Thu. Jan 21st, 2021

Namma Mysuru

History, News, Stories and much more

ಒಂದೇ ಮನೆಯಲ್ಲಿವೆ ನೂರಾರು ರೀತಿಯ ಆನೆಗಳು..!

1 min read
321 Views

ಮನೆಯೊಳಗೆ ಹೋದರೆ ಎಲ್ಲೆಲ್ಲೂ ಆನೆಗಳು. ವಿವಿಧ ದೇಶ, ವಿವಿಧ ರಾಜ್ಯಗಳ ಕಲೆ, ಕಲಾವಿದರ ಕೌಶಲ್ಯವನ್ನು ಸಾರುವ ಕುಸುರಿ ಕೆಲಸದಲ್ಲಿ ತಯಾರಾದ ಆನೆಗಳು. ಎಲ್ಲಾ ಬಣ್ಣದ, ಎಲ್ಲಾ ಆಕಾರದ ಎಲ್ಲಾ ರೀತಿಯ ಆನೆಗಳ ಮಾದರಿಗಳನ್ನು ನಾವು ಇಲ್ಲಿ ಕಾಣಬಹುದು. ಮೈಸೂರಿನ ಕುವೆಂಪುನಗರದಲ್ಲಿರುವ ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕಿ ಡಾ.ಸುಧಾ ಅವರ ಮನೆಯ ಚಿತ್ರಣ ಇದು. ಸುಧಾ ಅವರು ವೃತ್ತಿಯಲ್ಲಿ ಪ್ರಾಣಿಶಾಸ್ತ್ರಜ್ಞರಾಗಿ ನಿವೃತ್ತಿ ಹೊಂದಿದ್ದಾರೆ. ಎಲ್ಲಾ ಪ್ರಾಣಿಗಳ ಬಗ್ಗೆಯೂ ಅಪಾರ ಜ್ಞಾನವಿದ್ದರೂ ಆನೆಯ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಇವರ ಮನೆಯೇ ಸಾಕ್ಷಿ.

ಆನೆಯ ಗಾಂಭೀರ್ಯ, ಹಾವಭಾವ, ಮುಗ್ಧತೆ ಎಲ್ಲವೂ ಸುಧಾ ಅವರಿಗೆ ಮುಂಚಿನಿದಲೂ ಅಚ್ಚುಮೆಚ್ಚಾಗಿತ್ತಂತೆ. ಆದ್ದರಿಂದ ಒಮ್ಮೆ ಶುರುವಾದ ಇವರ ಆನೆಯ ಕಲಾಕೃತಿಗಳ ಸಂಗ್ರಹದ ಹವ್ಯಾಸ ಇಂದಿಗೂ ನಿಂತಿಲ್ಲ. ಇವರು ಮೊದಲು ಕೊಂಡಿದ್ದು ಭಾರೀ ತೂಕದ ಟೆರ‍್ರಾಕೊಟ್ಟ ಆನೆ. ಆಗಿನಿಂದ ಶುರುವಾಗಿ ಈಗ ಅವರ ಮನೆಯಲ್ಲಿ ಸುಮಾರು ೧೫೦-೨೦೦ ರೀತಿಯ ವಿವಿಧ ರೀತಿಯ, ವಿವಿಧ ದೇಶದ, ವಿವಿಧ ಸಂಸ್ಕೃತಿಯನ್ನು ಸಾರುವ ಆನೆಯ ಮಾದರಿಗಳಿವೆ.


ಸುಧಾ ಅವರು ಖರೀದಿಸಿದ ಮೊದಲ ಆನೆ

ಆಸ್ಟ್ರೇಲಿಯಾ ಹೊರತುಪಡಿಸಿ ಚೈನಾ, ಮಲೇಷಿಯಾ, ಶ್ರೀಲಂಕಾ, ಬಾಲಿ, ಥಾಯ್‌ಲ್ಯಾಂಡ್, ಕಾಂಬೋಡಿಯಾ, ಯುಎಸ್‌ಎ, ಉತ್ತರ ಭಾರತ, ಕರಾವಳಿ, ಮೈಸೂರು ವಸ್ತುಪ್ರದರ್ಶನ.. ಹೀಗೆ ಎಲ್ಲಾ ಕಡೆ ಹೋದಾಗಲೂ ಅಲ್ಲಿ ಸಿಗುವ ವಿಶಿಷ್ಟ ಆನೆಯೊಂದನ್ನು ತಂದು ಮನೆಯಲ್ಲಿಟ್ಟುಕೊಳ್ಳುತ್ತಾರೆ. ವಿಶೇಷವೆಂದರೆ, ಇವರ ಬಳಿ ಇರುವ ಪ್ರತಿ ಆನೆಯೂ ಅಲ್ಲಿನ ಸಂಸ್ಕೃತಿಯ ಪ್ರತಿಬಿಂಬದಂತಿರುತ್ತದೆ. ಇದರಲ್ಲಿ ಎಲ್ಲಕ್ಕಿಂತ ವಿಶೇಷವಾದುದು ಎಂದರೆ ಶ್ರೀಲಂಕಾದಲ್ಲಿ ಖರೀದಿಸಿದ ಆನೆಯ ಲದ್ದಿಯಿಂದ ಮಾಡಿರುವ ಆನೆ..!

ತಮಿಳುನಾಡಿನ ಬಾಂದಿನಿ ಆನೆಯ ಚಿತ್ರ, ಚೈನಾದ ನಿಂತಿರುವ ಜಂಬೂ ವಿನ್ಯಾಸದ ಆನೆ, ಥಾಯ್‌ಲ್ಯಾಂಡ್‌ನ ಶುದ್ಧ ಚರ್ಮದ ಮೇಲೆ ಕೈಕೆಲಸದಿಂದ ತಯಾರು ಮಾಡಿರುವ ಬಿಳಿ ಆನೆಯ ಚಿತ್ರ, ಪಂಚಮುಖಿ ಆನೆ, ಗಂಜೀಫಾ ಕಾರ್ಡ್ನಲ್ಲಿ ಆನೆ, ನಮ್ಮ ಸಾಗರದ ಸಮತಟ್ಟಾದ ಮರದ ಮೇಲೆ ಕೆತ್ತನೆ ಮಾಡಿರುವ ಆನೆ ಹಾಗೂ ಇನ್ನಷ್ಟು ವಿಶೇಷ ಆನೆ ಕಲಾಕೃತಿಗಳು ಇವರ ಸಂಗ್ರಹದಲ್ಲಿ ಸ್ಥಾನ ಪಡೆದಿವೆ.

ಆನೆಯದ್ದೇ ಸ್ಕೇಲ್, ಬುಕ್ ಮಾರ್ಕ್!!

ಶೋಕೇಸ್‌ನಲ್ಲಿಡುವ ಕಲಾಕೃತಿಗಳಲ್ಲದೆ ನಿತ್ಯಬಳಕೆ ವಸ್ತುಗಳಾದ ಆನೆ ವಿನ್ಯಾಸದ ಸ್ಕೇಲ್, ಬುಕ್‌ಮಾರ್ಕ್, ರಿಂಗ್ ಹೋಲ್ಡರ್, ಕ್ಯಾಂಡಲ್ ಸ್ಟ್ಯಾಂಡ್, ಟೀ ಪಾಟ್, ಗಂಧದಕಡ್ಡಿ ಸಿಕ್ಕಿಸುವ ಸಾಧನ, ಬೆಡ್‌ಲೈಟ್‌ಗಳು ಗಮನ ಸೆಳೆಯುತ್ತವೆ. ಅದರೊಂದಿಗೆ ಆನೆ ಚಿತ್ರಗಳಿರುವ ಸ್ಟ್ಯಾಂಪ್‌ಗಳನ್ನೂ ಇಲ್ಲಿ ಕಾಣಬಹುದು. ಸುಧಾ ಅವರು ಹೋದ ಕಡೆಯಲ್ಲೆಲ್ಲಾ ಆನೆಗಳ ಕಲಾಕೃತಿಯನ್ನು ನೋಡಿದರೆ ಹಣದ ಬಗ್ಗೆ ಯೋಚಿಸದೆ ಅವುಗಳನ್ನು ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಇವರ ಆಸಕ್ತಿ ನೋಡಿ ವಿಶೇಷ ಕೆತ್ತನೆಯ ಆನೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ದೇಶ-ವಿದೇಶಗಳಲ್ಲಿ ತಯಾರಿಸಿರುವ ಆನೆಗಳನ್ನು ನಾನು ನೋಡಿದ್ದೇನೆ. ಆದರೆ ಭಾರತದಲ್ಲಿ ಮಾಡುವಷ್ಟು ಸುಂದರವಾದ ಆನೆ ಮತ್ತೆಲ್ಲೂ ಸಿಗುವುದಿಲ್ಲ. ಬಹುಶಃ ಭಾರತೀಯರು ಬೇರೆಲ್ಲಾ ಭಾಗದ ಜನರಿಗಿಂತ ಆನೆಯನ್ನು ಹತ್ತಿರದಿಂದ, ಹೆಚ್ಚಾಗಿ ನೋಡಿರುವುದೇ ಇದಕ್ಕೆ ಕಾರಣವಿರಬಹುದು’ ಎನ್ನುತ್ತಾರೆ ಡಾ.ಸುಧಾ.

ಈಕೆ ಲೇಖಕಿಯೂ ಹೌದು

ಸುಧಾ ಅವರು ಬರಹಗಾರ್ತಿಯೂ ಹೌದು. ಪ್ರಾಣಿಶಾಸ್ತçದ ಬಗ್ಗೆ ೧೦-೧೨ ಪುಸ್ತಕಗಳನ್ನು ಬರೆದಿದ್ದಾರೆ. ಅದರೊಂದಿಗೆ ವಿವಿಧ ಪತ್ರಿಕೆಗಳಲ್ಲಿ ಪ್ರಾಣಿಶಾಸ್ತ್ರ, ಆನೆ ಮನುಷ್ಯನ ಸಂಘರ್ಷ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆ ಹತ್ತಾರು ಲೇಖನಗಳನ್ನು ಬರೆದಿದ್ದಾರೆ. ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವಂತಹ ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಸ್ಥಳೀಯ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಸಿಕ್ಕಿವೆ. ಅಲ್ಲದೆ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಒಮ್ಮೆ ಇವರ ಸಂಗ್ರಹದಲ್ಲಿರುವ ಆನೆಗಳನ್ನು ಪ್ರದರ್ಶನ ಮಾಡಲಾಗಿತ್ತು.

‘ಆನೆ ಮನಷ್ಯರಂತೆ ಸಂಘಜೀವಿ. ಆನೆಗೂ ಮನುಷ್ಯನಿಗೂ ಸಾಕಷ್ಟು ಸಾಮ್ಯತೆಗಳಿವೆ. ಅಲ್ಲದೆ ಎಲ್ಲಾ ಧರ್ಮಗಳಲ್ಲೂ ಆನೆಗಳು..ವಿಶೇಷವಾಗಿ ಬಿಳಿ ಆನೆಗಳು ಪೂಜ್ಯನೀಯವಾದುವು. ಆದ್ದರಿಂದ ನನಗೆ ಆನೆಗಳೆಂದರೆ ಅಚ್ಚುಮೆಚ್ಚು. ನನ್ನ ಹವ್ಯಾಸಕ್ಕೆ ನನ್ನ ಸ್ನೇಹಿತರು, ಕುಟುಂಬಸ್ಥರು, ನನ್ನ ಪತಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎನ್ನುತ್ತಾರೆ ಸುಧಾ.

Copyright © All rights reserved. | Designed by Savhn Tech Solutions.
error: Content is protected !!