ಈ ಬಾರಿಯೂ ಮೈಸೂರಿಗಿಲ್ಲ ಗಿನ್ನಿಸ್ ‘ಯೋಗ’
1 min read
ಯೋಗ ದಿನಾಚರಣೆ ಅಂದರೆ ಮೊದಲು ನಮಗೆಲ್ಲಾ ನೆನಪಾಗುವುದು ಮೈಸೂರು. ಏಕೆಂದರೆ 2017ರಲ್ಲಿ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಮಾಡಿತ್ತು. 2017ರ ಯೋಗ ದಿನಾಚರಣೆಯಲ್ಲಿ 55,056 ಜನ ಸಾಮೂಹಿಕ ಯೋಗ ಪ್ರದರ್ಶನ ಮಾಡಿ ಮೈಸೂರಿನ ಹೆಸರನ್ನು ಗಿನ್ನಿಸ್ ಪುಸ್ತಕದಲ್ಲಿ ದಾಖಲು ಮಾಡಿದ್ದರು. ಆದರೆ 2018ರಲ್ಲಿ ಮೈಸೂರು ಕೈಚೆಲ್ಲಿತ್ತು. ಬಾಬಾ ರಾಮದೇವ್ ಮಾರ್ಗದರ್ಶನದಲ್ಲಿ ರಾಜಸ್ಥಾನದಲ್ಲಿ 1,00,974 ಜನ ಸಾಮೂಹಿಕ ಯೋಗ ಪ್ರದರ್ಶನ ಮಾಡಿ ಮೈಸೂರಿನ ದಾಖಲೆಯನ್ನು ಮುರಿದಿದ್ದರು. ಈ ಬಾರಿ ನಾವು ಮತ್ತೆ ದಾಖಲೆ ಮಾಡಬೇಕೆಂದು ಮೈಸೂರಿನ ಹಲವಾರು ಸಂಘ-ಸಂಸ್ಥೆಗಳು, ಸ್ವಯಂ ಸೇವಕರು ಸಾಕಷ್ಟು ಪ್ರಯತ್ನ ಪಟ್ಟು ಅಭ್ಯಾಸ ಮಾಡುತ್ತಿದ್ದರು. ಆದರೆ ಜಿಲ್ಲಾಡಳಿತ ಈ ಪ್ರಯತ್ನವನ್ನು ಇಲ್ಲಿಗೇ ಕೈಬಿಟ್ಟಿದೆ. ಗಿನ್ನಿಸ್ ದಾಖಲೆಗೆ ಸ್ಪರ್ಧೆ ಮಾಡುವುದು ಬೇಡ ಎಂದು ತೀರ್ಮಾನಿಸಿದೆ.
ಹಿಂದೆ ಸರಿದಿದ್ದರ ಹಿಂದಿನ ಕಾರಣ:
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮ ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ರಾಮದಾಸ್ ಹಾಗೂ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ್, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರು ಭಾಗಿಯಾಗಿ ಈ ತೀರ್ಮಾನ ಕೈಗೊಂಡರು. ಅದಕ್ಕೆ ಕಾರಣಗಳು ಹೀಗಿವೆ.
- ಈ ಬಾರಿ ಯೋಗ ದಿನಾಚರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಂಡಿಲ್ಲ.
- ಈ ಬಾರಿ ಲೋಕಸಭಾ ಚುನಾವಣೆಗೆ ಸಮಯ ಮೀಸಲಿಟ್ಟಿದ್ದ ಕಾರಣ ಯೋಗ ದಿನಾಚರಣೆ ಕಡೆ ಗಮನ ಕೊಡಲು ಸಾಧ್ಯವಾಗಿಲ್ಲ.
- ತಯಾರಿಯಿಲ್ಲದೇ ಸ್ಪರ್ಧಿಸುವುದು ಬೇಡ ಎಂದು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
- ಜನರು ಭಾಗವಹಿಸುವಂತೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿಲ್ಲ.
- ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ನಿರೀಕ್ಷೆಯಷ್ಟು ಜನ ಸೇರುವ ಮುನ್ಸೂಚನೆ ಕಂಡುಬರುತ್ತಿಲ್ಲ.
- ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆಸಕ್ತಿ ತೋರಿಸುತ್ತಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಮೈಸೂರು ಈ ಬಾರಿ ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಮಾಡುತ್ತದೆಯೇ ಹೊರತು ಗಿನ್ನಿಸ್ ದಾಖಲೆಗೆ ಸ್ಪರ್ಧಿಸುವುದಿಲ್ಲ. ಮುಂದಿನ ಬಾರಿಯಿಂದಾದರೂ ಎಲ್ಲರೂ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದರೆ ಮೈಸೂರು ದೇಶದ ಯೋಗ ರಾಜಧಾನಿಯಾಗಿ ವಿಶ್ವದ ಗಮನ ಸೆಳೆಯುತ್ತದೆ.