Fri. Jul 10th, 2020

Namma Mysuru

History, News, Stories and much more

ಸಾಗರದಾಚೆ ಸದ್ದು ಮಾಡುತ್ತಿದೆ ಮೈಸೂರಿನ ಪ್ರತಿಭೆ!

1 min read
157 Views

ಫ್ಯಾಷನ್ ಲೋಕ ವಿಶಾಲವಾದುದು. ಅಷ್ಟು ಸುಲಭವಾಗಿ ಎಲ್ಲರೂ ಅಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ. ಅಂತಹದ್ದರಲ್ಲಿ ಮೈಸೂರಿನ 25 ವರ್ಷದ ಯುವಕನೊಬ್ಬ ವಿದೇಶಕ್ಕೆ ಹೋಗಿ ಅಲ್ಲಿನ ಘಟಾನುಘಟಿಗಳ ಮಧ್ಯೆ ಗುರುತಿಸಿಕೊಂಡು ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಫ್ಯಾಷನ್ ಡಿಸೈನರ್ ಹೆಸರು ಕೌಶಲ್ ವಿಶುಕುಮಾರ್.

ಚಿಕ್ಕ ವಯಸ್ಸಿನಲ್ಲಿ ಪರದೆ ಮೇಲೆ ಕಾಣುವ ಬಣ್ಣಬಣ್ಣದ ಬಟ್ಟೆಗಳನ್ನು ಬೆರಗುಗಣ್ಣಿನಲ್ಲಿ ನೋಡುತ್ತಿದ್ದ ಈ ಹುಡುಗ ಈಗ ತಾವೇ ಅಂತಹ ಬಟ್ಟೆಗಳನ್ನು ವಿನ್ಯಾಸ ಮಾಡುತ್ತಿದ್ದಾರೆ. ತನ್ನ 22ನೇ ವಯಸ್ಸಿಗೇ ವಿದೇಶಕ್ಕೆ ಹೋಗಿ ಅಲ್ಲಿನ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಕನ್ನಡದ ಕೆಲವು ಚಿತ್ರಗಳಿಗೆ ವಸ್ತçವಿನ್ಯಾಸ ಮಾಡಿ ಪ್ರತಿಷ್ಠಿತ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಪ್ರಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ವಿಶು ಮಡಿರುವುದು ಮಾತ್ರ ಇಂಜಿನಿಯರಿAಗ್. ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ಎನ್.ಐ.ಇ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿದರು. ಕೌಶಲ್ ಅವರ ಅಜ್ಜಿಗೆ ಮೊದಲಿನಿಂದಲೂ ಅವರನ್ನು ವಿದೇಶಕ್ಕೆ ಕಳುಹಿಸಬೇಕೆಂಬ ಆಸೆ ಇತ್ತಂತೆ. ಆ ಕಾರಣಕ್ಕಾಗಿ ಇಂಜಿನಿಯರಿಂಗ್ ಮುಗಿದ ತಕ್ಷಣ ಅಮೆರಿಕದ ಮಿಯಾಮಿ ಸಂಸ್ಥೆಗೆ ಸೇರಿಕೊಂಡರು. ಮೊದಮೊದಲು ಈ ಹೊಸ ಕೋರ್ಸ್ಗೆ ಅವರನ್ನು ಕಳುಹಿಸುವುದು ಮನೆಯವರಿಗೆ ಇಷ್ಟವಿಲ್ಲದಿದ್ದರೂ ನಂತರ ಒಪ್ಪಿಕೊಳ್ಳುತ್ತಾರೆ. ಅಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಾ, ಹಿರಿಯ ಡಿಸೈನರ್‌ಗಳನ್ನು ಪರಿಚಯ ಮಾಡಿಕೊಳ್ಳುತ್ತಾ ಬಂದ ಕೌಶಲ್ ತಾವೂ ಈ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಹೀಗೆ ಕೆಲಸ ಮಾಡುತ್ತಾ ಈಗ ದೂರದ ಅಮೆರಿಕದ ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದುಬೈ, ಅಮೆರಿಕ ಸೇರಿದಂತೆ ಹೊರದೇಶಗಳಲ್ಲಿ 50ಕ್ಕೂ ಹೆಚ್ಚು ಫ್ಯಾಷನ್ ಶೋಗಳನ್ನು ಮಾಡಿದ್ದಾರೆ.

ಕೌಶಲ್ ವಿನ್ಯಾಸ ಮಾಡಿರುವ ಉಡುಪುಗಳು

ಕೌಶಲ್ ಈವರೆಗೂ ಎರಡು ಕನ್ನಡ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಊರ್ವಿ ಎಂಬ ಕನ್ನಡ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿ ತಮ್ಮ ಕೆಲಸಕ್ಕೆ ಕಾಫ್ತಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಣವಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯ ‘ಬಬ್ರು’ ಚಿತ್ರಕ್ಕೂ ಇವರದ್ದೇ ವಸ್ತ್ರವಿನ್ಯಾಸ. ಮುಂದೆ ಇದೇ ಕ್ಷೇತ್ರದಲ್ಲಿ ಶಿಕ್ಷಕನಾಗಬೇಕು ಎನ್ನುವ ಆಸೆ ಕೌಶಲ್ ಅವರದ್ದು. ಅದರೊಂದಿಗೆ ಬೇರೆ ಬೇರೆ ಕಡೆ ಫ್ಯಾಷನ್ ಶೋಗಳನ್ನು ಏರ್ಪಡಿಸಿ ಜನರಿಗೆ ವಿಶಿಷ್ಟ ರೀತಿಯ ವಸ್ತ್ರವಿನ್ಯಾಸಗಳನ್ನು ಪರಿಚಯಿಸಬೇಕು ಎಂದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾದ ಅತ್ಯಂತ ಹಳೆಯ ದಿನಪತ್ರಿಕೆಗಳಲ್ಲೊಂದಾದ ‘ದಿ ಮಿಸಿಸಿಪ್ಪಿ ಟೈಮ್ಸ್’ನಲ್ಲಿ ಇವರ ಕುರಿತಾದ ಲೇಖನ ಪ್ರಕಟವಾಗಿದೆ. ಜೊತೆಗೆ ಅಮೆರಿಕಾದ ಪ್ರಖ್ಯಾತ ಟಿವಿ ಕಾರ್ಯಕ್ರಮವೊಂದರಲ್ಲಿ ಇವರನ್ನು ಸಂದರ್ಶಿಸಲಾಗಿದೆ.

ತನ್ನ ಕನಸನ್ನು ನನಸು ಮಾಡಿದ ಮೊಮ್ಮಗನ ಮೇಲೆ ಕೌಶಲ್ ಅವರ ಅಜ್ಜಿಗೆ ಹೆಮ್ಮೆ ಇದೆ. ಮೊದಮೊದಲು ಗೊತ್ತಿರದ ಕೆಲಸಕ್ಕೆ ಹೋಗುವುದು ಬೇಡ ಎನ್ನುತ್ತಿದ್ದ ತಂದೆ-ತಾಯಿಯೂ ಈಗ ಮಗನನ್ನು ನೋಡಿ ಹೆಮ್ಮೆ ಪಡುವಂತಾಗಿದೆ. ‘ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನೋಡಿದಾಗ ಅದರಲ್ಲಿ ಎಲ್ಲರೂ ಧರಿಸುತ್ತಿದ್ದ ಸುಂದರ ಧಿರಿಸುಗಳು ಆಕರ್ಷಣೀಯವಾಗಿ ಕಾಣುತ್ತಿದ್ದವು. ಮುಂದೆ ವಿದೇಶಕ್ಕೆ ಹೋಗುವ ಸಂದರ್ಭ ಬಂದಾಗ ನನ್ನಿಚ್ಛೆಯ ಕ್ಷೇತ್ರವನ್ನೇ ನಾನು ಆಯ್ಕೆ ಮಾಡಿಕೊಂಡೆ. ಒಮ್ಮೆ ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿಯಾಗಿದ್ದೆ. ಅವರು ಒಂದೆರಡು ನಿಮಿಷ ನನ್ನೊಂದಿಗೆ ಮಾತನಾಡಿ ಇನ್ನೂ ಹೆಚ್ಚು ಭಾರತೀಯರು ಈ ಕ್ಷೇತ್ರಕ್ಕೆ ಬರಬೇಕು ಎಂದು ಹೇಳಿ ಸಂತಸಪಟ್ಟಿದ್ದರು. ಅದು ಮರೆಯಲಾರದ ಕ್ಷಣ’ ಎನ್ನುತ್ತಾರೆ ಕೌಶಲ್ ವಿಶುಕುಮಾರ್.

ಕೌಶಲ್‌ಗೆ ಸಿಕ್ಕಿದೆ ಒ-ವೀಸಾ!:

ಅಮೆರಿಕ ಸರ್ಕಾರದ ವತಿಯಿಂದ ಕಲಾ ಕ್ಷೇತ್ರದಲ್ಲಿ ಅದ್ಭುತ ಪ್ರತಿಭೆ ಇರುವವರಿಗಷ್ಟೇ ನೀಡುವ ಒ-ವೀಸಾವನ್ನು ಕೌಶಲ್ ಪಡೆದಿದ್ದಾರೆ. ಈ ವೀಸಾ ಬಳಸಿ ಮೂರು ವರ್ಷದಲ್ಲಿ ಎಷ್ಟು ಬಾರಿಯಾದರೂ ಅಲ್ಲಿಗೆ ಪ್ರಯಾಣ ಬೆಳೆಸಬಹುದು. ಅಲ್ಲಿನ ಲಾಯರ್ ಗ್ರೆಗೊರಿ ಎಂಬುವವರು ಕೌಶಲ್‌ಗೆ ಈ ವೀಸಾ ಮಾಡಿಸಿಕೊಟ್ಟಿದ್ದಾರೆ. ಈ ಸೌಲಭ್ಯ ಪಡೆದ ಮತ್ತೊಬ್ಬ ಭಾರತೀಯರೆಂದರೆ ನಟಿ ಪ್ರಿಯಾಂಕಾ ಚೋಪ್ರಾ.

Copyright © All rights reserved. | Designed by Savhn Tech Solutions.
error: Content is protected !!