Fri. Jan 22nd, 2021

Namma Mysuru

History, News, Stories and much more

ಪುರಾತನ ಕಟ್ಟಡದ ಪುಟ್ಟ ಸ್ವಗತ.

1 min read
449 Views

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಲಾನ್ಸ್ ಡೌನ್ ಬಿಲ್ಡಿಂಗ್. ನನಗೆ 120 ವರ್ಷ ವಯಸ್ಸಾಗಿದೆ. ನಾನು ಹುಟ್ಟಿದ ಸಮಯದಲ್ಲಿ ಮೈಸೂರಿನಲ್ಲಿ ಒಡೆಯರ್ ಆಳ್ವಿಕೆ ನಡೆಯುತ್ತಿತ್ತು. ಆಗ ರಾಜರು ವೈಸೆರಾಯ್‌ಗಳ ಮಾರ್ಗದರ್ಶನದಲ್ಲಿ ಆಳ್ವಿಕೆ ಮಾಡಬೇಕಾಗಿತ್ತು. 1894ರವರೆಗೆ ಭಾರತದ ವೈಸೆರಾಯ್ ಆಗಿ ಲಾರ್ಡ್ ಲಾನ್ಸ್ ಡೌನ್ ಕಾರ್ಯನಿರ್ವಹಿಸುತ್ತಿದ್ದ. ಆತ ಮೈಸೂರಿಗೆ ಯಾವುದೋ ಕೆಲಸದ ಮೇಲೆ ಬಂದಿದ್ದ ಅಂತ ಕಾಣುತ್ತೆ. ಆ ಸಮಯದಲ್ಲೇ ನನ್ನನ್ನು ನಿರ್ಮಾಣ ಮಾಡಿದ್ದು. ನಾನು ಹುಟ್ಟಿದ್ದು 1892 ನವೆಂಬರ್ 10ರಂದು. ನನ್ನನ್ನು ನಿರ್ಮಿಸಿದ್ದು ಹಾಗೂ ಉದ್ಘಾಟನೆ ಮಾಡಿದ್ದು ಇದೇ ವೈಸೆರಾಯ್ ಲಾರ್ಡ್ ಲಾನ್ಸ್ ಡೌನ್. ಅಂದು ಮೈಸೂರಿನೆಲ್ಲೆಡೆ ಸಂಭ್ರಮದ ವಾತಾವರಣವಿತ್ತು. ಯಾಕಂದ್ರೆ ನಗರದ ಹೊಸ ಸದಸ್ಯನಾಗಿ ನಾನು ಜನ್ಮತಾಳಿದ್ದೆ. ನನಗೆ ‘ಲ್ಯಾಂಡ್ಸ್ಡೌನ್ ಬಜಾರ್’ ಎಂದು ನಾಮಕರಣ ಕೂಡ ಮಾಡಲಾಯ್ತು. ನನ್ನಿಂದ ಎಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ. ನನ್ನ ಬಳಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಪುಸ್ತಕಗಳೂ ಸಿಗುತ್ತವೆ. ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಂತೂ ಯಾವ ಪುಸ್ತಕ ಬೇಕಾದರೂ ನನ್ನ ನೆನಪಿಸಿಕೊಳ್ಳುತ್ತಾರೆ. ಒಂದಷ್ಟು ಜನ ನನ್ನಲ್ಲಿ ಜ್ಯೂಸ್ ಅಂಗಡಿ ಇಟ್ಟು ಜೀವನ ಕಟ್ಟಿಕೊಂಡಿದ್ದಾರೆ. ಜೆರಾಕ್ಸ್ ಅಂಗಡಿ, ಬಟ್ಟೆ ಮಳಿಗೆ, ಔಷಧಿ ಮಳಿಗೆ ಹಾಗೂ ಇನ್ನಿತರ ಅಂಗಡಿಗಳನ್ನು ಇಟ್ಟು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ನನಗೆ ಇದು ಹೆಮ್ಮೆಯೇ ಸರಿ. ನಾನಿರುವುದು ನಗರ ಬಸ್ ನಿಲ್ದಾಣದ ಪಕ್ಕದಲ್ಲೇ. ಆದ್ದರಿಂದ ದಿನವೂ ಅಲ್ಲಿ ಓಡಾಡುತ್ತಿರುವ ಎಲ್ಲರನ್ನೂ ನೋಡುತ್ತಿರುತ್ತೇನೆ. ಹಾಗೆ ಕಾಲ ಕಳೆಯುತ್ತಿರುತ್ತೇನೆ. ವರ್ಷಾನುಗಟ್ಟಲೆಯಿಂದ ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು ಗಟ್ಟಿಯಾಗಿ ಅಲ್ಲೇ ನಿಂತಿದ್ದೇನೆ.

ಆ ದಿನ..2012ರ ಆಗಸ್ಟ್ ತಿಂಗಳು. ಸಂಜೆ ಸುಮಾರು 6 ಗಂಟೆ ಸಮಯ. ಮೈಸೂರಿನೆಲ್ಲೆಡೆ ಜೋರು ಮಳೆ ಸುರಿಯುತ್ತಿತ್ತು. ಜನಜೀವನ ಅಕ್ಷರಶಃ ಅಸ್ತವ್ಯಸ್ತವಾಗಿತ್ತು. ಹಲವರು ನನ್ನ ಬಳಿ ಆಸರೆಗಾಗಿ ಓಡಿ ಬರುತ್ತಿದ್ದರು. ನನ್ನ ಬಳಿಯಿದ್ದ ಅಂಗಡಿಗಳಿಗೆ ಓಡಿಬಂದು ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು. ಅಷ್ಟರಲ್ಲಾಗಲೇ ಸಾಕಷ್ಟು ಕೃಷವಾಗಿದ್ದ ನನ್ನ ದೇಹ, ಚಿಕಿತ್ಸೆಯನ್ನೇ ಕಾಣದೇ ಬಳಲಿ ಬೆಂಡಾಗಿದ್ದ ನನ್ನ ದೇಹ ನಿಧಾನವಾಗಿ ಕುಸಿಯಲಾರಂಭಿಸಿತ್ತು. ನೋಡನೋಡುತ್ತಲೇ ನನ್ನ ದೇಹದ ಭಾಗ ಮುರಿದುಬಿದ್ದಿತ್ತು.. ಅಂದು ನನ್ನ ದೇಹದ ಅಂಗ ಊನವಾಗಿಹೋಯ್ತು. ಅಷ್ಟು ವರ್ಷದಿಂದ ಎಲ್ಲವನ್ನೂ ಸಹಿಸಿಕೊಂಡು ಏಗಿದ್ದ ನನಗೆ ಆಘಾತವಾಗಿತ್ತು…ಅಷ್ಟು ದಿನ ನನ್ನ ಆಸರೆಯಲ್ಲಿದ್ದ ನನ್ನ ಮಕ್ಕಳನ್ನು ನೋಡಿಕೊಳ್ಳಲು ಅವತ್ತು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಕಣ್ಣೆದುರೇ ಎಷ್ಟೋ ಜನರ ಜೀವ, ಜೀವನ ಮಣ್ಣಿನಲ್ಲಿ ಕುಸಿಯುತ್ತಿದ್ರೂ ನಾನು ಅಸಹಾಯಕನಾಗಿದ್ದೆ. ಪಾಪ.. ಈ ದುರಂತದಿಂದ ಕೆಲವರು ಸಾವನ್ನಪ್ಪಿದ್ರು. ಆದ್ರೆ ನನ್ನ ಕೈಯಲ್ಲಿ ಏನೂ ಇರಲಿಲ್ಲ., ನನಗೆ ಚಿಕಿತ್ಸೆ ಕೊಡಿಸಬೇಕಾದ ಸಮಯಕ್ಕೆ ಕೊಡಿಸಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಆದ್ರೆ ಕಾಲ ಮಿಂಚಿ ಹೋಗಿತ್ತು. ಅಪಘಾತ ನಡೆದು ಹೋಗಿತ್ತು.
ನಂತರ ಅದೆಷ್ಟೋ ಜನ ಬಂದರು. ನನ್ನ ಚಿಕಿತ್ಸೆಯನ್ನು ಶೀಘ್ರದಲ್ಲೇ ಮಾಡಿಸಿಕೊಡುವ ಆಶ್ವಾಸನೆ ಕೊಟ್ಟರು. ನನ್ನಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಹೇಳಿದರು. ಆದರೆ ಕೆಲವು ಮಾತ್ರ ನಿಜವಾಯ್ತು. ನಾನು ಈಗಲೂ ಹಾಗೇ ಇದ್ದೀನಿ. ಸಂಪೂರ್ಣವಾಗಿ ಗುಣಮುಖವಾಗಿಲ್ಲ, ಯಾವಾಗ ಆ ಭಾಗ್ಯ ಬರುತ್ತೋ ಎದುರು ನೋಡುತ್ತಲೇ ಇದ್ದೀನಿ. ಅದು ಒಣಮರವನ್ನ ಗಿಣಿ ಕಾದಂತಾಗಿದೆಯೇ ಹೊರತು ಮತ್ತೇನೂ ಪ್ರಯೋಜನವಾಗಿಲ್ಲ.

ಈಗಲೂ ಮೇಯರ್, ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು ಎಲ್ಲರೂ ಬರುತ್ತಾರೆ. ನನ್ನನ್ನು ನಗರದ ಹಿರಿಕ ಎಂದು ಹಾಡಿ ಹೊಗಳುತ್ತಾರೆ. ನನ್ನ ಚಿಕಿತ್ಸೆಗೆ ಹಣ ಕೊಡುವುದಾಗಿಯೂ ಹೇಳುತ್ತಾರೆ. ಅದೆಲ್ಲಾ ಅದೆಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೋ ನಾ ಕಾಣೆ. ಈಗಾಗಲೇ ಆ ದುರಂತವಾಗಿ 7 ವರ್ಷಗಳು ಕಳೆದಿವೆ. ಆದರೂ ನನ್ನ ಸ್ಥಿತಿ ಅಷ್ಟರಲ್ಲೇ ಇದೆ. ನನಗೆ ಮಾತ್ರ ದುರಸ್ತಿ ಭಾಗ್ಯ ಸಿಕ್ಕೇ ಇಲ್ಲ. ಇನ್ನೂ ಕೂಡಾ ಈಗಲೋ ಆಗಲೋ ಎನ್ನುವಂತಿದ್ದೇನೆ. ನನ್ನನ್ನು ಸರಿಯಾಗಿ ಚಿಕಿತ್ಸೆ ಕೊಡಿಸಿ ಉಳಿಸುವವರ್ಯಾರು ಎಂಬುದರ ಬಗ್ಗೆ ಚಿಂತಿಸುತ್ತಿದ್ದೀನಿ. ಯಾವಾಗ ಎಲ್ಲವೂ ಸರಿ ಹೋಗುತ್ತೋ ಗೊತ್ತಿಲ್ಲ. ಒಂದು ವೇಳೆ ನಾನೇನಾದರೂ ತೀವ್ರ ಅಸ್ವಸ್ಥತೆಯಿಂದ ಬಳಲಿ ಅಸುನೀಗಿದರೆ ಅದು ಮೈಸೂರಿನ ಐತಿಹಾಸಿಕ ಹಿರಿಮೆಗೆ ದೊಡ್ಡ ನಷ್ಟವಾಗುತ್ತದೆ. ನಿಮಗೆ ನಾ ಹೇಳಿದ್ದು ಸರಿ ಎನ್ನಿಸಿದ್ರೆ ದಯವಿಟ್ಟು ಯಾರಾದ್ರೂ ಅಧಿಕಾರಿಗಳಿಗೆ ಹೇಳಿ.
ಇಂತಿ ನಿಮ್ಮ ಪ್ರೀತಿಯ,
ಲ್ಯಾನ್ಸ್ ಡೌನ್ ಬಿಲ್ಡಿಂಗ್ (since 1892)

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!