Sat. Jan 9th, 2021

Namma Mysuru

History, News, Stories and much more

ಬೆಂಕಿಯಲ್ಲಿ ಅರಳಿದ ಹೂವು‌.

1 min read
494 Views

ಮೈಸೂರಿನಲ್ಲಿ ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿವೆ. ಕೆಲವರು ನಿಧಾನಕ್ಕೆ ಬೆಳಕಿಗೆ ಬರುತ್ತಿದ್ದಾರೆ. ಇನ್ನು ಕೆಲವರು ಎಲೆಮರೆಕಾಯಿಯಾಗಿಯೇ ಇದ್ದುಕೊಂಡು ಸಾಧನೆಗಳನ್ನು ಮಾಡಿ ಮೈಸೂರಿಗೆ, ಮೈಸೂರಿಗರಿಗೆ ಕೀರ್ತಿ ತರುತ್ತಿದ್ದಾರೆ. ಅವರಲ್ಲಿ ಗ್ರಾಮೀಣ ಪ್ರತಿಭೆಗಳೂ ಇದ್ದಾರೆ ಎಂಬುದು ಹೆಮ್ಮೆಯ ವಿಚಾರ. ಈಗ ಹೇಳುತ್ತಿರುವ ಈ ಪ್ರತಿಭಾವಂತ ಕಲಾವಿದ ಪುನೀತ್ ಕುಮಾರ್.

ಪುನೀತ್ ಕುಮಾರ್ ಈಗಷ್ಟೇ ವಿಶ್ವದಾಖಲೆ ಮಾಡಿದ್ದಾರೆ. ತಲೆಕೆಳಗಾದ ಭಗತ್ ಸಿಂಗ್ ಚಿತ್ರವನ್ನು ಕೇವಲ ಒಂದು ನಿಮಿಷದಲ್ಲಿ ಬಿಡಿಸಿ ಯಾರೂ ಈವರೆಗೂ ಮಾಡಿರದ ಸಾಧನೆ ಮಾಡಿದ್ದಾರೆ. ಇವರು ಮೂಲತಃ ಮೈಸೂರಿನ ನಾಡನಹಳ್ಳಿಯವರು. ಮುಂಚಿನಿಂದ ಬಡಕುಟುಂಬ. ತಂದೆ ಪೇಂಟರ್, ತಾಯಿ ಗೃಹಿಣಿ, ಇದ್ದೊಬ್ಬ ಅಣ್ಣ ಕೂಡ ಅಂಗವಿಕಲ. ಚಿಕ್ಕವಯಸ್ಸಿನಿಂದಲೂ ಪುನೀತ್ ಗೆ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲ ಇತ್ತು.. ಆದರೆ ಮನೆಯ ಪರಿಸ್ಥಿತಿ ಹೆಚ್ಚು ಯೋಚನೆ ಮಾಡುವ ಅವಕಾಶ ಕೊಟ್ಟಿರಲಿಲ್ಲ. ಇವರು ಒಂಬತ್ತನೇ ತರಗತಿ ಓದುತ್ತಿರುವಾಗ ಇವರ ತಂದೆ ಆಕಸ್ಮಿಕವಾಗಿ ವಿಧಿವಶರಾಗುತ್ತಾರೆ. ಆಗ ಇಡೀ ಮನೆಯ ಜವಾಬ್ದಾರಿ ಪುನೀತ್ ಮೇಲೆಯೇ ಬರುತ್ತದೆ. ಹೀಗೆ ದಿನಗಳು ಕಳೆಯುತ್ತಿರುವಾಗ ಪುನೀತ್ ಒಂದು ದಿನ ವಿಲಾಸ್ ನಾಯಕ್ ಅವರ ವಿಡಿಯೋ ಒಂದನ್ನು ನೋಡುತ್ತಾರೆ.

ಶಾಲಾ ದಿನಗಳಲ್ಲಿ ಜಿಲ್ಲಾ, ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಪುನೀತ್ ಗೆ ಇದೇ ತನ್ನ ಗುರಿ ಎಂದು ತೋರಿಸಿಕೊಟ್ಟಿದ್ದು ವಿಲಾಸ್ ನಾಯಕ್ ಅವರ ವಿಡಿಯೋ. ಅದನ್ನು ನೋಡಿ ಪ್ರೇರೇಪಿತರಾಗಿ ತಾವೂ ಪೇಂಟಿಂಗ್ ಮಾಡಲು ಶುರುಮಾಡುತ್ತಾರೆ. ಗುರು ಇಲ್ಲ.. ಗುರಿ ಮಾತ್ರ ಇವರ ಕಣ್ಮುಂದೆ ಇರುತ್ತದೆ. ಹಾಗೆ ನೋಡನೋಡುತ್ತಲೇ ಅತ್ಯದ್ಭುತ ಕಲಾವಿದರಾಗುತ್ತಾರೆ. ಭಾವಚಿತ್ರ, ಪ್ರಕೃತಿ ಎಲ್ಲದರಲ್ಲೂ ಇವರು ಸಿದ್ಧಹಸ್ತ.
ಹೀಗೆ ಒಮ್ಮೆ ಏನಾದರೂ ವಿಶಿಷ್ಟವಾದ ಸಾಧನೆ ಮಾಡಬೇಕೆಂದು ಯೋಚಿಸುತ್ತಿರುವಾಗ ಬಂದ ಉಪಾಯ ಒಂದು ನಿಮಿಷದಲ್ಲಿ ಚಿತ್ರ ಬಿಡಿಸುವುದು. ಅದೂ ತಲೆಕೆಳಗಾದ ಚಿತ್ರ. ಇದನ್ನು ಪರಿಶ್ರಮದಿಂದ ಅಭ್ಯಾಸ ಮಾಡಿ ವಿಶ್ವದಾಖಲೆಗೆ ಅರ್ಜಿ ಹಾಕಿಯೇ ಬಿಡುತ್ತಾರೆ. ಅವರಿಗೆ ಒಂದು ನಿಮಿಷದಲ್ಲಿ ಚಿತ್ರ ಬಿಡಿಸಿದ ವಿಡಿಯೋವನ್ನು ಕಳುಹಿಸುತ್ತಾರೆ. ಅದು ಆಯ್ಕೆಯಾಗಿ ವಿಶ್ವದಾಖಲೆಯಾಗುತ್ತದೆ..!

ಪ್ರಸ್ತುತ ಈ ಪ್ರತಿಭೆ ವಿಶ್ವದಾಖಲೆಯ ಸರದಾರ, ಆದರೆ ವಿಧಿಯಾಟ ನೋಡಿ, ಆ ಪ್ರಮಾಣಪತ್ರ ಪಡೆಯಲು ದೆಹಲಿಗೆ ಹೋಗಬೇಕು. ದೆಹಲಿಗೆ ಹೋಗುವ ಹೋಗುವಷ್ಟು ಅನುಕೂಲ ಇವರಿಗಿಲ್ಲ. ಆದ್ದರಿಂದ ಇಲ್ಲಿಗೆ ಪ್ರಮಾಣಪತ್ರವನ್ನು ಕೊರಿಯರ್ ಮಾಡಲಾಗುತ್ತಿದೆ, ಈಗಲೂ ಪುನೀತ್ ಜೀವನಕ್ಕೆ ಶಾಲೆಯಲ್ಲಿ ಮಕ್ಕಳಿಗೆ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಲೆಯನ್ನು ಜೀವನೋಪಾಯ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಅವರು ಕಂಡುಕೊಂಡಿರುವ ಸತ್ಯ. ಕಷ್ಟಗಳೆಷ್ಟೇ ಬಂದರು ಇವರು ಎಳ್ಳಷ್ಟೂ ಬೇಸರ ಮಾಡಿಕೊಂಡಿಲ್ಲ. ತಾವೇ ಕಷ್ಟದಲ್ಲಿರುವ ಇವರಿಗೆ ಶುಲ್ಕ ಕೊಡಲು ಶಕ್ತಿಯಿಲ್ಲದ, ಕಲೆ ಬಗ್ಗೆ ಏನೂ ತಿಳಿಯದ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆ ಹೇಳಿಕೊಡುವಾಸೆ.. ಇವರು ಅಕ್ಷರಶಃ ಬೆಂಕಿಯಲ್ಲಿ ಅರಳಿದ ಹೂವು.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!