ಪೋಸ್ಟಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲೊಂದು ಅಪರೂಪದ ಅಂಚೆಲೋಕ!
1 min read
ಈಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಕ್ಷಣಮಾತ್ರದಲ್ಲಿ ಸಂದೇಶ ರವಾನೆ ಮಾಡಬಹುದು. ಆದರೆ ಮುಂಚೆ ಎಲ್ಲಕ್ಕೂ ಅಂಚೆ ಅಥವಾ ಟೆಲಿಗ್ರಾಂ ಅವಲಂಬಿಸಬೇಕಿತ್ತು. ಆಗ ಅಂಚೆಕಚೇರಿ ಹೇಗಿರುತ್ತಿತ್ತು, ಅಷ್ಟೊಂದು ಪತ್ರಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೇಗೆ ತಲುಪಿಸುತ್ತಿದ್ದರು ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ.
ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯ ಎದುರಿಗಿರುವ ಅಂಚೆ ತರಬೇತಿ ಕೇಂದ್ರದಲ್ಲಿರುವ ಅತ್ಯಂತ ಅಪರೂಪ ಪೋಸ್ಟಲ್ ಮ್ಯೂಸಿಯಂ ನಮ್ಮನ್ನು ಶತಮಾನಗಳಷ್ಟು ಹಿಂದೆ ಕರೆದೊಯ್ದು ಅಂದಿನ ಅಂಚೆಪದ್ಧತಿ ಬಗ್ಗೆ ತಿಳಿಸಿಕೊಡುತ್ತದೆ. ಮ್ಯೂಸಿಯಂ ಮುಂಭಾಗದಲ್ಲಿ ಪೋಸ್ಟ್ಮ್ಯಾನ್ ಪ್ರತಿಕ್ರತಿ ಇದೆ. ಕೈಯಲ್ಲಿ ಲಾಂದ್ರ, ಅಂಚೆಚೀಲ, ದೊಣ್ಣೆ ಹಿಡಿದು ನಿಂತಿರುವ ಆತ ಸಂದೇಶ ತಲುಪಿಸಲು ಉತ್ಸುಕನಾಗಿರುವಂತೆ ಕಾಣುತ್ತಾನೆ. ಇನ್ನು ಮ್ಯೂಸಿಯಂ ಒಳಗೆ ಹೋದರೆ ಅಂಚೆಲೋಕವೇ ತೆರೆದುಕೊಳ್ಳುತ್ತದೆ.
ಮ್ಯೂಸಿಯಂನಲ್ಲಿವೆ ಅಪರೂಪದ ಉಪಕರಣಗಳು:
ಆಗೆಲ್ಲಾ ರಾತ್ರಿ ವೇಳೆ ಕಚೇರಿಯಲ್ಲಿ ಕೆಲಸ ಮಾಡಬೇಕಾದರೆ ಲಾಂದ್ರದ ಬೆಳಕನ್ನೇ ಅವಲಂಬಿಸಬೇಕಿತ್ತು. ಆಗ ಕಚೇರಿ ಒಳಗೆ ಬಳಸುತ್ತಿದ್ದ ಲಾಂದ್ರ, ರಾತ್ರಿ ವೇಳೆ ಸಂಚರಿಸುವಾಗ ಪೋಸ್ಟ್ಮ್ಯಾನ್ ಹಿಡಿದಿರುತ್ತಿದ್ದ ಲಾಂದ್ರವನ್ನೂ ಇಲ್ಲಿ ಕಾಣಬಹುದು.
ಪೋಸ್ಟ್ಮ್ಯಾನ್ಗಳು ತಾವು ಬರುತ್ತಿರುವುದು ಗೊತ್ತಾಗಲಿ ಎಂಬ ಕಾರಣಕ್ಕೆ ತಮ್ಮ ಕೈಯಲ್ಲಿ ಗಂಟೆ ಕಟ್ಟಿರುವ ಕೋಲೊಂದನ್ನು ಹಿಡಿದುಕೊಂಡಿರುತ್ತಿದ್ದರು. ಆ ಕೋಲನ್ನು ಆಡಿಸಿದರೆ ಗಂಟೆ ಶಬ್ದ ಬಂದು ಜನರಿಗೆ ಆತ ಬಂದ ಎಂದು ತಿಳಿಯುತ್ತಿತ್ತು. ಕಳ್ಳರಿಂದ ತಪ್ಪಿಸಿಕೊಳ್ಳಲು ಸಹ ಈ ಕೋಲು ಉಪಯೋಗವಾಗುತ್ತಿತ್ತು.




ಗಮನ ಸೆಳೆಯುವ ಪುರಾತನ ಉಪಕರಣಗಳು:
ಆಗ ಅಂಚೆಕಚೇರಿಯಲ್ಲಿ ಬಳಸುತ್ತಿದ್ದ ಟೈಪ್ರೈಟರ್, ಟ್ರಾವಲ್ ರೈಟರ್, ಬ್ಯಾಂಕ್ ಖಾತೆಯ ಪರಿಕಲ್ಪನೆ ಬರುವ ಮುನ್ನ ಬಳಸುತ್ತಿದ್ದ ಗಲ್ಲಾಪೆಟ್ಟಿಗೆ, ಠಸ್ಸೆ, ಕೆ.ಜಿ.ಲೆಕ್ಕ ಮಾಡುವ ಮುಂಚೆ ಬಳಸುತ್ತಿದ್ದ ತೊಲದ ಬೊಟ್ಟುಗಳು, ಪೋಸ್ಟ್ಮ್ಯಾನ್ ಧರಿಸುತ್ತಿದ್ದ ಬ್ಯಾಗ್, ರಾಯಲ್ ಕ್ರಾಸ್ ಸ್ಟ್ಯಾಂಪ್ಗಳು, ಸಿಬ್ಬಂದಿಗೆ ನೀಡುತ್ತಿದ್ದ ಬ್ಯಾಡ್ಜ್ಗಳು, ತಕ್ಕಡಿ ಎಲ್ಲವನ್ನೂ ಸಂಗ್ರಹಿಸಿ ಅತ್ಯಂತ ಜೋಪಾನವಾಗಿ ಇಡಲಾಗಿದೆ. ಬ್ಯಾಡ್ಜ್ಗಳು ಕಾಲ ಬದಲಾದಂತೆ ಕ್ರಮವಾಗಿ ಹಿತ್ತಾಳೆ, ಕಂಚು, ಸ್ಟೀಲ್, ಅಲುಮಿನಿಯಂ, ಪ್ಲಾಸ್ಟಿಕ್ನಲ್ಲಿ ಬರುತ್ತಿದ್ದವಂತೆ. ಈಗ ಎಲ್ಲವೂ ಡಿಜಿಟಲ್ ಆಗಿದೆ.



ಒಟ್ಟಿನಲ್ಲಿ ಒಮ್ಮೆ ಈ ಮ್ಯೂಸಿಯಂನಲ್ಲಿ ಒಂದು ಸುತ್ತು ತಿರುಗಿ ಬಂದರೆ ಶತಮಾನಗಳಷ್ಟು ಹಿಂದೆ ಹೋಗಿ ಬಂದಂತಾಗುತ್ತದೆ. ಇಡೀ ಭಾರತದ ವಿವಿಧ ಭಾಗಗಳಿಂದ ಸಂಗ್ರಹಿಸಿರುವ ಈ ಅಪರೂಪದ ಉಪಕರಣಗಳು ಮತ್ತೆಲ್ಲೂ ಸಿಗುವುದಿಲ್ಲ.