ಆನೆಹಬ್ಬದ ಸಂಭ್ರಮ..!
1 min read
ಬೇರೆ ನಗರಗಳೊಂದಿಗೆ ತಾಳೆ ಹಾಕಿ ನೋಡಿದರೆ ಮೈಸೂರಿನಲ್ಲಿ ಅತಿ ಹೆಚ್ಚು ವಿಧಧ ಸಂಪ್ರದಾಯಗಳು, ಹಬ್ಬಗಳು ಆಚರಣೆಯಲ್ಲಿದ್ದವು. ಶತಮಾನಗಳಿಂದ ಮೈಸೂರಿನಲ್ಲಿ ವಿವಿಧ ಆಚರಣೆಗಳು ಸತತವಾಗಿ ನಡೆದುಕೊಂಡು ಬರುತ್ತಿದೆ. ಆಧುನಿಕತೆಯ ಗಾಳಿ ಬೀಸಿದಂತೆ ಒಂದಷ್ಟು ಆಚರಣೆಗಳು ನೇಪಥ್ಯಕ್ಕೆ ಸರಿದಿದೆ. ಮೈಸೂರಿನಲ್ಲಿ ಆನೆಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆನೆ ಎಂದರೆ ಇಲ್ಲಿ ಪೂಜ್ಯನೀಯ ಪ್ರಾಣಿ. ಅಂಬಾರಿ ಹೊರಲೂ ಆನೆಯೇ ಬೇಕು, ಯುದ್ಧಕ್ಕೆ ಸನ್ನದ್ಧವಾಗಲೂ ಗಜರಾಜನೇ ಆಗಬೇಕು ಎಂಬುದು ಮೈಸೂರಿಗರ ಭಾವನೆ. ಇಷ್ಟು ಪೂಜ್ಯನೀಯ ಭಾವದಿಂದ ನೋಡುವ ಆನೆಗೆ ಗೌರವಾರ್ಥವಾಗಿ ಒಂದು ಪೂಜೆ ಮಾಡದಿದ್ದರೆ ಹೇಗೆ? ಅದಕ್ಕಾಗಿಯೇ ವೃತವೊಂದಿದೆ. ಅದನ್ನು ಆನೆಹಬ್ಬ ಎಂದು ಕರೆಯಲಾಗುತ್ತದೆ.
ಆನೆಹಬ್ಬದ ಹಿನ್ನೆಲೆ:
ಆನೆಹಬ್ಬ ಮೈಸೂರು ಪ್ರಾಂತ್ಯದಲ್ಲಿ ಪ್ರಸಿದ್ಧಿ ಹೊಂದಿದ್ದರೂ ಸಹ ಇಲ್ಲಿ ವಾಸಿಸುವ ಎಲ್ಲರೂ ಇದನ್ನು ಆಚರಣೆ ಮಾಡುತ್ತಿರಲಿಲ್ಲ. ಈ ಹಬ್ಬವನ್ನು “ಮೈಸೂರು ಅಯ್ಯಂಗಾರರು” ಎಂದು ಕರೆಸಿಕೊಳ್ಳುವ ಒಂದೇ ಒಂದು ಪಂಗಡದವರು ಮಾತ್ರ ಆಚರಿಸುತ್ತಿದ್ದರು. ಕಾರ್ತಿಕ ಮಾಸದ ವಿಷ್ಣುದೀಪದ ದಿನ (ಹುಣ್ಣಿಮೆಯಂದು) ಆಚರಿಸಲಾಗುತ್ತಿದ್ದ ಈ ಹಬ್ಬಕ್ಕೆ ಪೌರಾಣಿಕ ಕಾರಣಗಳಿತ್ತು. ಕಾರ್ತಿಕ ಮಾಸದಲ್ಲಿ ಗಜಲಕ್ಷ್ಮೀ ವೃತ ಮಾಡುತ್ತಾರೆ. ಅದೂ ಅಲ್ಲದೆ ಮಹಾಭಾರತದ ಗಾಂಧಾರಿ ಮಣ್ಣಿನ ಆನೆ ಮಾಡಿ ಪೂಜೆ ಮಾಡಿದಾಗ ಭೀಮ ತಾಯಿಯ ಪೂಜೆಗೆ ಇಂದ್ರಲೋಕದಿಂದ ಐರಾವತವನ್ನೇ ತಂದನೆಂದು ಹೇಳಲಾಗುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ಈ ಸಂದರ್ಭದಲ್ಲಿ ಆನೆಹಬ್ಬಆಚರಣೆ ಮಾಡುತ್ತಿದ್ದರೇನೋ. ಸೈನ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಆನೆಗಳಿಗೆ ಗೌರವ ಸೂಚಿಸುವ ಸಲುವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು.
ಈ ಹಬ್ಬದ ದಿನ ಹೊಲದಿಂದ ತಂದ ಜೇಡಿಮಣ್ಣಿನಲ್ಲಿ ಗಂಡಾನೆಯನ್ನು ಮಾಡಿ ಅದಕ್ಕೆ ಅಲಂಕಾರ ಮಾಡಿ, ಕುಂಕುಮ ಇಟ್ಟು ಶುಭಕಾಲದಲ್ಲಿ ಹಸೆಮಣೆಯ ಮೇಲೆ ಕೂರಿಸುತ್ತಿದ್ದರು. ಅದರೊಂದಿಗೆ ಮನೆಯಲ್ಲಿರುವ ಬೇರೆ ಬೇರೆ ಆನೆಗಳನ್ನು ಇದರೊಂದಿಗೆ ಇರಿಸುತ್ತಿದ್ದರು. ಈಗಿನ ದಿನಗಳಿಗಿಂತ ಆಗಿನ ಕಾಲದಲ್ಲಿ ದಸರಾ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದ್ದರಿಂದ ಮನೆಯಲ್ಲಿ ಗೊಂಬೆಗಳು ಇದ್ದೇ ಇರುತ್ತಿದ್ದವು. ಅದರಲ್ಲೂ ಆನೆಗಳಂತೂ ಅವಶ್ಯಕವಾಗಿ ಇರುತ್ತಿದ್ದವು. ಅವೆನ್ನೆಲ್ಲಾ ಒಟ್ಟಿಗೆ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಎಲ್ಲಾ ಹಬ್ಬಗಳಲ್ಲಿ ಮಾಡುವಂತೆ ಹಬ್ಬದಡಿಗೆ ನೈವೇದ್ಯ ಮಾಡಿ ಅದರೊಂದಿಗೆ ಆನೆಗೆ ಪ್ರಿಯವಾದ ಗರಿಕೆ, ಬಾಳೆಹಣ್ಣು, ಅಕ್ಕಿ, ಬೆಲ್ಲ, ಕಾಯಿ ಇಡುತ್ತಿದ್ದರು. ಅದರ ನಂತರ ಗಣಪತಿಯನ್ನು ವಿಸರ್ಜನೆ ಮಾಡುವಂತೆ ಆನೆಯನ್ನೂ ವಿಸರ್ಜನೆ ಮಾಡುತ್ತಿದ್ದರು. ಆದರೆ ನೀರಿನ ಬದಲು ಯಾವುದಾದರೂ ಹೊಲದಲ್ಲಿ. ಬಾಳೆ ತೋಟ, ಅವರೆಕಾಯಿ ತೋಟ ಅಥವಾ ಯಾವುದಾದರೂ ಗಿಡಮರಗಳ ಗುಂಪಿನ ಮಧ್ಯೆ ಅದನ್ನು ಮೂರನೆಯ ಅಥವಾ ಐದನೆಯ ದಿನ ವಿಸರ್ಜಿಸಿ ಬರುತ್ತಿದ್ದರು. ವಿಸರ್ಜನೆ ಮಾಡುವಾಗ ‘ಆನೆದೇವರೇ, ಲೋಕವೆಲ್ಲಾ ಸುಭೀಕ್ಷವಾಗಿರುವಂತೆ ಮಾಡು’ ಎಂದು ಕೇಳಿಕೊಳ್ಳುತ್ತಿದ್ದರು. ಇದು ಹಬ್ಬದ ಕ್ರಮ.
ನಮ್ಮ ಮೈಸೂರಿನಲ್ಲಿ ಪ್ರಾಣಿಗಳನ್ನು ಪೂಜ್ಯವಾಗಿ ಕಾಣುವ ಕುರುಹಾಗಿ ಆನೆಹಬ್ಬ ನಿಲ್ಲುತ್ತದೆ. ಅಂಬಾರಿ ಹೊರಲು ಆನೆಗಳನ್ನು ತಿಂಗಳ ಮುಂಚೆಯೇ ಕರೆತಂದು ಮನೆಯ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ನಮ್ಮ ಮೈಸೂರಿಗರ ಆನೆ ಪ್ರೀತಿ ಬಹಳ ವಿಶೇಷವಾದದ್ದು ಎಂಬುದು ಇದರಿಂದಲೇ ತಿಳಿಯುತ್ತದೆ. ಅದರಲ್ಲೂ ಆನೆ ದೇವರೆಂಬ ಪರಿಕಲ್ಪನೆ, ಅದರಿಂದ ಇಡೀ ಲೋಕಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಮುಗ್ಧ ನಂಬಿಕೆಯ ಪ್ರತಿಬಿಂಬವಾಗಿದೆ.