Sat. Jan 9th, 2021

Namma Mysuru

History, News, Stories and much more

ನಿಲ್ದಾಣಗಳ ಹೆಸರಿಗೂ ಕನ್ನಡ ರೂಪ ಕೊಟ್ಟು ಬರೀ ಕನ್ನಡ ಬಳಸುವ ಭಾಷಾಪ್ರೇಮಿ ತ್ಯಾಗರಾಜ್ !

1 min read
379 Views

 
ಕನ್ನಡ ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡದ ಮೊರೆ ಹೋಗುವ ಜನರು ನಮ್ಮ ನಡುವೆ ಅಸಂಖ್ಯಾತರಿದ್ದಾರೆ. ಇಂತಹವರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಮೈಸೂರಿನ ತ್ಯಾಗರಾಜ್ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ.
‘ನಗರ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಜ್ಞಾನಗಂಗಾ ಶಾಲೆ, ಕುವೆಂಪುನಗರ ಸಂಕೀರ್ಣ…’ ಹೀಗೆ ಕೂಗುತ್ತಾ ಜನರನ್ನು ಎಚ್ಚರಿಸಿ ಅವರ ಸ್ಥಳಗಳಿಗೆ ತಲುಪಿಸುವವರು ತ್ಯಾಗರಾಜ್. ಈತ ಪಕ್ಕಾ ಕನ್ನಡದ ನಿರ್ವಾಹಕ. ಅರ್ಥಾತ್ ಬಸ್ ಕಂಡಕ್ಟರ್. ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತಾ ಸಾರಿಗೆ ಪ್ರಯಾಣಿಕರ ಮನಸೂರೆಗೊಂಡಿದ್ದಾರೆ.
ಮೂಲತಃ ಮಂಡ್ಯದವರಾದ ತ್ಯಾಗರಾಜ್ ಕಳೆದ ೨೮ ವರ್ಷಗಳಿಂದ ಕೆಎಸ್‌ಆರ್‌ಟಿಸಿ ಉದ್ಯೋಗಿ. ಇಲ್ಲಿ ಕೆಲಸ ಮಾಡುವುದಕ್ಕೆ ಮುಂಚೆ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಕಾರ್ಖಾನೆ ನಷ್ಟದಿಂದ ಮುಚ್ಚಿದ ಕಾರಣ ಇಲ್ಲಿಗೆ ಬಂದು ಸೇರಿಕೊಂಡರು.

೧೯೯೯ರ ಸಂದರ್ಭದಲ್ಲಿ ಮೈಸೂರಿನ ಗ್ರಾಮಾಂತರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇವರು ಕೇರಳ, ತಮಿಳುನಾಡು ಮಾರ್ಗದ ಬಸ್‌ಗಲ್ಲಿ ಕಾರ್ಯನಿರ್ವಹಿಸುತ್ತಿದ್ದರಂತೆ. ಆಗ ತಮಿಳು, ಮಲಯಾಳಂ ಮಾತನಾಡುವ ಜನರ ಭಾಷಾಭಿಮಾನ ನೋಡಿದ ಇವರಿಗೆ ಕನ್ನಡದ ಬಗ್ಗೆ ಯಾಕೆ ಯಾರೂ ಇಷ್ಟು ಕಾಳಜಿ ತೋರಿಸುವುದಿಲ್ಲ ಎಂಬ ಯೋಚನೆ ಬಂತು. ‘ನನ್ನ ಕೈಲಾಗುವಷ್ಟು ಕನ್ನಡ ಸೇವೆಯನ್ನು ನಾನು ಮಾಡಬೇಕು’ ಎಂದು ನಿರ್ಧರಿಸಿ ಅಂದಿನಿಂದ ಎಲ್ಲಾ ನಿಲ್ದಾಣಗಳ ಹೆಸರನ್ನೂ ಕನ್ನಡದಲ್ಲೇ ಹೇಳಲು ಶುರುಮಾಡಿದರು.

ಬಸ್‌ನಲ್ಲಿ ಬೇರೆ ಬೇರೆ ಪ್ರಾಂತ್ಯದವರು, ದೇಶದವರು ಪ್ರಯಾಣಿಸುತ್ತಾರೆ. ಅವರಿಗೆ ಕನ್ನಡ ಬರದಿದ್ದರೆ ಏನು ಮಾಡುತ್ತೀರ ಎಂದು ಕೇಳಿದರೆ, ‘ಅವರ ಪಕ್ಕದಲ್ಲಿ ಕುಳಿತ ಕನ್ನಡದವರ ಸಹಾಯ ಪಡೆಯಲು ಹೇಳುತ್ತೇನೆ. ಎಷ್ಟೋ ವಿದೇಶದವರಿಗೆ ಕನ್ನಡ ಹೇಳಿಕೊಟ್ಟು ಮಾತನಾಡಿಸಿದ್ದೇನೆ ‘ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ತ್ಯಾಗರಾಜ್.


ತ್ಯಾಗರಾಜ್ ಯಾವುದೇ ಕಾರಣಕ್ಕೂ ಎಂದಿಗೂ ಒಂದು ಆಂಗ್ಲ ಪದವನ್ನೂ ಬಳಸುವುದಿಲ್ಲ. ಅವರು ಹೇಳುವ ಹೆಸರುಗಳ ಪೈಕಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ), ಉಗಿಬಂಡಿ ಹಳಿ ಸೇತುವೆ (ಅಂಡರ್ ಬ್ರಿಡ್ಜ್), ಅಮೃತ್ ರೊಟ್ಟಿ ಮನೆ (ಅಮೃತ್ ಬೇಕರಿ), ಕುವೆಂಪುನಗರ ಸಾರಿಗೆ ಘಟಕ (ಕುವೆಂಪುನಗರ ಬಸ್ ಡಿಪೊ), ವೀರಸನ್ಯಾಸಿ ವಿವೇಕಾನಂದ ವೃತ್ತ (ವಿವೇಕಾನಂದ ಸರ್ಕಲ್) ಎಂಬ ಹೆಸರುಗಳು ಸ್ವಾರಸ್ಯಕರವಾಗಿವೆ.

 ಅವರನ್ನು ನೋಡಿದ ಎಷ್ಟೋ ಜನರು ಮಾತನಾಡಿಸಿ ಹಸ್ತಲಾಘವ ಮಾಡಿ ಹೋಗಿದ್ದು, ತಾವೂ ಪ್ರೇರಿತರಾಗಿ ಕನ್ನಡ ಬಳಸಿದ್ದೂ ಇದೆಯಂತೆ. ‘ಆದರೆ ಮನೆಯಲ್ಲೆಲ್ಲರೂ ಆಂಗ್ಲ ಮಾಧ್ಯಮದವರು’ ಎಂದು ನಗುತ್ತಾರೆ ತ್ಯಾಗರಾಜ್. ಒಮ್ಮೆ ಇವರಿರುವ ಬಸ್ ಹತ್ತಿದರೆ ಯಾವ ಕನ್ನಡಿಗರೂ ಹೆಮ್ಮೆ ಪಡದೇ ಕೆಳಗಿಳಿಯುವುದಿಲ್ಲ ಎಂಬುದಂತೂ ಸತ್ಯ.

Copyright © All rights reserved. | Designed by Savhn Tech Solutions.
error: Content is protected !!