ಅಯ್ಯಂಗಾರ್ ಯೋಗಕ್ಕೆ ಮೈಸೂರೇ ತವರು.
1 min read
ಹಲವು ವರ್ಷಗಳಿಂದ ದೇಶದಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಯೋಗಕ್ಕೆ ಹೊಸ ಆಯಾಮ ನೀಡಿ ಸಾಮಾನ್ಯರು ಕೂಡ ಯೋಗ ಮಾಡಬೇಕು, ಮಾಡಬಹುದು ಎಂದು ತಿಳಿಸಿಕೊಟ್ಟವರಲ್ಲಿ ಪ್ರಮುಖರು ಬಿ.ಕೆ.ಎಸ್. ಅಯ್ಯಂಗಾರ್. ಇವರ ಹೆಸರನ್ನು ನೀವು ಕೇಳಿರದಿದ್ದರೂ ಅಯ್ಯಂಗಾರ್ ಯೋಗ ಬಗ್ಗೆ ನೀವು ಕೇಳಿರುತ್ತೀರ. ಇವರು ಮಾಡುತ್ತಿದ್ದ ರೀತಿಯ ಯೋಗ ಈಗ ಅಯ್ಯಂಗಾರ್ ಯೋಗ ಎಂದು ಪ್ರಸಿದ್ಧವಾಗಿದೆ.
ಮೈಸೂರಿಗೂ ಐಯ್ಯಂಗಾರರಿಗೂ ಅವಿನಾಭವ ಸಂಬಂಧ:
ಬಿ.ಕೆ.ಎಸ್. ಐಯ್ಯಂಗಾರ್ ಹುಟ್ಟಿದ್ದು 1918 ಡಿಸೆಂಬರ್ 14ರಂದು ಅಂದಿನ ಮೈಸೂರು ರಾಜ್ಯದ ಕೋಲಾರ ತಾಲೂಕಿನ ಬೆಳ್ಳೂರಿನಲ್ಲಿ. ಇವರ ಕುಟುಂಬದಲ್ಲಿ ಬಹುಪಾಲು ಜನರು ಅನಾರೋಗ್ಯದಿಂದ ಬಳಲುತ್ತಿದ್ದವರು. ಇದೇ ಕಾರಣದಿಂದ ಇವರ ತಂದೆ ಕೂಡ ಅಸುನೀಗಿದರು. ಅಯ್ಯಂಗಾರ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. 1934ರಲ್ಲಿ ಇವರ ಭಾವ ತಿರುಮಲೈ ಕೃಷ್ಣಮಚಾರ್ಯ ಅಯ್ಯಂಗಾರ್ ರವರು ಬಿ.ಕೆ.ಎಸ್. ರವರನ್ನು ಮೈಸೂರಿಗೆ ಬರಹೇಳುತ್ತಾರೆ. ಆಗ ಕೃಷ್ಣಮಚಾರ್ ಅವರು ಮಹಾರಾಜರ ಆಸ್ಥಾನದಲ್ಲಿ ಹಲವು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುತ್ತಿರುತ್ತಾರೆ. ಸ್ವತಃ ರಾಜರೂ ಅವರ ಬಳಿ ಯೋಗ ಕಲಿಯುತ್ತಿದ್ದರು ಎಂದು ಹೇಳಲಾಗುತ್ತದೆ. ಇಡೀ ಕುಟುಂಬವೇ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಬಿ.ಕೆ.ಎಸ್ ರವರಾದರೂ ಯೋಗದ ದೆಸೆಯಿಂದ ಆರೋಗ್ಯವಾಗಿರಲಿ ಎಂಬುದು ಕೃಷ್ಣಮಚಾರ್ ಅವರ ಉದ್ದೇಶವಾಗಿತ್ತು. ಕೊನೆಗೂ ಬಿ.ಕೆ.ಎಸ್ ಮೈಸೂರಿಗೆ ಬರುತ್ತಾರೆ.


ಮೈಸೂರಿನಲ್ಲಿದೆ ಐಯ್ಯಂಗಾರರ ಯೋಗ ಶಿಕ್ಷಣದ ಬೇರು:
ಬಿ.ಕೆ.ಎಸ್.ಅಯ್ಯಂಗಾರ್ ರವರು 2 ವರ್ಷ ಮೈಸೂರಿನಲ್ಲಿ ನೆಲೆಸುತ್ತಾರೆ. ಕೃಷ್ಣಮಾಚಾರ್ ರವರಿಂದ ಬೇರೆ ವಿದ್ಯಾರ್ಥಿಗಳೊಡನೆ ಸೇರಿ ಯೋಗ ಕಲಿಯುತ್ತಾರೆ. “ಆ ಎರಡು ವರ್ಷವೇ ನನ್ನ ಜೀವನದ ಪ್ರಮುಖ ಘಟ್ಟ. ನಾನು ಇಂದು ಏನಾಗಿದ್ದೇನೋ ಅದಕ್ಕೆ ಮೂಲ ಕಾರಣವೇ ನನ್ನ ಆ ಎರಡು ವರ್ಷದ ಅಭ್ಯಾಸ” ಎಂದು ಬಿ.ಕೆ.ಎಸ್ ಒಮ್ಮೆ ಹೇಳಿಕೊಂಡಿದ್ದರು ಕೂಡ. ಇಲ್ಲಿ ಯೋಗಾಭ್ಯಾಸ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಒಮ್ಮೊಮ್ಮೆ ಅವರು ಹೇಳಿದ ಆಸನವನ್ನು ಸರಿಯಾಗಿ ಮಾಡದಿದ್ದಾಗ ಕೃಷ್ಣಮಾಚಾರ್ ಬಿ.ಕೆ.ಎಸ್ ಅವರಿಗೆ “ನೀನು ಯೋಗ ಕಲಿಯುವುದಿಲ್ಲ” ಎಂಬರ್ಥದಲ್ಲಿ ಮಾತನಾಡುತ್ತಿದ್ದರಂತೆ. ಕೆಲವೊಮ್ಮೆ ಸರಿಯಾಗಿ ಆಸನ ಮಾಡುವವರೆಗೂ ಊಟ ಮಾಡಲು ಸಹ ಬಿಡುತ್ತಿರಲಿಲ್ಲವಂತೆ. ಇದನ್ನು ಸ್ವತಃ ಬಿ.ಕೆ.ಎಸ್ ಕೆಲವು ಕಡೆ ಹೇಳಿಕೊಂಡಿದ್ದಾರೆ. ಎರಡು ವರ್ಷ ಮೈಸೂರಿನಲ್ಲಿ ಯೋಗ ಕಲಿತು ಪುಣೆಗೆ ಹೋಗುತ್ತಾರೆ. ಅಲ್ಲಿ ಯೋಗ ಕಲಿಸುತ್ತಾರೆ. ಹಾಗೆ ದಿನಕಳೆದಂತೆ ಪ್ರಸಿದ್ಧರಾಗುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಬಿ.ಕೆ.ಎಸ್ “ಅಯ್ಯಂಗಾರ್ ಯೋಗ” ಎಂಬ ಹೊಸ ಪ್ರಕಾರದ ಯೋಗವನ್ನು ಪರಿಚಯಿಸುತ್ತಾರೆ. ಜಗತ್ತಿನ ಪ್ರತಿಷ್ಟಿತ ಆಕ್ಸ್ಫರ್ಡ್ ಡಿಕ್ಷನರಿ ಕೂಡ ಅಯ್ಯಂಗಾರ್ ಯೋಗವನ್ನು ವ್ಯಾಖ್ಯಾನಿಸುತ್ತದೆ. ಅಲ್ಲದೇ ಬಿ.ಕೆ.ಎಸ್ ಯೋಗ ಬಗ್ಗೆ ಸಾಕಷ್ಟು ಪುಸ್ತಕಗಳನ್ನೂ ಬರೆದಿದ್ದಾರೆ.

ಬಿ.ಕೆ.ಎಸ್ ತಮ್ಮ ಕೊನೆ ದಿನಗಳವರೆಗೂ ದಿನದ ಹಲವಾರು ಗಂಟೆಗಳನ್ನು ಯೋಗ, ಪ್ರಾಣಾಯಾಮಕ್ಕೆ ಮೀಸಲಿಡುತ್ತಿದ್ದರು. ಆದ್ದರಿಂದಲೇ ಅತ್ಯಂತ ಆರೋಗ್ಯವಾಗಿದ್ದರು. ಆದರೆ 2014ರ ಆಗಸ್ಟ್ 20ರಂದು ಪುಣೆಯಲ್ಲಿ ಕೊನೆಯುಸಿರೆಳೆದರು. ಇಷ್ಟೆಲ್ಲಾ ಸಾಧನೆ ಮಾಡಿದ ಇವರನ್ನು ಯೋಗ ದಿನಾಚರಣೆಯ ದಿನ ನೆನೆಯದಿರುವುದಕ್ಕೆ ಸಾಧ್ಯವೇ..?