ಆಗ ಸಾಮಾನ್ಯ ಮೆಕಾನಿಕ್, ಈಗ ಬೃಹತ್ ಕಂಪನಿಯ ಡೀಲರ್!
1 min read
ಸಾಮಾನ್ಯ ವ್ಯಕ್ತಿಯೊಬ್ಬ ಶ್ರದ್ಧೆಯಿಂದ ಶ್ರಮಪಟ್ಟು ಕೆಲಸ ಮಾಡಿದರೆ ಅಸಾಮಾನ್ಯ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು ಇವೆ. ಅದರಲ್ಲಿ ಒಬ್ಬರು ಮೈಸೂರಿನ ಶ್ರೀನಿವಾಸ್ ಜಾಧವ್! ಕನಸು-ನನಸುಗಳ ನಡುವಿನ ಅಂತರ ಪರಿಶ್ರಮವಷ್ಟೇ ಎಂಬುದಕ್ಕೆ ನಿದರ್ಶನ ಶ್ರೀನಿವಾಸ್ ಜೀವನ.

ಸಾಮಾನ್ಯ ಮೆಕಾನಿಕ್ ಆಗಿದ್ದ ಶ್ರೀನಿವಾಸ್ ಜಾಧವ್ ಇಂದು ತಮ್ಮ ಪರಿಶ್ರಮದಿಂದ ಹೋಂಡಾ ಕಂಪನಿಯ ಡೀಲರ್ ಆಗಿದ್ದಾರೆ. ಮೆಕಾನಿಕ್ ಆಗಿದ್ದ ತಂದೆ ದಾರಿಯಲ್ಲಿ ಸಾಗಿದ್ದ ಶ್ರೀನಿವಾಸ್ ಈಗ ಹೋಂಡಾ ಕಂಪನಿಯ ಸರ್ವಿಸ್ ಸ್ಟೇಶನ್ನ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀನಿವಾಸ್ ತಂದೆ ಮೆಕಾನಿಕ್ ಆಗಿ ಜೀವನ ಕಳೆದರು. ಚಿಕ್ಕ ವಯಸ್ಸಿನಿಂದಲೂ ಶಾಲೆಗೆ ರಜೆ ಇದ್ದಾಗಲೆಲ್ಲಾ ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದ ತಂದೆ, ಗಾಡಿ ಒರೆಸುವುದು, ತೊಳೆಸುವುದು ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಹೇಳಿಕೊಡುತ್ತಿದ್ದರು.
ಎಲ್ಲಾ ಚೆನ್ನಾಗಿದ್ದಾಗ ಇದ್ದಕ್ಕಿದ್ದಂತೆ ಅವರ ತಂದೆ ಜೊತೆಗೆ ಕೆಲಸ ಮಾಡುತ್ತಿದ್ದವರು ಕೆಲಸ ಬಿಟ್ಟು ತಮ್ಮದೇ ಅಂಗಡಿ ಶುರುಮಾಡಿ ಗ್ರಾಹಕರನ್ನು ಸೆಳೆಯಲು ಪ್ರಾರಂಭಿಸಿದರು. ಇದರಿಂದ ದಿಕ್ಕು ತೋಚದಂತಾದ ಶ್ರೀನಿವಾಸ್ ತಂದೆ ಅಂಗಡಿ ಮುಚ್ಚುವ ನಿರ್ಧಾರಕ್ಕೆ ಬಂದರು. ಇದನ್ನೆಲ್ಲಾ ನೋಡುತ್ತಿದ್ದ ನಾನು ಕೆಲಸ ಬಿಟ್ಟವರೊಬ್ಬರ ಬಳಿ ಹೋಗಿನೀವು ಯಾಕೆ ನಮ್ಮ ವಿರುದ್ಧವೇ ಅಂಗಡಿ ಪ್ರಾರಂಭ ಮಾಡಿದ್ದೀರಿ?’ ಎಂದು ಪ್ರಶ್ನಿಸಿದಾಗ ಆತ ತೂ ಅಭಿ ಬಚ್ಚಾ ಹೇ.. ಸೋ ಜಾವೋ’ (ನೀನಿನ್ನೂ ಬಾಲಕ. ಹೋಗಿ ಮಲಗು) ಎಂದು ಹೇಳಿ ಕಳಿಸಿದರು. ಆ ಘಟನೆ ನನ್ನ ಮೇಲೆ ಪರಿಣಾಮ ಬೀರಿದ್ದು ಛಲ ತುಂಬಿತು ಎಂದು ಮೆಲುಕು ಹಾಕುತ್ತಾರೆ ಶ್ರೀನಿವಾಸ್.
ಹೀಗೆ ಛಲದಿಂದ ತಾನೇ ಅಂಗಡಿಯ ಮುಂದಾಳತ್ವ ವಹಿಸಿ ಕೆಲಸ ಮಾಡಲು ಶುರುಮಾಡಿದ ಶ್ರೀನಿವಾಸ್ ಮಧ್ಯದಲ್ಲೇ ವಿಧ್ಯಾಬ್ಯಾಸವನ್ನೂ ಬಿಡಬೇಕಾಗಿ ಬಂತು. ಆದರೂ ಹಗಲಿರುಳು ದುಡಿದು, ವಾರಾಂತ್ಯದಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಕಲಿತು ಅಂಗಡಿಯನ್ನು ನಿರ್ವಹಿಸಿದರು. ಇದರಿಂದ ಗ್ರಾಹಕರೂ ಹೆಚ್ಚಾಗಿ ಅಂಗಡಿಗೆ ಒಳ್ಳೆ ಹೆಸರು ಬರಲು ಶುರುವಾಯಿತು. ದಿನಕ್ಕೆ ಸುಮಾರು ೩೦ ಗಾಡಿಗಳು ಸರ್ವಿಸ್ಗೆ ಬರುತ್ತಿದ್ದವು. ಲೂನಾ, ಬಜಾಜ್, ಹೋಂಡಾ ಮುಂತಾದ ಗಾಡಿಗಳನ್ನು ರಿಪೇರಿ ಮಾಡುತ್ತಿದ್ದ ಇವರ ಅಂಗಡಿಗೆ ಚೆನ್ನರಾಯಪಟ್ಟಣ, ಊಟಿ, ಕೊಡಗಿನಿಂದೆಲ್ಲಾ ಗ್ರಾಹಕರು ಹುಡುಕಿಕೊಂಡು ಬರುವಂತಾಯಿತು. ಸ್ನೇಹಿತರ ಅರ್ಜಿ ತಂದ ಅದೃಷ್ಟ! ಶ್ರೀನಿವಾಸ್ ತನ್ನದೇ ಒಂದು ಶೋರೂಮ್/ಅಧಿಕೃತ ಸರ್ವಿಸ್ ಸೆಂಟರ್ ಯಾಕೆ ಮಾಡಬಾರದು ಎಂದು ಅನಿಸತೊಡಗಿತು. ಇದನ್ನು ಸ್ನೇಹಿತರಾದ ಗೋಪಾಲ್ ರಾಜ್ ಮತ್ತು ಸುಚೇಂದ್ರ ಬಳಿ ಹಂಚಿಕೊಡಾಗ ಅವರು ವಿವಿಧ ಕಂಪನಿಗಳ ಡೀಲರ್ಗಾಗಿ ಅರ್ಜಿ ಸಲ್ಲಿಸಿದರು. ಒಮ್ಮೆ ಹೋಂಡಾ ಕಂಪನಿ ಪ್ರತಿನಿಧಿಯೊಬ್ಬರು ಸಾಮಾನ್ಯರಂತೆ ಇವರ ಅಂಗಡಿಗೆ ಬಂದು ಕೆಲಸದ ಶಿಸ್ತು, ಇವರಿಗೆ ತಮ್ಮ ಕೆಲಸದ ಬಗೆಗಿದ್ದ ಅಪಾರ ಜ್ಞಾನವನ್ನು ನೋಡಿ ತಮ್ಮ ಕಂಪನಿಯ ಡೀಲರ್ ಆಗಿ ಆಯ್ಕೆ ಮಾಡಿದರು. ೨೦೧೪ರಲ್ಲಿ ನಡೆದ ಈ ಘಟನೆಯಿಂದ ಈಗ ಶ್ರೀನಿವಾಸ್ ಜಾಧವ್ ಕಲ್ಯಾಣಗಿರಿನಗರದಲ್ಲಿರುವ ಹೋಂಡಾದಯಶ್ ಮೋಟಾರ್ಸ್’ನ ಮಾಲೀಕ.
ನಾನು ಏನೇ ಮಾಡಿದ್ದರೂ ಅದರಲ್ಲಿ ನನ್ನ ಪತ್ನಿಯ ಪಾತ್ರ ಕೂಡ ಬಹಳ ಇದೆ. ಅವಳ ಸಹಕಾರ ಇಲ್ಲದೆ ಇದ್ಯಾವುದೂ ಸಾಧ್ಯವಿಲ್ಲ. ಆಕೆ ಸೇಲ್ಸ್ ನೋಡಿಕೊಳ್ಳುತ್ತಾಳೆ. ನಾನು ನನ್ನ ಕನಸಿನಂತೆ ಶೋರೂಂ ನೋಡಿಕೊಳ್ಳುತ್ತಿದ್ದೇನೆ. ಯುವಕರು ಕನಸು ಕಾಣಬೇಕು. ಶ್ರದ್ಧೆಯಿದ್ದರೆ ಯಾವ ಕೆಲಸವೂ ಕೀಳಲ್ಲ, ಏನೂ ಅಸಾಧ್ಯವಲ್ಲ. ನಾನು ಇಷ್ಟು ಬೆಳೆದಿದ್ದರೂ ಇನ್ನೂ ನನಗೆ ಎಷ್ಟೋ ಕಷ್ಟಗಳು ಬರುತ್ತಿರುತ್ತವೆ. ಆದರೂ ಎಲ್ಲವನ್ನೂ ಎದುರಿಸುತ್ತೇನೆ. ಆದ್ದರಿಂದಲೇ ನಾನು ನೆಮ್ಮದಿಯಿಂದಿರಲು ಸಾಧ್ಯವಾಗಿರುವುದು. ನನ್ನಂತೆ ಕನಸು ಕಂಡ ಎಷ್ಟೋ ಜನಕ್ಕೆ ಸಹಾಯ ಮಾಡುವ ಆಸೆಯೂ ನನಗಿದೆ ಎಂದು ಮುಗುಳ್ನಗೆ ಬೀರುತ್ತಾರೆ ಶ್ರೀನಿವಾಸ್.