Wed. Jan 20th, 2021

Namma Mysuru

History, News, Stories and much more

ದೇಸಿ ಮಣ್ಣಿನಲ್ಲಿ ವಿದೇಶಿ ತಳಿ ಬೆಳೆದ ರೈತ.

1 min read
369 Views

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳೇ ಹೆಚ್ಚಾಗಿರುವಾಗ ಮೈಸೂರಿನ ಉದ್ಬೂರು ಬಳಿ ರೈತನೊಬ್ಬ ವರ್ಷವಿಡೀ ವಿದೇಶಿ ಬೆಳೆಗಳನ್ನು ಬೆಳೆದು ಬೇಸಾಯದಲ್ಲೂ ನೆಮ್ಮದಿಯಿಂದ ಬದುಕಬಹುದು ಎಂದು ತೋರಿಸಿಕೊಡುತ್ತಿದ್ದಾನೆ. ವಿಶೇಶಿ ಬೆಳೆ ಬೆಳೆಯುವ ಈ ರೈತನ ಹೆಸರು ಯೋಗೇಶ್. ತಮ್ಮ ಕುಟುಂಬದೊಂದಿಗೆ ಉದ್ಬೂರಿನಲ್ಲೇ ವಾಸವಾಗಿದ್ದಾರೆ. ಮೂಲತಃ ರೈತ ಕುಟುಂಬದವರೇ ಆದ ಯೋಗೇಶ್ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರು. ಮೊದಮೊದಲು ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಸಾಮಾನ್ಯ ಬೆಳೆಗಳನ್ನೇ ಬೆಳೆಯುತ್ತಿದ್ದ ಇವರಿಗೆ ಒಮ್ಮೆ ವಿದೇಶಿ ಬೆಳೆಗಳನ್ನು ಬೆಳೆಯುವ ಯೋಚನೆ ಬರುತ್ತದೆ. ಆಗಿನಿಂದ ಯೋಗೇಶ್ ಹಾಗೂ ಅವರ ಚಿಕ್ಕಪ್ಪ ಸೇರಿ ಈ ಕೆಲಸ ಶುರುಮಾಡುತ್ತಾರೆ.

ವಿದೇಶಿ ಬೆಳೆಗಳಾದ ಚರ‍್ರಿ ಟೊಮೆಟೊ, ಗ್ರೀನ್, ರೆಡ್, ರೋಮನ್ ಹಾಗೂ ಐಸ್‌ಬರ್ಗ್ ಲೆಟಿಸ್, ಸೆಲೆರಿ, ಲೆಮನ್ ಗ್ರಾಸ್, ಬ್ರಾಕೊಲಿ, ಬೇಸಿಲ್, ಥೈಮ್, ರೋಸ್‌ಮೆರಿ, ಪಾರ್ಸ್ಲಿ, ಟರ್ನಿಪ್, ರೆಡ್ ರ‍್ಯಾಡಿಶ್ ಮುಂತಾದವುಗಳೊಂದಿಗೆ ಭತ್ತ, ಟೊಮೆಟೊ ಸಹ ಬೆಳೆಯುತ್ತಾರೆ. ಇವರು ಬೆಳೆದ ಬೆಳೆಗಳನ್ನು ಬೆಂಗಳೂರು ಹಾಗೂ ಹೈದರಾಬಾದ್‌ಗೆ ರಫ್ತು ಮಾಡುತ್ತಾರೆ.

ಇಲ್ಲಿ ಎಲ್ಲವೂ ಕೆಮಿಕಲ್ ಮುಕ್ತ:
ವಿಶೇಷವೆಂದರೆ ಯೋಗೇಶ್ ಯಾವ ಬೆಳೆಗೂ ಕೆಮಿಕಲ್ ಬಳಸುವುದಿಲ್ಲ. ಹಾಗೆ ಅದನ್ನು ಆರೋಗ್ಯವಾಗಿ ನೋಡಿಕೊಳ್ಳುತ್ತಾರೆ. ಎಲ್ಲರೂ ಹೇಳುವಂತೆ ಯಾವುದಕ್ಕೆ ಪಾಲಿಹೌಸ್ ಬಳಸುವುದಿಲ್ಲ. ಸಂಪೂರ್ಣ ನೈಸರ್ಗಿಕವಾಗಿ ಬೆಳೆಯುವುದರಿಂದ ಜನ ಇದರತ್ತ ಹೆಚ್ಚು ಆಕರ್ಷಿತರಾಗುತ್ತಾರೆ.


ಖರೀದಿಗೆ ಇದೆ ವಾಟ್ಸಾಪ್ ಗ್ರೂಪ್:
ಯೋಗೇಶ್ ಅವರು ಗ್ರಾಹಕರಿಗಾಗಿಯೇ ವಾಟ್ಸಾಪ್ ಗ್ರೂಪ್ ಒಂದನ್ನು ಮಾಡಿದ್ದಾರೆ. ಆಸಕ್ತರು ಅದರಲ್ಲಿ ಸೇರಿಕೊಂಡು ಬೇಕಾದಾಗ ಆರ್ಡರ್ ಕೊಡಬಹುದು. ಅದನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ.
ಮಧ್ಯವರ್ತಿಗಳ ಹಾವಳಿ, ಬೆಳೆಹಾನಿ ಎಲ್ಲವನ್ನೂ ಮೆಟ್ಟಿನಿಂತು ಅಚ್ಚುಕಟ್ಟಾಗಿ ವ್ಯವಸಾಯ ಮಾಡಿಕೊಂಡು ಹೋಗುತ್ತಿದ್ದಾರೆ ಯೋಗೇಶ್. ೩೦-೫೦ ದಿನದಲ್ಲಿ ಫಲ ಕೊಡುವ ಕೃಷಿ ಇದಾದ್ದರಿಂದ ಒಂದಾದ ಮೇಲೆ ಒಂದರಂತೆ ನಿರಂತರವಾಗಿ ವ್ಯವಸಾಯ ಮಾಡುತ್ತಿರುತ್ತಾರೆ. ಯಾವ ಬೆಳೆಯನ್ನೂ ಎಕರೆಗಟ್ಟಲೆ ಬೆಳೆಯದೆ ನಷ್ಟದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಬುದ್ಧಿ ಉಪಯೋಗಿಸಿ ವ್ಯವಸಾಯ ಮಾಡುತ್ತಾ ರೈತರಿಗೆ ಮಾದರಿಯಾಗಿದ್ದಾರೆ.


ಜನ ಸೂಪರ್ ಮಾರ್ಕೆಟ್‌ನಲ್ಲಿ ಕೇಳಿದಷ್ಟು ಹಣ ಕೊಟ್ಟು ಇವನ್ನೆಲ್ಲಾ ಕೊಳ್ಳುತ್ತಾರೆ. ನಾನು ಅದಕ್ಕಿಂತ ಕಡಿಮೆ ಬೆಲೆಗೆ ಕೊಡುತ್ತೇನೆ. ಇದನ್ನು ಎಲ್ಲಾ ರೈತರೂ ಮಾಡಬಹುದು. ಮುಂದೆ ಇದನ್ನು ಬೆಳೆಯುವ ರೈತರನ್ನು ಹಾಗೂ ಗ್ರಾಹಕರನ್ನು ಒಟ್ಟುಗೂಡಿಸಿ ಮಾರ್ಕೆಟಿಂಗ್ ಸುಲಭ ಮಾಡುವುದು ನನ್ನ ಉದ್ದೇಶ.
ಯೋಗೇಶ್, ರೈತ 

Copyright © All rights reserved. | Designed by Savhn Tech Solutions.
error: Content is protected !!