Wed. Jul 8th, 2020

Namma Mysuru

History, News, Stories and much more

ನಮ್ಮೂರಾನೆಗಳ ಕುರಿತು ಈಕೆಗೆಷ್ಟು ಪ್ರೀತಿ!!

1 min read
157 Views

ನಮ್ಮ ದೇಶದ ಸಂಸ್ಕೃತಿ, ಇತಿಹಾಸದ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ, ಕುತೂಹಲ ವಿದೇಶದವರಿಗೆ ಇರುತ್ತದೆ. ವಿದೇಶಿಗರು ಭಾರತದ ಭವ್ಯ ಇತಿಹಾಸ, ವಾಸ್ತುಶಿಲ್ಪ, ಸಂಸ್ಕೃತಿಯ ಒಳಹೊಕ್ಕು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾರೆ. ಮೈಸೂರು ದಸರಾ ಹಾಗೂ ದಸರಾ ಆನೆಗಳ ಅಧ್ಯಯನ ಮಾಡುತ್ತಿರುವ ದೂರದ ಲಂಡನ್‌ನ ಮಹಿಳೆಯೊಬ್ಬರ ಆಸಕ್ತಿ ನಮ್ಮನ್ನೂ ನಿಬ್ಬೆರಗಾಗಿಸುತ್ತದೆ.

ರಾಚೆಲ್ ಡ್ವೈರ್  ಮೂಲತಃ ಲಂಡನ್‌ನವರು. ಬರೋಬ್ಬರಿ ಕಳೆದ ೪೦ ವರ್ಷಗಳಿಂದ ಭಾರತದಲ್ಲೇ ಇದ್ದಾರೆ. ಅವರ ಪತಿಯ ಕುಟುಂಬ ಬೆಂಗಳೂರಿನಲ್ಲೇ ಇರುವ ಕಾರಣ ರಾಚೆಲ್ ಇಷ್ಟು ವರ್ಷಗಳಿಂದ ಇಲ್ಲಿದ್ದಾರೆ. ಇಲ್ಲಿಗೆ ಬರುವ ಮುಂಚೆ ಈಕೆ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದಲ್ಲಿ ಪಿಎಚ್.ಡಿ ಮಾಡಿದ್ದರು ಎಂಬುದೇ ಇವರಿಗೆ ಭಾರತೀಯ ಸಂಸ್ಕೃತಿಯ ಮೇಲಿರುವ ವಿಶೇಷ ಕುತೂಹಲಕ್ಕೆ ಸಾಕ್ಷಿ.

ರಾಚೆಲ್ ಡ್ವೈರ್ 

ಮೈಸೂರು ದಸರಾ, ಅಂಬಾರಿ ಹೊತ್ತು ವೈಭವೋಪೇತವಾಗಿ ಸಾಗುವ ಆನೆಗಳ ದಂಡು, ಒಂದು ತಿಂಗಳ ಕಾಲ ಸಿಂಗಾರಗೊಂಡು ಕಂಗೊಳಿಸುವ ನಗರ ಇತ್ಯಾದಿಗಳನ್ನು ಕುತೂಹಲದ ಕಣ್ಣುಗಳಿಂದ ನೋಡುವುದರ ಜೊತೆಗೆ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುತ್ತಿದ್ದಾರೆ ರಾಚೆಲ್. ಇದನ್ನು ಹೊರತುಪಡಿಸಿ ಹಿಂದಿ ಸಿನಿಮಾ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿರುವ ಇವರು ಅದರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಮಾಲ್ಗುಡಿಯಂತಹ ಅತ್ಯದ್ಭುತ ಸ್ಥಳವನ್ನು ಸೃಷ್ಟಿಸಿದ ಖ್ಯಾತ ಲೇಖಕ ಆರ್.ಕೆ.ನಾರಾಯಣ್ ನನಗೆ ಭಾರತದ ಬಗ್ಗೆ ಆಸಕ್ತಿ ಬರಲು ಕಾರಣ ಎನ್ನುತ್ತಾರೆ ರಾಚೆಲ್. ಅವರ ಪುಸ್ತಕದಿಂದ ಪ್ರೇರಿತರಾಗಿ ಭಾರತದ ಉದ್ದಗಲಕ್ಕೂ ನೂರಾರು ಪ್ರವಾಸಗಳನ್ನು ಕೈಗೊಂಡು ಇಲ್ಲಿನ ಸಂಸ್ಕೃತಿಯ ಅಧ್ಯಯನ ಮಾಡಿದ್ದಾರೆ. ಈಗಲೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಇಷ್ಟೆಲ್ಲಾ ಆಸಕ್ತಿ ಇರುವ ರಾಚೆಲ್‌ಗೆ ಆನೆಗಳ ಮೇಲೆ ವಿಶೇಷ ಪ್ರೀತಿ, ವಿಶೇಷ ಆಸಕ್ತಿ. ನಮ್ಮ ದೇಶದಲ್ಲಿ ಆನೆಗಳನ್ನು ಪೂಜ್ಯನೀಯವಾಗಿ ಕಾಣಲು ಕಾರಣವೇನು, ಮೈಸೂರು ದಸರಾದಲ್ಲಿ ಆನೆಗಳಿಗೆ ಅಷ್ಟು ಪ್ರಾಮುಖ್ಯತೆ ನೀಡಿ ಅಷ್ಟು ದೊಡ್ಡ ಜವಾಬ್ದಾರಿ ಹೊರಿಸಲು ಕಾರಣವೇನು, ಆನೆಗಳಿಗೆ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನಮಾನ ಏಕಿದೆ ಎಂಬ ಪ್ರಶ್ನೆಗಳಿಗೆ ಈಕೆ ಉತ್ತರ ಹುಡುಕುತ್ತಲೇ ಇದ್ದಾರೆ. ಆನೆಗಳ ಜೀವನದ ಬಗ್ಗೆ ಅಪಾರ ಅಧ್ಯಯನ ಮಾಡಿರುವ ಬೆಂಗಳೂರಿನ ಪ್ರೊ.ರಾಮನ್ ಸುಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಅವರ ಪುಸ್ತಕಗಳನ್ನು ಅತ್ಯಂತ ಆಸ್ಥೆಯಿಂದ ಓದಿ ಮುಗಿಸಿದ್ದಾರೆ. ದಸರಾ ಆನೆಗಳಿರುವ ಸ್ಥಳಕ್ಕೇ ಹೋಗಿ ಅವುಗಳನ್ನು ನೋಡಿಕೊಂಡು ಬಂದಿದ್ದಾರೆ.

ಜೈಪುರ, ಅಸ್ಸಾಂ, ಮಥುರಾಗೆ ಹೋಗಿ ಆನೆಗಳನ್ನು ನೋಡಿಕೊಂಡು ಬಂದಿರುವ ಈಕೆಯ ಅಧ್ಯಯನಕ್ಕೆ ಮೈಸೂರಿನಲ್ಲಿ ಜೊತೆಯಾದವರು ಆನೆಗಳ ಜೀವನ, ಜೀವನಶೈಲಿಯ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾ.ನಿಶಾಂತ್. ಪ್ರಸ್ತುತ ಮೈಸೂರಿನಲ್ಲಿ ಮೈಸೂರು ಅರಮನೆ, ದಸರಾ, ಅಂಬಾರಿಯ ಆನೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸುತ್ತಿರುವ ಇವರ ಆಸಕ್ತಿ ನೋಡಿದರೆ ಸಂತಸವಾಗುತ್ತದೆ. ಸಾಗರದಾಚೆಗಿನ ಸಾಮಾನ್ಯರೊಬ್ಬರು ನಮ್ಮ ಸಂಸ್ಕೃತಿಯ ಬಗ್ಗೆ ಕುತೂಹಲದಿಂದ ಮಾತನಾಡುವಾಗ ಹೆಮ್ಮೆಯಾಗುತ್ತದೆ.

Copyright © All rights reserved. | Designed by Savhn Tech Solutions.
error: Content is protected !!