕು. ಹೀಗೆ ಹೇಳುತ್ತಾ ಹೋದರೆ ರಂಜಾನ್ ಆಚರಣೆಯ ಬಗ್ಗೆ ಸಾಕಷ್ಟು ವಿಷಯಗಳಿವೆ. ಇದೆಲ್ಲದರ ಜೊತೆಗೆ ರಂಜಾನ್ ಸಮಯದಲ್ಲಿ ಶಾಪಿಂಗ್ ಮಾಡುವುದು ಕೂಡ ಮಹಿಳೆಯರ ಅಚ್ಚುಮೆಚ್ಚು ಹವ್ಯಾಸ. ಅದಕ್ಕಾಗಿಯೇ ರಂಜಾನ್ ಬಂತೆಂದರೆ ಬೇರೆ ಬೇರೆ ಕಡೆ ವಿಶೇಷ ಮಾರುಕಟ್ಟೆಗಳನ್ನು ಏರ್ಪಡಿಸಲಾಗಿರುತ್ತದೆ. ಅಲ್ಲಿ ಇಂತಹದ್ದು ಸಿಗುವುದಿಲ್ಲ ಎನ್ನುವಂತಿಲ್ಲ. ಬಟ್ಟೆ, ಆಭರಣಗಳು, ವಿವಿಧ ಬಗೆಯ ಖಾದ್ಯಗಳು, ಚಪ್ಪಲಿ, ಬ್ಯಾಗ್, ಗೃಹೋಪಯೋಗಿ ವಸ್ತುಗಳು..ಹೀಗೆ ಎಲ್ಲವೂ ಇಲ್ಲಿ ಸಿಗುತ್ತವೆ.. ಈ ರೀತಿಯ ಮಾರುಕಟ್ಟೆ ಬಹುತೇಕ ಎಲ್ಲೆಡೆಯೂ ಸಿಗುತ್ತದೆ. ಮೈಸೂರಿನಲ್ಲಿ ಇದನ್ನು ಮೀನಾ ಬಜಾರ್ ಎಂದು ಕರೆಯುತ್ತಾರೆ..
ಮೈಸೂರಿನ ಅಶೋಕ ರಸ್ತೆಯ ಕೈಲಾಸಪುರಂ ರಸ್ತೆಯಿಂದ ಶುರುವಾಗುವ ಮೀನಾ ಬಜಾರ್, ಕೆ.ಟಿ.ಸ್ಟ್ರೀಟ್ ವರೆಗೂ ವಿಸ್ತರಿಸಿಕೊಂಡಿದೆ. ಸುಮಾರು ಎರಡೂವರೆ ಕಿಲೋಮೀಟರ್ ವಿಸ್ತಾರದಲ್ಲಿದೆ ಮೀನಾ ಬಜಾರ್. ಈ ಪ್ರಾಂತ್ಯದಲ್ಲಿ ಹೆಚ್ಚು ಮುಸಲ್ಮಾನರು ಇರುವುದರಿಂದ ಇಲ್ಲಿ ಅವರದೇ ಸಾಕಷ್ಟು ಖಾಯಂ ಅಂಗಡಿಗಳಿದ್ದು, ಎಲ್ಲಾ ವರ್ಗದವರೂ ಶಾಪಿಂಗ್ ಗಾಗಿ ಇಲ್ಲಿಗೆ ಬಂದೇ ಬರುತ್ತಾರೆ. ಅಷ್ಟಕ್ಕೂ ಮೀನಾ ಬಜಾರ್ ಇರುವುದು ಬರೀ ಮೈಸೂರಿನಲ್ಲಲ್ಲ. ಬೆಂಗಳೂರು, ದುಬೈ ಹಾಗೂ ಹಲವು ಸ್ಥಳಗಳಲ್ಲೂ ಮೀನಾ ಬಜಾರ್ ಇದೆ. ರಂಜಾನ್ ಬಂದರಂತೂ ಇದರ ರಂಗು ಹೇಳತೀರದು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಸ್ತೆಗಳು, ಬೀದಿಬದಿಯ ಅಂಗಡಿಗಳು, ನೋಡಿದರೆ ಕೊಳ್ಳಬೇಕೆನಿಸುವ ಬಟ್ಟೆಗಳು, ಬಾಯಲ್ಲಿ ನೀರೂರಿಸುವ ಖಾದ್ಯಗಳು, ಅದರಲ್ಲೂ ಸಿಹಿತಿಂಡಿಗಳು..ಅಬ್ಬಬ್ಬಾ..! ಹೇಳುತ್ತಾ ಹೋದರೆ ಎಂಥವರಿಗೂ ಒಮ್ಮೆ ಇಲ್ಲಿಗೆ ಬರಲೇಬೇಕು ಎನಿಸುತ್ತದೆ. ಸಾಮಾನ್ಯ ದಿನಗಳಲ್ಲೇ ಹೀಗೆ ಕಣ್ಣುಕುಕ್ಕುವಂತೆ ಕಾಣುವ ಮೀನಾ ಬಜಾರ್ ಸಿಂಗಾರ, ವಯ್ಯಾರವನ್ನ ರಂಜಾನ್ ಸಂದರ್ಭದಲ್ಲಿ ನೋಡಲೇಬೇಕು. ರಸ್ತೆಯಲ್ಲಿರುವ ಒಂದಷ್ಟು ಖಾಯಂ ಅಂಗಡಿಗಳ ಜೊತೆ ಬೀದಿಬದಿಯಲ್ಲೂ ಅಂಗಡಿಗಳನ್ನು ಹಾಕಿರುತ್ತಾರೆ. ಬೆಳಿಗ್ಗೆ ಹೊತ್ತು ಇಲ್ಲಿ ಹೆಚ್ಚು ಜನ ಇರುವುದಿಲ್ಲ. ಸಂಜೆಯ ಮೇಲೆ ಜನ ಹೆಚ್ಚಾಗುತ್ತಾರೆ. ಸೂರ್ಯಾಸ್ತದ ನಂತರ ವಿವಿಧ ಬಗೆಯ ಮಾಂಸಾಹಾರ ಹಾಗೂ ಸಸ್ಯಾಹಾರ ಖಾದ್ಯಗಳನ್ನು ಅಲ್ಲೇ ಮಾಡಿ ಕೊಡುತ್ತಿರುತ್ತಾರೆ. ಇಲ್ಲಿಗೆ ಮುಸಲ್ಮಾನರು ಮಾತ್ರವಲ್ಲ, ಎಲ್ಲಾ ಜಾತಿ-ಧರ್ಮದವರೂ ಬರುತ್ತಾರೆ. ಎಲ್ಲಾ ಮೈಸೂರಿಗರಿಗೂ ಇದು ಅಚ್ಚುಮೆಚ್ಚಿನ ಸ್ಥಳ.

ಮೀನಾ ಬಜಾರ್ ನಲ್ಲಿ ಮಿನುಗುವ ಬಟ್ಟೆಗಳು, ರುಚಿಯಾದ ಖಾದ್ಯಗಳು ಇತ್ಯಾದಿ:
ಮೀನಾ ಬಜಾರ್ ನಲ್ಲಿ ಏನುಂಟು, ಏನಿಲ್ಲ ಹೇಳಿ. ಇಲ್ಲಿ ಸಿಗುವ ವಸ್ತುಗಳಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾದುದು ಎಂದರೆ ವಿವಿಧ ರೀತಿಯ ಬಟ್ಟೆಗಳು. ಹೆಣ್ಣುಮಕ್ಕಳು ಒಮ್ಮೆ ಇಲ್ಲಿ ಬಂದರೆ ನಾಲ್ಕೈದು ಬ್ಯಾಗ್ ಗಳಿಗಿಂತ ಕಡಿಮೆ ಶಾಪಿಂಗ್ ಮಾಡುವುದೇ ಇಲ್ಲ. ಮುಸ್ಲಿಮರಿಗಾಗಿ ಸ್ಕಲ್ ಕ್ಯಾಪ್, ಸೀರೆಗಳು, ದುಪ್ಪಟ್ಟಾ, ಶೆರ್ವಾನಿ, ಸಲ್ವಾರ್, ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿಕೊಳ್ಳುವ ರೀತಿಯ ದಿರಿಸುಗಳು, ಚಪ್ಪಲಿಗಳು, ಶೂ..ಹೀಗೆ ಎಲ್ಲವೂ ಸಿಗುತ್ತದೆ. ಅದರೊಂದಿಗೆ ವಿವಿಧ ರೀತಿಯ ಇಮಿಟೇಶನ್ ಆಭರಣಗಳು, ಸಿಲ್ವರ್ ಜ್ಯೂಯಲರಿ, ಅಪರೂಪದ ವಾಸನೆಯುಳ್ಳ ಸುಗಂಧದೃವ್ಯಗಳು ಎಲ್ಲವೂ ಇಲ್ಲಿ ಲಭ್ಯ. ಕಾಲೇಜು ವಿದ್ಯಾರ್ಥಿಗಳಿಗಂತೂ ಅತ್ಯಂತ ಅಚ್ಚುಮೆಚ್ಚಿನ ತಾಣ. ರಂಜಾನ್ ಉಪವಾಸ ಬಿಡುವ ಸಮಯದಲ್ಲಿ ಇಲ್ಲಿ ಶುರುವಾಗುವ ಅಂಗಡಿಗಳಲ್ಲಿ ವಿವಿಧ ಖಾದ್ಯಗಳು ಸಿಗುತ್ತವೆ. ವೆಜ್ ಸಮೋಸ, ಚಿಕನ್ ಸಮೋಸ, ಫಲೂದಾ, ವಿವಿಧ ರೀತಿಯ ಖರ್ಜೂರ, ಕಬಾಬ್, ಚಿಕನ್ ರೋಲ್, ಫ್ರೂಟ್ ಜ್ಯೂಸ್ ಗಳು ಇಲ್ಲಿ ಫೇಮಸ್. ಮುಸಲ್ಮಾನರು ಮಾತ್ರವಲ್ಲ, ಎಲ್ಲಾ ಜನಾಂಗದವರೂ ಇಲ್ಲಿಗೆ ಬರುತ್ತಾರೆ. ತಮಗಿಷ್ಟವಾದ ತಿಂಡಿಗಳನ್ನು ಸವಿದು ಹೋಗುತ್ತಾರೆ. ಇಲ್ಲಿ ಸಿಗುವ ವಸ್ತುಗಳೆಲ್ಲಾ ದುಬಾರಿ ಎಂದುಕೊಳ್ಳುವಂತಿಲ್ಲ. ಅತಿ ಅಗ್ಗದಿಂದ ಹಿಡಿದು ಅತಿ ದುಬಾರಿ ಉತ್ಪನ್ನಗಳವರೆಗೂ ಎಲ್ಲವೂ ಇಲ್ಲಿ ಸಿಗುತ್ತದೆ. ಆದ್ದರಿಂದ ಯಾವ ವರ್ಗದವರು ಬಂದರೂ ಇಲ್ಲಿ ತಮ್ಮ ಬಜೆಟ್ ಗೆ ತಕ್ಕಂತೆ ಶಾಪಿಂಗ್ ಮಾಡಬಹುದು. ಇದು ಮೀನಾ ಬಜಾರ್ ನ ವಿಶೇಷತೆ.



ಸದಾ ಗಿಜಿಗುಡುವ ರಸ್ತೆ:
ಇಲ್ಲಿ ಬರಬೇಕಾದರೆ ಅಶೋಕ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಬರಬೇಕು. ಮೀನಾ ಬಜಾರ್ ಹತ್ತಿರವಾಗುತ್ತಿದ್ದಂತೆ ಗಾಡಿ ತರುವುದಿರಲಿ, ಆರಾಮಾಗಿ ನಡೆದಾಡುವುದಕ್ಕೂ ಸಾಧ್ಯವಿಲ್ಲದಷ್ಟು ಜನರಿರುತ್ತಾರೆ. ರಸ್ತೆ ಬದಿಯಲ್ಲಿ ತಾವು ಮಾರುವ ಉತ್ಪನ್ನಗಳನ್ನು ಕೊಳ್ಳಬೇಕೆಂದು ಜನರಿಗೆ ಕೂಗಿ ಹೇಳುವ ವ್ಯಾಪಾರಿಗಳಿಂದ ಮೀನಾ ಬಜಾರ್ ಸದಾ ತುಂಬಿ ತುಳುಕುತ್ತಿರುತ್ತದೆ. ಅದರಲ್ಲೂ ರಂಜಾನ್ ಸಮಯದಲ್ಲಿ ಕೇಳುವಹಾಗೇ ಇಲ್ಲ.
ಪ್ರಮುಖವಾಗಿ ಮೀನಾ ಬಜಾರ್ ಗೆ ಬಡ ಹಾಗೂ ಮಧ್ಯಮ ವರ್ಗದ ಜನರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಬರುತ್ತಾರೆ. ವಿವಿಧ ರೀತಿಯ ಟ್ರೆಂಡಿ ಬಟ್ಟೆಗಳನ್ನು ಕೊಳ್ಳಬೇಕೆನ್ನುವ ಹೆಣ್ಣುಮಕ್ಕಳಿಗೆ ಇದು ಹೇಳಿಮಾಡಿಸಿದ ಸ್ಥಳ. ಇಲ್ಲಿರುವ ಹತ್ತಾರು ಬಟ್ಟೆ ಅಂಗಡಿಗಳಲೆಲ್ಲಾ ಸುತ್ತು ಹಾಕಿದರೆ ಒಂದಲ್ಲಾ ಒಂದು ಕಡೆ ನಿಮಗೆ ಬೇಕಾದ ರೀತಿಯ, ನಿಮಗೆ ಬೇಕಾದ ದರದ ಬಟ್ಟೆಗಳು ಖಂಡಿತ ಸಿಗುತ್ತವೆ. ಖಾದ್ಯ ಪ್ರಿಯರು ರಂಜಾನ್ ಸಮಯದಲ್ಲಿ ಉಪವಾಸ ಬಿಡುವ ಸಮಯದಲ್ಲಿ ಇಲ್ಲಿಗೆ ಬರಲೇ ಬೇಕು. ಇಲ್ಲಿಗೆ ಬಂದು ಒಮ್ಮೆ ತಿಂಡಿಗಳ ರುಚಿ ನೋಡಿದರೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತಲೇ ಇರುತ್ತೀರ. ಇದು ರಂಜಾನ್ ಸಮಯವಾದ್ದರಿಂದ ಮೈಸೂರಿನಲ್ಲಿರುವವರು ಒಮ್ಮೆ ಇಲ್ಲಿ ಬಂದು ಒಂದು ಸುತ್ತು ಹಾಕಿಕೊಂಡು ಹೋಗಿ. ಮೈಸೂರಿಗೆ ಬರಬೇಕು ಎಂದುಕೊಂಡಿರುವವರು ಬಂದಾಗ ಮೀನಾ ಬಜಾರ್ ಗೆ ಭೇಟಿ ಕೊಡುವುದನ್ನು ಮರೆಯಬೇಡಿ..