Tue. Jan 26th, 2021

Namma Mysuru

History, News, Stories and much more

ವಿನಿಮಯಕ್ಕೆ ಶುರುವಾದ ಮೈಸೂರು ಸಿಲ್ಕ್ ಉತ್ಪಾದನೆ ಈಗ ಮೈಸೂರಿನ ಹೆಮ್ಮೆ..!

1 min read
508 Views

ಅದು ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನನ ಕಾಲ. ಅವರು ಆಳ್ವಿಕೆ ಮಾಡುತ್ತಿದ್ದ ರೀತಿ, ವೈರಿಗಳನ್ನು ಎದುರಿಸುತ್ತಿದ್ದ ರೀತಿ ಎಲ್ಲರ ಮನಸ್ಸನ್ನೂ ಸೂರೆಗೊಂಡಿತ್ತು. ಆದ್ದರಿಂದಲೇ ಆತನಿಗೆ ಮೈಸೂರು ಹುಲಿ ಎಂಬ ಬಿರುದನ್ನಿತ್ತರು. ಟಿಪ್ಪು ಸುಲ್ತಾನ್ ಅಪ್ರತಿಮ ಬುದ್ಧಿವಂತ. ರಾಜ್ಯ ಉಳಿಸಿಕೊಳ್ಳಲು ಏನು ಮಾಡಬೇಕು, ಬೇರೆಯವರನ್ನ ಎದುರಿಸಲು ಹೇಗೆ ತಂತ್ರ ಹೆಣೆಯಬೇಕು, ಯುದ್ಧಕ್ಕೆ ಯಾವ್ಯಾವ ಅತ್ಯುನ್ನತ ಉಪಕರಣಗಳನ್ನ ಬಳಸಿಕೊಳ್ಳಬೇಕು ಎಂದು ತಿಳಿದಿದ್ದ.  ಅದಕ್ಕೆ ವಿದೇಶಗಳಿಂದ ಆಯುಧಗಳನ್ನ ಅಮದು ಮಾಡಿಕೊಳ್ಳುತ್ತಿದ್ದ. ಹೆಚ್ಚಾಗಿ ಯುರೋಪಿಯನ್ ರಾಷ್ಟ್ರಗಳಿಂದ ಆಯುಧಗಳು ಅಮದಾಗುತ್ತಿತ್ತು. ಅದಕ್ಕೆ ಬದಲಾಗಿ ಆತ ಅವರಿಗೆ ಕೊಡುತ್ತಿದ್ದುದು ದುಡ್ಡನ್ನಲ್ಲ, ಬದಲಿಗೆ ಮೈಸೂರು ರೇಷ್ಮೆಯನ್ನ..!

ಹೌದು,, ಇದೇ ಸತ್ಯ. ಮೈಸೂರಿನಲ್ಲಿ ರೇಷ್ಮೆಯ ಉತ್ಪಾದನೆ ಹೆಚ್ಚಾಗುವುದಕ್ಕೆ ಇದೂ ಕೂಡಾ ಪ್ರಮುಖ ಕಾರಣವಾಯಿತು. ಅದು 1778ರ ಸಂದರ್ಭ. ಬ್ರಿಟಿಷರು ಅದಾಗಲೇ ಇಡೀ ಭಾರತವನ್ನು ಆಕ್ರಮಿಸಿಕೊಂಡಾಗಿತ್ತು. ಆಗ ಅವರ ವಿರುದ್ಧ ಹೋರಾಡಲು ಟಿಪ್ಪು ಸುಲ್ತಾನ್ ಯುರೋಪ್ ನಿಂದ ಆಯುಧಗಳನ್ನ ಅಮದು ಮಾಡಿಸಿಕೊಳ್ಳುತ್ತಿದ್ದ, ಅದಕ್ಕೆ ಬದಲಾಗಿ ಅವರಿಗೆ ರೇಷ್ಮೆ ಕೊಡುತ್ತಿದ್ದ. ನಂತರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರೇಷ್ಮೆ ಉತ್ಪಾದನೆ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿತು. ಮೊದಮೊದಲು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದವು. ನಂತರ ಪ್ರಥಮ ಸ್ಥಾನ ಗಳಿಸಿದ ಕರ್ನಾಟಕ ಇಂದಿಗೂ ಕೂಡಾ ಅದನ್ನು ಕಾಪಾಡಿಕೊಂಡು ಬಂದಿದೆ. 1949ರಲ್ಲಿ ಭಾರತದಲ್ಲಿ ಕೇಂದ್ರ ರೇಷ್ಮೆ ಮಂಡಳಿಯನ್ನು ಸ್ಥಾಪಿಸಲಾಯ್ತು. ನಂತರ 1955ರಲ್ಲಿ ರೇಷ್ಮೆ ಸಂಶೋಧನಾ ಕೇಂದ್ರವನ್ನು ಚನ್ನಪಟ್ಟಣದಲ್ಲಿ ಸ್ಥಾಪಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು 1961ರಲ್ಲಿ ಮೈಸೂರಿಗೆ ವರ್ಗಾವಣೆಯಾಯಿತು. ಬರುಬರುತ್ತಾ ರೇಷ್ಮೆ ಉತ್ಪಾದನೆಯಲ್ಲಿ ಸರ್ಕಾರ ಮುತುವರ್ಜಿ ವಹಿಸಿ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿತು.

ಮೈಸೂರಿನ ಸಿಲ್ಕ್ ಫ್ಯಾಕ್ಟರಿ ಇರುವುದು ಮಾನಂದವಾಡಿ ರಸ್ತೆಯಲ್ಲಿ. ಇದು ಸ್ಥಾಪನೆಯಾಗಿದ್ದು 1939ರಲ್ಲಿ. ಇದನ್ನು ನಿರ್ಮಾಣ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು. ಮೊದಮೊದಲು ಇಲ್ಲಿ ಬರೀ ರಾಜವಂಶಸ್ಥರಿಗೆ ಬೇಕಾದ ಉತ್ಕೃಷ್ಟ ಗುಣಮಟ್ಟದ ಬಟ್ಟೆಗಳನ್ನು ಮಾತ್ರ ತಯಾರಿಸಲಾಗುತ್ತಿತ್ತಂತೆ. ನಂತರ ಅದನ್ನ ವಾಣಿಜ್ಯ ಉದ್ಯಮವಾಗಿ ಪರಿವರ್ತನೆ ಮಾಡಲಾಯಿತು. ನಂತರ ನಮ್ಮ ಮೈಸೂರು ರೇಷ್ಮೆ ಉತ್ಪಾದನಾ ಸಂಸ್ಥೆ ಪ್ರಪಂಚದಾದ್ಯಂತ ಹೆಸರು ಮಾಡಿತು. ಈ ರೇಷ್ಮೆಯನ್ನ ಆಗ ವಿದೇಶದವರು ‘ಇಂಡಿಯನ್ ಸ್ಟೈಲ್’ ಎಂದು ಹೆಸರಿಸಿ ಧರಿಸುತ್ತಿದ್ದರು. ಮೈಸೂರು ಸಿಲ್ಕ್ ಜೊತೆ ಜಾರ್ಜೆಟ್, ಕ್ರೇಪ್ ಸಿಲ್ಕ್ ಗಳು ಕೂಡಾ ಪ್ರಸಿದ್ಧಿ ಪಡೆಯಲು ಶುರುವಾಯಿತು. ಇದು ಭಾರತದ ಪಾಲಿಗೆ ವರವಾಗಿ ಪರಿವರ್ತನೆಯಾಯಿತು. ನಾಲ್ವಡಿಯವರು ಒಮ್ಮೆ ಬ್ರಿಟನ್ ಗೆ ರಾಣಿ ವಿಕ್ಟೋರಿಯಾ ಕರೆದಿದ್ದ ಸಮಾರಂಭಕ್ಕೆ ಹೋಗಿದ್ದರಂತೆ. ಅಲ್ಲಿ ಬಳಸಿದ್ದ ಸಿಲ್ಕ್ ಅನ್ನ ನೋಡಿ ಮಾರುಹೋದ ಒಡೆಯರ್ ತಕ್ಷಣ ಆ ರೀತಿಯ 32 ಮಷೀನ್ ಗಳನ್ನ ಸ್ವಿಜರ್ ಲ್ಯಾಂಡ್ ನಿಂದ ತರಿಸಿಕೊಂಡರು. ಜೊತೆಗೆ ಜಪಾನ್ ನಿಂದಲೂ ಮಷೀನ್ ಗಳನ್ನ ತರಿಸಿಕೊಂಡರು. ಇದು ಭಾರತಯದಲ್ಲೇ ಮೊದಲು. ಆನಂತರ ರೇಷ್ಮೆ ಉದ್ಯಮ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.

ನಂತರ ಈ ಉದ್ಯಮ ಬೇರೆಯದ್ದೇ ರೂಪ ಪಡೆಯಿತು. ಕಾರ್ಖಾನೆಯ ಮುಂಭಾಗದಲ್ಲಿ ಒಮ್ಮೆ ರೇಷ್ಮೆ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಆರಂಭಿಸಿ ಪ್ರಚಾರ ಮಾಡಲಾಯಿತು. ಆಗ ಜನ ಇದನ್ನು ಇಷ್ಟಪಡಲು, ಕೊಳ್ಳಲು ಶುರುಮಾಡಿದರು. ಮೈಸೂರಿನೊಂದಿಗೆ ಬೆಂಗಳೂರು ಹಾಗೂ ಮದ್ರಾಸಿನಲ್ಲೂ ಮಾರಾಟ ಮಳಿಗೆಗಳನ್ನ ತೆರೆಯಲಾಯಿತು. ಪ್ರಸ್ತುತ ಈ ಸಂಸ್ಥೆ “ಕರ್ನಾಟಕ ರೇಷ್ಮೆ ಉದ್ದಿಮೆ ನಿಗಮ” (ಕೆ.ಎಸ್.ಐ.ಸಿ) ಎಂಬ ಹೆಸರಲ್ಲಿ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ನೂರಾರು ಜನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ತಯಾರಾಗುವ ಉತ್ಪನ್ನಗಳು ಮೈಸೂರು ಸಿಲ್ಕ್ ಎಂದೇ ಹೆಸರುವಾಸಿ. ರೇಷ್ಮೆಗೂಡಿನಿಂದ ರೇಷ್ಮೆ ತಯಾರು ಮಾಡುವುದರಿಂದ ಹಿಡಿದು ಕೊನೆಯದಾಗಿ ಬಟ್ಟೆ ತಯಾರಿಸುವವರೆಗಿನ ಎಲ್ಲಾ ಕೆಲಸವನ್ನೂ ಒಂದೇ ಸೂರಿನಡಿ ಮಾಡುವ ಏಕಮಾತ್ರ ಸಂಸ್ಥೆ ಇದು. ಇದು ಮೈಸೂರಿನ ಹೆಮ್ಮೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಸ್ತುತ ತಿಂಗಳಿಗೆ ಸರಾಸರಿ 35,000 ಮೀಟರ್ ಹಾಗೂ 4,25,000 ಮೀಟರ್ ರೇಷ್ಮೆ ಬಟ್ಟೆ ತಯಾರಾಗುತ್ತದೆ. ಸಿಲ್ಕ್ ಸೀರೆ ಮಾತ್ರವಲ್ಲ, ರೇಷ್ಮೆ ಪಂಚೆ, ಸಲ್ವಾರ್ ಗಳು ಕೂಡಾ ತಯಾರಾಗುತ್ತದೆ. ಒಂದು ಸೀರೆಯ ಬಾರ್ಡರ್ ಅನ್ನು ನೇಯಲು ತಗುಲುವುದು ಬರೋಬ್ಬರಿ ನಾಲ್ಕು ಗಂಟೆಕಾಲ ಸಮಯ. ಅದರ ನಂತರ ಅದಕ್ಕಿರುವ ಕೆಲವು ಕ್ರಮಗಳನ್ನ ಅನುಸರಿಸಿ ನಂತರ ಅದಕ್ಕೆ ಬೇಕಾದ ಬಣ್ಣವನ್ನ ಹಾಕುವ ಕೆಲಸ ಮಾಡಲಾಗುತ್ತದೆ. ಸೀರೆಗಳ ಗುಣಮಟ್ಟ ಕಾಪಾಡಲು ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅದರ ನಂತರ ಪ್ರತಿಯೊಂದು ಸೀರೆಗೂ ಒಂದೊಂದು ಕೋಡ್ ಗಳನ್ನ ಕೊಡಲಾಗಿರುತ್ತದೆ. ಮೈಸೂರು ಸಿಲ್ಕ್ ಸೀರೆಗೆ ಬಳಸೋದು ಅತ್ಯುನ್ನತ ಗುಣಮಟ್ಟದ ರೇಷ್ಮೆ. ಶೇ.65ರಷ್ಟು ಬೆಳ್ಳಿ ಹಾಗೂ ಶೇ.0.65 ರಷ್ಟು ಶುದ್ಧ ಚಿನ್ನ. ಆದ್ದರಿಂದ ಇದರ ಬೆಲೆ ಶುರುವಾಗುವುದೇ 7 ಅಥವಾ 8 ಸಾವಿರ ರೂಪಾಯಿಯಿಂದ. ಸರ್ಕಾರಿ ಉದ್ಯೋಗಿಗಳಿಗೆ ಕಂತಿನಲ್ಲಿ ಸೀರೆ ಕೊಳ್ಳುವ ಸೌಲಭ್ಯ ಇದೆ.

ಕರ್ನಾಟಕ ಇಂದಿಗೂ ಕೂಡಾ ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಇದಕ್ಕೆ ಕಾರಣ ಮೈಸೂರು ರೇಷ್ಮೆಗೆ ಇರುವ ಜನಪ್ರಿಯತೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ ಜಿಲ್ಲೆಗಳಲ್ಲಿ ಕೃಷಿಕರು ಹೆಚ್ಚಾಗಿ ರೇಷ್ಮೆಯನ್ನು ಉತ್ಪಾದನೆ ಮಾಡುತ್ತಾ ಅದರ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣಕ್ಕಾದರೂ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ರೇಷ್ಮೆ ಉತ್ಪಾದನೆಗೆ ಹೆಚ್ಚು ಒತ್ತು ಕೊಡಬೇಕು.

ನೀವು ಮೈಸೂರಿಗೆ ಬಂದಾಗ ಮೈಸೂರು ಸಿಲ್ಕ್ ಸೀರೆ ಕೊಳ್ಳಬೇಕೆಂದರೆ ಎಲ್ಲಾ ಅಂಗಡಿಗಳಿಗೂ ಹೋಗಬೇಡಿ. ಅದನ್ನು ನಕಲು  ಮಾಡುವವರು ಬಹಳ ಜನ ಇದ್ದಾರೆ. ಮೊದಲನೆಯದಾಗಿ ನಿಮಗೆ ಮನದಟಗಟ್ಟಾಗಬೇಕಾಗಿರುವುದು ಬ್ರ್ಯಾಂಡ್ ನೇಮ್. ಅದು KSIC. ಈ ಅಕ್ಷರಗಳಲ್ಲಿ ಬಿಟ್ಟು, ಈ ಹೆಸರು ಬಿಟ್ಟು ಬೇರೆ ಯಾವುದೇ ಇದ್ದರೂ ಅದು ಮೈಸೂರು ಸಿಲ್ಕ್ ಅಂಗಡಿಯಲ್ಲ. ನೀವು ನಿಜವಾದ ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಹೋಗಬೇಕಾಗಿರುವುದು ಈ ಶೋರೂಂ ಗಳಿಗೆ ಮಾತ್ರ.

 1. KSIC ಫ್ಯಾಕ್ಟರಿ ಶೋರೂಂ, ರೇಷ್ಮೆ ನೇಯ್ಗೆ ಕಾರ್ಖಾನೆ, ಮಾನಂದವಾಡಿ ರಸ್ತೆ, ಮೈಸೂರು
 2. KSIC ಗೋಡೋನ್, ರೇಷ್ಮೆ ಕಾರ್ಖಾನೆ, ಮೈಸೂರು
 3. KSIC, ವಿಶ್ವೇಶ್ವರಯ್ಯ ಭವನ, ಕೆ.ಆರ್.ವೃತ್ತ, ಮೈಸೂರು
 4. KSIC, ಝೂ ಕಾಂಪ್ಲೆಕ್ಸ್, ಇಂದಿರಾನಗರ, ಮೈಸೂರು
 5. KSIC, ಯಾತ್ರಿ ನಿವಾಸ್, ಜೆ.ಎಲ್.ಬಿ ರಸ್ತೆ, ಮೈಸೂರು

ಮೈಸೂರು ಸಿಲ್ಕ್ ಸೀರೆಗಳನ್ನು ಕಾಪಾಡಿಕೊಳ್ಳುವ ಪರಿ ಹೀಗಿದೆ:

 1. ಈ ಸೀರೆಗಳನ್ನು ಮೃದುವಾದ ಹತ್ತಿ ಬಟ್ಟೆಗಳಲ್ಲಿ ಸುತ್ತಿ ಇಡಬೇಕು.
 2. ಎಣ್ಣೆ ಕರೆಯಾದರೆ ಮೊದಲು ಟಾಲ್ಕಮ್ ಪೌಡರ್ ನಿಂದ ಒರೆಸಿ ನಂತರ ಸ್ಟೇನ್ ರಿಮೂವರ್ ನಿಂದ ಸ್ವಚ್ಛಗೊಳಿಸಬೇಕು.
 3. ಯಾವುದೇ ಕಾರಣಕ್ಕೂ ಡಿಟರ್ಜೆಂಟ್ ಗಳನ್ನ ಬಳಸಬಾರದು.
 4. ಇದನ್ನು ಸ್ವಚ್ಛ ಮಾಡಲು ಸೌಮ್ಯವಾದ ಮೈ ಸಾಬೂನನ್ನು ಬಳಸಬೇಕು
 5. ಒಗೆದ ನಂತರ ನೆರಳಿನಲ್ಲೇ ಒಣಗಿಸಬೇಕು.
 6. ಇಸ್ತ್ರಿ ಮಾಡುವ ಮುನ್ನ ನೀರು ಸಿಂಪಡಿಸಬಾರದು. ಜೊತೆಗೆ ಇಸ್ತ್ರಿ ಮಾಡವಾಗ ಶಾಖ ಹೆಚ್ಚಾಗಬಾರದು.
 7. ಈ ಸೀರೆಗಳನ್ನು ಬಿಸಿನೀರಿನಲ್ಲಿ ನೆನೆಸಿಡಬಾರದು, ಬಿಸಿನೀರಿನಲ್ಲಿ ಒಗೆಯಬಾರದು.

ಇನ್ಯಾಕೆ ತಡ, ನೀವೂ ಮೈಸೂರಿಗೆ ಬನ್ನಿ. ಮೈಸೂರು ಸಿಲ್ಕ್ ಸೀರೆಯೊಂದನ್ನ ಕೊಂಡು, ಉಟ್ಟು ಸಂಭ್ರಮಿಸಿ. ದುಬಾರಿ ಅಂತ ಬೇಜಾರು ಮಾಡಿಕೊಳ್ಳುವುದನ್ನ ಬಿಟ್ಟುಬಿಡಿ. ಏಕೆಂದರೆ ಆ ಸೀರೆ ಉಟ್ಟಾಗ ಸಿಗುವ ಆ ಭಾವನೆ, ಆ ಟ್ರೆಡಿಶನಲ್, ರಾಯಲ್ ಲುಕ್ ಗೆ ಮತ್ತೇನೂ ಸಾಟಿಯಿಲ್ಲ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!