Sat. Jan 9th, 2021

Namma Mysuru

History, News, Stories and much more

ಸೀಸದ ಕಡ್ಡಿಯಿಂದ ಅರಳಿದ ಸುಂದರ ಕಲೆ..!

1 min read
445 Views

ಮೈಸೂರು ಎಷ್ಟೊಂದು ಜನ ಸಾಧಕರಿಗೆ ತವರೂರು. ಉದ್ಯಮಿಗಳು, ಗಾಯಕರು, ನಟರು..ಹೀಗೆ ಮೈಸೂರಿನಲ್ಲಿ ಹುಟ್ಟಿದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಸಿದ್ಧರಾಗಿದ್ದಾರೆ. ಈಗ ಬೇರೆ ಊರುಗಳಲ್ಲಿ, ದೇಶಗಳಲ್ಲಿ ನೆಲೆಸಿದ್ದಾರೆ. ಆದರೆ ಕೆಲವರು ಮಾತ್ರ ಇನ್ನೂ ಇಲ್ಲೇ ಎಲೆ ಮರೆ ಕಾಯಿಯಾಗಿ ಇದ್ದು ತಮ್ಮ ಕಲೆಯನ್ನ ಪೋಷಿಸಿಕೊಳ್ಳುತ್ತಿದ್ದಾರೆ. ಇಂತಹವರನ್ನು ಬೆಳಕಿಗೆ ತರುವುದೇ ನಮ್ಮ ಉದ್ದೇಶ. ಅಂತಹವರಲ್ಲಿ ಒಬ್ಬರು ನಂಜುಂಡಸ್ವಾಮಿ. ಈತ ಪೆನ್ಸಿಲ್ ಪ್ರತಿಭೆ. ನಾವೆಲ್ಲರೂ ಪೆನ್ಸಿಲ್ ಅನ್ನು ಬರೆದು ಬಳಸಿದರೆ ಇವರು ಅದನ್ನು ಕೊರೆದು ಬಳಸುತ್ತಾರೆ. ಪೆನ್ಸಿಲ್ ಗೆ ವಿಶೇಷ ರೂಪ ಕೊಟ್ಟು ಅದರಲ್ಲಿ ಕುಂಚ ಅರಳಿಸುತ್ತಾರೆ. ಕೃಷ್ಣ ಕಲೆ ಎಂಬ ಹೆಸರಿನಲ್ಲಿರುವ ಇವರ ಕಲಾಕೃತಿಗಳು ಜನಮನ್ನಣೆ ಗಳಿಸಿವೆ. ಇನ್ನೂ ಎಷ್ಟೋ ಜನಕ್ಕೆ ಈ ಬಗ್ಗೆ ತರಬೇತಿ ಕೊಡಬೇಕೆಂಬ ಕನಸನ್ನು ಹೊತ್ತು ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಸೀಸದಕಡ್ಡಿಯಿಂದ ಸಾಧನೆ ಮಾಡಿರುವ ಇವರೊಡನೆ ಒಂದು ಪುಟ್ಟ ಸಂದರ್ಶನ..

ನಿಮಗೆ ಪೆನ್ಸಿಲ್ ನಲ್ಲಿ ಕುಂಚ ಅರಳಿಸುವ ಈ ಕಲೆಯ ಮೇಲೆ ಆಸಕ್ತಿ ಬಂದಿದ್ದು ಹೇಗೆ? ಅದಕ್ಕೆ ಯಾರು ಸ್ಫೂರ್ತಿ?
ಉ: ನನಗೆ ಚಿಕ್ಕ ವಯಸ್ಸಿನಿಂದಲೂ ಸ್ಕೆಚ್ಚಿಂಗ್, ಡ್ರಾಯಿಂಗ್ ಮೇಲೆ ಹೆಚ್ಚು ಆಸಕ್ತಿ. ಚಿಕ್ಕವನಿದ್ದಾಗ ಒಮ್ಮೆ ಸ್ಕೆಚ್ ಮಾಡಲು ಪೆನ್ಸಿಲ್ ಶಾರ್ಪ್ ಮಾಡುತ್ತಿರುವಾಗ ಅದರಲ್ಲೇ ಒಂದು ಮುಖ ಕಂಡಂತೆ ಅನಿಸಿತು. ಅದೇ ನನಗೆ ಸ್ಫೂರ್ತಿಯಾಯಿತು. ಅದನ್ನು ನೋಡಿ ನಾನೇ ಏಕೆ ಈ ರೀತಿ ಕಲೆ ಕರಗತ ಮಾಡಿಕೊಳ್ಳಬಾರದೆಂದು ಅಭ್ಯಾಸ ಶುರುಮಾಡಿದೆ. ನಾವು ಕರಗತ ಮಾಡಿಕೊಳ್ಳಬಹುದಾದ, ನಮಗೆ ಸರಿಯಾದ ಕಲೆಯೊಂದು ಇದ್ದೇ ಇರುತ್ತದೆ. ಅದನ್ನ ನಾವು ಕಂಡುಕೊಳ್ಳಬೇಕಷ್ಟೇ.

ಎಷ್ಟು ವರ್ಷದಿಂದ ಇದನ್ನು ಅಭ್ಯಾಸ ಮಾಡುತ್ತಿದ್ದೀರ? ಇದಕ್ಕೆ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಸಹಕಾರ ಹೇಗಿದೆ?
ಉ: 1999 ರಿಂದ ಈ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಮೊದಮೊದಲು ಮನೆಯವರು ಇದನ್ನು ವಿರೋಧಿಸಿದರು. ಇದರಿಂದ ಕಣ್ಣಿಗೆ ತೊಂದರೆಯಾಗುತ್ತದೆ, ಇದರಿಂದ ಏನು ಪ್ರಯೋಜನ ಎನ್ನುತ್ತಿದ್ದರು. ಆದರೆ ಈಗ ನನ್ನ ಸಾಧನೆ ನೋಡಿ ಕುಟುಂಬದವರು, ಸ್ನೇಹಿತರು ಎಲ್ಲರೂ ಖುಷಿ ಪಡುತ್ತಾರೆ. ಅದೇ ನನಗೆ ಹೆಮ್ಮೆ.

ಪೆನ್ಸಿಲ್ ನಲ್ಲಿ ಇಷ್ಟು ಕೆಲಸ ಮಾಡುವಾಗ ಸೂಕ್ಷ್ಮ ದೃಷ್ಟಿ ಬೇಕು. ಇದರಿಂದ ನಿಮಗೇನು ಕಣ್ಣಿನ ತೊಂದರೆ ಕಾಣಿಸಿಕೊಂಡಿಲ್ಲವೇ?
ಉ: ನಾನು ಸಾಮಾನ್ಯವಾಗಿ ರಾತ್ರಿಯ ಹೊತ್ತು ಈ ಕೆಲಸಗಳನ್ನು ಮಾಡುತ್ತೇನೆ. ಶುರುವಿನಲ್ಲಿ ಕಣ್ಣು ಉರಿಯುತ್ತಿತ್ತು. ಆದರೆ ಬರುಬರುತ್ತಾ ಎಲ್ಲವೂ ಸರಿಹೋಯಿತು. ಅದು ಬಹುಶಃ ಚಮತ್ಕಾರ ಅನಿಸುತ್ತದೆ. ಜೊತೆಗೆ ಲೆಡ್ ಕೊರೆಯುವಾಗ ಅಕಸ್ಮಾತ್ ಚರ್ಮ ಸೀಳಿದರೆ, ಲೆಡ್ ದೇಹದೊಳಗೆ ಹೋದರೆ ಅದು ಅತ್ಯಂತ ಅಪಾಯಕಾರಿ. ಅದರ ಬಗ್ಗೆ ಎಚ್ಚರ ವಹಿಸುತ್ತೇನೆ.

ಇದುವರೆಗೂ ಯಾವ ಯಾವ ಚಿತ್ರಗಳನ್ನು ಪೆನ್ಸಿಲ್ ನಲ್ಲಿ ಅರಳಿಸಿದ್ದೀರ? ಅದಕ್ಕೆ ಯಾವೆಲ್ಲಾ ಪ್ರತಿಫಲಗಳು ದೊರೆತಿವೆ?
ಉ: ಚಿತ್ರನಟರು, ರಾಜಕಾರಣಿಗಳು, ಪ್ರಸಿದ್ಧ ಸ್ಥಳಗಳು, ಸ್ಮಾರಕಗಳು ಎಲ್ಲವನ್ನೂ ಪೆನ್ಸಿಲ್ ಲೆಡ್ ಕೊರೆದು ಅರಳಿಸಿದ್ದೀನಿ. ಉಪೇಂದ್ರ ಅವರು ಬಹಳ ಪ್ರೀತಿಯಿಂದ ಇದನ್ನು ಸ್ವೀಕರಿಸಿ ಖುಷಿಪಟ್ಟಿದ್ದರು. ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನನ್ನ ಹೆಸರು ದಾಖಲಾಗಿದೆ. ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ, ವಿವಿಧ ಎಕ್ಸಿಬಿಷನ್ ಗಳಲ್ಲಿ, ದಸರಾ ಸಂದರ್ಭದಲ್ಲಿ ನನ್ನ ಕಲಾಕೃತಿಗಳು ಪ್ರದರ್ಶನಗೊಂಡು ಜನಮನ್ನಣೆ ಗಳಿಸಿವೆ. ಅದು ನನಗೆ ಖುಷಿ.

ನಿಮ್ಮ ಪ್ರಕಾರ ನಿಮ್ಮ ಅತ್ಯುನ್ನತ ಕಲಾಕೃತಿ ಯಾವುದು?
ಉ: ನಾನು ಭಾರತೀಯ ಸೈನ್ಯದ ಬಗ್ಗೆ ಒಂದು ಕಲಾಕೃತಿ ರಚಿಸಿದ್ದೇನೆ. ಪೆನ್ಸಿಲ್ ನಲ್ಲಿ ,ಮೇಲೆ ಭಾರತದ ಧ್ವಜ, ಅದರ ಕೆಳಗೆ ಅಮರ್ ಜವಾನ್ ಎಂಬ ಅಕ್ಷರಗಳು, ನಮ್ಮ ಸೈನಿಕರು ಸದಾ ಹೋರಾಟಕ್ಕೆ ಸಿದ್ಧ ಎಂಬುದರ ಸಂಕೇತವಾಗಿ ನೇರವಾಗಿ ನಿಲ್ಲಿಸಿರುವ ಗನ್, ಅದರ ಮೇಲೆ ಭಗತ್ ಸಿಂಗ್, ಧ್ವಜ, ಗಾಂಧಿ, ಸುಖದೇವ್, ರಾಜ್ ಗುರು ಇದ್ದಾರೆ. ಎರಡು ಕಡೆಗಳಲ್ಲಿ ಇಂಡಿಯಾ ಮತ್ತು ವಂದೇ ಮಾತರಂ ಎಂಬ ಅಕ್ಷರಗಳಿವೆ. ಇದು ಬಿಟ್ಟು 0.5 ಎಂ.ಎಂ ಲೆಡ್ ಒಂದರಲ್ಲಿ ಒಂದರಿಂದ ಹತ್ತು ಅಂಕಿಗಳನ್ನು ಕೊರೆದಿದ್ದೇನೆ. ಇವೆರಡೂ ವಿಶೇಷವಾದುದು.

ನಿಮ್ಮ ಕಲಾಕೃತಿಗಳಿಗೆ ‘ಕೃಷ್ಣಕಲೆ’ ಎಂಬ ಬ್ರ್ಯಾಂಡ್ ನೀಡಿದ್ದೀರ. ಈ ಹೆಸರು ಆರಿಸಿದ ಹಿಂದಿನ ಕಾರಣ ಏನು?
ಉ: ಹಿಂದೂ ಸಂಸ್ಕೃತಿಯ ಪ್ರಕಾರ ಕೃಷ್ಣ ಎಂದರೆ ಕಪ್ಪು. ಹಾಗೇ ಪೆನ್ಸಿಲ್ ಲೆಡ್ ಕೂಡ ಕಪ್ಪಗಿರುತ್ತದೆ. ಕೃಷ್ಣನಲ್ಲಿ ವಿವಿಧ ವ್ಯಕ್ತಿತ್ವಗಳು ಕಾಣುವಂತೆ ಆತನ ಬಣ್ಣ ಇರುವ ಈ ಪೆನ್ಸಿಲ್ ನಲ್ಲೂ ವಿವಿಧ ಕಲಾಕೃತಿಗಳು ಅರಳುತ್ತವೆ. ಇದು ನಾನು ಈ ಹೆಸರನ್ನು ಇಟ್ಟಿರುವ ಹಿಂದಿನ ಉದ್ದೇಶ.

ನಿಮ್ಮ ಈ ಸಾಧನೆಗೆ ಗೌರವ, ಪ್ರತಿಫಲಗಳು ಸಿಕ್ಕಿದೆಯೇ? ಇದಕ್ಕೆ ಸರ್ಕಾರದಿಂದ ಸಹಕಾರ ಸಿಗುತ್ತದೆಯೇ? ಒಟ್ಟಾರೆ ಕಲಾವಿದರ ಬದುಕು ಎಷ್ಟು ಸುಲಭ?
ಉ: ಎಷ್ಟೋ ಕಡೆ ಕರೆದು ಬಹುಮಾನ, ಪ್ರಶಸ್ತಿ ಘೋಷಣೆಯಾಗುತ್ತದೆ. ಆದರೆ ಅದು ನಮ್ಮ ಕೈತಲುಪುವುದೇ ಕಷ್ಟ. ಇದನ್ನು ಜೀವನೋಪಾಯವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗೊತ್ತು. ಆದ್ದರಿಂದ ನಾನು ಟ್ಯಾಟೂ ಹಾಕುವ ವೃತ್ತಿಯಲ್ಲಿದ್ದೇನೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮಂತಹ ಕಲಾವಿದರಿಗೆ ಸಹಕಾರ ಕೊಡಬೇಕು. ಅದು ಕಾರ್ಯರೂಪಕ್ಕೆ ಬರುವಂತೆ ನೋಡಿಕಳ್ಳಬೇಕು. ಈ ರೀತಿ ವಿಶೇಷ ಕಲೆ ಮಾಡುವ ಕಲಾವಿದರ ಬದುಕು ಹೊರಗೆ ನೋಡುವಷ್ಟು ಸುಲಭವಾಗಿರುವುದಿಲ್ಲ. ಆದ್ದರಿಂದ ಆದಷ್ಟು ಮಾಧ್ಯಮಗಳು ನಮ್ಮಂತಹ ಎಲೆಮರೆಕಾಯಿಯಾಗಿರುವ ಕಲಾವಿದರನ್ನು ಜನರಿಗೆ ಪರಿಚಯಿಸಬೇಕು. ಕಲೆ ಪ್ರಸಿದ್ಧಿಯಾದರಲ್ಲವೇ ಕಲಾವಿದನಿಗೆ ಬೆಲೆ?

ಈ ರೀತಿಯ ವಿಶೇಷ ಕಲೆ, ಸೂಕ್ಷ್ಮ ಕಲೆಗಳನ್ನು ಮಾಡಲು ಬಯಸುವ ಕಲಾವಿದರಿಗೆ ಹಾಗೂ ಜನರಿಗೆ ಏನು ಹೇಳಲು ಬಯಸುತ್ತೀರ?
ಉ: ಚೆನ್ನಾಗಿ ಅಭ್ಯಾಸ ಮಾಡಿ ಕಲೆಯನ್ನು ಕರಗತ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಗಮನ ಕೊಡಿ. ಆದರೆ ಜೀವನಕ್ಕೆ ಇದನ್ನೇ ದಾರಿಯಾಗಿ ಇಟ್ಟುಕೊಳ್ಳಬೇಡಿ. ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡು ಇದನ್ನು ಅಭ್ಯಾಸವಾಗಿಯೇ ಇಟ್ಟುಕೊಳ್ಳಿ.

ನಂಜುಂಡಸ್ವಾಮಿಯವರ ಕಲಾಕೃತಿಗಳನ್ನು ನೋಡಲು ಅವರ ಫೇಸ್ ಬುಕ್ ಖಾತೆ Nanjund Swamy ಗೆ ಭೇಟಿ ಕೊಡಬಹುದು. ಇಂತಹವರನ್ನು ಗುರುತಿಸಿ ಪ್ರಶಂಸಿಸುವುದು ನಮ್ಮೆಲ್ಲರ ಕರ್ತವ್ಯ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!