Sun. Jan 24th, 2021

Namma Mysuru

History, News, Stories and much more

ಕಲಾಕೃತಿ ಹಿಂದಿನ ನಿಜವಾದ ಕಥೆ..!

1 min read
544 Views

ತಿಳಿಗುಲಾಬಿ ಬಣ್ಣದ ಸೀರೆಯುಟ್ಟು ದೀಪ ಆರದಂತೆ ಜಾಗೃತೆ ವಹಿಸಿ ನಿಂತಿರುವ ಮಹಿಳೆ. ಸುತ್ತಲೂ ಕತ್ತಲು, ಕೈಯಲ್ಲೊಂದು ಕಂದೀಲು. ನೋಡಿದರೆ ಆಕೆ ಸಜೀವವಾಗಿ ಇದ್ದಾಳೆನೋ ಎನ್ನುವ ಭಾವನೆ ಬರುತ್ತದೆ. ಆದರೆ ಅದು ಒಬ್ಬ ಅತ್ಯದ್ಭುತ ಕಲಾವಿದನ ಸೃಷ್ಟಿ. ವಾಟರ್ ಕಲರ್ ನಲ್ಲಿ ಮಾಡಿರುವ ಅತ್ಯಂತ ಸುಂದರ ಸೃಷ್ಟಿ. ಈ ಕಲಾಕೃತಿಯನ್ನ ‘ಗ್ಲೋ ಆಫ್ ಹೋಪ್’ ಎಂದು ಕರೆಯಲಾಗುತ್ತದೆ. ಅಥವಾ ಸಾಮಾನ್ಯವಾಗಿ ಲೇಡಿ ವಿತ್ ದಿ ಲೈಟ್ ಎಂದು ಕೂಡ ಕರೆಯುತ್ತಾರೆ. ಈ ನಿಜವಾದ ಕಲಾಕೃತಿ ಇರುವುದು ನಮ್ಮ ಮೈಸೂರಿನಲ್ಲಿ. ಮೈಸೂರಿನ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ಎಂಬುದು ನಮ್ಮ ಹೆಮ್ಮೆ. ಈ ಕಲಾಕೃತಿ ಮೈಸೂರಿಗೆ ಬರುವುದಕ್ಕೂ ಹಿಂದೆ ಒಂದು ಸುಂದರ ಕಥೆಯಿದೆ. ತಂದೆ-ಮಗಳ ಶ್ರಮ ಇದೆ. ಇದನ್ನು ಕೊಂಡು ನಮ್ಮಲ್ಲಿರಿಸಿಕೊಂಡ ರಾಜರ ಬುದ್ಧಿವಂತಿಕೆಯಿದೆ. ಇದನ್ನು ಇನ್ನೂ ಹಾಗೆಯೇ ಕಾಪಾಡಿಕೊಂಡು ಬಂದಿರುವ ಜನರ ಕಾಳಜಿಯೂ ಇದೆ. ಇದು ಯಾರ ಕಲಾಕೃತಿ ಎಂದು ಯಾರನ್ನಾದರೂ ಕೇಳಿದರೆ ಥಟ್ಟನೆ ಕೇಳಿಬರುವ ಹೆಸರು ರಾಜಾ ರವಿ ವರ್ಮಾ.

ಆದರೆ ಸತ್ಯ ಅದಲ್ಲ. ಇದರ ನಿಜವಾದ ಸೃಷ್ಟಿಕರ್ತನ ಹೆಸರು ಎಸ್.ಎಲ್.ಹಲ್ದಂಕರ್. ಆದರೆ ಬಹುಪಾಲು ಜನ ಇದು ರಾಜಾ ರವಿ ವರ್ಮನದು ಎಂದು ತಪ್ಪಾಗಿ ಭಾವಿಸಿದ್ದಾರೆ. ಹಲ್ದಂಕರ್ ಮಾಡಿರುವ ಈ ಕಲಾಕೃತಿ ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಹಲ್ದಂಕರ್ ಕೂಡ ಉತ್ತರ ಭಾರತದ ಒಬ್ಬ ಅದ್ಭುತ ಕಲಾವಿದ. ಇದು ಅವರದೇ ಕೈಚಳಕ. ಈ ಚಿತ್ರವನ್ನ ಅವರು ರಚನೆ ಮಾಡಿದ್ದು ಸುಮಾರು 1945-46 ಸಂದರ್ಭದಲ್ಲಿ. ಇದರಲ್ಲಿ ದೀಪ ಹಿಡಿದು, ಅದನ್ನು ಆರದಂತೆ ತಡೆದು, ಸ್ನಿಗ್ಧ ಸೌಂದರ್ಯದ ಪ್ರತಿರೂಪವಾಗಿ ನಿಂತಿರುವವರು ಹಲ್ದಂಕರ್ ರವರ ಮಗಳು ಗೀತಾ ಹಲ್ದಂಕರ್.

ಒಮ್ಮೆ ದೀಪಾವಳಿಯ ದಿನ ಗೀತಾ ದೀಪ ಹಿಡಿದು ನಿಂತಿದ್ದರಂತೆ. ಆಗ ಇದ್ದಕ್ಕಿದ್ದಂತೆ ಗಾಳಿ ಜಾಸ್ತಿಯಾಗಿ ದೀಪ ಆರಬಾರದೆಂದು ತನ್ನ ಸೆರಗನ್ನು ಹೊದ್ದು, ದೀಪಕ್ಕೆ ಅಡ್ಡ ಹಿಡಿದರಂತೆ. ಈ ದೃಶ್ಯ ನೋಡಿ ಹಲ್ದಂಕರ್ ಗೆ ಕಲಾಕೃತಿ ರಚಿಸುವ ಮನಸ್ಸಾಗುತ್ತದೆ. ಆಕೆಯನ್ನ ಹಾಗೆಯೇ ದೀಪ ಹಿಡಿದು ನಿಲ್ಲಲು ಹೇಳುತ್ತಾರೆ. ಚಿತ್ರ ರಚನೆಯಾಗುವವರೆಗೆ ಬರೋಬ್ಬರಿ ಮೂರು ಗಂಟೆಗಳ ಕಾಲ ಗೀತಾ ಹಾಗೆಯೇ ನಿಂತಿರುತ್ತಾರೆ. ಆ ದೃಶ್ಯವನ್ನೇ ಕುಂಚದಲ್ಲಿ ಕಲೆಯಾಗಿ ಅರಳಿಸಿದ ಹಲ್ದಂಕರ್ ಕಲಾಕೃತಿ ರಚಿಸಿ ಮುಗಿಸುತ್ತಾರೆ. ಮುಂದೊಂದು ದಿನ ಜನ ಇದನ್ನು ದಿಗ್ಗಜ ಕಲಾವಿದ ರಾಜಾ ರವಿ ವರ್ಮಾ ರಚಿಸಿರುವ ಕಲಾಕೃತಿ ಎನ್ನುತ್ತಾರೆ ಎಂಬ ಸಣ್ಣ ಅರಿವು ಕೂಡ ಅವರಿಗೆ ಇರುವುದಿಲ್ಲ. ಈ ಚಿತ್ರ ರಚನೆಯಾದ ಸುಮಾರು ದಿನ ಅವರ ಮನೆಯಲ್ಲಿಯೇ ಇರುತ್ತದೆ. ಆಗೆಲ್ಲಾ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಕಲಾಪ್ರದರ್ಶನಗಳು, ವಿವಿಧ ರೀತಿಯ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯುತ್ತಿದ್ದವು. ಅದೇ ಸಮಯದಲ್ಲಿ ಒಮ್ಮೆ ಕಲಾಕೃತಿ ಪ್ರದರ್ಶನ ಮತ್ತು ಸ್ಪರ್ಧೆ ನಡೆಯುತ್ತಿತ್ತು. ಇದರಲ್ಲಿ ಭಾಗವಹಿಸಲು ಮನಸ್ಸು ಮಾಡಿದ ಹಲ್ದಂಕರ್ ಈ ಕಲಾಕೃತಿಯನ್ನು ತೆಗೆದುಕೊಂಡು ಹೊರಟರು. ಇದನ್ನು ಪ್ರದರ್ಶನಕ್ಕೆ ಇಟ್ಟರು. ಅದೃಷ್ಟವಶಾತ್ ಈ ಕಲಾಕೃತಿ ಮೊದಲನೇ ಬಹುಮಾನ ಪಡೆಯಿತು. ನಂತರ ಇದನ್ನು ಬಹಳ ಇಷ್ಟಪಟ್ಟ ಅಂದಿನ ಅರಸರು ಇದನ್ನು ಕೊಂಡುಕೊಂಡರು. ಮೊದಮೊದಲು ಇದನ್ನು ಅರಮನೆಯಲ್ಲಿಯೇ ಇರಿಸಲಾಗಿತ್ತು. ನಂತರ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಗೆ ಇದನ್ನು ಸ್ಥಳಾಂತರಿಸಲಾಯಿತು.

ಪ್ರಸ್ತುತ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯ ಎರಡನೇ ಮಹಡಿಯಲ್ಲಿ ಮಬ್ಬು ಬೆಳಕಿನ ಮಧ್ಯೆ ಗ್ಲೋ ಆಫ್ ಹೋಪ್ ಹೊಳೆಯುತ್ತಿದೆ. ಕಲಾಕೃತಿಯಲ್ಲಿ ಬಳಸಿರುವ ಬಣ್ಣಗಳು ಸರಿಯಾಗಿ ಕಾಣಿಸಲು ಮಬ್ಬು ಬೆಳಕೇ ಬೇಕು. ಆದ್ದರಿಂದ ಇದನ್ನು ಹಾಗೆ ಇರಿಸಲಾಗಿದೆ. ಇದು ರಾಜಾ ರವಿ ವರ್ಮನ ಕಲಾಕೃತಿಗಳ ಮಧ್ಯೆ ಇರುವುದರಿಂದಲೇ ಇದನ್ನು ನೋಡಿದ ಜನರೆಲ್ಲಾ ಇದೂ ಅವರದೇ ಕಲಾಕೃತಿ ಎಂದುಕೊಳ್ಳತ್ತಾರೆ. ಜೊತೆಗೆ ಇದರಲ್ಲಿ ಬಳಸಿರುವ ಬಣ್ಣಗಳು ಹಾಗೂ ಪೇಂಟಿಂಗ್ ಮಾಡಿರುವ ರೀತಿ ಕೂಡ ಅವರ ಶೈಲಿಯನ್ನೇ ಹೋಲುತ್ತದೆ. ಈ ಕಲಾಕೃತಿಯನ್ನು ಬೇರೆ ದೇಶದವರೊಬ್ಬರು ಕೋಟಿಗಟ್ಟಲೆ ಕೊಟ್ಟು ಕೊಂಡುಕೊಳ್ಳಲು ತಯಾರಿದ್ದರಂತೆ. ಆದರೆ ಇದನ್ನು ಯಾರಿಗೂ ಕೊಟ್ಟಿಲ್ಲ, ಕೊಡುವುದಿಲ್ಲ.
ಇನ್ನು ಹೀಗೆ ದೀಪ ಹಿಡಿದು ನಿಂತಿರುವ ಹುಡುಗಿ ಗೀತಾ ಉಪ್ಲೇಕರ್ ಎಂಬುವವರನ್ನು ವಿವಾಹವಾಗಿ ಗುಜರಾತ್ ಬಳಿ ವಾಸವಿದ್ದರು. ಗೀತಾ ಉಪ್ಲೇಕರ್ 2018ರಲ್ಲಿ ತಮಗೆ 102 ವರ್ಷವಿದ್ದಾಗ ಕೊನೆಯುಸಿರೆಳೆದರು. ಗೀತಾ ಈಗ ನಮ್ಮೊಂದಿಗಿಲ್ಲ. ಆದರೂ ಕೂಡ ಅವರ ಈ ಕಲಾಕೃತಿ ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿದಿದೆ. ಅವರ ಈ ಭಂಗಿಗೆ ಎಂದೆಂದಿಗೂ ಸಾವಿಲ್ಲ ಎಂಬುದು ಮಾತ್ರ ಸತ್ಯ.

ದುಡ್ಡಿನಾಸೆಗೆ ಎಂದಿಗೂ, ಯಾರೂ ಈ ಕಲಾಕೃತಿಯನ್ನು ಮಾರಾಟ ಮಾಡುವ ಮನಸ್ಸು ಮಾಡಿಲ್ಲ. ಇಂದಿಗೂ ಅದನ್ನು ಇಷ್ಟು ಚೆಂದವಾಗಿ, ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ ಎಂದರೆ ಅದು ಮೈಸೂರಿಗರಿಗರುವ ಕಲಾಭಿಮಾನಕ್ಕೆ ಸಾಕ್ಷಿ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!