ಒಂದು ಅರಮನೆ, ಮೂರು ರೂಪ. ಭಾಗ-2
1 min read
ಇದು ಮೈಸೂರು ಅರಮನೆ ನಗರಿ ಎಂದು ಕರೆಸಿಕೊಳ್ಳುವುದಕ್ಕೆ ಇದ್ದ ಕಾರಣಗಳಲ್ಲಿ ಒಂದಾಗಿದ್ದ ಸ್ಥಳ… ಪ್ರಸ್ತುತ ಪ್ರವಾಸಿಗರ ಅಚ್ಚುಮೆಚ್ಚಿನ ಹೋಟೆಲ್. ಇದು ಹೋಟೆಲ್ ಗ್ರೀನ್. ಮೈಸೂರಿನ ಹುಣಸೂರು ರಸ್ತೆಯಲ್ಲಿ ಪ್ರಾರಂಭವಾಗಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಸ್ಥಳ. ಇದಕ್ಕೂ ಭವ್ಯ ಇತಿಹಾಸವಿದೆ. ಇದು ಮುಂಚೆ ಚಿತ್ತರಂಜನ್ ಪ್ಯಾಲೆಸ್ ಆಗಿತ್ತು. 1916ರಲ್ಲಿ ಮಹಾರಾಜ ತನ್ನ ತಂಗಿಗಾಗಿ ಕಟ್ಟಿಸಿಕೊಟ್ಟ ಅರಮನೆ. ನಂತರ ರಾಜಮನೆತನದವರು ಇದನ್ನು ಫಿಲಂ ಕಂಪನಿಯೊಂದಕ್ಕೆ ಮಾರಿಬಿಟ್ಟರು. ಅದನ್ನು ಕೊಂಡ ಬಸವರಾಜಯ್ಯ ಈ ಅರಮನೆಯನ್ನು ‘ಪ್ರೀಮಿಯರ್ ಸ್ಟುಡಿಯೋ’ ಆಗಿಸಿದರು. ಅಂದಿನ ಕಾಲಕ್ಕೆ ಏಷಿಯಾದಲ್ಲಿ ಎರಡನೇ ಅತಿದೊಡ್ಡ ಸ್ಟುಡಿಯೋ ಇದು. ಆದರೆ ದುರದೃಷ್ಟವಶಾತ್ ‘ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್’ ಧಾರಾವಾಹಿಯ ಚಿತ್ರೀಕರಣದ ವೇಳೆ ಅಗ್ನಿ ಅವಘಡವಾಗಿ ಇಡೀ ಸ್ಟುಡಿಯೋ ಸುಟ್ಟು ಹೋಗಿತ್ತು. ಈಗ ಅಲ್ಲಿ ಏನಿದೆ ಎಂಬುದನ್ನ ನೀವು ತಿಳಿಯಲೇಬೇಕು. ಅಂದು ಸುಟ್ಟು ಕರಕಲಾಗಿದ್ದ ಸ್ಟುಡಿಯೋದ ರೂಪ ಈಗ ಬದಲಾಗಿದೆ. ಇಲ್ಲಿಗೆ ಬಂದರೆ ಅದೇನೋ ಪ್ರಶಾಂತತೆ, ಹೆಸರಿಗೆ ತಕ್ಕಂತೆ ಹಸಿರಿನ ಮಧ್ಯೆ ನಿರ್ಮಾಣವಾಗಿರುವ ಈ ಹೋಟೆಲ್ ಅತ್ಯಂತ ವಿಭಿನ್ನವಾದುದು.

ಹೋಟೆಲ್ ಗ್ರೀನ್ ಶುರುವಾಗಿದ್ದು ಹೀಗೆ:
ಅಂದು 1989ರಲ್ಲಿ ಪ್ರೀಮಿಯರ್ ಸ್ಟುಡಿಯೋ ಸುಟ್ಟು ಭಸ್ಮವಾಗುತ್ತದೆ. ಆ ಸಮಯಕ್ಕೆ ಸರಿಯಾಗಿ ಸ್ಟುಡಿಯೋಗಳಿಗೂ ಬೇಡಿಕೆ ಕಡಿಮೆಯಾಗುತ್ತದೆ. ಆದ ಕಾರಣ ಹಲವು ವರ್ಷಗಳ ಕಾಲ ಆ ಸ್ಥಳಕ್ಕೆ ನಿಷೇಧ ಹೇರಿ ಯಾರಿಗೂ ಅಲ್ಲಿ ಪ್ರವೇಶಿಸದಂತೆ ಮಾಡಲಾಗುತ್ತದೆ. ಅದರ ನಂತರ ಹಿಲರಿ ಬ್ಲೂಮ್ ಎಂಬಾಕೆ ಇದನ್ನು ಕೊಂಡು ಒಂದು ಹೋಟೆಲ್ ಮಾಡಲು ನಿರ್ಧರಿಸಿದರು.

ಇದು ಸಾಮಾನ್ಯ ಹೋಟೆಲ್ ಅಲ್ಲ. ಮೈಸೂರಿನ ಪರಂಪರೆ, ಇತಿಹಾಸ ಎಲ್ಲವನ್ನೂ ಎಲ್ಲರಿಗೂ ಅರ್ಥವಾಗುವಂತೆ ಸಾರುವ ಸ್ಥಳ. ಇಲ್ಲಿಂದ ಬಂದ ಲಾಭವನ್ನೆಲ್ಲಾ ಬಡವರ್ಗದವರಿಗೆ ದಾನವಾಗಿ ಕೊಡಲಾಗುತ್ತದೆ. ಇಲ್ಲಿ ಹೆಚ್ಚು ಯಂತ್ರಗಳನ್ನು ಬಳಸದೇ ಎಲ್ಲವನ್ನೂ ಕೆಲಸಗಾರರ ಕೈಯಲ್ಲೇ ಮಾಡಿಸಲಾಗುತ್ತದೆ. ಹೆಚ್ಚು ಜನರಿಗೆ ಕೆಲಸ ಸಿಗಲಿ ಎಂಬುದು ಇದರ ಉದ್ದೇಶ. ಇಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಮಹಿಳೆಯರೇ. ಜೊತೆಗೆ ಇದರ ಮೇಲುಸ್ತುವಾರಿ ವಹಿಸಿರುವುದು ಕೂಡ ಒಬ್ಬ ಮಹಿಳೆ. ಇದು ಇಲ್ಲಿನ ಪ್ರಮುಖ ವಿಶೇಷತೆ.
ಗ್ರೀನ್ ನ ವಿಶೇಷತೆಗಳು:
ಸುತ್ತಲೂ ಹಚ್ಚ ಹಸಿರು, ಒಳಗೆ ಹೋದರೆ ಹೊರಗೆ ಬರಲು ಮನಸ್ಸಾಗದ ವಾತಾವರಣ, ಎಲ್ಲೆಲ್ಲೂ ಪ್ರಶಾಂತತೆ ತುಂಬಿರುವ ಈ ಹೋಟೆಲ್ ನಲ್ಲಿ ಒಟ್ಟು 31 ಸುಸಜ್ಜಿತವಾದ ಕೋಣೆಗಳಿವೆ. ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲದೇ ಸ್ಥಳೀಯರು ಕೂಡ ಬಂದು ಉದ್ಯಾನದಲ್ಲಿ ಸಮಯ ಕಳೆದು, ಅತ್ಯಂತ ರುಚಿಕರ ತಿಂಡಿಗಳನ್ನು ತಿಂದು ಹೋಗಬಹುದು. ಇಲ್ಲಿ ಅತಿ ಅಪರೂಪದ ವಿನ್ಯಾಸದ ಕೋಣೆಗಳು, ಅತ್ಯಾಕರ್ಷಕ ಗ್ರಂಥಾಲಯ, ಹಲವು ಊಟದ ಮನೆಗಳು ಇವೆ. ಇಲ್ಲಿನ ಗೋಡೆಗಳ ಮೇಲೆ ನಮ್ಮ ಪರಂಪರೆ ಸಾರುವ ಚಿತ್ರಗಳಿವೆ. ಹೋಟೆಲ್ ನಲ್ಲಿ Travellers’ Room, Writers’ Room, Princess Room ಎಂಬಿತ್ಯಾದಿ ವಿವಿಧ ರೀತಿಯ ಕೋಣೆಗಳು, ಅದರಲ್ಲಿ ಹೆಸರಿಗೆ ತಕ್ಕಂತೆ ವಿಶೇಷ ವ್ಯವಸ್ಥೆಗಳು ಇವೆ. ಜೊತೆಗೆ ಮರದ ನೆಲ, ಬಾಗಿಲುಗಳು, ಕಿಟಕಿಯಿಂದ ಕಾಣುವ ಅತ್ಯಂತ ಸುಂದರ ಹಸಿರು ನೋಟ, ಕೋಣೆಯ ಸ್ನಾನದ ಮನೆಯ ಒಳಗೆ ಸಿಗುವ ಕೇವಲ ಮೈಸೂರು ಸ್ಯಾಂಡಲ್ ಸಾಬೂನು, ಆಗಿನ ಕಾಲದಲ್ಲಿ ರಾಣಿ ಮಲಗುತ್ತಿದ್ದ ಕೋಣೆ, ಆಕೆಯ ತಾಯಿ ಬಂದಾಗ ಅವರು ಮಲಗುತ್ತಿದ್ದ ಕೋಣೆ, ಗಲಾಟೆಯಿಲ್ಲದ ಪ್ರಶಾಂತ ವಾತಾವರಣ, ಬೆಳಿಗ್ಗೆ ಉಚಿತವಾಗಿ ನೀಡಲಾಗುವ ತಿಂಡಿ, ಇಲ್ಲಿ ಮಾತ್ರ ಸಿಗುವ ರುಚಿಕರ ತಿನಿಸುಗಳು, ಅತ್ಯಂತ ಸ್ನೇಹದಿಂದ ವರ್ತಿಸುವ ಸಿಬ್ಬಂದಿ, ಮನೆಯಲ್ಲಿರುವ ಭಾವನೆ, ಟಿವಿ, ಎಸಿ ಏನೂ ಇಲ್ಲದೆಯೂ ಇಷ್ವಾಗುವ ವಾತಾವರಣ ನಮ್ಮನ್ನು ಒಂದೈವತ್ತು ವರ್ಷ ಹಿಂದಕ್ಕೆ ಕೊಂಡೊಯ್ಯುತ್ತದೆ.



ಮಾಲ್ಗುಡಿ ಕೆಫೆ:
ಹೋಟೆಲ್ ಗ್ರೀನ್ ನ ಪ್ರಮುಖ ಆಕರ್ಷಣೆ ಮಾಲ್ಗುಡಿ ಕೆಫೆ. ಈ ಕೆಫೆ ನಡೆಸುತ್ತಿರುವುದು ಕೂಡ ಮಹಿಳೆ. ಈಕೆ ಫ್ರೆಂಚ್ ಚೆಫ್ ಒಬ್ಬನಿಂದ ಅಡುಗೆ ಮಾಡುವುದನ್ನು ಕಲಿತಿದ್ದಳಂತೆ. ಈಕೆಯ ಕೈರುಚಿಯನ್ನು ಒಮ್ಮೆಯಾದರೂ ನೀವು ನೋಡಲೇಬೇಕು. ಸಸ್ಯಾಹಾರಿ, ಮಾಂಸಾಹಾರಿ ಆಹಾರ, ಕಾಫಿ ಮತ್ತಿತರ ಪೇಯಗಳು, ಸ್ನ್ಯಾಕ್ಸ್..ಹೀಗೆ ಇಲ್ಲಿ ಎಲ್ಲವೂ ಸಿಗುತ್ತದೆ. ಊಟ ಮಾಡುವಾಗ ಆಗಾಗ ಬಂದು ಮಾತನಾಡಿಸಿಕೊಂಡು ಹೋಗುವ ಮ್ಯಾನೇಜರ್ ಹಾಗೂ ಇತರ ಸಿಬ್ಬಂದಿ ನೀವು ಮನೆಯಲ್ಲಿದ್ದೀರ ಎಂಬ ಭಾವನೆ ಮೂಡಿಸುತ್ತಾರೆ.

ವಿಳಾಸ: ಚಿತ್ತರಂಜನ್ ಪ್ಯಾಲೇಸ್, ನಂ.2270, ವಿನೋಬಾ ರಸ್ತೆ, ಜಯಲಕ್ಷ್ಮೀಪುರಂ, ಮೈಸೂರು.
ಪ್ರವಾಸಿಗರಾಗಲಿ ಸ್ಥಳೀಯರಾಗಲಿ.. ಒಮ್ಮೆ ಇಲ್ಲಿಗೆ ಎಲ್ಲರೂ ಭೇಟಿ ಕೊಡಲೇಬೇಕು. ಇಲ್ಲಿಯ ಕೋಣೆ ಬಾಡಿಗೆ, ಆಹಾರ ಕೊಂಚ ದುಬಾರಿಯೇ. ಆದರೆ ಅದ್ಯಾವುದೂ ಅವರ ಕೈ ಸೇರುವುದಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಜೀವನ ಕಟ್ಟಿಕೊಡುತ್ತದೆ, ಎಲ್ಲೋ ಯಾವುದೋ ಬಡಮಕ್ಕಳಿಗೆ, ಸಹಾಯ ಬೇಕಾದವರಿಗೆ ಸಂಜೀವಿನಿಯಾಗುತ್ತದೆ. ನಾವೇ ಹೋಗಿ ಆ ರೀತಿಯ ಜನರಿಗೆ ಸಹಾಯ ಮಾಡುವುದು ಅಷ್ಟರಲ್ಲೇ ಇದೆ. ಆದ್ದರಿಂದ ಇಂತಹವರಿಗಾದರೂ ಸಹಕರಿಸೋಣ. ಸಹಾಯ ಮಾಡುವವರೊಂದಿಗೆ ಕೈಜೋಡಿಸೋಣ. ಅದೂ ಅಲ್ಲದೆ ನೀವು ಕೊಡುವ ಒಂದು ರೂಪಾಯಿಗೂ ಇಲ್ಲಿ ಮೋಸವಾಗುವುದಿಲ್ಲ. ಯಾಂತ್ರಿಕ ಜೀವನದಿಂದ ಕಂಗೆಟ್ಟು ಸಣ್ಣದೊಂದು ವಿರಾಮ ಬೇಕೆಂದು ಬರುವವರಿಗೆ ಈ ಸುತ್ತಮುತ್ತ ಈ ರೀತಿಯ ಯಾವುದೇ ಸ್ಥಳ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಮುಂದಿನ ಬಾರಿ ಮೈಸೂರಿಗೆ ಬಂದಾಗ ನೀವು ಗ್ರೀನ್ ಹೋಟೆಲ್ ಗೆ ಭೇಟಿ ಕೊಟ್ಟು ಖುಷಿ ಪಟ್ಟರೆ ನಿಮಗೇ ಅದರ ಅರಿವಾಗುತ್ತದೆ.