ಮೈಸೂರಿನ ಜಯಪುರ ಹೊಯ್ಸಳರ ಅಗ್ರಹಾರವಾಗಿತ್ತಾ? ಇಲ್ಲಿ ದೊರೆತಿವೆ 70 ವೀರಗಲ್ಲುಗಳು!
1 min read
ಮೈಸೂರಿನ ಹೊರವಲಯದಲ್ಲಿರುವ ಜಯಪುರ ಹೋಬಳಿಯ ದೇವಸ್ಥಾನವೊಂದರ ಬಳಿ ಅಪರೂಪದ ೧೧ನೇ ಶತಮಾನದ ಸುಮಾರು 70ಕ್ಕೂ ಹೆಚ್ಚು ವೀರಗಲ್ಲುಗಳು ಪತ್ತೆಯಾಗಿವೆ. ಮೈಸೂರಿನ ಕುವೆಂಪುನಗರದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಜಯಪುರದ ಇತಿಹಾಸ ಪ್ರಾಧ್ಯಾಪಕ ರಾಮದಾಸ ರೆಡ್ಡಿ ಅವರ ನೇತೃತ್ವದಲ್ಲಿ ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ಅರ್ಧ ಹೂತಿರುವ ಕಲ್ಲುಗಳನ್ನು ಕಂಡ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಭೂಮಿ ಅಗೆದು ಕಲ್ಲನ್ನು ಸಂಪೂರ್ಣವಾಗಿ ಹೊರತೆಗೆದಿದ್ದಾರೆ.

ಮೈಸೂರಿನ ಖ್ಯಾತ ಇತಿಹಾಸ ತಜ್ಞ ಡಾ.ಎನ್.ಎಸ್.ರಂಗರಾಜು ದೊರೆತಿರುವ ವೀರಗಲ್ಲುಗಳನ್ನು ಪರಿಶೀಲಿಸಿ ಸುಮಾರು ಎಲ್ಲವೂ ಹೊಯ್ಸಳರ ಕಾಲದ ವೀರಗಲ್ಲುಗಳು ಎಂದು ಧೃಡಪಡಿಸಿದ್ದಾರೆ. ಈ ರೀತಿಯ ಸೋಪುಗಲ್ಲುಗಳನ್ನು ಬಳಸುತ್ತಿದ್ದುದು ಹೊಯ್ಸಳರು. ಜಯಪುರದಲ್ಲಿ ಈ ಹಿಂದೆಯೂ ಇಂತಹ ಸಾಕಷ್ಟು ವೀರಗಲ್ಲುಗಳು ದೊರೆತಿವೆ ಎನ್ನುತ್ತಾರೆ ರಂಗರಾಜು.

ಕಥೆ ಹೇಳುವ ಕಲ್ಲುಗಳು
ಇಲ್ಲಿ ಸಿಕ್ಕಿರುವ ವೀರಗಲ್ಲುಗಳೆಲ್ಲವೂ ವಿಶಿಷ್ಟವಾದುವು. ಈ ಪೈಕಿ ಯುದ್ಧದ ಕೆತ್ತನೆ ಇರುವ ವೀರಗಲ್ಲುಗಳು, ಸತಿ ಪದ್ಧತಿಯನ್ನು ತೋರಿಸುವ ಕೆತ್ತನೆಗಳು, ವೀರಮಾಸ್ತಿ ಕಲ್ಲು, ಮಾಸ್ತಿಕಲ್ಲು, ಪೆಣ್ಬಯಲು ವೀರಗಲ್ಲುಗಳು ಪ್ರಮುಖವಾದುವು. ಕಡಲ್ಗಳ್ಳರ ವೀರಗಲ್ಲಿನಲ್ಲಿ ನದಿ, ದೋಣಿ, ಅಂಬಿಗ ಹಾಗೂ ಓರ್ವ ಮಹಿಳೆಯ ಅಪರೂಪದ ಕೆತ್ತನೆ ಇದೆ. ಇಡೀ ಕರ್ನಾಟಕದಲ್ಲಿ ಈ ರೀತಿಯ ಕೆತ್ತನೆ ಇರುವ ಕಲ್ಲು ಸಿಕ್ಕಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಪೆಣ್ಬಯಲು ವೀರಗಲ್ಲಿನಲ್ಲಿ ಹೆಣ್ಣನ್ನು ಕಾಪಾಡಲು ಯುದ್ಧ ಮಾಡಿ ಮಡಿಯುವ ರಾಜ, ನಂತರ ಆತನನ್ನು ಕರೆದೊಯ್ಯುವ ಕಿನ್ನರರು, ಆತನ ಸ್ವರ್ಗವಾಸ.. ಇಷ್ಟೂ ಕಥೆಯನ್ನು ಕೆತ್ತಲಾಗಿದೆ. ಎಲ್ಲಾ ಕಲ್ಲುಗಳ ಮೇಲೆ ಸೂರ್ಯ, ಚಂದ್ರ ಹಾಗೂ ಕೀರ್ತಿಮುಖ (ಹೊಯ್ಸಳರ ಲಾಂಛನ)ವನ್ನು ಕಾಣಬಹುದು.


ಇಲ್ಲಿರುವ ಕೆಲವು ಕಲ್ಲುಗಳು ಮೈಸೂರು ಮಹಾರಾಜರು, ವಿಜಯನಗರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಸೇರಿದವು. ಆದರೆ ಬಹುಪಾಲು ೧೧ರಿಂದ ೧೩ನೇ ಶತಮಾನದ ಕಾಲಘಟ್ಟಕ್ಕೆ ಸೇರಿದ್ದು. ಇದನ್ನೆಲ್ಲಾ ನೋಡಿದರೆ ಹೊಯ್ಸಳರ ಕಾಲದಲ್ಲಿ ಈ ಸ್ಥಳ ಅಗ್ರಹಾರವಾಗಿರುವ ಸಾಧ್ಯತೆ ಹೆಚ್ಚಾಗಿದೆ.
ಕಲ್ಲುಗಳ ಮಧ್ಯೆ ಒಂದು ತಾಮ್ರದ ಶಾಸನ
ಇಷ್ಟು ವೀರಗಲ್ಲುಗಳ ಮಧ್ಯೆ ಒಂದು ತಾಮ್ರದ ಶಾಸನ ಸಹ ಸಿಕ್ಕಿದೆ. ಅದರಲ್ಲಿರುವುದು ಸಂಸ್ಕೃತ ಲಿಪಿ. ಮೂರು ಹಾಳೆಗಳ ಶಾಸನವನ್ನು ಆನೆಯ ಲಾಂಛನ ಹೊಂದಿದ ತಾಮ್ರದ ಬಳೆಯೊಂದಕ್ಕೆ ಹಾಕಿ ಇಡಲಾಗಿದೆ. ಲಾಂಛನದ ಆಧಾರದ ಮೇಲೆ ಆ ಶಾಸನ ಗಂಗರ ಕಾಲಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ.

‘ಇಲ್ಲಿರುವ ಶಾಸನಗಳು, ವೀರಗಲ್ಲುಗಳನ್ನು ಹುಡುಕಿ ರಕ್ಷಿಸಲು ನಮ್ಮ ಕಾಲೇಜಿನಿಂದ ಎನ್ಎಸ್ಎಸ್ ಕ್ಯಾಂಪ್ ಮಾಡುತ್ತೇವೆ. ಈ ಬಾರಿ ಸಿಕ್ಕಿರುವ ಎಲ್ಲಾ ಕಲ್ಲುಗಳೂ ಅಪರೂಪವಾದುವು. ಅದಕ್ಕೆ ಶಾಸನವೇ ಬೇಡ. ಕೆತ್ತನೆಯೇ ಕಥೆ ಹೇಳುತ್ತದೆ. ನಮಗೆ ಗ್ರಾಮಸ್ಥರ ಅತ್ಯುತ್ತಮ ಸಹಕಾರ ಇರುವುದು ಖುಷಿಯ ಸಂಗತಿ’ ಎಂದು ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಎಸ್.ಜಿ.ರಾಮದಾಸ್ ರೆಡ್ಡಿ ಸಂತಸ ವ್ಯಕ್ತಪಡಿಸಿದರು.
`ಇಲ್ಲಿ ಸಿಕ್ಕಿರುವ ಶಾಸನವನ್ನು ಓದಿಸುವ ಕೆಲಸ ಮಾಡಬೇಕು. ಗ್ರಾಮಸ್ಥರಿಗೆ ಇದರ ಬಗ್ಗೆ ಅರಿವು ಮೂಡಿಸಿ ಕಲ್ಲುಗಳನ್ನು ರಕ್ಷಿಸಬೇಕು. ಇಲ್ಲಿ ಇನ್ನೂ ಹೆಚ್ಚು ಕಲ್ಲುಗಳು ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗ್ರಾಮಸ್ಥರ ಸಹಕಾರ ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಈ ಒಳ್ಳೆಯ ಕೆಲಸ ನಡೆದಿದೆ’ ಎನ್ನುತ್ತಾರೆ ಎನ್.ಎಸ್.ರಂಗರಾಜು