Thu. Jan 21st, 2021

Namma Mysuru

History, News, Stories and much more

ಗೋಕಲಂನಲ್ಲಿದೆ ಆಕರ್ಷಕ ಹಸಿರು ಮನೆ!

1 min read
308 Views

ಪರಿಸರ ಉಳಿಸಬೇಕು, ವಾತಾವರಣವನ್ನು ಹಸಿರಾಗಿಟ್ಟುಕೊಳ್ಳಬೇಕು ಎಂದು ಹೇಳುವವರು ಸಾಕಷ್ಟು ಜನ ಇದ್ದಾರೆ. ಆದರೆ ಅದನ್ನು ಹೇಳುವವರ ಸಂಖ್ಯೆ ಪಾಲಿಸುವವರ ಸಂಖ್ಯೆಗಿಂತ ಹತ್ತು ಪಟ್ಟು ಅಧಿಕ. ಕೆಲವರು ಮಾತ್ರ ಹಸಿರು ಬೆಳೆಸಿ ಪರಿಸರ ಉಳಿಸುವ ಪಣತೊಟ್ಟು ಪ್ರಚಾರವಿಲ್ಲದೆ ತಮ್ಮ ಕೈಲಾದದ್ದನ್ನು ತಾವು ಮಾಡಿಕೊಂಡು ಹೋಗುತ್ತಿದ್ದಾರೆ.

ಮೈಸೂರಿನ ಗೋಕುಲಂನಲ್ಲಿರುವ ‘ವರ್ಟಿಕಲ್ ಗಾರ್ಡನ್’ ಹೆಸರಿನ ಬೆಂಜಾಮಿನ್ ವಾಸ್ ಅವರ ಮನೆಯನ್ನು ಸ್ವಲ್ಪ ದೂರದಿಂದ ನೋಡಿದರೆ ಯಾರೂ ಅದನ್ನು ಮನೆ ಎಂದು ಕಂಡುಹಿಡಿಯುವುದಿಲ್ಲ. ವಿವಿಧ ಗಿಡಗಳನ್ನು ಮಾರುವ ನರ್ಸರಿ ಸಹ ಇಷ್ಟು ಹಸಿರುಮಯವಾಗಿರುವುದಿಲ್ಲ. ರಸ್ತೆಯ ಕೊನೆಯಿಂದಲೇ ಹಸಿರಿನಿಂದ ಆವೃತ್ತವಾಗಿರುವ ಮನೆಯ ಆಕೃತಿ ಕಣ್ಣಿಗೆ ತಂಪು ನೀಡುತ್ತದೆ. ಹತ್ತಿರ ಹೋಗಿ ನೋಡಿದರೆ ಹಸಿರಿನ ನಟ್ಟನಡುವೆ ಮನೆಯ ಗೇಟ್ ಕಾಣಿಸುತ್ತದೆ. ಮನೆ ಪ್ರವೇಶಿಸುತ್ತಿದ್ದಂತೆ ಬಲಗಡೆಯಲ್ಲಿ ಹಸಿರು ಮೇಲಾವರಣದ ಕಾಡಿನಂತಹ ವಾತಾವರಣ ನಿರ್ಮಿಸಲಾಗಿದೆ. ಮನೆಯ ಬಾಗಿಲಿಗೆ ಸಹ ಬೇರೆ ಬೇರೆ ರೀತಿಯ ಬಳ್ಳಿಗಳನ್ನು ತೂಗುಹಾಕಲಾಗಿದೆ.

ಒಂದೇ ಮನೆಯಲ್ಲಿವೆ ೨೦೦ಕ್ಕೂ ಹೆಚ್ಚು ಗಿಡಗಳು!
ಈ ಹಸಿರು ದಿಬ್ಬಣ ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗೂ ಇದೆ. ಮನೆ ಒಳಗೆ ವಿಧವಿಧವಾದ ಇಂಡೋರ್ ಗಿಡ ಮನಸ್ಸಿಗೆ ಮುದ ನೀಡುತ್ತವೆ. ಒಳಗಿರುವ ಮಹಡಿಯ ಪ್ರತಿ ಮೆಟ್ಟಿಲುಗಳ ಮೇಲೂ ಒಂದೊಂದು ಪಾಟ್ ಇಡಲಾಗಿದೆ. ಮನೆಯ ಟೆರೆಸ್ ಮೇಲೆ ಸಹ ನೂರಾರು ರೀತಿಯ ಗಿಡಗಳನ್ನು ಬೆಳೆಸಿ ಗೋಡೆಗೆ ತೂಗುಬಿಟ್ಟಿದ್ದಾರೆ. ಸುಮಾರು ೨೦೦ ರೀತಿಯ ಗಿಡಗಳನ್ನು ಬೆಳೆಸಿರುವ ಇವರ ಮನೆಯಲ್ಲಿ ಹಾವು ಬರದಿರಲು ನಾಗದಾಳೆ ಗಿಡ, ಸೊಳ್ಳೆ ನಿಯಂತ್ರಿಸುವ ಗಿಡ, ಬೇಕಾದಾಗ ಬಳಸಿಕೊಳ್ಳಲು ಔಷಧೀಯ ಗಿಡಗಳು, ನೀರಿನಲ್ಲಿ ಹಾಕಿಟ್ಟರೆ ಸಾಕು..ಬೆಳೆಯಲು ಬೇರೇನನ್ನೂ ಕೇಳದ ಗಿಡಗಳು ಸೇರಿವೆ.
ಸಂತ ಫಿಲೋಮಿನಾ ಚರ್ಚ್ನಲ್ಲಿ ಕೆಲಸ ಮಾಡಿ, ಆಲ್ ಇಂಡಿಯಾ ಬೈಬಲ್ ಲಿಟರೇಚರ್ ಸೊಸೈಟಿಯಲ್ಲಿ ಸೇವೆ ಸಲ್ಲಿಸಿರುವ ಬೆಂಜಾಮಿನ್ ವಾಸ್ ಮೂಲತಃ ಕೊಡಗಿನವರು. ೧೫ ವರ್ಷಗಳ ಹಿಂದೆ ಮೈಸೂರಿಗೆ ಬಂದಿರುವ ಅವರದ್ದು ನಾಲ್ಕು ಜನರ ಪುಟ್ಟ ಕುಟುಂಬ. ಪತ್ನಿ ಎಂ.ಎಚ್.ರೀಟಾ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿ. ಇವರ ಕುಟುಂಬದವರಿಗೆಲ್ಲಾ ಗಿಡಗಳೆಂದರೆ ಪ್ರೀತಿ. ಆದ್ದರಿಂದ ಎಲ್ಲವನ್ನೂ ಇವರೇ ನಿರ್ವಹಣೆ ಮಾಡುತ್ತಾರೆ. ಅದರೊಂದಿಗೆ ಇಬ್ಬರು ಕೆಲಸದವರನ್ನು ಇರಿಸಿಕೊಂಡಿದ್ದಾರೆ.

ವಿಗ್ರಹ, ಪೇಂಟಿಂಗ್‌ಗಳ ಸಂಗ್ರಹಕ್ಕೂ ಸೈ ಎಂದ ಬೆನ್:
ಬೆನ್‌ಗೆ ಗಿಡಗಳನ್ನು ಬೆಳೆಸುವುದಲ್ಲದೆ ಹಲವಾರು ವಿಶೇಷ ವಿನ್ಯಾಸಗಳಿವೆ. ತಮ್ಮ ಇಡೀ ಮನೆಯನ್ನು ಆರ್ಟ್ ಗ್ಯಾಲರಿ ಮಾಡಿಕೊಂಡಿರುವ ಅವರ ಮನೆಯಲ್ಲಿ ೧೪ ಷೋಕೇಸ್‌ಗಳಿವೆ. ಇಡೀ ಪ್ರಪಂಚವನ್ನು ಸುತ್ತುತ್ತಲೇ ಇರುವ ಅವರ ಬಳಿ ೧೫೦ ವಿಶಿಷ್ಟ ಬೈಬಲ್‌ಗಳು, ನೂರಾರು ಸಮುದ್ರಗಳ ಮರಳು, ಮರಳಿನಲ್ಲಿ ಸಿಗುವ ಕಪ್ಪೆಚಿಪ್ಪುಗಳು, ಎಲ್ಲೆಡೆಯೂ ಸಿಗದ ವಿಶಿಷ್ಟ ಆಟಿಕೆಗಳು, ದಸರಾ ಬೊಂಬೆ ಅತಿ ಅಪರೂಪದ ಪೇಂಟಿಂಗ್‌ಗಳು, ವಿಗ್ರಹಗಳು ಇವೆ.
ವಿಶೇಷವೆಂದರೆ ಎಲ್ಲ ಜಾತಿ, ಧರ್ಮದ ದೇವರ ವಿಗ್ರಹಗಳು, ವಿಶೇಷ ವಸ್ತುಗಳನ್ನು ಇಲ್ಲಿ ಕಾಣಬಹುದು. ಹೋದ ಕಡೆಯಲ್ಲಾ ಇಂತಹ ವಸ್ತುಗಳನ್ನು ಕೊಂಡು ಬರುವುದು ಇವರ ಹವ್ಯಾಸ.

ಮನೆಯ ತುಂಬೆಲ್ಲಾ ವಿಶೇಷ ಪೇಂಟಿಂಗ್‌ಗಳು, ವಿಗ್ರಹಗಳು ಹಾಗೂ ಇನ್ನಿತರ ವಿಶೇಷ ವಸ್ತುಗಳನ್ನು ತೂಗುಹಾಕಿದ್ದಾರೆ. ಜೊತೆಗೆ ಮನೆಯ ಡೈನಿಂಗ್ ಟೇಬಲ್ ಮೇಲೆ ದಸರಾ ಮೆರವಣಿಗೆಯ ವಿನ್ಯಾಸ ಮಾಡಿಸಿದ್ದಾರೆ. ಬೆನ್‌ಗೆ ಸಾಕುಪ್ರಾಣಿಗಳೆಂದರೆ ವಿಶೇಷ ಪ್ರೀತಿ. ಆದ್ದರಿಂದ ಮನೆಯಲ್ಲಿ ನಾಯಿ, ಲವ್ ಬರ್ಡ್ಸ್, ವಿಶೇಷ ರೀತಿಯ ಮೀನುಗಳು ಎಲ್ಲವನ್ನೂ ಸಾಕಿದ್ದಾರೆ. ಜೊತೆಗೆ ಇವರ ಮನೆಯ ಮೇಲಿರುವ ಜಾಗದಲ್ಲಿ ರೂಮ್‌ಗಳನ್ನು ನಿರ್ಮಿಸಿ ಇಲ್ಲಿಗೆ ಬರುವ ವಿದೇಶೀಯರಿಗೆ ಅತ್ಯಂತ ಕಡಿಮೆ ದರದಲ್ಲಿ ಉಳಿದುಕೊಳ್ಳಲು, ಮನೆಯನ್ನೆಲ್ಲಾ ನೋಡಲು ಅವಕಾಶ ಮಾಡಿಕೊಡುತ್ತಾರೆ. ಬೆನ್ ಮನೆಯಲ್ಲಿ ಕ್ರಿಸ್‌ಮಸ್ ಜೊತೆ ದಸರಾ ಹಬ್ಬವನ್ನು ಸಹ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇವರ ಕ್ರಿಯಾತ್ಮಕತೆ, ಅಪರೂಪದ ಸಂಗ್ರಹಕ್ಕೆ ಹಲವಾರು ಪ್ರಶಸ್ತಿಗಳೂ ಸಂದಿವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇವರ ಮನೆ ವಸ್ತುಸಂಗ್ರಹಾಲಯಕ್ಕಿಂತ ಆಕರ್ಷಕವಾಗಿದೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.

ನಮ್ಮ ಮನೆ ನೋಡಿ ಸುತ್ತಮುತ್ತ ಜನರೂ ಸಹ ಗಿಡ ಬೆಳೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ನಮ್ಮಿಂದ ಪ್ರೇರಿತರಾಗಿ ಬೇರೆಯವರೂ ಹಸಿರು ಬೆಳೆಸಿದರೆ ಅದಕ್ಕಿಂತ ಖುಷಿ ಮತ್ತೇನಿದೆ – ಬೆಂಜಾಮಿನ್ ವಾಸ್, ವರ್ಟಿಕಲ್ ಗಾರ್ಡನ್ ಮಾಲೀಕ

Copyright © All rights reserved. | Designed by Savhn Tech Solutions.
error: Content is protected !!