ರಾಜಾಭಿಮಾನಿಯ ರಾಜಾಲಯ..!
1 min read
ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎಂದಿದ್ದಕ್ಕೋ ಏನೋ, ಅವರನ್ನೇ ದೇವರಂತೆ ನೋಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
ಮೈಸೂರಿನಲ್ಲೂ ಅಣ್ಣಾವ್ರ ಕಟ್ಟಾ ಅಭಿಮಾನಿಯೊಬ್ಬರಿದ್ದಾರೆ. ಅವರ ಅಭಿಮಾನಕ್ಕೆ ಅವರ ಮನೆಯೇ ಸಾಕ್ಷಿ. ಹೊರಗಿನಿಂದ ಮನೆಯನ್ನು ನೋಡಿದಾಗಲೇ ಗೋಡೆಯ ಮೇಲೆ ಗ್ರಾನೈಟ್ ನಿಂದ ಮಾಡಿದ ರಾಜ್ಕುಮಾರ್ ಅವರ ಶಿಲ್ಪ, ಅದರ ಕೆಳಗೆ ಕಸ್ತೂರಿ ನಿವಾಸ ಎಂಬ ಹೆಸರು ಕಾಣಿಸುತ್ತದೆ. ಮನೆ ಮುಂದೆ ನಿಂತಿರುವ ಗಾಡಿ ಮೇಲೂ ರಾಜ್ಕುಮಾರ್ ಚಿತ್ರ. ಇನ್ನು ಮನೆ ಒಳಗೆ ಹೋದರಂತೂ ಅದು ರಾಜಾಲಯ. ಅಂದಹಾಗೆ ಈ ಮನೆ ಇರುವುದು ಮೈಸೂರಿನ ಹೆಬ್ಬಾಳದಲ್ಲಿ.

ಈ ರಾಜಾಭಿಮಾನಿ ಹೆಸರು ಸಿದ್ದರಾಜು. ವೃತ್ತಿಯಲ್ಲಿ ಸಿವಿಲ್ ಲೇಬರ್ ಕಂಟ್ರಾಕ್ಟರ್. ಎಲ್ಲಕ್ಕೂ ಮಿಗಲಾಗಿ ರಾಜ್ಕುಮಾರ್ ಅವರ ಆರಾಧಕ. ಇವರ ತಂದೆಯಿಂದ ಮೊದಲುಗೊಂಡು ಕುಟುಂಬದ ಎಲ್ಲರಿಗೂ ಅಣ್ಣಾವ್ರ ಮೇಲೆ ಅಪಾರ ಅಭಿಮಾನವಿತ್ತಂತೆ. ಯಾವುದೇ ಕಾರಣಕ್ಕೂ ತಪ್ಪಿಸದೇ ಅವರ ಹಾಗೂ ಅವರ ಮಕ್ಕಳ ಚಿತ್ರಗಳ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರಂತೆ. ಈಗ ಸಿದ್ದರಾಜು ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮನೆಯನ್ನೆಲ್ಲಾ ರಾಜಕುಮಾರಮಯ ಮಾಡಿದ್ದಾರೆ. ಒಳಗೆ ಹೋದರೆ ವರಂಡಾ ಗೋಡೆಯ ಮೇಲೆ ರಾಜ್ ಅವರ ದೊಡ್ಡ ಪೇಂಟಿಂಗ್ ಕಾಣುತ್ತದೆ. ಒಳಗೆ ಹೋದರಂತೂ ಗಡಿಯಾರ, ಕ್ಯಾಲೆಂಡರ್ ನಿಂದ ಹಿಡಿದು ಗೋಡೆ, ದೇವರು ಮನೆಯಲ್ಲೂ ರಾಜ್ಕುಮಾರ್ ಇದ್ದಾರೆ. ಎಲ್ಲವನ್ನೂ ಅವರೇ ವಿನ್ಯಾಸಗೊಳಿಸಿ ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿ ಮಾಡುವ ಪ್ರತಿ ಶುಭಕಾರ್ಯದ ಆಮಂತ್ರಣ ಪತ್ರಿಕೆಯಲ್ಲೂ ರಾಜ್ ಚಿತ್ರ ಇರುತ್ತದೆ. ದೇವರ ಮನೆಯಲ್ಲಿ ಮನೆದೇವರ ಫೋಟೋ ಜೊತೆ ರಾಜ್ಕುಮಾರ್ ರವರ ಬೆಳ್ಳಿ ಚಿತ್ರವನ್ನು ಇರಿಸಲಾಗಿದೆ. ಪ್ರತಿದಿನ ಇದಕ್ಕೂ ಪೂಜೆ ಮಾಡಲಾಗುತ್ತದೆ. ಹಾಗೆ ಮನೆ ಹೊರಗೆ ಎಲ್ಲೆಲ್ಲಿ ರಾಜ್ ಚಿತ್ರ ಇದೆಯೋ ಅಲ್ಲಿಗೆಲ್ಲಾ ದಿನವೂ ಹೂವು ಹಾಕುವ ಕೆಲಸವನ್ನು ಒಬ್ಬೊಬ್ಬರಿಗೆ ಒಪ್ಪಿಸಲಾಗಿದೆ.

ಮನೆಯ ಮೊದಲ ಮಹಡಿಯಲ್ಲಿ ಒಂದು ಹೋಮ್ ಥಿಯೇಟರ್ ಸಿದ್ಧಮಾಡಿದ್ದಾರೆ. ಇಲ್ಲಿ ರಾಜ್ಕುಮಾರ್ ನಟನೆಯ ೨೦೮ ಚಿತ್ರಗಳ ಸಿಡಿಗಳಿವೆ. ಅದರೊಂದಿಗೆ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನೋದ್ ರಾಜ್ಕುಮಾರ್ ಅವರ ಪ್ರತಿಯೊಂದು ಚಿತ್ರದ ಸಿಡಿಯೂ ಇದೆ. ಇನ್ನೊಂದು ವಿಶೇಷ ಎಂದರೆ ಇವರ ಮನೆಯವರು ರಾಜ್ಕುಮಾರ್ ಮತ್ತು ಕುಟುಂಬದವರ ಚಿತ್ರಗಳನ್ನು ಬಿಟ್ಟರೆ ಮತ್ಯಾವ ಚಿತ್ರಗಳನ್ನೂ ನೋಡುವುದಿಲ್ಲ. ‘ನಮಗೆ ಇವರ ಮೇಲೆ ಅಭಿಮಾನ. ಆದ್ದರಿಂದ ಇವರ ಚಿತ್ರಗಳನ್ನು ಮಾತ್ರ ನೋಡುತ್ತೆÃವೆ. ಹಾಗಂತ ಬೇರೆಯವರ ಬಗ್ಗೆ ಯಾವ ಅನ್ಯಥಾಭಾವನೆಯೂ ಇಲ್ಲ. ಹಾಗೆ ಮಾಡುವುದು ಕೂಡ ತಪ್ಪು’ ಎನ್ನುತ್ತಾರೆ ಅಭಿಮಾನಿ ಸಿದ್ದರಾಜು.

ಸಿದ್ದರಾಜು ರಾಜ್ಕುಮಾರ್ ರವರನ್ನು ನೋಡಿ ಜೀವನದಲ್ಲಿ ಎಲ್ಲಾ ಗುಣಗಳನ್ನೂ ಅಳವಡಿಸಿಕೊಂಡಿದ್ದಾರಂತೆ. ಅವರ ಸರಳತೆ, ಸೇವಾಮನೋಭಾವ, ಅನ್ನದ ಮೇಲಿನ ಗೌರವ, ಕೆಟ್ಟ ಚಟಗಳಿಂದ ದೂರವಿರುವ ಗುಣ..ಹೀಗೆ ಎಲ್ಲಾ ಗುಣವೂ ಇವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇಂದಿಗೂ ಅವರು ಬಳಸುವುದು ಬೇಸಿಕ್ ಫೋನ್ ಮಾತ್ರ. ಒಂದು ತಿಂಗಳ ಹಿಂದೆ ಇವರ ಮನೆಗೆ ಗೃಹಪ್ರವೇಶ ಮಾಡಿದಾಗ ಒಂದು ಫೋಟೋವನ್ನೂ ತೆಗೆಸಿಲ್ಲ. ಎಷ್ಟು ಸಂಪಾದಿಸಿದರೂ ಹಮ್ಮುಬಿಮ್ಮು ತೋರದೆ, ಒಂದು ಅಗಳು ಅನ್ನವನ್ನೂ ವ್ಯರ್ಥ ಮಾಡದೇ, ಕೆಟ್ಟ ಚಟ ಬೆಳೆಸಿಕೊಳ್ಳದೆ ಅತ್ಯಂತ ಸರಳತೆಯಿಂದ ಜೀವನ ಸಾಗಿಸುತ್ತಿದ್ದಾರೆ. ರಾಜ್ಕುಮಾರ್ ಹೆಸರಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಕೊಡುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಇಂತಹ ಎಷ್ಟೋ ಕೆಲಸಗಳನ್ನು ಮಾಡಿದ್ದರೂ ಅವರು ಹೇಳಿಕೊಳ್ಳುವುದಿಲ್ಲ.

ಮೈಸೂರಿಗೆ ಬಂದಿದ್ದ ಪುನೀತ್ ಇವರ ಮನೆಗೆ ಬಂದಿದ್ದರು. ಇವರ ಅಭಿಮಾನ ನೋಡಿ ಅಕ್ಷರಶಃ ಪುನೀತರಾಗಿ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ರಾಜ್ ಕುಟುಂಬದ ಆಪ್ತರಲ್ಲಿ ಇವರೂ ಒಬ್ಬರು. ಇಷ್ಟಾದರೂ ಸಿದ್ದರಾಜು ಅಷ್ಟೇ ಸರಳರಾಗಿದ್ದಾರೆ. ‘ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಕರೆದಲ್ಲೆಲ್ಲಾ ಬರಬೇಕೆಂದು ಅಪೇಕ್ಷಿಸುತ್ತಾರೆ. ಅದು ತಪ್ಪು. ಅವರಿಗೆ ಸಾವಿರ ಕೆಲಸ ಇರುತ್ತದೆ. ಒತ್ತಡದಲ್ಲಿರುತ್ತಾರೆ. ಅಭಿಮಾನಿಗಳಾಗಿ ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲಾ ಮೀರಿ ಅವರು ನಮ್ಮ ಮನೆಗೆ ಬಂದಿದ್ದು ತುಂಬಾ ಸಂತೋಷವಾಯಿತು’ ಎನ್ನುತ್ತಾ ಮುಗ್ಧವಾಗಿ ಮುಗುಳ್ನಗುತ್ತಾರೆ ರಾಜಾಭಿಮಾನಿ ಸಿದ್ದರಾಜು.