Mon. Jan 25th, 2021

Namma Mysuru

History, News, Stories and much more

ಶತಮಾನದ ಈ ‘ರಾಜ’ ಮಾರುಕಟ್ಟೆಗೆ ಅಪಾಯ..?!

1 min read
376 Views

ಹಬ್ಬಗಳು ಬಂದರೆ ಸಾಕು..ಈ ಜಾಗ ಗಿಜಿಗುಡುತ್ತಿರುತ್ತದೆ. ಹೂವುಗಳು ಘಮ್ ಎಂದು ಸುವಾಸನೆ ಬೀರುತ್ತಿರುತ್ತದೆ. ಹಣ್ಣು, ಕಾಯಿ, ತರಕಾರಿ ಗುಡ್ಡೆ ಬಿದ್ದು ಗ್ರಾಹಕರನ್ನು ಆಕರ್ಷಿಸುತ್ತಿರುತ್ತವೆ. ಅರಿಶಿನ, ಕುಂಕುಮ, ಪೂಜೆ ಸಾಮಗ್ರಿ ಇತ್ಯಾದಿಗಳು ಪೂಜೆಯ ಘಮವನ್ನು ತಂದೊಡ್ಡುತ್ತವೆ. ಇಷ್ಟೆಲ್ಲಾ ಕಾಣಸಿಗೋದು ಬೇರೆಲ್ಲೂ ಅಲ್ಲ. ಮೈಸೂರಿನ ಮಾರುಕಟ್ಟೆಯಲ್ಲಿ. ಅದು ದೇವರಾಜ ಮಾರಿಕಟ್ಟೆಯಲ್ಲಿ. ಬೇರೆ ಊರಲ್ಲೆಲ್ಲಾ ಶನಿವಾರ ಸಂತೆ, ಸೋಮವಾರ ಸಂತೆ ಇದ್ರೆ ನಮ್ಮೂರಲ್ಲಿ ಮಾತ್ರ ಪ್ರತಿದಿನವೂ ಸಂತೆ. ಅದನ್ನ ನೋಡೋದೆ ಕಣ್ಣಿಗೆ ಹಬ್ಬ. ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ವ್ಯಾಪಾರ ಮಾಡೋ ವ್ಯಾಪಾರಿಗಳು. ಅದೇ ರೀತಿ ಯಾವುದನ್ನೂ ಲೆಕ್ಕಿಸದೇ ಸಾಮಗ್ರಿ ಕೊಳ್ಳಲು ಬರೋ ಗ್ರಾಹಕರು. ಇದು ದೇವರಾಜ ಮಾರುಕಟ್ಟೆಯ ಖಾಯಂ ಚಿತ್ರಣ. ಮೈಸೂರಿನ ಬಹುಪಾಲು ಜನ ಈಗಲೂ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಇಲ್ಲಿ ಬರುತ್ತಾರೆ. ಅಷ್ಟೂ ದಿನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನ ಕೊಂಡು ಹೋಗುತ್ತಾರೆ. ಹಬ್ಬದ ಸಂದರ್ಭ ಬಂದರೆ ರೇಟ್ ಹೆಚ್ಚಾಗುತ್ತೆ ಅಂತ ಒಂದು ವಾರ ಮುಂಚೆ ಬಂದು ಶಾಪಿಂಗ್ ಮಾಡಿ ಹೋಗುತ್ತಾರೆ.

ದೇವರಾಜ ಮಾರುಕಟ್ಟೆ

ದೇವರಾಜ ಮಾರುಕಟ್ಟೆಗೆ ಇದೆ ಶತಮಾನದ ಇತಿಹಾಸ:
ಈ ದೇವರಾಜ ಮಾರುಕಟ್ಟೆ ಇಂದು ನೆನ್ನೆಯದಲ್ಲ. ಇದಕ್ಕೆ ಬರೋಬ್ಬರಿ ನೂರು ವರ್ಷದ ಇತಿಹಾಸ ಇದೆ. ಮೊದಲು ಈಗಿನಂತೆ ಇದು ದೊಡ್ಡ ಮಾರುಕಟ್ಟೆಯಾಗಿರಲಿಲ್ಲ. ಅದು ಸಂತೆಯಾಗಿತ್ತು ಅಷ್ಟೇ. ಪೂರ್ಣಯ್ಯ ನಾಲೆ ಈ ಜಾಗದ ಮೂಲಕವೇ ಹರಿದು ಹೋಗುತ್ತಿತ್ತು ಎಂಬ ಇತಿಹಾಸವೂ ಈ ಸ್ಥಳಕ್ಕಿದೆ. ಟಿಪ್ಪು ಸುಲ್ತಾನನ ಕಾಲದಲ್ಲೇ ಈ ಮಾರುಕಟ್ಟೆ ಅಸ್ತಿತ್ವದಲ್ಲಿತ್ತು ಎಂದು ಬಲ್ಲ ಮೂಲಗಳು ತಿಳಿಸುತ್ತವೆ. ನಂತರ ಒಂಬತ್ತನೇ ಚಾಮರಾಜ ಒಡೆಯರ್ ಕಾಲದಲ್ಲಿ ಈ ಮಾರುಕಟ್ಟೆಯನ್ನ ಸ್ಥಾಪನೆ ಮಾಡಲಾಯಿತು, ಅಂದರೆ ಇಲ್ಲಿ ಅಸ್ತಿತ್ವದಲ್ಲಿದ್ದ ಸಂತೆಗೆ ಮಾರುಕಟ್ಟೆ ರೂಪ ಕೊಡಲಾಯ್ತು. ಆಗಲೇ ಚಾಮರಾಜ ಒಡೆಯರ್ ರವರು ಇದಕ್ಕೆ ಮಾಲ್ ನಂತಹ ಸ್ಪರ್ಷ ಕೊಟ್ಟಿದ್ದರು. ಹೂವಿಗೆ, ಹಣ್ಣಿಗೆ, ತರಕಾರಿಗೆ, ಪೂಜಾ ಸಾಮಗ್ರಿಗಳಿಗೆ, ಮಾಂಸಾಹಾರಕ್ಕೆ ಎಲ್ಲಕ್ಕೂ ಪ್ರತ್ಯೇಕ ಜಾಗಗಳನ್ನ ಮಾಡಲಾಗಿತ್ತು. ಇದೆಲ್ಲಾ ನಡೆದಿದ್ದು 1910ರಲ್ಲಿ. ನಂತರ 1925ರಲ್ಲಿ ಈ ಮಾರುಕಟ್ಟೆಗೆ ದೇವರಾಜ ಮಾರುಕಟ್ಟೆ ಎಂದು ಹೆಸರಿಸಲಾಯ್ತು. ಆಗಿನಿಂದಲೇ ಇಲ್ಲಿನ ಸುತ್ತಮುತ್ತಲಿನ ಏರಿಯಾಗಳನ್ನು ದೇವರಾಜ ಮೊಹಲ್ಲಾ ಎಂದು ಕರೆಯಲು ಶುರುಮಾಡಲಾಯ್ತು.

ಮಾರುಕಟ್ಟೆಯ ಒಳಾಂಗಣ
ಪೂಜಾ ಸಾಮಗ್ರಿ

ಇದು ವಿದೇಶಿ ಮಾದರಿಯಲ್ಲಿರುವ ಮಾರುಕಟ್ಟೆ:
ಬರುಬರುತ್ತಾ ಈ ಮಾರುಕಟ್ಟೆ ಮೇಲೆ ಒತ್ತಡ ಹೆಚ್ಚಾಗುತ್ತಾ ಬಂತು. ಇಡೀ ಮೈಸೂರಿಗೆ ಇದ್ದಿದ್ದು ಇದೊಂದೇ ಮಾರುಕಟ್ಟೆಯಾದ್ದರಿಂದ ಒಡೆಯರ್ ರವರು 1927ರಲ್ಲಿ ಮಂಡಿ ಹಾಗೂ 1928ರಲಲ್ಲಿ ವಾಣಿವಿಲಾಸ್ ಮಾರುಕಟ್ಟೆಯನ್ನ ಪ್ರಾರಂಭ ಮಾಡಿದರು. ಈ ದೇವರಾಜ ಮಾರುಕಟ್ಟೆಯನ್ನ ನಿರ್ಮಿಸಿರುವುದು ಮುಂಬೈನ ಕ್ರಾಫೋರ್ಡ್, ಬೆಂಗಳೂರಿನ ರಸ್ಸೆಲ್ ಹಾಗೂ ಟ್ರಿವೇಂಡ್ರಮ್ ನ ಕೊನೆಮರಾ ಮಾರುಕಟ್ಟೆಗಳ ಶೈಲಿಯಲ್ಲಿ. ಆಗಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಆದ್ಯತೆಯಿತ್ತು. ಆದ್ದರಿಂದ ಅಲ್ಲಲ್ಲಿ ನಲ್ಲಿಗಳನ್ನ ಇರಿಸಲಾಗಿತ್ತು. ಕಾಲಕಾಲಕ್ಕೆ ಸ್ವಚ್ಛ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗಿತ್ತು. ಸಾರ್ಜೆಂಟ್ ಒಬ್ಬನನ್ನ ಇಲ್ಲಿಗೆ ನೇಮಿಸಿ ಇಲ್ಲಿನ ಮೇಲುಸ್ತುವಾರಿ ಜವಾಬ್ದಾರಿಯನ್ನ ನೀಡಲಾಗಿತ್ತು. ಆಗಿನ ಕಾಲದಲ್ಲೂ ಕೂಡಾ ಎಷ್ಟು ಚಂದವಾಗಿ ಇದನ್ನು ನಿರ್ಮಿಸಲಾಗಿತ್ತು ಎಂದರೆ ಒಳಚರಂಡಿ ಅಥವಾ ಚಾವಡಿ ಸಮಸ್ಯೆ ಕಾಣಿಸಿಕೊಂಡಿಲ್ಲ.
ಈಗ ದೇವರಾಜ ಮಾರುಕಟ್ಟೆ ಹೇಗಿದೆ ಎಂಬುದನ್ನ ಮೈಸೂರಿಗರಿಗೆ ಹೇಳಬೇಕಿಲ್ಲ. ಆದರೆ ನೀವು ಬೇರೆ ಊರಿನವರಾಗಿದ್ದಾರೆ ಒಮ್ಮ ತಪ್ಪದೇ ಇಲ್ಲಿಗೆ ಭೇಟಿಕೊಡಿ. ಇಷ್ಟು ಸುವ್ಯವಸ್ಥಿತವಾದ ಮಾರುಕಟ್ಟೆ ಮತ್ತೆಲ್ಲೂ ಇಲ್ಲ ಎಂಬ ನಿಲುವಿಗೆ ನೀವೇ ಬರುತ್ತೀರ. ಅದೇನೇ ಆದರೂ ಈ ಸ್ಥಳವೂ ಅಪಾಯಗಳನ್ನ ಎದುರಿಸದೇ ಇಲ್ಲ. ಇಲ್ಲಿಗೆ 5 ಬಾರಿ ಬೆಂಕಿ ಬಿದ್ದಿದೆ, ಜೊತೆಗೆ ಒಮ್ಮೆ ಇಲ್ಲಿನ ಕಚೇರಿಯ ಗೋಡೆ ಕುಸಿತಗೊಂಡಿದೆ. ಅಂತಹ ಸಂದರ್ಭಗಳಲ್ಲಿ ಮುಂಬೈನ ಸುಣ್ಣ & ಮರಳು ಬಳಸಿಕೊಂಡೇ ಇದನ್ನ ಪಾರಂಪರಿಕತೆಗೆ ಧಕ್ಕೆ ಬಾರದಂತೆ ಮರುನಿರ್ಮಾಣ ಮಾಡಲಾಗಿದೆ. ಇದರ ಉಸ್ತುವಾರಿ ವಹಿಸಿಕೊಂಡಿದ್ದು ಮುಂಬೈ ಮೂಲದ ಸವಾನಿ ಕನ್ಸ್ ಟ್ರಕ್ಷನ್ ಕಂಪನಿ. ಪ್ರಸ್ತುತ ದೇವರಾಜ ಮಾರುಕಟ್ಟೆ ಪಾಲಿಕೆ ಸ್ವಾಮ್ಯದಲ್ಲಿದೆ. ಇದರ ಮೇಲುಸ್ತುವಾರಿ ವಹಿಸಲು ಮಾರುಕಟ್ಟೆ ಒಳಗೇ ಕಚೇರಿ ಇದೆ. ಇಲ್ಲಿಗೆ ಇರುವ ಎರಡು ದ್ವಾರಗಳ ಉದ್ದೇಶ ಎಂದರೆ ಒಂದು ಹೊರಹೋಗುವುದಕ್ಕೆ ಹಾಗೂ ಮತ್ತೊಂದು ಇಡೀ ಮಾರುಕಟ್ಟೆ ಸುತ್ತಿ ವಾಪಸ್ಸಾಗುವುದಕ್ಕೆ. ದೇವರಾಜ ಮಾರ್ಕೆಟ್ ನಲ್ಲಿ 1502 ಮಳಿಗೆಗಳಿವೆ, ಅದರಲ್ಲಿ ಬಾಡಿಗೆಯದ್ದು 80. ಜೊತೆಗೆ ದಿನಬಾಡಿಗೆ ಕೊಡುವವು 700. ಇಲ್ಲಿನ ಸ್ಥಳವನ್ನ ಹಾಗೂ ಸ್ಥಿತಿಗತಿಗಳನ್ನ ಪರಿಶೀಲನೆ ಮಾಡಿರುವ ಸಂಶೋಧಕರು ದೇವರಾಜ ಮಾರುಕಟ್ಟೆ ಇನ್ನೂ 50 ವರ್ಷ ಹೀಗೇ ಇರುತ್ತೆ ಎಂದು ಹೇಳಿದ್ದಾರೆ. ಇದು ಮೈಸೂರಿಗರಿಗೆ ಹೆಮ್ಮೆಯ ಸಂಗತಿಯಲ್ಲದೇ ಮತ್ತೇನು ಹೇಳಿ..?

ಆದರೆ ದುರದೃಷ್ಟವಶಾತ್ ಹೈಕೋರ್ಟ್ ಕುಸಿತವಾಗಿದ್ದ ಜಾಗವನ್ನು ಕೆಡವಿ ಮರುನಿರ್ಮಾಣ ಮಾಡಬೇಕು ಎಂದು ಆದೇಶವಿತ್ತಿದೆ. ಹೀಗೇ ಇದ್ದರೆ ಮತ್ತೆ ಅಪಾಯವಾಗುತ್ತದೆ ಎಂಬುದು ಕೋರ್ಟ್ ನ ಅಭಿಪ್ರಾಯ. ಆದರೆ ಅಲ್ಲಿನ ವ್ಯಾಪಾರಸ್ಥರು ಇದರಿಂದ ಕಟ್ಟಡದ ಪಾರಂಪರಿಕತೆಗೆ ಧಕ್ಕೆ ಬರುತ್ತದೆ ಎಂದು ಚಿಂತಿಸುತ್ತಿದ್ದಾರೆ. ಮುಂದೆ ಸರ್ಕಾರದ ನಿಲುವಿನ ಮೇಲೆ ಇಲ್ಲಿ ಏನಾಗುತ್ತದೆ ಎಂಬುದು ನಿರ್ಧಾರವಾಗುತ್ತದೆ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!