Fri. Jan 22nd, 2021

Namma Mysuru

History, News, Stories and much more

ಶೂಟಿಂಗ್ ನಲ್ಲಿ ಗುರಿ ಮುಟ್ಟಿ ಮೈಸೂರಿನ ಕಿರೀಟದಲ್ಲಿ ಗರಿಯಾಗಿರುವ ರಕ್ಷಿತ್..!

1 min read
1,212 Views

ಇನ್ನೂ ಶಾಲೆಯಲ್ಲಿ ಓದುತ್ತಿರುವ ಪುಟ್ಟ ಮಕ್ಕಳೆಲ್ಲರಿಗೂ ಯಾವುದಾದರೊಂದು ದೊಡ್ಡ ಕನಸಿರುತ್ತದೆ. ತಾನು ಡಾಕ್ಟರ್, ಪೈಲಟ್, ಕ್ರೀಡಾಪಟು, ಪೊಲೀಸ್..ಹೀಗೆ ಏನಾದರೂ ಆಗಬೇಕೆಂದು ಮಕ್ಕಳು ಕನಸು ಕಂಡಿರುತ್ತಾರೆ. ಅವರು ಮಾತ್ರವಲ್ಲ, ನಾವು ನೀವೆಲ್ಲರೂ ಕೂಡ ಬಹಳ ಚಿಕ್ಕವರಿದ್ದಾಗ ಹೀಗೆ ಒಂದು ಕನಸು ಕಂಡಿರುತ್ತೇವೆ. ದೊಡ್ಡವರಾಗುತ್ತಾ ಆಗುತ್ತಾ ಯಾವುದಾದರೊಂದು ಕೆಲಸ ಸಿಕ್ಕರೆ ಸಾಕಪ್ಪ ಎಂದುಕೊಂಡು ಕೆಲವರು ಕನಸನ್ನು ಮರೆತೇ ಬಿಟ್ಟಿರುತ್ತಾರೆ. ಮತ್ತೊಂದಷ್ಟು ಜನ ಹೊಸ ಕನಸು ಕಟ್ಟಿಕೊಂಡು ಅದನ್ನು ನಿಜ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಇನ್ನು ಕೆಲವರು ಮಾತ್ರ ಅದೇ ಕನಸಿನ ಬೆನ್ನಟ್ಟಿ ತಮ್ಮ ಗುರಿ ಸಾಧಿಸುತ್ತಾರೆ. ಅಂತಹವರನ್ನು ನೋಡಿದರೆ ಯಾರಿಗಾದರೂ ನಾವೂ ಏನಾದರೂ ಸಾಧಿಸಬೇಕಪ್ಪ/ಸಾಧಿಸಿರಬೇಕಿತ್ತಪ್ಪ ಎನಿಸದೇ ಇರದು. ಅಂತಹವರಲ್ಲಿ ಒಬ್ಬರು ನಮ್ಮ ಮೈಸೂರಿನ ರಕ್ಷಿತ್ ಶಾಸ್ತ್ರಿ. ರಕ್ಷಿತ್ ಶಾಸ್ತ್ರಿ ಯಾರೆಂದು ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ಈತ ಶೂಟಿಂಗ್ ನಲ್ಲಿ ಅಪ್ರತಿಮ ಸಾಧನೆ ಮಾಡಿದ ಮೈಸೂರಿನ ಹುಡುಗ. ನಗರದ ಪ್ರಥಮ ಅಂತರಾಷ್ಟ್ರೀಯ ಪದಕ ವಿಜೇತ.

ರಕ್ಷಿತ್ ಶಾಸ್ತ್ರಿ ಜನಸಿದ್ದು ಮೈಸೂರಿನಲ್ಲಿ. 1991ನೇ ಇಸವಿಯಲ್ಲಿ. ಈಗ ವಾಸವಿರುವುದು ಬೋಗಾದಿಯಲ್ಲಿ. ಇವರ ತಾಯಿಯ ಹೆಸರು ರಾಜಲಕ್ಷ್ಮೀ. ಈತ ಅತ್ಯುತ್ತಮ ಕ್ರೀಡಾಪಟು. ಜೊತೆಗೆ ವಿದ್ಯಾವಂತ ಕೂಡ. ಮೆಕಾನಿಕಲ್ ಇಂಜಿನಿಯರಿಂಗ್, M.tech (PDM) ಹಾಗೂ MBA (HR) ಪದವೀಧರರು. ಪ್ರಸ್ತುತ ಮೈಸೂರಿನ ಅತ್ಯಂತ ಪ್ರಸಿದ್ಧ ಎನ್.ರಂಗರಾವ್ ಆ್ಯಂಡ್ ಸನ್ಸ್ ನ ಅಂಗಸಂಸ್ಥೆಯಾದ ವ್ಯೋದಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಕ್ಷಿತ್ ಗೆ ಚಿಕ್ಕ ವಯಸ್ಸಿನಿಂದಲೂ ದೈಹಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೆಚ್ಚು. ಈಜು, ಟೆನ್ನಿಸ್, ಕರಾಟೆ, ಕಟಾ ಹಾಗೂ ಇನ್ನಿತರ ಕ್ರೀಡೆಗಳನ್ನು ಆಡುತ್ತಲೇ ಬಂದವರು. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದರು. ಕಿರಿಯರ ಗುಂಪಿನ ‘ಕಟಾ’ ಪಂದ್ಯದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಪಡೆದಿದ್ದರು. ಅದರೊಂದಿಗೆ ಕುಮಿತೆಯಲ್ಲಿ ಬೆಳ್ಳಿ ಪದಕ, ರಾಜ್ಯಮಟ್ಟದ ಕ್ರೀಡಾಕೂಟದ ಫ್ರೀಸ್ಟೈಲ್ ಮೆಡ್ಲಿ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಆ ವಯಸ್ಸಿನಲ್ಲೇ ಇವರು ಮಾಡಿದ ಈ ಸಾಧನೆಗಳು ರಕ್ಷಿತ್ ಎಷ್ಟು ಪ್ರತಿಭಾವಂತ ಕ್ರೀಡಾಪಟು ಎಂಬುದಕ್ಕೆ ಹಿಡಿದ ಕನ್ನಡಿ.

ಶೂಟಿಂಗ್ ಗೆ ಗುರಿಯಿಟ್ಟ ರಕ್ಷಿತ್:

ರಕ್ಷಿತ್ ಶಾಸ್ತ್ರಿ ತಮ್ಮ ಸ್ನೇಹಿತ ವಿಪುಲ್ ಎಂಬುವವರ ಪ್ರೋತ್ಸಾಹದ ಮೇರೆಗೆ ತಾವು MBA ಮಾಡುತ್ತಿರುವಾಗ..ಅಂದರೆ 2015ರಲ್ಲಿ ರೈಫಲ್ ಶೂಟಿಂಗ್ ತರಬೇತಿ ಪಡೆಯಲು  ಸೇರ್ಪಡೆಯಾಗುತ್ತಾರೆ. ತರಬೇತಿ ಪಡೆದ ಕೇವಲ 14 ದಿನಗಳಲ್ಲಿ ಶೂಟಿಂಗ್ ಏರ್ ರೈಫಲ್ ಚಾಂಪಿಯನ್’ಶಿಪ್ ನಲ್ಲಿ ಭಾಗವಹಿಸಿ ಮೈಸೂರು ಜಿಲ್ಲಾ ರೈಫಲ್ ಅಸೋಸಿಯೇಶನ್ (MDRA) ಗೆ ಬೆಳ್ಳಿ ಪದಕ ತಂದುಕೊಡುತ್ತಾರೆ. ನಂತರ ತಮ್ಮ ತರಬೇತುದಾರ ಸುರೇಶ್ ರವರು 1991ರಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನುಭವವನ್ನು ಕೇಳಿ, ಅದನ್ನೇ ಸ್ಫೂರ್ತಿಯಾಗಿ ಪಡೆದು ಪಿಸ್ತೂಲ್ ತರಬೇತಿಯನ್ನೂ ಪಡೆಯುತ್ತಾರೆ. ಇದೆಲ್ಲದರ ಪರಿಣಾಮವಾಗಿ 7ನೇ ದಕ್ಷಿಣ ವಲಯದ ಶೂಟಿಂಗ್ ಚಾಂಪಿಯನ್’ಶಿಪ್ ನಲ್ಲಿ ಕರ್ನಾಟಕ ‘ಎ’ ತಂಡ ಹಿಂದೆಂದಿಗಿಂತಲೂ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗಳಿಸುತ್ತದೆ. ನಂತರ ರಕ್ಷಿತ್ ಹಿಂದಿರುಗಿ ನೋಡಲೇ ಇಲ್ಲ. ಅವರು ಮಾಡಿದ ಸಾಧನೆಯಲ್ಲಾ ದಾಖಲೆಯಾಗುತ್ತಾ ಹೋಯಿತು. ಅವರ ಸಾಧನೆಗಳು ಹೀಗಿವೆ.

  • 50ಕ್ಕೂ ಹೆಚ್ಚು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿರುವ ಸಾಧನೆ.
  • ಜರ್ಮನಿಯಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಪ್ರಥಮ ಹಾಗೂ ಏಕೈಕ ಮೈಸೂರಿಗ.
  • 2016ರಲ್ಲಿ ಮುಂಬೈನಲ್ಲಿ ನಡೆದ 26ನೇ ಜಿ.ವಿ.ಮಾವಲಂಕರ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 3ನೇ ಸ್ಥಾನ. ಆ  ಸ್ಪರ್ಧೆಯಲ್ಲಿ ಎಲ್ಲಾ ವಿಭಾಗವೂ ಸೇರಿ ಕರ್ನಾಟಕಕ್ಕೆ ಬಂದ ಏಕೈಕ ಪದಕ ಇದು.
  • ತಿರುವನಂತಪುರಂ ನಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 28ನೇ ಶ್ರೀಯಾಂಕ ಗಳಿಕೆ.
  • ಶೂಟಿಂಗ್ ನಲ್ಲಿ ಅಂತರಾಷ್ಟ್ರೀಯ ಪದಕ ಗೆದ್ದ ಮೈಸೂರಿನ ಪ್ರಥಮ ಕ್ರೀಡಾಪಟು ಕೀರ್ತಿ.
  • ಪ್ರಸ್ತುತ ಭಾರತ ತಂಡಕ್ಕೆ ಟ್ರಯಲ್ಸ್ ನೀಡುತ್ತಿರುವ ರಕ್ಷಿತ್.
ಜರ್ಮನಿಯಲ್ಲಿ ರಕ್ಷಿತ್

ರಕ್ಷಿತ್ ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳೊಂದಿಗೆ ಕಾಲ ಕಳೆದು ಅವರಿಗೆ ಕಂಪ್ಯೂಟರ್ ಹೇಳಿಕೊಡುವುದು, ಅವರೇ ಬರೆದ ಸಣ್ಣ ಸಣ್ಣ ಪುಸ್ತಕ ಕೊಡುವುದು..ಇಂತಹ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಅವರ ಇಚ್ಛೆ. ಕೆಲಸದ ಸಮಯದಲ್ಲಿ ಬಿಡುವಾದಾಗಲೆಲ್ಲಾ ಮನೆಯ ಕಲೆಸದೊಂದಿಗೆ ಶೂಟಿಂಗ್ ತರಬೇತಿ ಪಡೆಯುತ್ತಿರುತ್ತಾರೆ.  

ಇಷ್ಟೆಲ್ಲಾ ಸಾಧನೆ ಮಾಡಿದ ರಕ್ಷಿತ್ ಶಾಸ್ತ್ರಿ ನಮ್ಮ ಮೈಸೂರಿನ ಹೆಮ್ಮೆಯೇ ಸರಿ. ಇವರ ಸಾಧನೆಯನ್ನು ಜನರ ಮುಂದಿಟ್ಟು ಪ್ರಶಂಸಿಸಬೇಕಾದ ಮಾಧ್ಯಮಗಳು ತಂತಮ್ಮ ಕೆಲಸಗಳಲ್ಲಿ ನಿರತರಾಗಿ ಬೇಡವಾದ್ದನ್ನು ವೈಭವೀಕರಿಸುತ್ತಲೇ ಕಾಲ ಕಳೆಯುತ್ತಿರುವುದು ವಿಪರ್ಯಾಸ. ಆದರೆ ಮೈಸೂರಿನ ಜನರಾಗಿ ನಾವು ಹಾಗೆ ಮಾಡುವುದು ಬೇಡ. ಇವರ ಈ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಮುಂದೆ ಇನ್ನೂ ಹೆಚ್ಚೆಚ್ಚು ಸಾಧನೆಗಳನ್ನು ಮಾಡಲಿ, ನಮ್ಮ ಮೈಸೂರಿಗೆ, ಇಡೀ ದೇಶಕ್ಕೆ ಕೀರ್ತಿ ತರಲಿ ಎಂದು ಆಶಿಸೋಣ. ಭಾರತದಲ್ಲಿ ಕ್ರಿಕೆಟ್ ಹಾಗೂ ಇನ್ನು ಕೆಲವು ಪ್ರಸಿದ್ಧ ಕ್ರೀಡೆಗಳನ್ನು ಹೊರತುಪಡಿಸಿ ಶೂಟಿಂಗ್, ಹಾಕಿ, ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿದವರು ಬೆಳಕಿಗೆ ಬರುವುದೇ ಕಡಿಮೆ. ರಾಜವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಗಗನ್ ನಾರಂಗ್, ವಿಜಯ್ ಕುಮಾರ್ ಎಲ್ಲರೂ ಸಹ ಶೂಟಿಂಗ್ ನಲ್ಲಿ ಒಲಂಪಿಕ್ ಪದಕ ವಿಜೇತರು. ಆದರೆ ಇವರ ಹೆಸರುಗಳು ಅದೆಷ್ಟು ಜನಕ್ಕೆ ತಿಳಿದಿದೆ ಹೇಳಿ? ಇದು ನಮ್ಮ ದೇಶದ ದುರಂತಗಳಲ್ಲೊಂದು. ಈ ಬಗ್ಗೆ ರಕ್ಷಿತ್ ಅವರನ್ನು ಕೇಳಿದರೆ, ‘ಇದು ದೇಶದ ಜನರು ಬೆಳೆದುಬಂದ ರೀತಿ. ಅದನ್ನು ದೂರುವುದು ತಪ್ಪಾಗುತ್ತದೆ. ನಮ್ಮ ಕೆಲಸ ನಾವು ಮಾಡಬೇಕಷ್ಟೇ’ ಎನ್ನುತ್ತಾ ನಗುತ್ತಾರೆ.

ಇವರನ್ನು ಅಭಿನಂದಿಸಿ ನೆನಪಿಟ್ಟುಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ. ಈಗಲೇ ಈ ಮಟ್ಟದ ಸಾಧನೆ ಮಾಡಿದವರು ಮುಂದೆ ಇನ್ನೇನೇಲ್ಲಾ ಮಾಡಬಹುದು ಅಲ್ಲವೇ? ನಮ್ಮ ಮೈಸೂರು ಇತಿಹಾಸ, ಪರಂಪರೆಗಳಿಂದ ಮಾತ್ರವಲ್ಲ, ಹಲವಾರು ಸಾಧಕರಿಂದಲೂ ಹೆಸರಾಗಿದೆ. ಸಂಗೀತ, ನಟನೆ, ಉದ್ಯಮ, ಕ್ರೀಡೆ..ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮೈಸೂರಿಗರು ತಮ್ಮ ಛಾಪು ಮೂಡಿಸಿದ್ದಾರೆ. ಈಗ ಆ ಪಟ್ಟಿಗೆ ರಕ್ಷಿತ್ ಶಾಸ್ತ್ರಿ ಕೂಡ ಸೇರಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!