Thu. Jan 14th, 2021

Namma Mysuru

History, News, Stories and much more

ಸಾಮಾನ್ಯ ವ್ಯಕ್ತಿ, ಅಸಾಮಾನ್ಯ ವ್ಯಕ್ತಿತ್ವ.

1 min read
487 Views

ನೋಡಿದರೆ ಅರವತ್ತರ ಮೇಲೆ ವಯಸ್ಸಾಗಿರುವ ಮುಖಚಹರೆ. ಬಿಳಿ ಗಡ್ಡ, ಉದ್ದ ಕೂದಲು. ತೊಡುವುದು ಸಾಧಾರಣ ಶರ್ಟು, ಬಿಳಿ ಪಂಚೆ. ಕೊಂಚ ಮೆಳ್ಳಗಣ್ಣು. ಬಾಯಲ್ಲಿ ಸದಾ ಚಾಮುಂಡಿ ತಾಯಿಯ ಗುಣಗಾನ, ಅದು ಬಿಟ್ಟರೆ ಜೀವನ, ಮನಸ್ಸು, ಧ್ಯಾನದ ಬಗೆಗಿನ ಮಾತು. ಮಾತಲ್ಲಿ ಮಲಯಾಳಂ ಧಾಟಿಯ ಕನ್ನಡ ಅಥವಾ ನಿರರ್ಗಳ ಇಂಗ್ಲಿಷ್.. ಇವರು ಗೋಪಾಲಕೃಷ್ಣ. ನೀವು ಆಗಾಗ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆ ಹೊತ್ತು ಮೆಟ್ಟಿಲು ಹತ್ತಿ ಹೋಗುವವರಾದರೆ ಇವರನ್ನು ನೋಡಿರದಿರಲು, ಇವರ ಬಗ್ಗೆ ತಿಳಿದಿರದೇ ಇರಲು ಸಾಧ್ಯವಿಲ್ಲ. ಏಕೆಂದರೆ ಈತ ಪ್ರತಿದಿನ ಬೆಳ್ಳಂಬೆಳಿಗ್ಗೆ ಮೆಟ್ಟಿಲು ಹತ್ತಿ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಸಾವಿರ ಮೆಟ್ಟಿಲುಗಳನ್ನು ಹತ್ತುವಾಗ ತಾಯಿ ಚಾಮುಂಡಿ ಸೇರಿದಂತೆ ಹಲವಾರು ದೇವರ ನಾಮಗಳನ್ನು ಹಾಡುತ್ತಾ ಹೋಗುತ್ತಾರೆ. ದಾರಿಯಲ್ಲಿ ಪರಿಚಯವಿದ್ದವರನ್ನು ಮಾತನಾಡಿಸುತ್ತಾ ಹೋಗಿ ತಾಯಿಯ ದರ್ಶನ ಪಡೆಯುತ್ತಾರೆ. ಇದು ಇವರ ದಿನಚರಿ.

ಮೈಸೂರಿನವರಲ್ಲ ಗೋಪಾಲಕೃಷ್ಣ:
ಹೌದು.. ಈಗ ಇಲ್ಲೇ ಇರುವ ಇವರು ಮೈಸೂರಿನವರಲ್ಲ. ಮೂಲತಃ ಕೇರಳದ ಪಾಲಕ್ಕಾಡ್ ನವರು. ಸುಮಾರು ಹತ್ತು ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿದ್ದಾರೆ. ಆಗಿನಿಂದ ಈಗಿನವರೆಗೂ ಪ್ರತಿದಿನ ಬೆಳಿಗ್ಗೆ 4:30ಕ್ಕೆ ಇಲ್ಲಿ ಬರುತ್ತಾರೆ. ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ತಾಯಿಯ ದರ್ಶನ ಪಡೆಯುತ್ತಾರೆ. ದಾರಿಯುದ್ದಕ್ಕೂ ದೇವರ ನಾಮಗಳನ್ನು ಹೇಳುತ್ತಾ ಹೋಗುವುದು ಇವರ ಅಭ್ಯಾಸ. ಆದರೂ ಕಿಂಚಿತ್ತೂ ಸುಸ್ತಾದಂತೆ ಕಾಣುವುದಿಲ್ಲ. ಸಿಕ್ಕವರನ್ನು ಪ್ರೀತಿಯಿಂದ ಮಾತನಾಡಿಸಿ ಒಂದಷ್ಟು ಜೀವನ ಪಾಠಗಳನ್ನೂ ಹೇಳಿಕೊಡುತ್ತಾರೆ. ಆದ್ದರಿಂದಲೇ ಸಾಮಾನ್ಯವಾಗಿ ಇಲ್ಲಿಗೆ ಬರುವವರಿಗೆ ಇವರ ಮುಖ ಪರಿಚಯ ಇದ್ದೇ ಇರುತ್ತದೆ.

ಪ್ರತಿ ಹೆಜ್ಜೆಯಲ್ಲೂ ಜೀವನ ಪಾಠ:
ಇವರನ್ನು ನೋಡಿದರೆ ಎಂತಹವರಿಗೂ ಸ್ಫೂರ್ತಿ ಮೂಡದೇ ಇರದು. ಬೆಳಿಗ್ಗೆ ಬೇಗ ಏಳಲು, ಒಂದ್ಹತ್ತು ಹೆಜ್ಜೆ ಹೆಚ್ಚು ನಡೆಯಲು, ಪರಿಚಯವಿಲ್ಲದವರೊಡನೆ ಮಾತನಾಡಲು ಹಿಂಜರಿಯುವ ಜನ ಇವರನ್ನು ನೋಡಿ ಸಾಕಷ್ಟು ಜೀವನ ಪಾಠ ಕಲಿಯಬೇಕು. ಇವರೊಡನೆ ಮಾತಿಗೆ ಕೂತರೆ ಧ್ಯಾನದಿಂದ ಮನಸ್ಸನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು, ನಮ್ಮ ದೇಹವನ್ನು ಹೇಗೆ ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಅತ್ಯಂತ ಉಪಯುಕ್ತ ವಿಚಾರಗಳನ್ನು ಹೇಳಿಕೊಡುತ್ತಾರೆ. ಇವರು ಒಮ್ಮೆ ನೋಡಿದವರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಮತ್ತೆ ಹೋಗಿ ಮಾತನಾಡಿಸಿದರೆ ಅಷ್ಟೇ ಪ್ರೀತಿ, ಆದರಗಳಿಂದ ಅವರನ್ನು ಮಾತನಾಡಿಸುತ್ತಾರೆ. ಗೋಪಾಲಕೃಷ್ಣರನ್ನು ನೋಡಿದರೆ ಜೀವನದಲ್ಲೆ ಶ್ರದ್ಧೆಯ ಮಹತ್ವ ಎಂತಹದ್ದು ಎಂಬುದು ತಿಳಿಯುತ್ತದೆ. ನಾವು ಯಾವ ಕೆಲಸ ಮಾಡಿದರೂ ಅದರಲ್ಲಿ ಶ್ರದ್ಧೆ ಇರಬೇಕು. ಅದು ವಿಶ್ವದ ಗಮನ ಸೆಳೆಯುವ ಕೆಲಸವಾಗಲಿ ಅಥವಾ ಯಾರಿಗೂ ತಿಳಿಯದೇ ಅಜ್ಞಾತವಾಗಿ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವುದಾಗಲಿ. ಜೀವನಕ್ಕೆ ಏನು ಮಾಡಿಕೊಂಡಿದ್ದೀರ ಎಂದರೆ ನಿರ್ಲಿಪ್ತವಾಗಿ “ತಾಯಿ ಇದ್ದಾಳೆ. ನೋಡಿಕೊಳ್ಳುತ್ತಿದ್ದಾಳೆ” ಎನ್ನುವಾಗ ಇವರ ಮುಖದಲ್ಲೊಂದು ತೇಜಸ್ಸು ಕಾಣುತ್ತದೆ. ಚಹರೆಯಲ್ಲಿ ಶ್ರದ್ಧೆಯೂ ಸೇರಿಕೊಂಡಿರುತ್ತದೆ. 2017ರಲ್ಲಿ ಆಕಾಶವಾಣಿಯಲ್ಲಿ ಇವರ ಬಗ್ಗೆ ಹಾದಿಯಲ್ಲಿ ಕಂಡ ಮುಖಗಳು ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು.

ನೀವೇನಾದರೂ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಹೋದರೆ ಇವರನ್ನು ಮಾತನಾಡಿಸಿ. ಅವರ ಜ್ಞಾನವನ್ನು ನಿಮಗೂ ಹಂಚುತ್ತಾರೆ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!