Sun. Jan 10th, 2021

Namma Mysuru

History, News, Stories and much more

ಮೈಸೂರು ರಂಗಾಯಣದಲ್ಲೊಂದು ಸುತ್ತು.

1 min read
460 Views

ಮೈಸೂರು ಕಲೆಯ ತವರೂರು.‌ ಕಲೆ ಅಂದ್ರೆ ಮೈಸೂರಿಗರಿಗೆ ಕಲಾಮಂದಿರ ನೆನಪಾಗುತ್ತೆ. ಕಲಾಮಂದಿರ ಎಂದ ತಕ್ಷಣ ರಂಗಾಯಣ ಕೂಡಾ ನೆನಪಾಗುತ್ತೆ. ಕರ್ನಾಟಕದಲ್ಲಿರುವುದು ಇದೊಂದೇ ರಂಗಾಯಣವಲ್ಲ. ಆದರೆ ಮೈಸೂರಿನ ರಂಗಾಯಣ ಅತ್ಯಂತ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಎಲ್ಲಿ ನೋಡಿದರೂ ಹಸಿರು, ಅಲ್ಲಲ್ಲಿ ಸುಂದರ ಕಲಾಕೃತಿಗಳು, ಅಲ್ಲೇ ರಂಗಾಭ್ಯಾಸ ಮಾಡುವ ರಂಗ ಕಲಾವಿದರು… ಇದು ಮೈಸೂರು ರಂಗಾಯಣದ ಸುಂದರ ಚಿತ್ರಣ.

ಮೈಸೂರು ರಂಗಾಯಣ

ರಂಗಾಯಣ ಕರ್ನಾಟಕದ ಪ್ರಮುಖ ರಂಗ ತರಬೇತಿ ಸಂಸ್ಥೆಗಳಲ್ಲೊಂದು. 1989ರಲ್ಲಿ ಕಲೆ ಹಾಗೂ ಕಲಾಕೃತಿಗಳ ಪ್ರದರ್ಶನಕ್ಕೆ ಶುರುವಾದ ಈ ಸಂಸ್ಥೆ ಈಗ ದೊಡ್ಡದೊಂದು ರಂಗಸಂಸ್ಥೆಯಾಗಿ ಬೆಳೆದಿದೆ. ಇದೊಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ರಂಗಾಯಣ ಕಾರ್ಯನಿರ್ವಹಿಸುತ್ತಿದೆ. ಇದು ರಂಗಭೀಷ್ಮ ಬಿ.ವಿ.ಕಾರಂತರ ಕನಸಿನ ಕೂಸು. ಬಿ.ವಿ.ಕಾರಂತರೇ ರಂಗಾಯಣದ ಮೊದಲ ನಿರ್ದೇಶಕರೂ ಹೌದು. ಬಿ.ವಿ.ಕಾರಂತರು ಅಂದರೆ ಶಿಸ್ತು, ಕಲಿಕೆ ಎಲ್ಲವನ್ನೂ ಮೈಗೂಡಿಸಿಕೊಂಡ ಅಪ್ರತಿಮ ರಂಗಕರ್ಮಿ. ಬಿ.ವಿ.ಕಾರಂತರನ್ನ ಅದಕ್ಕೆ ರಂಗಭೀಷ್ಮ ಅಂತ ಕರೆಯೋದು. ಅವರಿಂದ ಬದುಕಲು ಕಲಿತವರು, ನಟಿಸಲು ಕಲಿತವರು ಎಷ್ಟು ಜನ ಇದ್ದಾರೋ ಹೇಳಲು ಗೊತ್ತಿಲ್ಲ. ಇಂದಿಗೂ ಅವರೆಲ್ಲರೂ ಮೈಸೂರು ರಂಗಾಯಣವನ್ನ ನೆನಪಿಸಿಕೊಳ್ಳುತ್ತಾರೆ.

ರಂಗಾಯಣದಲ್ಲಿದೆ ರಂಗ ತರಬೇತಿ ಸಂಸ್ಥೆ:
ಮೈಸೂರಿನ ರಂಗಾಯಣದಲ್ಲಿ ವೃತ್ತಿಪರ ರಂಗತರಬೇತಿ ಸಂಸ್ಥೆ ಕೂಡಾ ನಡೆಯುತ್ತಿದೆ. ಅದರ ಹೆಸರು ‘ಭಾರತೀಯ ರಂಗಶಿಕ್ಷಣ ಸಂಸ್ಥೆ’. ಇದೊಂದು ಡಿಪ್ಲೊಮ ಕೋರ್ಸ್. ಇದರ ಕಾಲಾವಧಿ 1 ವರ್ಷ. ಈ ಕೋರ್ಸ್ ಶುರುವಾದಾಗಿನಿಂದ ಮುಗಿಯುವವರೆಗೂ ವಿದ್ಯಾರ್ಥಿಗಳು ಮನೆಗೆ ಹೋಗುವಂತಿಲ್ಲ. ಮೊದಲ ಆರು ತಿಂಗಳು ಬರೀ ತರಬೇತಿ ನಡೆಯುತ್ತದೆ. ನಂತರ ವಿದ್ಯಾರ್ಥಿಗಳನ್ನು ರಂಗಪ್ರವೇಶ ಮಾಡಿಸಲಾಗುತ್ತದೆ. ಸದ್ಯ ಇಲ್ಲಿ ಹೆಚ್ಚು ವಿದ್ಯಾರ್ಥಿಗಳು ಇಲ್ಲದಿದ್ದರೂ ರಂಗಶಿಕ್ಷಣ ಸಂಸ್ಥೆ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ.
ಇಲ್ಲಿನ ಸಿಬ್ಬಂದಿ ಶಿಕ್ಷಣ ಸಂಸ್ಥೆಗೆ ಸೇರುವವರಿಗೆ ಸಂದರ್ಶನ ಮಾಡುತ್ತಾರೆ. 100ಕ್ಕೂ ಹೆಚ್ಚು ಜನರ ಸಂದರ್ಶನ ಮಾಡಿದ್ರೆ ಅದರಲ್ಲಿ 20 ರಿಂದ 30 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ನಂತರ ಅವರಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೇ ರಂಗಾಯಣದಲ್ಲಿ ರೆಪರ್ಟ್ರಿ ಗಳೆಂದರೆ ರಂಗಾಯಣ ತಂಡದಿಂದ ಹಿರಿಯ ಕಲಾವಿದರು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮಿನಿ ರೆಪರ್ಟ್ರಿಗಳೆಂದರೆ ರಂಗಶಿಕ್ಷಣದಲ್ಲಿ ಪಳಗಿರುವ ವಿದ್ಯಾರ್ಥಿಗಳು ನಾಟಕವನ್ನು ಪ್ರದರ್ಶಿಸುತ್ತಾರೆ. ಇನ್ನು ರಂಗಶಾಲೆ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸುತ್ತಾರೆ. ಇಲ್ಲಿ ಭೂಮಿಗೀತ, ವನರಂಗ, ಕಿರು ರಂಗಮಂದಿರ, ಶ್ರೀರಂಗ, ಕುಟೀರ ಎಂಬ ವಿವಿಧ ವೇದಿಕೆಗಳಿವೆ. ಹಾಗು ಪಿ.ಲಂಕೇಶ್ ರ ಒಂದು ಆರ್ಟ್ ಗ್ಯಾಲರಿ ಕೂಡಾ ಇದೆ. ಈ ಎಲ್ಲಾ ವೇದಿಕೆಗಳಲ್ಲಿಯೂ ನಾಟಕ ಪ್ರದರ್ಶನ ನಡೆದೇ ಇರುತ್ತದೆ. ಈ ಎಲ್ಲಾ ವೇದಿಕೆಗಳಲ್ಲೂ ತನ್ನದೇ ಆದ ರೀತಿಯ ನಾಟಕಗಳು ನಡೆಯುತ್ತವೆ.

ಎಲ್ಲರಿಗೂ ಇದೆ ಮುಕ್ತ ಅವಕಾಶ:
ನಾಟಕ ನೋಡಿದಾಗಲೆಲ್ಲಾ, “ಒಮ್ಮೆಯಾದರೂ ನಾನೂ ಒಂದ್ ಸಲ ನಾಟಕ ಮಾಡ’ಬಿಡಬೇಕಪ್ಪ” ಅಂತ ನಿಮಗೂ ಅನ್ಸಿರುತ್ತೆ.. ನಿಮ್ಮ ಈ ಆಸೆಗೆ ರಂಗಾಯಣ ಎಂದಿಗೂ ತಣ್ಣೀರೆರೆಚಲ್ಲ. ಹೌದು… ಯೌವುದಾದರೊಂದು ರೀತಿಯಲ್ಲಿ ನೀವು ಕೂಡಾ ರಂಗಭೂಮಿಯಲ್ಲಿ ಭಾಗವಹಿಸಬಹುದು. ಜನವರಿಯಲ್ಲಿ ಬಹುರೂಪಿ ನಾಟಕೋತ್ಸವ, ಬೇಸಿಗೆ ರಜೆಯಲ್ಲಿ ಚಿಣ್ಣರ ಮೇಳ, ಹವ್ಯಾಸಿ ನಾಟಕೋತ್ಸವ, ದಸರಾ ಸಮಯದಲ್ಲಿ ನವರಾತ್ರಿ ರಂಗೋತ್ಸವ, ಕಾಲೇಜು ರಂಗೋತ್ಸವ ಹೀಗೆ ಹತ್ತು ಹಲವು ಬಗೆಯ ನಾಟಕಗಳು ರಂಗಾಯಣದಲ್ಲಿವೆ.
ಬಹುರೂಪಿ ನಾಟಕೋತ್ಸವ ಅಂದ್ರೆ ಅದೊಂದು ಸಾಂಸ್ಕೃತಿಕ ಸಮ್ಮೇಳನ. ಇಡೀ ದೇಶದಿಂದ ಜನರು ಬಹುರೂಪಿ ನಾಟಕೋತ್ಸವಕ್ಕೆ ಬರ್ತಾರೆ. ಕನ್ನಡ ನಾಟಕಗಳಲ್ಲದೇ ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲೂ ಕೂಡಾ ನಾಟಕಗಳನ್ನ ಪ್ರದರ್ಶಿಸಲಾಗುತ್ತವೆ. ಬಹುರೂಪಿ ನಾಟಕೋತ್ಸವದಲ್ಲಿ ಚಲನಚಿತ್ರೋತ್ಸವ ಕೂಡಾ ನಡೆಯುತ್ತಲೇ ಬಂದಿದೆ. ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತೆ. ಇನ್ನು ಚಿಣ್ಣರ ಮೇಳ… ಪುಟ್ಟ ಪುಟ್ಟ ಮಕ್ಕಳು ಕೂಡಾ ಬಣ್ಣ ಹಚ್ಚಿ ವೇದಿಕೆ ಮೇಲೆ ಬರ್ತಾರೆ. ಜನರನ್ನ ರಂಜಿಸ್ತಾರೆ.

ನವರಾತ್ರಿ ಸಮಯದಲ್ಲಿ ಇಲ್ಲಿ ನವರಾತ್ರಿ ರಂಗೋತ್ಸವ ನಡೆಯುತ್ತದೆ. ಜೊತೆಗೆ ಶ್ರೀರಂಗ ಥಿಯೇಟರ್ ನಲ್ಲಿ ಬೊಂಬೆಮನೆ ಏರ್ಪಡಿಸಲಾಗುತ್ತದೆ. ಒಂಭತ್ತು ದಿನವೂ ವಿವಿಧ ಸಂಸ್ಕೃತಿಯ ಜನರು ಬಂದು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ಅದರೊಂದಿಗೆ ಸಾಧಕರಿಗೆ ಸನ್ಮಾನ ನಡೆಯುತ್ತದೆ. ರಂಗಾಯಣದ ಹಿರಿಯ ಕಲಾವಿದರೆಲ್ಲಾ ಆ ಸಮಯದಲ್ಲಿ ನಾಟಕ ಪ್ರದರ್ಶಿಸ್ತಾರೆ. ಇನ್ನು ಕಾಲೇಜು ರಂಗೋತ್ಸವದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಆಯ್ದ ಕಾಲೇಜುಗಳು ಪಾಲ್ಗೊಳ್ಳುತ್ತವೆ. ನವರಾತ್ರಿಯ ಒಂದೊಂದು ದಿನವೂ ಒಂದೊಂದು ಕಾಲೇಜಿನ ತಂಡ ಭೂಮಿಗೀತಾದಲ್ಲಿ ನಾಟಕ ಪ್ರದರ್ಶನ ಮಾಡುತ್ತದೆ. ಹಿರಿಯ ನಟ ಲಂಕೇಶ್ ಗೆ ಭೂಮೀಗೀತಾದಲ್ಲಿ ಒಮ್ಮೆ ನಟಿಸಬೇಕೆಂಬ ಆಸೆಯಿತ್ತಂತೆ. ಆದರೆ ಅದು ಈಡೇರಲೇ ಇಲ್ಲವಂತೆ. ಇದನ್ನ ಕೇಳಿದ್ರೆ ಅಲ್ಲಿ ನಾಟಕ ಪ್ರದರ್ಶನ ಮಾಡೋ ವಿದ್ಯಾರ್ಥಿಗಳು ಅದೆಷ್ಟು ಅದೃಷ್ಟವಂತರು ಎನಿಸುತ್ತದೆ. ಇಲ್ಲಿ ನಾಟಕ ಪ್ರದರ್ಶಿಸಲು ಸುಮಾರು ಒಂದೂವರೆ ತಿಂಗಳ ಮುಂಚೆಯಿಂದಲೇ ವಿದ್ಯಾರ್ಥಿಗಳು ತಯಾರಿ ನಡೆಸಿರುತ್ತಾರೆ.

ರಂಗಾಯಣ ಕೇವಲ ನಾಟಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ವರ್ಷವೂ ಕರಕುಶಲ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಆಹಾರ ಮೇಳ, ಕಲಾ ಪ್ರದರ್ಶನ, ವಿಚಾರಗೋಷ್ಠಿ, ಥಿಯೇಟರ್‌ನ ಹಿರಿಯ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಏರ್ಪಡಿಸಿರುತ್ತದೆ. ಈ ಹಬ್ಬಕ್ಕೆ ಮೈಸೂರಿಂದ ಮಾತ್ರವಲ್ಲದೇ ಬೇರೆ ಬೇರೆ ಪ್ರಾಂತ್ಯದಿಂದಲೂ ಕೂಡಾ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಇಷ್ಟೂ ನಮ್ಮ ರಂಗಾಯಣದ ಇಣುಕು ನೋಟ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!