Wed. Jan 13th, 2021

Namma Mysuru

History, News, Stories and much more

ಇಲ್ಲಿ ಏನೇ ಕೊಂಡರೂ ಒಂದೂವರಾಣೆ ಮಾತ್ರ..! ಇದು ಮೈಸೂರಿನ ಐತಿಹಾಸಿಕ ಸೇಲ್.

1 min read
462 Views

ಮೈಸೂರು ಐತಿಹಾಸಿಕ ನಗರಿ. ರಾಜರ ಆಳ್ವಿಕೆ ಹೋಗಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮೈಸೂರಿನಲ್ಲಿ ಇಷ್ಟು ವೈಭವವಿದೆ ಎಂದರೆ ಇನ್ನು ಮೈಸೂರು ಸಂಸ್ಥಾನವಾಗಿದ್ದಾಗ ಇದರ ಭವ್ಯ ಇತಿಹಾಸ ಹೇಗಿದ್ದಿರಬಹುದು ಯೋಚಿಸಿ..! ರಾಜ್ಯ ಸುಭೀಕ್ಷವಾಗಿತ್ತು. ಯಾರಿಗೂ ಯಾವುದಕ್ಕೂ ಕೊರತೆಯಾಗದಂತೆ ರಾಜರು ನೋಡಿಕೊಳ್ಳುತ್ತಿದ್ದರು.ಆದರೂ ಕೆಲವರು ಕಡುಬಡತನದಲ್ಲಿದ್ದರು. ಹೊಟ್ಟೆ-ಬಟ್ಟೆಗೂ ಇಲ್ಲದ ಬಡವರು,  ಮಧ್ಯಮ ವರ್ಗದವರು ಮೈಸೂರಿನಲ್ಲಿ ಜೀವಿಸುತ್ತಿದ್ದರು. ಅವರಿಗೆ ರಾಜರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು ಎಂಬುದಂತೂ ನಿಜ. ಅದಕ್ಕಾಗಿ ರಾಜರು ಬೇರೆ ಬೇರೆ ಉಪಾಯಗಳನ್ನು ಮಾಡಿದ್ದರು. ಅದರಲ್ಲಿ ಒಂದು ಒಂದೂವರಾಣೆ ಗಲ್ಲಿ.

ಏನಿದು ಒಂದುವರಾಣೆ ಗಲ್ಲಿ..?

ಹೌದು..ಇದರ ಹೆಸರೇ ಒಂದೂವರಾಣೆ ಗಲ್ಲಿ. ಇಲ್ಲಿ ಏನು ತೆಗೆದುಕೊಂಡರೂ ಒಂದೂವರಾಣೆ  ಅಷ್ಟೇ. ಅಂದರೆ ಒಂಬತ್ತು ಪೈಸೆ ಅಷ್ಟೇ. ಮೈಸೂರು ನಗರದ ಒಂದೊಂದು ಗಲ್ಲಿಗೂ ಐತಿಹಾಸಿಕ ಮಹತ್ವವಿದೆ. ಆದರೆ ಅದನ್ನು ತಿಳಿದುಕೊಳ್ಳಬೇಕಾದ ಸಹನೆ, ಆಸಕ್ತಿ ಇರಬೇಕು ಅಷ್ಟೇ. ಕೆಲವು ಸ್ಥಳಗಳು ಈಗಲೂ ಅಸ್ತಿತ್ವದಲ್ಲಿದ್ದರೆ ಇನ್ನು ಕೆಲವು ಈಗ ಅಸ್ತಿತ್ವದಲ್ಲಿಲ್ಲ. ಆದರೆ ಅದರ ಇತಿಹಾಸ ಮಾತ್ರ ನಾವು ತಿಳಿದುಕೊಳ್ಳಲೇಬೇಕಾದುದು. ಮೈಸೂರಿನಲ್ಲಿರುವ ಹಿರಿಯರನ್ನು ಕೇಳಿದರೆ ಒಂದೂವರಾಣೆ ಗಲ್ಲಿ ಬಗ್ಗೆ ಹೇಳುತ್ತಾರೆ. ಒಂದೂವರಾಣೆ ಗಲ್ಲಿ ರಾಜರಿಂದ ಬಡವರಿಗಾಗಿ ಶುರುವಾಗಿದ್ದ ಮಾರುಕಟ್ಟೆ. ಇಲ್ಲಿ  ಗೃಹೋಪಯೋಗಿ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದರು. ಸಣ್ಣಪುಟ್ಟ ವ್ಯಾಪಾರಸ್ಥರು ಇಲ್ಲಿ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದರು. ಈ ಮೂಲಕ ತಮ್ಮ ಬದುಕನ್ನ ಕಟ್ಟಿಕೊಂಡಿದ್ದರು. ಬಡವರಿಗೆ ಈ ಮಾರುಕಟ್ಟೆ ಅಚ್ಚುಮೆಚ್ಚಾಗಿತ್ತು. ಏಕೆಂದರೆ ಇಲ್ಲಿ ಏನೇ ಕೊಂಡರೂ ಅದಕ್ಕೆ ಒಂದೂವರಾಣೆ ಮಾತ್ರ. ಅದಕ್ಕಾಗಿಯೇ ಬಡವರು ಇಲ್ಲಿಗೆ ಬರುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಗಲ್ಲಿ ಇತಿಹಾಸದ ಪುಟ ಸೇರಿಕೊಂಡಿದೆ. ಈ ಮಾರುಕಟ್ಟೆ ಶುರುವಾಗಿದ್ದು ಹೇಗೆ ಅನ್ನೋದು ಕುತೂಹಲಕಾರಿ ಕಥೆ.

ಒಂದೂವರಾಣೆ ಗಲ್ಲಿ ಶುರುವಾಗಿದ್ದು ಹೇಗೆ..?

1799ರ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅಳ್ವಿಕೆ ಅಂತ್ಯಗೊಂಡಿತ್ತು.  ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಪಟ್ಟಕ್ಕೆ ಬಂದರು. ಈ ವೇಳೆ ಅರಮನೆಗೆ ಕಾವೇರಿ ನೀರು ತರಲು ಸಕಲ ಸಿದ್ಧತೆಗಳು ನಡೆದಿದ್ದವು. ಆಗಿನ ದಿವಾನರಾಗಿದ್ದ ಪೂರ್ಣಯ್ಯ ಅವರು ಬಲಮುರಿಯಿಂದ ಅರಮನೆಗೆ ನಾಲೆ ತೆಗೆಸಿದರಂತೆ. ಆಗ 40 ಅಡಿ ಎತ್ತರದ ನಾಲೆಯೇ ಈಗಿನ ಸಯ್ಯಾಜಿರಾವ್ ರಸ್ತೆ. ಈಗಿನ ಸಯ್ಯಾಜಿರಾವ್ ರಸ್ತೆಯಲ್ಲೇ ಆಗ ಮಾರುಕಟ್ಟೆಯೊಂದು ನಡೆಯುತ್ತಿತ್ತು. ಆದರೆ ನಾಲೆ ತೆಗೆದಿದ್ದರಿಂದಾಗಿ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆಯಾಯಿತು. ಜನಸಂಚಾರ ಇಕ್ಕಟ್ಟಾಯಿತು. ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದರು. ಇದಕ್ಕೆ ಉಪಾಯವಾಗಿ ಕ್ರಮೇಣ ದೇವರಾಜ ಮಾರುಕಟ್ಟೆ ಎದುರಿನ ಭಾಗದಲ್ಲಿ ಒಂದು ಬೀದಿ ಬದಿ ವ್ಯಾಪಾರ ಆರಂಭವಾಯಿತು. ಇಲ್ಲಿ ಒಂದೂವರಾಣೆಗೆ ಎಲ್ಲ ವಸ್ತುಗಳು ದೊರಕಲಾರಂಭಿಸಿದವು. ಪಾತ್ರೆ, ಬಟ್ಟೆ, ಹಣ್ಣು, ತರಕಾರಿ, ತಿಂಡಿ-ತಿನಿಸು ಸೇರಿದಂತೆ ಎಲ್ಲವೂ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು. ಮುಖ್ಯವಾಗಿ ಕಡಿಮೆ ಬೆಲೆಯಲ್ಲಿ ಬಡವರಿಗೆ ದಿನನಿತ್ಯದ ವಸ್ತುಗಳು ದೊರಕುತ್ತಿದ್ದರಿಂದ ಬಡ ಬಗ್ಗರು ಪ್ರತಿದಿನ ಒಂದೂವರಾಣೆ ಗಲ್ಲಿಗೆ  ಬರುತ್ತಿದ್ದರು. ಮಾರುಕಟ್ಟೆಯ ವಿಸ್ತಾರ ಹೆಚ್ಚುತ್ತಾ ಹೋಯಿತು. ಬಾಯಿಂದ ಬಾಯಿಗೆ ವಿಷಯ ಹರಡಿ ಮೈಸೂರು ನಗರ ಮಾತ್ರವಲ್ಲದೇ ಸುತ್ತಮುತ್ತಲ ಹಳ್ಳಿಗಳಿಂದಲೂ ಇಲ್ಲಿಗೆ ಜನ ಬರುತ್ತಿದ್ದರು. ವಿದ್ಯಾರ್ಥಿಗಳು ಪುಸ್ತಕಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಎಂಬ ಕಾರಣಕ್ಕೆ ಈ ಗಲ್ಲಿಗೆ ಎಡತಾಕುತ್ತಿದ್ದರು. ಬೆಳಗ್ಗೆ ವ್ಯಾಪಾರ ಪ್ರಾರಂಭವಾಗಿ ಸೂರ್ಯ ಮುಳುಗುವ ಹೊತ್ತಿಗೆ ಮುಕ್ತಾಯವಾಗುತ್ತಿತ್ತು. ಈಗ ಆಣೆಗಳಿಲ್ಲ.. ಆದರೆ ಲೆಕ್ಕಾಚಾರದ ಪ್ರಕಾರ 16 ಆಣೆಗೆ 1 ರೂಪಾಯಿ ಆಗುತ್ತೆ. ಅಂದರೆ 1 ಆಣೆ ಆರೂಕಾಲು ಪೈಸೆಗೆ ಸಮ. ಈ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಒಂದೂವರಾಣೆಗೆ ಸಿಗುತ್ತಿದ್ದ ಕಾರಣ ಬಾಯಿಂದ ಬಾಯಿಗೆ ಹಬ್ಬಿ ಕ್ರಮೇಣ ಈ ಪ್ರದೇಶ ‘ಒಂದೂವರಾಣೆ ಗಲ್ಲಿ’ ಎಂದು ಕರೆಯಲ್ಪಟ್ಟಿತ್ತು.

ಈಗ ಒಂದೂವರಾಣೆ ಗಲ್ಲಿ

ಒಂದೂವರಾಣೆ ಗಲ್ಲಿ ಈಗ ಹೇಗಿದೆ..?

ಇಂತಹ ಭವ್ಯ ಇತಿಹಾಸ ಹೊಂದಿದ್ದ ಒಂದೂವರಾಣೆ ಗಲ್ಲಿ ಈಗ ನಾಮಾವಶೇಷವಾಗಿದೆ. 2006ರಲ್ಲಿ ನಗರ ಪಾಲಿಕೆ ಒಂದು ನಿರ್ಣಯ ಕೈಗೊಂಡು ಮಕ್ಕಾಜಿ ಚೌಕದಲ್ಲಿ 3 ಲಕ್ಷ 40 ಸಾವಿರ ಚದರ ಅಡಿ ಜಾಗವನ್ನು  ಹೋಲ್ಡಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ ಕಂಪನಿಯೊಂದಕ್ಕೆ 40 ವರ್ಷಗಳಿಗೆ ಗುತ್ತಿಗೆ ನೀಡಿತು. ಈ ಒಪ್ಪಂದದ ವ್ಯಾಪ್ತಿಗೆ ಬರುವ ಒಂದೂವರಾಣೆ ಗಲ್ಲಿಯಲ್ಲಿದ್ದ ಹಲವು ಮಳಿಗೆಗಳನ್ನು ಕೆಡವಲಾಗಿದೆ. ಹೀಗಾಗಿ ಈಗ ಒಂದೂವರಾಣೆ  ಗಲ್ಲಿ ನೆನಪು ಮಾತ್ರ. ಮೈಸೂರು ಈಗ ಸಾಕಷ್ಟು ಬೆಳೆದುಬಿಟ್ಟಿದೆ. ಸಾಂಸ್ಕೃತಿಕ ನಗರಿ ಎಂಬ ಹೆಸರಿಗೆ ಕಳಂಕ ತರುವಷ್ಟು ಬದಲಾಗದಿದ್ದರೂ ಹೊಸ ರೂಪ ಪಡೆದುಕೊಂಡಿದೆ. ಈ ಕಾರಣಕ್ಕಾಗಿ ಒಂದಷ್ಟು ಹಳೆ ಕುರುಹುಗಳು ಮಾಯವಾಗಿದೆ. ಅದರಲ್ಲಿ ಒಂದೂವರಾಣೆ ಗಲ್ಲಿ ಕೂಡಾ ಒಂದು. ಆದರೆ ಈಗಲೂ ಈ ಗಲ್ಲಿ ಹೆಸರು ಹಲವರ ಬಾಯಲ್ಲಿದೆ. ಈ ರಸ್ತೆಯನ್ನು ಈಗಲೂ ಜನ ಒಂದೂವರಾಣೆ ಗಲ್ಲಿ ಅಂತಾನೇ ಕರೀತಾರೆ. ಆದರೆ ಇಲ್ಲಿ ಬಡವರ ವ್ಯಾಪಾರ ವಹಿವಾಟು ಮಾತ್ರ ನಡೆಯುತ್ತಿಲ್ಲ. ಒಂದೂವರೆ ಆಣೆ ಗಲ್ಲಿ  ಈಗ ನೆನಪು ಮಾತ್ರ. ಈ ಗಲ್ಲಿಯಲ್ಲಿ ವ್ಯಾಪಾರ ಮಾಡಿದ ಒಂದಷ್ಟು ಜನ ಈಗಲೂ ಇದ್ದಾರೆ. ಅದರ ಕತೆಗಳನ್ನು ಹೇಳುತ್ತಾರೆ. ಮುಂದೊಂದು ದಿನ ಈ ಗಲ್ಲಿಯ ಹೆಸರೂ ಇತಿಹಾಸ ಸೇರಿಬಿಡುತ್ತೇನೋ ಅನ್ನೋ ಆತಂಕ ಮಾತ್ರ ಇದ್ದೇ ಇದೆ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!