Tue. Jan 26th, 2021

Namma Mysuru

History, News, Stories and much more

ಒಂದು ಅರಮನೆ, ಮೂರು ರೂಪ. ಭಾಗ-1

1 min read
435 Views

ಅದು 1930ರ ದಶಕ. ಆಗಷ್ಟೇ ದೇಶದಾದ್ಯಂತ ಚಲನಚಿತ್ರೋದ್ಯಮ ಚಿಗುರೊಡೆದಿತ್ತು. ಕನ್ನಡಿಗರು ಚಿತ್ರೋದ್ಯಮದತ್ತ ಮುಖ ಮಾಡಿದ್ದರು. ಏಕೆಂದರೆ ಆಗ ಜನರಿಗೆ ಮನರಂಜನೆಯ ಪರ್ಯಾಯ ವ್ಯವಸ್ಥೆಯೊಂದು ಬೇಕಿತ್ತು. ಸಮಾಜ ಹೊಸತನಕ್ಕೆ ಹಾತೊರೆಯುತ್ತಿತ್ತು. 1934ರಲ್ಲಿ ತೆರೆಕಂಡ ಸತಿ ಸುಲೋಚನ ಚಿತ್ರ ಕನ್ನಡದ ಮೊದಲ ಚಲನಚಿತ್ರ. ಜೊತೆಗೆ ಆಗಿನ ಮೈಸೂರು ರಾಜ್ಯದಲ್ಲಿ ತೆರೆಕಂಡ ಪ್ರಪ್ರಥಮ ಚಿತ್ರ. ಕನ್ನಡ ಚಿತ್ರಗಳ ಬಹುಪಾಲು ಚಿತ್ರೀಕರಣಗಳು ನಡೆಯುತ್ತಿದ್ದುದು ಬೆಂಗಳೂರಿನಲ್ಲಿ, ತಪ್ಪಿದರೆ ಮೈಸೂರಿನಲ್ಲಿ. ಬೆಂಗಳೂರು ಚಿತ್ರರಂಗದ ದೇಹವಾದರೆ ಮೈಸೂರು ಅದರ ಆತ್ಮ ಎಂಬ ಮಾತು ಇದಕ್ಕೆ ಪೂರಕವಾಗಿದೆ. ಆಗ ಚಿತ್ರೀಕರಣ ಮೈಸೂರಿನಲ್ಲಿ ಆಗುತ್ತಿದ್ದುದಕ್ಕೆ ಕಾರಣ ಮೈಸೂರಿನಲ್ಲಿದ್ದ ಅದ್ಭುತ ಸ್ಥಳಗಳು. ಆಗಿನ್ನೂ ಚಿತ್ರೀಕರಣಕ್ಕೆ ಆಧುನಿಕ ಕ್ಯಾಮರಾಗಳು ಹಾಗೂ ಮತ್ತಿತರ ಉಪಕರಣಗಳನ್ನು ಬಳಸುವ ಪದ್ಧತಿ ಚಾಲ್ತಿಯಲ್ಲಿರಲಿಲ್ಲ. ಅವುಗಳು ಇನ್ನೂ ನಮ್ಮ ಪ್ರಾಂತ್ಯದಲ್ಲಿ ಜನಪ್ರಿಯವಾಗಿರಲಿಲ್ಲ. ಆದ್ದರಿಂದ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಒಳಾಂಗಣದಲ್ಲೇ ಎಲ್ಲಾ ವ್ಯವಸ್ಥೆ ಮಾಡಿ, ಬೇಕಾದ ಮನೆ, ಆಸ್ಪತ್ರೆ, ಶಾಲೆ ಎಲ್ಲದರ ಅಣಕು ಕೂಡ ಇಲ್ಲಿ ತಯಾರಿರುತ್ತಿತ್ತು. ಆದ್ದರಿಂದಲೇ ಇಲ್ಲಿ ಚಿತ್ರೀಕರಣ ಮಾಡಲು ಸುಲಭವಾಗುತ್ತಿತ್ತು.


ಮೈಸೂರಿನಲ್ಲಿತ್ತು ಅತ್ಯುನ್ನತ ಸ್ಟುಡಿಯೋ:
ಮೈಸೂರಿನಲ್ಲಿದ್ದ ಪ್ರಮುಖ ಸ್ಟುಡಿಯೋ ಎಂದರೆ ಪ್ರೀಮಿಯರ್ ಸ್ಟುಡಿಯೋ. ಆಗಿನ ಕಾಲಕ್ಕೆ ಏಷಿಯಾದಲ್ಲೇ ಎರಡನೇ ಅತಿದೊಡ್ಡ ಸ್ಟುಡಿಯೋ ಆಗಿದ್ದ ಪ್ರೀಮಿಯರ್ ಸ್ಟುಡಿಯೋ ಮೈಸೂರಿನ ಹೆಮ್ಮೆ. ಇದರ ಹಿಂದೆ ಕುತೂಹಲಕಾರಿ ಇತಿಹಾಸವೊಂದಿದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೊದಲಿಗೆ ಅರಮನೆ ನಗರಿಯಲ್ಲಿನ ಒಂದು ಅರಮನೆಯಾಗಿತ್ತು. ಹೌದು..ಮೈಸೂರನ್ನು ಅರಮನೆಗಳ ನಗರಿ ಎಂದು ಕರೆಯುವುಯುದಕ್ಕೆ ಕಾರಣವೆಂದರೆ ಮೈಸೂರಿನಲ್ಲಿರುವ ಬಹಳಷ್ಟು ಅರಮನೆಗಳು. ಅದರಲ್ಲೊಂದು ಹುಣಸೂರು ರಸ್ತೆಯಲ್ಲಿ ನಿರ್ಮಾಣವಾಗಿದ್ದ ಚಿತ್ತರಂಜನ್ ಅರಮನೆ. 1916ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಸಹೋದರಿಗಾಗಿ ನಿರ್ಮಿಸಿಕೊಟ್ಟ ಅರಮನೆ ಇದು. ಆಗಿನ ಕಾಲದಲ್ಲಿ ಮೈಸೂರಿನ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ, 1950ರ ದಶಕದಲ್ಲಿ ಬಸವರಾಜಯ್ಯ ಎಂಬುವವರಿಗೆ ಈ ಸ್ಥಳವನ್ನು ರಾಜಮನೆತನದವರು ಮಾರಾಟ ಮಾಡಿದರು. ಆಗ ಅಲ್ಲಿ ತಲೆ ಎತ್ತಿದ್ದೇ ಪ್ರೀಮಿಯರ್ ಸ್ಟುಡಿಯೋ. ಇಲ್ಲಿ ನೂರಾರು ಚಿತ್ರ, ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿತ್ತು. 7 ಅಂತಸ್ತುಗಳಿದ್ದ ಈ ಸ್ಟುಡಿಯೋದಲ್ಲಿ ಪ್ರತಿ ಅಂತಸ್ತು 10-12 ಸಾವಿರ ಚದರ ಅಡಿ ಇತ್ತು. ಒಂದೊಂದು ಅಂತಸ್ತಿಗೂ A,B,C,D ಎಂದು ಕ್ರಮವಾಗಿ ಹೆಸರಿಡಲಾಗಿತ್ತು. ಆದರೆ ಏಳನೇ ಅಂತಸ್ತಿಗೆ ಮಾತ್ರ G ಎಂದು ಹೆಸರಿಡುವ ಬದಲು ಎರಡನೆಯದಕ್ಕೆ B1, ಮೂರನೆಯದಕ್ಕೆ B2 ಎಂದು ಹೆಸರಿಡಲಾಗಿತ್ತಂತೆ. ಏಕೆಂದರೆ ಏಳನೇ ಅಕ್ಷರವಾದ G ಅಶುಭ ಎಂದು ಇಲ್ಲಿನ ಮಾಲಿಕ ಬಸವರಾಜಯ್ಯ ನಂಬಿದ್ದರಂತೆ. ಮೊದಮೊದಲು ಇಲ್ಲಿ ವರ್ಷಕ್ಕೆ ಮೂರ್ನಾಲ್ಕು ಚಿತ್ರಗಳ ಚಿತ್ರೀಕರಣವಷ್ಟೇ ನಡೆಯುತ್ತಿತ್ತು. ಆದರೆ ಇಲ್ಲಿ ಮಾಡುವ ಚಿತ್ರೀಕರಣಕ್ಕೆ ಸಬ್ಸಿಡಿ ಕೊಡಲು ಶುರು ಮಾಡಿದಾಗಿನಿಂದ ಸ್ಟುಡಿಯೋದಲ್ಲಿ ಹೆಚ್ಚು ಚಿತ್ರೀಕರಣಗಳು ನಡೆಯಲು ಶುರುವಾದವು. ಇಡೀ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಈ ಸ್ಟುಡಿಯೋದಲ್ಲಿ ಎಲ್ಲಾ ಭಾಷೆಯ ಚಿತ್ರಗಳು, ಧಾರಾವಾಹಿಗಳು ಚಿತ್ರೀಕರಣಗೊಳ್ಳುತ್ತಿದ್ದವು. ಅದು ಅಕ್ಷರಶಃ ಪ್ರೀಮಿಯರ್ ಸ್ಟುಡಿಯೋದ ಸುವರ್ಣಯುಗ..!

ಬೆಂಕಿಗಾಹುತಿಯಾದ ಪ್ರೀಮಿಯರ್ ಸ್ಟುಡಿಯೋ:
ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಮೇಲೇರಿದ್ದು ಕೆಳಗಿಳಿಯಲೇಬೇಕೆಂಬ ಪ್ರಕೃತಿ ನಿಯಮವೋ ಅಥವಾ ಎಲ್ಲವೂ ಒಂದು ದಿನ ಮಣ್ಣಲ್ಲಿ ಮಣ್ಣಾಗುವ ಕ್ರಮವೋ ಗೊತ್ತಿಲ್ಲ. ಆದರೆ ಪ್ರೀಮಿಯರ್ ಸ್ಟುಡಿಯೋಗೆ ದೊಡ್ಡದೊಂದು ಆಘಾತ ಕಾದಿತ್ತು. ಅದೆಷ್ಟೋ ಜನರಿಗೆ ಜೀವನ ಕಟ್ಟಿಕೊಟ್ಟಿದ್ದ, ಚಿತ್ರೀಕರಣಗಳಿಗೆ ಮನೆಯಾಗಿದ್ದ ಈ ಸ್ಥಳಕ್ಕೆ 1989ರಲ್ಲಿ ಬೆಂಕಿ ತಗುಲಿತ್ತು. ಆಗ 1989 ಫೆಬ್ರವರಿ 8. ಕೆಲವು ತಿಂಗಳುಗಳ ಹಿಂದಷ್ಟೇ ಲಲಿತ ಮಹಲ್ ಪ್ಯಾಲೆಸ್ ನಲ್ಲಿ “ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್” ಎಂಬ ಟಿಪ್ಪು ಸುಲ್ತಾನ್ ಜೀವನಾಧಾರಿತ ಧಾರಾವಾಹಿಗೆ ಚಾಲನೆ ನೀಡಲಾಗಿತ್ತು. ಅದಕ್ಕಾಗಿ ಬಾಂಬೆಯಿಂದ 100ಕ್ಕೂ ಹೆಚ್ಚು ಜನ ತಾಂತ್ರಿಕ ಸಹಾಯಕರನ್ನು ಕರೆಸಿಕೊಳ್ಳಲಾಗಿತ್ತು. ಅಂದಾಜು 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ 52 ಕಂತಿನ ಈ ಧಾರಾವಾಹಿಯ ನಿರ್ದೇಶಕ ಹಾಗೂ ನಾಯಕ ಸಂಜಯ್ ಖಾನ್ ಅಂದು ಪ್ರೀಮಿಯರ್ ಸ್ಟುಡಿಯೋದಲ್ಲಿ ಎರಡನೇ ಕಂತಿನ ಚಿತ್ರೀಕರಣ ನಡೆಸುತ್ತಿದ್ದರು.

ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್

ಅದು ಟಿಪ್ಪುವಿನ ಮದುವೆ ದೃಶ್ಯ. ಅದಕ್ಕಾಗಿ ಅಗ್ನಿ ತಯಾರಾಗಿತ್ತು. ಜೊತೆಗೆ ಕೆಲವು ಹೂಕುಂಡಗಳನ್ನು ಹಚ್ಚಲಾಯಿತು. ಸ್ಟುಡಿಯೋದ C ರೂಂನಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಹೂಕುಂಡ, ಬೆಂಕಿ ಎಲ್ಲವೂ ವಿದ್ಯುತ್ ಗೆ ತಗುಲಿ ಆದ ಅವಘಡ ಇದು. ಅಂದು ನಡೆದ ಈ ಅನಾಹುತ ಎಷ್ಟು ತೀವ್ರವಾಗಿತ್ತು ಎಂದರೆ ಇದರಲ್ಲಿ ಒಟ್ಟು ಸತ್ತವರ ಸಂಖ್ಯೆ 62. ನೂರಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದರು. ಸ್ವತಃ ಸಂಜಯ್ ಖಾನ್ ತೀವ್ರ ಅಸ್ವಸ್ಥರಾಗಿ 13 ತಿಂಗಳು ಆಸ್ಪತ್ರೆಯಲ್ಲಿದ್ದು, 72 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ನಂತರ ಸಂಜಯ್ ಖಾನ್ ಚೇತರಿಸಿಕೊಂಡರು, ಮೃತರ ಕುಟುಂಬಗಳಿಗೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಯಿತು.

ಬೆಂಕಿಗಾಹುತಿಯಾದ ಪ್ರೀಮಿಯರ್ ಸ್ಟುಡಿಯೋ

ನೇಪಥ್ಯಕ್ಕೆ ಸರಿದ ಪ್ರೀಮಿಯರ್ ಸ್ಟುಡಿಯೋ:
ಇದರಿಂದ ಅತ್ಯಂತ ನಷ್ಟಕ್ಕೊಳಗಾಗಿದ್ದು ಪ್ರೀಮಿಯರ್ ಸ್ಟುಡಿಯೋ. ಈ ಅಗ್ನಿ ಅವಘಡದಿಂದ ಬಹುಪಾಲು ಕಟ್ಟಡ ಸುಟ್ಟು ಕರಕಲಾಯಿತು. ಇದರಿಂದ ಮಾಲಿಕ ಬಸವರಾಜಯ್ಯ ಅತಿದೊಡ್ಡ ನಷ್ಟ ಅನುಭವಿಸಿದರು. ಅದೂ ಅಲ್ಲದೆ ಆ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಸ್ಟುಡಿಯೋ ಬಳಸುವುದನ್ನು ನಿರ್ದೇಶಕರು ಕಡಿಮೆ ಮಾಡಿದ್ದರು. ಏನಿದ್ದರೂ ಹೊರಾಂಗಣದಲ್ಲೇ ಚಿತ್ರೀಕರಣ ಮಾಡುತ್ತಿದ್ದರು. ಆದ್ದರಿಂದ ಇಲ್ಲಿ ಚಿತ್ರೀಕರಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಕೊನೆಗೆ ಈ ಸ್ಟುಡಿಯೋವನ್ನು ಮುಚ್ಚಲಾಯಿತು. ಬರೋಬ್ಬರಿ 20 ವರ್ಷ ಮುಚ್ಚಿಹೋಗಿದ್ದ ಈ ಸ್ಟುಡಿಯೋವನ್ನು ಇತ್ತೀಚೆಗೆ, ಅಂದರೆ 2018ರ ಸೆಪ್ಟೆಂಬರ್ 21ರಂದು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು. ಈಗ ಪ್ರೀಮಿಯರ್ ಸ್ಟುಡಿಯೋ ಮೈಸೂರಿನ ಭವ್ಯ ಇತಿಹಾಸದ ಒಂದು ಪಾತ್ರವಷ್ಟೇ.

ಪ್ರೀಮಿಯರ್ ಸ್ಟುಡಿಯೋ

ಹಾಗಂತ ಈಗ ಈ ಜಾಗ ಖಾಲಿಯಿಲ್ಲ. ಇಲ್ಲಿ ಅದ್ಭುತವಾದ ಮತ್ತೊಂದು ಕಟ್ಟಡ ನಿರ್ಮಾಣವಾಗಿದೆ. ಅದರಲ್ಲೂ ಹಲವಾರು ವಿಶೇಷತೆಗಳಿವೆ. ಅದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಅದರ ಬಗ್ಗೆ ಸವಿಸ್ತಾರವಾಗಿ ಮುಂದಿನ ವಾರ ತಿಳಿಯೋಣ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!