ಕೊಲಂಬೊ ಓವಲ್ ನಿಂದ ಕಾಣೆಯಾದ ನಾಲ್ವಡಿ ಕೃಷ್ಣರಾಜ ಒಡೆಯರ್.
1 min read
ಭಾರತೀಯರು ಕ್ರಿಕೆಟ್ ಧರ್ಮದವರು. ಬೇರೆ ಯಾವ ಕ್ರೀಡೆಯನ್ನೂ ನೋಡದಷ್ಟು ಕ್ರಿಕೆಟ್ ನೋಡುತ್ತಾರೆ. ಮ್ಯಾಚ್ ಎಂದರೆ ಸಾಕು..ಎಲ್ಲಾ ಕೆಲಸಗಳನ್ನೂ ಬದಿಗಿಟ್ಟಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೆಲ್ಲಾ ಈಗ ಹಲವು ದಶಕಗಳಿಂದ ಶುರುವಾಗಿದೆ ಎಂಬುದು ಸಾಮಾನ್ಯವಾಗಿ ಎಲ್ಲರ ಭಾವನೆ. ಆದರೆ ನಮ್ಮ ದೇಶದಲ್ಲಿ ಅರಸರ ಆಳ್ವಿಕೆಯಿದ್ದ ಕಾಲದಲ್ಲೇ ಕ್ರಿಕೆಟ್ ಅಭಿಮಾನ ನೆಲೆಸಿತ್ತು. ರಾಜರು ಸಹ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಿಸುತ್ತಿದ್ದರು ಎಂಬುದು ಬಹುಪಾಲು ಯಾರಿಗೂ ತಿಳಿಯದ ವಿಚಾರ. ಆ ರಾಜರು ನಮ್ಮ ಮೈಸೂರಿನ ನಿರ್ಮಾತೃರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬುದು ನಮಗೆ ಹೆಮ್ಮೆಯ ಸಂಗತಿ..! ಹೌದು..ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ರಾಜ್ಯದ ಆಡಳಿತದಲ್ಲಿ ಇದ್ದಷ್ಟೇ ಆಸಕ್ತಿ ಕ್ರೀಡೆಯಲ್ಲೂ ಇತ್ತು ಎಂದು ಕಾಣುತ್ತೆ. ಆದರೆ ಅದು ಬಹಿರಂಗವಾಗಿಲ್ಲ ಅಷ್ಟೇ. ಇದಕ್ಕೆ ಸಾಕ್ಷಿ ಶ್ರೀಲಂಕಾದಲ್ಲಿರುವ Tamil Union Cricket Club.

ಇದರ ಮೊದಲ ಪೋಷಕರು ನಾಲ್ವಡಿಯವರು:
ಶ್ರೀಲಂಕಾದ ಪ್ರಮುಖ ಕ್ರಿಕೆಟ್ ಕ್ಲಬ್ ಗಳ ಪೈಕಿ ಒಂದಾದ ಹಾಗೂ ಕೊಲಂಬೋ ಓವಲ್ ಕ್ರೀಡಾಂಗಣದ ಮಾಲಿಕ ಸಂಸ್ಥೆಯಾದ ತಮಿಳ್ ಯೂನಿಯನ್ ಕ್ರಿಕೆಟ್ ಕ್ಲಬ್ ಗೆ ಮೊದಲ ಪೋಷಕರು ನಾಲ್ವಡಿ ಕೃಷ್ಣರಾಜ ಒಡಯರ್ ರವರು. ಶ್ರೀಲಂಕಾ ದೇಶಕ್ಕೆ ಆಡುವ ಮುಂಚೆ ಅದೆಷ್ಟೋ ಜನ ಪ್ರಮುಖ ಆಟಗಾರರು ತಮಿಳ್ ಯೂನಿಯನ್ ಕ್ರಿಕೆಟ್ ಕ್ಲಬ್ ಗಾಗಿ ಆಟವಾಡಿದ್ದಾರೆ. ಈ ಸ್ಟೇಡಿಯಂನಲ್ಲಿ ಬಹಳಷ್ಟು ಪ್ರಮುಖ ಪಂದ್ಯಗಳೂ ನಡೆದಿವೆ. ಇದು ಒಂದು ಶತಮಾನದ ಹಿಂದೆಯೇ ಬಹಳ ಪ್ರಸಿದ್ಧವಾಗಿದ್ದ ಸಂಸ್ಥೆ. ಆಗ..ಅಂದರೆ 1923ರಿಂದ 1940ರವರೆಗೂ (ವಿಧಿವಶರಾಗುವವರೆಗೂ) ನಾಲ್ವಡಿಯವರು ಈ ತಮಿಳ್ ಯೂನಿಯನ್ ನ ಪೋಷಕರಾಗಿದ್ದರು. ಇದರ ಪೋಷಕರ ಸಾಲಿನಲ್ಲಿ ಬರುವ ಮೊದಲ ಹೆಸರು ಅವರದೇ ಎಂಬುದು ನಮಗೆ ಹೆಮ್ಮೆಯ ವಿಚಾರ. ಶ್ರೀಲಂಕಾದವರು, ತಮಿಳರ ಹೊರತಾಗಿ ಈ ಕ್ಲಬ್ ನಲ್ಲಿ ಭಾಗಿಯಾಗಿದ್ದ ಏಕೈಕ ವ್ಯಕ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್. ಇವರ ಗೌರವಾರ್ಥವಾಗಿ 120 ವರ್ಷ ಹಳೆಯ ಈ ಕ್ರೀಡಾಂಗಣದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಬೃಹದಾಕಾರದ ಚಿತ್ರವನ್ನು ಕೂಡ ಇಡಲಾಗಿತ್ತು.

ಇದ್ದಕ್ಕಿದ್ದಂತೆ ಮರೆಯಾಗಿದೆ ನಾಲ್ವಡಿಯವರ ಭಾವಚಿತ್ರ:
ಹಲವಾರು ದಶಕಗಳಿಂದ ಇಲ್ಲೇ ಇದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಬೃಹದಾಕಾರದ ಭಾವಚಿತ್ರ ಈಗ ಮರೆಯಾಗಿದೆ. ಹೌದು.. ಇತ್ತೀಚೆಗೆ ಶ್ರೀಲಂಕಾದ ಈ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದ ಹಿರಿಯ ಪತ್ರಕರ್ತ ಡಿ.ಪಿ.ಸತೀಶ್ ರವರು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲಿಗೆ ಹೋದಾಗ ನಾಲ್ವಡಿಯವರ ಭಾವಚಿತ್ರ ಕಾಣಿಸದ ಕಾರಣ ಅಲ್ಲಿಯೇ ಇದ್ದವರನ್ನು ಅದರ ಬಗ್ಗೆ ಸತೀಶ್ ವಿಚಾರಿಸಿದರಂತೆ. ಆಗ ತಿಳಿದುಬಂದ ವಿಚಾರವೆಂದರೆ ಇತ್ತೀಚೆಗೆ ಕೊಲಂಬೊ ಓವಲ್ ನ ರಿಪೇರಿ ಹಾಗೂ ಮರುನಿರ್ಮಾಣ ಕಾರ್ಯ ಮಾಡುತ್ತಿದ್ದಾಗ ಆ ಭಾವಚಿತ್ರ ಕಾಣೆಯಾಗಿದೆ ಎಂಬುದು. ಕನ್ನಡಿಗರೊಬ್ಬರು ಕೊಲಂಬೊ ಓವಲ್ ಗೆ ಬರುತ್ತಾರೆ, ಇದರ ಬಗ್ಗೆ ವಿಚಾರಿಸುತ್ತಾರೆ ಎಂದು ಅವರು ಊಹಿಸಿರಲಿಲ್ಲ. ಆದರೆ ಇಷ್ಟೆಲ್ಲಾ ಆದಮೇಲೆ ಸತೀಶ್ ರವರನ್ನು ಕ್ಷಮೆಯಾಚಿಸಿದ್ದಾರೆ.

ಈಗ ಅಲ್ಲಿನವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭಾವಚಿತ್ರವೊಂದನ್ನು ತರಿಸಿಕೊಡಬೇಕೆಂದೂ, ಹೊಸದಾಗಿ ಕಾರ್ಯಕ್ರಮವೊಂದನ್ನು ಮಾಡಿ ಅದನ್ನು ಮತ್ತೆ ಇಲ್ಲಿರಿಸುತ್ತೇವೆಂದೂ ಹೇಳಿದ್ದಾರೆ. ಅದರ ಜವಾಬ್ದಾರಿ ಹಿರಿಯ ಪತ್ರಕರ್ತ ಸತೀಶ್ ಅವರದ್ದು. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಹೊಸದೊಂದು ಭಾವಚಿತ್ರವನ್ನು ಕಳುಹಿಸಿಕೊಡಲಿ. ಈ ಮೂಲಕ ನಮ್ಮ ಅರಸರ ಹೆಸರು ಗಡಿಯಾಚೆಯಲ್ಲೂ ಅಮರವಾಗಿರಲಿ. ಇದೆಲ್ಲದರ ಹೊರತಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಶ್ರೀಲಂಕಾದಲ್ಲೂ ಕ್ರೀಡೆಯನ್ನು ಪೋಷಿಸಿದ್ದರು ಎಂಬುದರ ಬಗ್ಗೆ ನಾವು ಹೆಮ್ಮೆ ಪಡಲೇಬೇಕು..