Wed. Jul 8th, 2020

Namma Mysuru

History, News, Stories and much more

ಕನ್ನಡಾಭಿಮಾನಿ ಕ್ಷೌರಿಕನಿಂದ ಸಾಹಿತಿಗಳ ಶೈಲಿಯ ಕೇಶವಿನ್ಯಾಸ!

1 min read
164 Views

ಭಾಷೆಯ ಮೇಲೆ ಅಭಿಮಾನ ತೋರಿಸುವುದಕ್ಕೆ ಯಾವುದೇ ಪೂರ್ವನಿಯೋಜಿತ ರೀತಿ-ನೀತಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿರುವವರು ನಮ್ಮ ನಡುವೆ ಎಷ್ಟೋ ಜನ ಇದ್ದಾರೆ. ತಾವು ಮಾಡುವ ಕೆಲಸದಲ್ಲೇ ಭಾಷಾಭಿಮಾನ ತೋರಿಸಿ ಗಮನ ಸೆಳೆಯುತ್ತಾರೆ.

ಅಗ್ರಹಾರದ ಸೆಂಟ್ ಮೇರಿಸ್ ಶಾಲೆಯಿಂದ ಸಿವೇಜ್ ಫಾರಂ ರಸ್ತೆ ಪ್ರವೇಶಿಸುತ್ತಿದ್ದಂತೆ ಸ್ವಲ್ಪ ಮುಂದಕ್ಕೆ ಹೋದರೆ ಬಲಕ್ಕೆ ‘ಸೂಪರ್ ಸ್ಟೈಲ್ ಮೆನ್ಸ್ ಪಾರ್ಲರ್’ ಎಂಬ ಅಂಗಡಿಯೊಂದು ಸಿಗುತ್ತದೆ. ಅಂಗಡಿಯ ಹೊರಗೆ ಕುವೆಂಪು, ಶಿವರಾಮ ಕಾರಂತ, ಅನಂತಮೂರ್ತಿ, ಚಂದ್ರಶೇಖರ ಕಂಬಾರರಂತಹ ಸಾಹಿತ್ಯ ದಿಗ್ಗಜರ ಫೋಟೋಗಳು ರಾರಾಜಿಸುತ್ತವೆ. ಒಳಗೆ ಗೋಡೆಯ ಮೇಲೆ ಕನ್ನಡ ಸಾಹಿತಿಗಳ ಭಾವಚಿತ್ರ, ಕನ್ನಡ ಪುಸ್ತಕಗಳು..ಹೀಗೆ ಎಲ್ಲೆಲ್ಲೂ ಕನ್ನಡವೇ ಕಾಣಿಸುತ್ತದೆ.

ಈ ಅಂಗಡಿಯ ಮಾಲೀಕ ಮಂಜುನಾಥ್. ೨೫ ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮಂಜುನಾಥ್‌ಗೆ ಕನ್ನಡದ ಮೇಲೆ ಅಭಿಮಾನ. ಎಲ್ಲರೂ ಸಿನಿಮಾ ನಟರ ರೀತಿ ಕೇಶವಿನ್ಯಾಸ ಮಾಡಿಕೊಳ್ಳಬೇಕೆಂದು ಇಷ್ಟಪಡುತ್ತಾರೆ. ಹಾಗೆ ಸಾಹಿತಿಗಳ ಕೇಶವಿನ್ಯಾಸ ಏಕೆ ಮಾಡಬಾರದು ಎಂದು ಯೋಚಿಸಿದ ಮಂಜುನಾಥ್ ತಮ್ಮ ಸಲೂನ್‌ನಲ್ಲಿ ವಿಶಿಷ್ಟ ಪದ್ಧತಿಯನ್ನು ಶುರುಮಾಡಿಯೇ ಬಿಟ್ಟರು.

ಕುವೆಂಪು ಅವರ ಮಿಷನ್ ಕಟಿಂಗ್, ಮಾಸ್ತಿ ಸಿಜರ್ ಕಟಿಂಗ್, ಕಾರಂತ್ ಹೇರ್ ಸೆಟ್ಟಿಂಗ್, ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್, ವಿ.ಕೃ.ಗೋಕಾಕ್ ಫೇಸ್ ಮಸಾಜ್ ಸೇರಿದಂತೆ ಇನ್ನೂ ಹಲವಾರು ಸಾಹಿತಿಗಳ ಹಲವಾರು ರೀತಿಯ ಕೇಶವಿನ್ಯಾಸವನ್ನು ಇಲ್ಲಿ ಮಾಡಿಕೊಡುತ್ತಾರೆ ಮಂಜುನಾಥ್.

ಇಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಹ ಮಂಜುನಾಥ್ ಕನ್ನಡಾಭಿಮಾನದ ಬಗ್ಗೆ ಹೆಮ್ಮೆ ಪಡುತ್ತಾರೆ. ಇಲ್ಲಿ ಬರುವ ಗ್ರಾಹಕರು ಸಹ ಇವರ ಕನ್ನಡ ಪ್ರೀತಿ ನೋಡಿ ಎಷ್ಟೋ ವಿಷಯಗಳನ್ನು ಕಲಿತಿದ್ದಾರೆ, ಖುಷಿಪಟ್ಟಿದ್ದಾರೆ. ‘೨೫ ವರ್ಷಗಳಿಂದಲೂ ಇಲ್ಲೇ ಬಂದು ಕಟಿಂಗ್ ಮಾಡಿಸಿಕೊಳ್ಳುತ್ತಿರುವವರೂ ಇದ್ದಾರೆ. ತಾವು ಚಿಕ್ಕವರಿದ್ದಾಗಿನಿಂದಲೂ ಬಂದು ಈಗ ತಮ್ಮ ಮಕ್ಕಳನ್ನೂ ಕರೆತರುತ್ತಿರುವ ಗ್ರಾಹಕರೊಬ್ಬರು ಇದ್ದಾರೆ. ಇವರಿಂದ ನನ್ನ ಉತ್ಸಾಹ ಇನ್ನೂ ಹೆಚ್ಚುತ್ತದೆ’ ಎನ್ನುತ್ತಾರೆ ಮಂಜುನಾಥ್.
ಇನ್ನು ಕೆಲವರು ಇಷ್ಟಪಟ್ಟು ಸಾಹಿತಿಗಳ ಕೇಶವಿನ್ಯಾಸ ಮಾಡಿಸಿಕೊಂಡು ಹೋಗುತ್ತಾರಂತೆ. ಸಾಹಿತ್ಯಾಸಕ್ತಿ ಹೊಂದಿರುವ ಮಂಜುನಾಥ್ ತಮ್ಮ ಅಂಗಡಿಯಲ್ಲಿ ಸಾಲಾಗಿ ಕನ್ನಡದ ಪುಸ್ತಕಗಳನ್ನು ಜೋಡಿಸಿಟ್ಟಿದ್ದಾರೆ. ಮನೆಯಲ್ಲೂ ಎಲ್ಲರಿಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಿದ್ದಾರೆ.

ಮಂಜುನಾಥ್ ಅವರ ಕನ್ನಡ ಪ್ರೀತಿಗೆ ವಾಟಾಳ್ ನಾಗರಾಜ್ ಪ್ರಮುಖ ಕಾರಣವಂತೆ. ತಾವು ಚಿಕ್ಕವರಿದ್ದಾಗ ವಾಟಾಳ್ ನಾಗರಾಜ್ ಮಾಡುತ್ತಿದ್ದ ಕನ್ನಡಪರ ಹೋರಾಟಗಳನ್ನು ನೋಡಿಕೊಂಡು ಬೆಳೆದ ಇವರಿಗೆ ತಾವೂ ಕನ್ನಡಕ್ಕೆ ಹೇಗಾದರೂ ಗೌರವ ಸಲ್ಲಿಸಬೇಕು ಎಂದುಕೊಳ್ಳುತ್ತಿದ್ದರಂತೆ. ಆಗಲೇ ಶುರುವಾಗಿದ್ದು ಕನ್ನಡದ ಅಂಗಡಿ.. ಇತ್ತ ಬಂದಾಗೊಮ್ಮೆ ಈ ಅಂಗಡಿ ನೋಡಿದರೆ ಮನಸ್ಸಿಗೆ ಖುಷಿಯಾಗುವುದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!