Sun. Jan 10th, 2021

Namma Mysuru

History, News, Stories and much more

ಬಲು ಅಪರೂಪದ ಬಹುಮುಖ ಪ್ರತಿಭೆ.

1 min read
453 Views

ಮೈಸೂರಿನಲ್ಲಿ ಸಾಧಕರಿಗೆ ಬರವಿಲ್ಲ. ಈಗಾಗಲೇ ಇಲ್ಲಿ ನೀವು ಕೆಲವು ಎಲೆ ಮರೆ ಕಾಯಿಯಂತಿರುವ ಸಾಧಕರ ಬಗ್ಗೆ ಓದಿದ್ದೀರ. ಇದು ಅದೇ ಸಾಲಿಗೆ ಸೇರುವ ಪುಟ್ಟ ಬರಹ. ನಮ್ಮ ಮೈಸೂರಿನ ಈ ಸಾಧಕ ಬರೀ ಒಂದು ವಿಷಯದಲ್ಲಿ ಪರಿಣಿತಿ ಹೊಂದಿ ಅದನ್ನು ಸಾಧಿಸಿ ಹೆಸರು ಮಾಡಿದವರಲ್ಲ. ಏಕಕಾಲಕ್ಕೆ ಹಲವಾರು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲದರಲ್ಲೂ ಸಾಧನೆ ಮಾಡಿದವರು. ಈತ ಅಕ್ಷರಶಃ ಸಕಲಕಲಾವಲ್ಲಭ. ಹಾವೇರಿ ಜಿಲ್ಲೆಯವರಾದ ಅಭಿಲಾಶ್ ಕೋರಿ ಪ್ರಸ್ತುತ ಮೈಸೂರಿನ ಕುವೆಂಪುನಗರದಲ್ಲಿದ್ದಾರೆ. ತಮ್ಮೆಲ್ಲಾ ಸಾಧನೆಗಳನ್ನು ಮಾಡಿರುವುದು ಮೈಸೂರಿನಲ್ಲಿಯೇ. ಅವರೊಂದಿಗೆ ಹೀಗೊಂದು ಮಾತುಕತೆ.

ಪ್ರಸ್ತುತ ಯಾವ್ಯಾವ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದೀರ?
ನಾನು ರಾಜ್ಯಮಟ್ಟದ ಕುಸ್ತಿ ಪಟುವಾಗಿ ಭಾಗವಹಿಸಿದ್ದೇನೆ. ಗಿಟಾರ್ ಹಾಗೂ ಡೋಲಕ್ ಅಭ್ಯಾಸ ಮಾಡುತ್ತಿದ್ದೇನೆ. ನಾನೂರಕ್ಕೂ ಹೆಚ್ಚು ನಾಟಕಗಳಲ್ಲಿ ಹವ್ಯಾಸಿ ಕಲಾವಿದನಾಗಿ ನಟಿಸಿ ಇಪ್ಪತ್ತಕ್ಕೂ ಹೆಚ್ಚು ವೀರಗಾಸೆ, ಕಂಸಾಳೆ ಹಾಗೂ ಪೂಜಾ ಕುಣಿತದ ಪ್ರದರ್ಶನ ನೀಡಿದ್ದೇನೆ. ಒಂದೂವರೆ ವರ್ಷದಿಂದ ಚಿತ್ರಕಲೆ ಅಭ್ಯಾಸ ಮಾಡುತ್ತಿದ್ದೇನೆ. ಪೆನ್ಸಿಲ್, ಚಾರ್ ಕೋಲ್, ಬಾಲ್ ಪೆನ್, ಗ್ಲೂ ಮತ್ತು ಗ್ಲಿಟ್ಟರಿಂಗ್ ನಿಂದ ಚಿತ್ರಕಲೆ ಮಾಡುತ್ತೇನೆ.

ನಿಮಗೆ ಇಷ್ಟೊಂದು ಕ್ಷೇತ್ರಗಳಲ್ಲೆಲ್ಲಾ ಒಟ್ಟಿಗೆ ಆಸಕ್ತಿ ಬಂದಿದ್ದು ಹೇಗೆ? ಇದಕ್ಕೆ ಸ್ಫೂರ್ತಿ ಏನು?
ನನಗೆ ಚಿಕ್ಕ ವಯಸ್ಸಿನಿಂದಲೂ ಈ ರೀತಿಯ ಚಟುವಟಿಕೆಗಳಲ್ಲಿ ಆಸಕ್ತಿ. ಶಾಲಾ ಮಟ್ಟದಲ್ಲಿರುವಾಗ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದೆ. ಹಾಗೇ ಹಲವಾರು ಕ್ಷೇತ್ರಗಳಲ್ಲಿ ಆಸಕ್ತಿ ಮೂಡಿತು. ಎಲ್ಲವನ್ನೂ ಅಭ್ಯಾಸ ಮಾಡುತ್ತಾ ಬಂದೆ. ಜೊತೆಗೆ ಓದನ್ನೂ ಬಿಡಲಿಲ್ಲ. ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿ L&T ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಚಿತ್ರಕಲೆಯಲ್ಲಿ ಆಸಕ್ತಿ ಬಂತು. ಅದರಲ್ಲೂ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.

ನಾಲ್ಕು ಅದ್ಭುತ ಪೆನ್ಸಿಲ್ ಸ್ಕೆಚ್ ಗಳು

ನಿಮ್ಮ ಕಲೆಗೆ ಈವರೆಗೂ ಯಾವೆಲ್ಲಾ ಪುರಸ್ಕಾರಗಳನ್ನು ಪಡೆದಿದ್ದೀರ?
ನರೇಂದ್ರ ಮೋದಿ, ಪ್ರತಾಪ್ ಸಿಂಹ, ರವಿ.ಡಿ.ಚೆನ್ನಣ್ಣನವರ್, ನಟ ಶ್ರೀನಾಥ್, ಸಾಹಿತಿ ಚಂಪಾ..ಹೀಗೆ ಹಲವಾರು ಗಣ್ಯರ ಚಿತ್ರಗಳನ್ನು ಬರೆದು ಕೆಲವರಿಗೆ ಅದನ್ನು ಉಡುಗೊರೆಯಾಗಿ ಕೊಟ್ಟಿದ್ದೇನೆ. ಅದಕ್ಕೆ ಎಷ್ಟೊಂದು ಜನ ಪ್ರಶಂಸೆಯನ್ನೂ ನೀಡಿದ್ದಾರೆ. 2019ರ ಜನವರಿಯಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ರವರ 5-5 ಅಡಿ ಅಳತೆಯ ಚಿತ್ರವನ್ನು ಗ್ಲೂ ಗ್ಲಿಟರಿಂಗ್ ನಿಂದ 3 ನಿಮಿಷದಲ್ಲಿ ಬಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದೇನೆ. 2017ರಲ್ಲಿ ಅರಮನೆ ಆವರಣದಲ್ಲಿ ನಡೆದ ಮಾಗಿ ಉತ್ಸವ, 2018ರ ಓಪನ್ ಸ್ಟ್ರೀಟ್ ಫೆಸ್ಟಿವಲ್ ಗಳಲ್ಲಿ ನಾನು ಮಾಡಿದ ಚಿತ್ರಗಳು ಪ್ರದರ್ಶನಗೊಂಡು ಪ್ರಮಾಣಪತ್ರ ಗಳಿಸಿವೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿ ಗೌರವಿಸಿವೆ.

ವಿಶ್ವದಾಖಲೆ ಪಡೆದ ಮೂರು ನಿಮಿಷದಲ್ಲಿ ರಚಿಸಲಾದ ಚಿತ್ರ

ನಿಮ್ಮ ಸಾಧನೆಗೆ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಸಹಕಾರ ಹೇಗಿದೆ?
ನಾನು ಇಷ್ಟೆಲ್ಲಾ ಸಾಧನೆ ಮಾಡುವುದಕ್ಕೆ ಕಾರಣವೇ ನಮ್ಮ ಪೋಷಕರು, ಸ್ನೇಹಿತರು. ಎಲ್ಲರೂ ನನಗೆ ಪ್ರತಿ ಹಂತದಲ್ಲೂ ಸಹಕಾರ ನೀಡಿ, ಪ್ರೋತ್ಸಾಹಿಸಿ, ಪ್ರೇರೇಪಣೆ ನೀಡಿದ್ದಾರೆ. ಜೊತೆಗೆ ನಮ್ಮ ಕಚೇರಿಯವರು ಸಹ ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ. ನನಗೆ ಕಾರ್ಯಕ್ರಮಗಳಿಗೆ ಹೋಗಬೇಕೆಂದಾಗಲೆಲ್ಲ ರಜೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಕಳುಹಿಸಿಕೊಡುತ್ತಾರೆ.

ಎಂತಹವರೂ ಕೂಡ ಏನಾದರೂ ಮಾಡಲು ಹೊರಟಾಗ ಅಡ್ಡಿಗಳು ಎದುರಾಗೇ ಆಗುತ್ತವೆ. ನಿಮಗೂ ಹಾಗೇನದರೂ ಆಗಿದೆಯೇ? ಆಗಿದ್ದರೆ ಅದನ್ನ ಹೇಗೆ ಎದುರಿಸಿದ್ದೀರ?
ಹೌದು.. ನನಗೂ ಎಷ್ಟೋ ಟೀಕೆ-ಟಿಪ್ಪಣಿಗಳು ಕೇಳಿ ಬಂದವು. ಹತ್ತಿರದವರು ನನಗೆ ಸಹಕಾರ ನೀಡಿದರೂ ಬಹಳಷ್ಟು ಜನ ನನ್ನ ಬಗ್ಗೆ ಏನೇನೋ ಮಾತನಾಡಿದರು. ಆದರೆ ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಕೆಲಸ ನಾನು ಮಾಡಿದೆ. ಆದ್ದರಿಂದಲೇ ಇಷ್ಟೆಲ್ಲಾ ಮಾಡುವುದಕ್ಕೆ ಸಾಧ್ಯವಾಯಿತು. ನಮಗೆಲ್ಲರಿಗೂ ಆಗಾಗ ಇಂತಹ ಸಂದರ್ಭಗಳು ಎದುರಾಗುತ್ತಿರುತ್ತವೆ. ಆದರೆ ನಾವು ನಮ್ಮ ಲಕ್ಷ್ಯ ಕಳೆದುಕೊಳ್ಳದೆ ನಮ್ಮ ಕೆಲಸ ಮಾಡಬೇಕು. ಅವರ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಆ ಸಮಯವನ್ನು ಕೆಲಸ ಮಾಡಲು ಬಳಸಿದರೆ ನಮಗೇ ಒಳ್ಳೆಯದು.

ನಿಮ್ಮಂತೆ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗುತ್ತದೆ. ಅದರಿಂದ ನಿಮಗೆ ಎಷ್ಟರಮಟ್ಟಿಗೆ ಉಪಯೋಗವಾಗಿದೆ?
ಹೌದು.. ನಮ್ಮಂತಹ ಕಲಾವಿದರಿಗೆ ಸಾಕಷ್ಟು ಹಣ ಬಿಡುಗಡೆಯಾಗುತ್ತದೆ. ಅದರಿಂದ ಆಗುವ ಉಪಯೋಗ ಮಾತ್ರ ಶೂನ್ಯ. ನಮಗಾಗಿ 10 ಸಾವಿರ ರೂಪಾಯಿ ಬಿಡುಗಡೆಯಾಗಿದ್ದರೆ ನಮ್ಮ ಕೈಗೆ ಬಂದು ತಲುಪುವಷ್ಟರಲ್ಲಿ ಅದು 3 ಸಾವಿರ ಆಗಿರುತ್ತದೆ. ಇದು ಸದ್ಯದ ಪರಿಸ್ಥಿತಿ. ಇದೇ ಕ್ಷೇತ್ರದಲ್ಲಿ ಗುರುತಿಸಿಕೊಂಡು ಇದನ್ನೇ ಜೀವನೋಪಾಯ ಮಾಡಿಕೊಳ್ಳಬೇಕೆಂದರೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಇರಬೇಕು. ನಮಗೆ ಅದೆಲ್ಲಾ ಇಲ್ಲವಾದ್ದರಿಂದ ಇದನ್ನು ಜೀವನೋಪಾಯವನ್ನಾಗಿ ಮಾಡಿಕೊಂಡಿಲ್ಲ. ಬೇರೆ ಕಡೆ ಕೆಲಸ ಮಾಡುತ್ತಿದ್ದೇನೆ.

ಈ ಎಲ್ಲಾ ಕಲೆಗಳನ್ನೂ ಅಭ್ಯಾಸ ಮಾಡುವುದಕ್ಕೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರ?
ಶನಿವಾರ ಹಾಗೂ ಭಾನುವಾರ ನನಗೆ ರಜ ಇರುತ್ತದೆ. ಆಗ ಎಲ್ಲವನ್ನೂ ಅಭ್ಯಾಸ ಮಾಡುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಯಾವುದರ ಮೇಲಾದರೂ ಆಸಕ್ತಿ ಇದ್ದರೆ ಅದನ್ನು ಯಾವ ಸಮಯದಲ್ಲಾದರೂ ಸಮಯ ಹೊಂದಿಸಿಕೊಂಡು ಮಾಡುತ್ತೇವೆ. ನಮ್ಮ ಆಸಕ್ತಿಯ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಅಷ್ಟೇ.

ಈ ರೀತಿ ಸಾಧನೆ ಮಾಡಬೇಕು ಎಂದು ಬಯಸುವ ಯುವಪ್ರತಿಭೆಗಳಿಗೆ ಏನು ಸಲಹೆ ಕೊಡುತ್ತೀರ?
ಯಾರು ಏನು ಹೇಳಿದರೂ ನೀವು ತಲೆಕೆಡಿಸಿಕೊಳ್ಳಬೇಡಿ. ನಿಮಗೆ ಯಾವುದರಲ್ಲಿ ಆಸಕ್ತಿ ಇರುತ್ತದೋ ಅದರಲ್ಲಿ ಮುಂದುವರೆಯಿರಿ. ಜನ ಏನನ್ನುತ್ತಾರೆ, ಅವರಿಗೆ ಹೇಗೆ ಉತ್ತರ ಕೊಡುವುದು ಎಂದು ಹಿಂಜರಿದರೆ ಏನನ್ನೂ ಮಾಡಲಾಗುವುದಿಲ್ಲ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.

ನಿಮ್ಮ ಮುಂದಿನ ಯೋಜನೆಗಳೇನು?
ಈಗ ನಾನು ಮಾಡಿರುವ ವಿಶ್ವದಾಖಲೆಯನ್ನು ನಾನೇ ಮುರಿಯಬೇಕು ಎಂಬುದು ನನ್ನ ಯೋಜನೆ. ನಾನು ಈ ಕೆಲಸಗಳನ್ನು ಮಾಡುವಾಗ, ಎಲ್ಲರೂ ನನ್ನ ಬಗ್ಗೆ ಟೀಕೆ ಮಾಡಿದಾಗ ನನಗೆ ಸಾಕಷ್ಟು ಜನ ಸಹಕಾರ ಮಾಡಿದರು. ಹಾಗೆ ನಾನು ಕೂಡ ಸಾಧಿಸುವ ಛಲ ಇರುವವರಿಗೆ, ಏನಾದರೂ ಮಾಡಬೇಕೆಂಬ ಆಸಕ್ತಿ ಇರುವವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ, ಸಹಕಾರ ನೀಡುತ್ತೇನೆ. ನಮ್ಮ ಕಚೇರಿಯಲ್ಲಿ ಸಿ.ಎಸ್.ಆರ್ ಪ್ರಾಜೆಕ್ಟ್ ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಇವನ್ನೆಲ್ಲಾ ಕಲಿಸುತ್ತೇನೆ. ತುಂಬಾ ಆಸಕ್ತಿ ಇರುವವರಿಗೆ ವೈಯಕ್ತಿಕವಾಗಿ ಕರೆದು ಹೇಳಿಕೊಡುತ್ತೇನೆ. ಇದನ್ನು ಹೀಗೆ ಮುಂದುವರೆಸಬೇಕು. ಜೊತೆಗೆ ಏಕಕಾಲಕ್ಕೆ ನಾಲ್ಕೈದು ಪೇಂಟಿಂಗ್ ಗಳನ್ನು ಒಟ್ಟಿಗೆ ಮಾಡಿ ದಾಖಲೆ ಮಾಡಬೇಕು. ಇದು ನನ್ನ ಗುರಿ..

ಇದಕ್ಕೇ ಹೇಳಿದ್ದು ಈತ ಸಕಲಕಲಾವಲ್ಲಭ ಎಂದು. ಇದು ಅಭಿಲಾಶ್ ಕೋರಿಯವರ ಯಶೋಗಾಥೆ. ಇವರ ಕಥೆಯಲ್ಲಿ ನಮಗೂ ಒಂದಷ್ಟು ಜೀವನ ಪಾಠ ಸಿಗುತ್ತದೆ. ಇವರು ಇನ್ನಷ್ಟು ಸಾಧನೆ ಮಾಡಿ ತಮ್ಮ ತಂದೆ ತಾಯಿಗೆ, ನಮ್ಮ ಮೈಸೂರಿಗೆ ಕೀರ್ತಿ ತರಲಿ ಎಂಬುದು ಎಲ್ಲರ ಆಶಯ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!