ಇಲ್ಲಿ ನಿತ್ಯಯೂ ಸ್ವಾತಂತ್ರ್ಯೋತ್ಸವ..! ಮೈಸೂರಿನ ಹೋಟೆಲ್ ನಲ್ಲಿ ನಿತ್ಯ ದೇಶಪ್ರೇಮದ ಉತ್ಸವ.
1 min read
ಆಗಸ್ಟ್ 15, ಜನವರಿ 26 ಬಂದರೆ ಸಾಕು..ನಮ್ಮ ದೇಶದ ಜನರಿಗೆಲ್ಲಾ ವರ್ಷಪೂರ್ತಿ ಇಲ್ಲದ ದೇಶಪ್ರೇಮ ಬಂದುಬಿಡುತ್ತೆ. ವಾಟ್ಸಾಪ್ ಸ್ಟೇಟಸ್ ನಲ್ಲಿ, ಡಿಪಿಯಲ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ, ಟ್ವಿಟರ್ ಟೈಮ್ ಲೈನ್ ನಲ್ಲಿ..ಹೀಗೆ ಎಲ್ಲ ಕಡೆಯೂ ತ್ರಿವರ್ಣದ್ದೇ ಕಾರುಬಾರು. ಶಾಲಾ ಕಾಲೇಜುಗಳಲ್ಲೂ ದೇಶಪ್ರೇಮ ಉಕ್ಕಿಹರಿಯುತ್ತಿರುತ್ತದೆ. ಅಧ್ಯಾಪಕರು ಅವತ್ತು ಗಂಟೆಗಟ್ಟಲೆ ಭಾಷಣ ಮಾಡೋಕೆ ಒಂದು ವಾರದ ಹಿಂದಿನಿಂದಲೇ ತಯಾರಾಗಿರುತ್ತಾರೆ. ನಮ್ಮ ದೇಶದ ಪರಿಸ್ಥಿತಿಯೇ ಇಷ್ಟು ಬಿಡಿ. ಇದು ಯಾವ ಕಾಲಕ್ಕೂ ಬದಲಾಗುವುದಿಲ್ಲ. ನಮ್ಮ ಭಾರತದ ಕೆಲವು ಸತ್ಪ್ರಜೆಗಳು ಕೆಲವು ತಿಂಗಳುಗಳ ಹಿಂದೆ ಪುಲ್ವಾಮಾ ದಾಳಿ, ಏರೋ ಸ್ಟ್ರೈಕ್, ಅಭಿನಂದನ್ ಬಂಧನ, ಬಿಡುಗಡೆಯಂತಹ ಘಟನೆಗಳು ಜರುಗಿದಾಗ ದೇಶಪ್ರೇಮ ಮೆರೆದರು. ಸೈನಿಕರನ್ನ ಹಾಡಿ ಹೊಗಳಿ ಮನೆದೇವರಂತೆ ಕೊಂಡಾಡಿದರು. ಆದರೆ ಈಗ ನಮ್ಮ ಸೈನಿಕರ ಪರಿಸ್ಥಿತಿ ಬಗ್ಗೆ ಕ್ಯಾರೇ ಎನ್ನುವವರ ಸಂಖ್ಯೆ ಎಷ್ಟು..? ಆದರೆ ನಮ್ಮ ದೇಶದಲ್ಲೂ ನಿಜವಾದ ದೇಶಪ್ರೇಮಿಗಳು ಸಿಗುತ್ತಾರೆ. ಇವರನ್ನೆಲ್ಲಾ ನೋಡಿದರೆ ದೇಶದ ಬಗ್ಗೆ ದುರಭಿಮಾನ ತೋರಿಸುವ ದೇಶದ್ರೋಹಿಗಳಿಗೆ ಇರಬೇಕಾದ ದೇಶಪ್ರೇಮವೆಲ್ಲಾ ಇವರಿಗೇ ಬಂದಿದೆಯೋ ಏನೋ ಎನಿಸುತ್ತದೆ.
‘ಅಂಕಲ್ ಲೋಬೋಸ್ ಸುಗ್ಗಿಮನೆ’ :
ನಮ್ಮ ಮೈಸೂರೂ ದೇಶಪ್ರೇಮಕ್ಕೆ ಹೊರತಾಗಿಲ್ಲ. ಇಲ್ಲಿಯೂ ದೇಶಪ್ರೇಮ ಬಿಂಬಿಸುವ ಜಾಗಗಳಿವೆ, ಜನರಿದ್ದಾರೆ. ಇವರನ್ನೆಲ್ಲಾ ನೋಡಿದರೆ ಮೈಸೂರಿಗೆ ಬಂದಾಗ ಒಮ್ಮೆಯಾದರೂ ಇಲ್ಲಿಗೆ ಭೇಟಿ ಕೊಡಲೇ ಬೇಕು ಎನಿಸುತ್ತದೆ. ಈ ಹೋಟೆಲ್ ಬಗ್ಗೆ ನೀವು ಮಾತ್ರವಲ್ಲ, ಇಡೀ ದೇಶದ ಜನರು ತಿಳಿದುಕೊಳ್ಳಬೇಕು. ಮೈಸೂರಿನ ಬೋಗಾದಿಯಲ್ಲಿರುವ ಈ ಹೋಟೆಲ್ ಹೆಸರು ‘ಅಂಕಲ್ ಲೋಬೋಸ್ ಸುಗ್ಗಿಮನೆ’. ಇಲ್ಲಿ ಪ್ರತಿನಿತ್ಯ ರಾಷ್ಟ್ರಗೀತೆಯ ಝೇಂಕಾರ ಮೊಳಗುತ್ತದೆ. ರಾಷ್ಟ್ರಗೀತೆಯಿಂದಲೇ ದಿನ ಶುರುವಾಗುತ್ತದೆ. ಈ ಹೋಟೆಲ್ ಮೇಲೆ ಧ್ವಜವನ್ನ ಹಾಕಲಾಗಿದೆ. ಬೆಳಿಗ್ಗೆ 10:30ಕ್ಕೆ ಸರಿಯಾಗಿ ಹೋಟೆಲ್ ಮೇಲಿರುವ ಭಾರತ ಧ್ವಜದ ಮುಂದೆ ನಿಂತು ರಾಷ್ಟ್ರಗೀತೆ ಹಾಡುತ್ತಾರೆ. ನಂತರ ಹೋಟೆಲ್ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ನಂತರ ಸಂಜೆಯಾಗುವ ಮುನ್ನವೇ ಗೌರವಯುತವಾಗಿ ರಾಷ್ಟ್ರಧ್ವಜವನ್ನ ಇಳಿಸಲಾಗುತ್ತದೆ. ನಂತರ ಅದನ್ನ ಸುರಕ್ಷಿತವಾಗಿ ಇಡಲಾಗುತ್ತದೆ. ಇದು ಇಲ್ಲಿನ ಮಾಲಿಕರು ಹಾಗೂ ಸಿಬ್ಬಂದಿ ದೇಶಕ್ಕೆ ಪ್ರತಿದಿನ ಗೌರವ ಸಲ್ಲಿಸುವ ಪರಿ.
ಇಷ್ಟಕ್ಕೆಲ್ಲಾ ಕಾರಣ ಇಲ್ಲಿನ ಮಾಲಿಕರಾದ ಹರೀಶ್ ಕುಮಾರ್. ಹರೀಶ್ ಕುಮಾರ್ ಮೂಲತಃ ಮೈಸೂರಿನವರು. ಒಂದು ಹೆಮ್ಮೆಯ ವಿಚಾರ ಅಂದರೆ ಇವರು ಕೃಷಿ ಕುಟುಂಬದಿಂದ ಬಂದವರು. ಒಮ್ಮೆ ಹರೀಶ್ ಕಾಶ್ಮೀರಕ್ಕೆ ಹೋಗಿದ್ದರಂತೆ. ಆಗ ನಮ್ಮನ್ನ ಗಡಿಯಲ್ಲಿ ಕಾಯುವ ಸೈನಿಕರನ್ನ, ಅವರ ಜೀವನವನ್ನ ಕಣ್ಣಾರೆ ಕಂಡಿದ್ದರಂತೆ. ನಮಗಾಗಿ ಅವರು ಹಗಲು-ರಾತ್ರಿಯೆನ್ನದೆ, ಬಿಸಿಲು-ಮಳೆಯೆನ್ನದೆ ದುಡಿಯುತ್ತಾರೆ. ತಮ್ಮ ಆತ್ಮೀಯರು, ಕುಟುಂಬದವರು, ಹೆಂಡತಿ-ಮಕ್ಕಳು, ಮನೆ-ಜನ ಎಲ್ಲವನ್ನೂ ಬಿಟ್ಟು ಬರುತ್ತಾರೆ. ತಮ್ಮ ಜೀವಕ್ಕೆ ಯಾವ ಗ್ಯಾರೆಂಟಿ ಇಲ್ಲದಿದ್ದರೂ ನಮಗಾಗಿ ತಮ್ಮ ಜೀವ ಪಣಕ್ಕಿಡುತ್ತಾರೆ. ಇದನ್ನೆಲ್ಲಾ ನೋಡಿದ ಹರೀಶ್ ನಮ್ಮ ಸೈನಿಕರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡರು. ಆಗ ಮೈಸೂರಿಗೆ ಮರಳಿದ ತಕ್ಷಣ ತಮ್ಮ ಹೋಟೆಲ್ ನಲ್ಲಿ ಈ ದಿನಚರಿಯನ್ನ ಶುರುಮಾಡಿದರು. ಮೊದಮೊದಲು ಈ ಹೊಸ ಆಚರಣೆಯ ಬಗ್ಗೆ ಆಶ್ಚರ್ಯಪಟ್ಟ ಸಿಬ್ಬಂದಿ ದಿನಕಳೆದಂತೆ ಇದೇ ದಿನಚರಿಗೆ ಹೊಂದಿಕೊಂಡರು. ಈಗ ಅಲ್ಲಿನ ಸಿಬ್ಬಂದಿ ಇಂತಹ ಸ್ಥಳದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತಾರೆ. ಇಡೀ ಹೋಟೆಲ್ ಅನ್ನು ಹಳ್ಳಿಯ ಸೊಗಡಿನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಗೋಡೆಗಳ ಮೇಲೆಯೂ ವಿವಿಧ ಚಿತ್ರಗಳನ್ನ ಬಿಡಿಸಲಾಗಿದೆ. ಈ ರೀತಿಯ ವಿನ್ಯಾಸ ಮತ್ತೆಲ್ಲೂ ಇಲ್ಲ. ಈ ಕಾರಣದಿಂದಲೇ ಅದೆಷ್ಟೋ ಜನ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ಸೈನಿಕರು ಹಾಗೂ ನಿವೃತ್ತ ಸೈನಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜೊತೆಗೆ ವರ್ಷಕ್ಕೆ ಒಂದು ಬಾರಿ ಇಡೀ ವರ್ಷದ ಆದಾಯದ ಶೇ.10 ರಷ್ಟನ್ನ ಸೈನಿಕರ ನಿಧಿಗೆ ಕೊಡಲಾಗುತ್ತದೆ. ಇಷ್ಟೆಲ್ಲಾ ಮಾಡಿದರೂ ಕೂ ಈ ಹೋಟೆಲ್ ಮಾಲಿಕ ಹಾಗೂ ಸಿಬ್ಬಂದಿ ಯಾವ ಪ್ರತಿಫಲಾಪೇಕ್ಷೆಯನ್ನೂ ಮಾಡುವುದಿಲ್ಲ.

ಇವರೆನ್ನೆಲ್ಲಾ ನೋಡಿದರೆ ನಮ್ಮ ಮೈ ರೋಮಾಂಚನಗೊಳ್ಳುತ್ತೆ. ವರ್ಷಕ್ಕೆ 2-3 ಬಾರಿ ದೇಶವನ್ನ ನೆನಪಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೋಕಿಗಾಗಿ ತೋರ್ಪಡಿಕೆ ಮಾಡಿಕೊಳ್ಳುವವರು ಇವರನ್ನ ನೋಡಿ ಕಲಿಯಬೇಕಾದದ್ದು ಸಾಕಷ್ಟಿದೆ. ಇವರು ನಮ್ಮ ಮೈಸೂರಿನಲ್ಲಿರುವುದು ನಮ್ಮ ಹೆಮ್ಮೆ. ಕೊನೆ ಮಾತು ನಿಮಗೇ ಗೊತ್ತಲ್ಲ, ನೀವೂ ಮೈಸೂರಿನವರಾಗಿದ್ದರೆ ಇಲ್ಲಿಗೆ ಭೇಟಿ ಕೊಡಿ. ಇಲ್ಲವಾದರೆ ಮುಂದಿನ ಬಾರಿ ಮೈಸೂರಿಗೆ ಬಂದಾಗ ತಪ್ಪದೇ ಅಂಕಲ್ ಲೋಬೋಸ್ ಗೆ ಒಂದು ವಿಸಿಟ್ ಹಾಕಿ. ಹಾ..ಇದಕ್ಕಾಗಿ ಆಗಸ್ಟ್ 15ರ ವರೆಗೂ ಕಾಯಬೇಡಿ.