Wed. Jul 8th, 2020

Namma Mysuru

History, News, Stories and much more

ಮೈಸೂರಿನಲ್ಲಿ ಶತಮಾನಗಳ ಹಿಂದೆಯೇ ಇತ್ತು ಸಾಮಾಜಿಕ ಅಂತರ, ಕ್ವಾರೆಂಟೈನ್!

1 min read
125 Views

ಈಗ ಎಲ್ಲೆಡೆ ಕೊರನಾ ಆವರಿಸಿರುವಂತೆ ಶತಮಾನಗಳ ಹಿಂದೆ ಸಿಡುಬು ಅಥವಾ ದಡಾರ ಎಂಬ ರೋಗ ಬಂದಿತ್ತು. ಈಗೇನೋ ಕೊರೊನಾಗೆ ಔಷಧಿ ಇಲ್ಲ. ಆಗ ಔಷಧಿ ಇದ್ದರೂ ಜನರು ಅದನ್ನು ಬಳಸಲು ಸಿದ್ಧರಿರಲಿಲ್ಲ. ಆ ಸಂದರ್ಭದಲ್ಲಿ ಮೈಸೂರು ರಾಜಮನೆತನದವರು ತಮ್ಮ ರಾಜಕುಮಾರಿಯರಿಗೆ ವ್ಯಾಕ್ಸಿನೇಷನ್ ಹಾಕಿಸುವ ಮೂಲಕ ಜನರನ್ನು ಔಷಧಿ ಬಳಸಲು, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಒಪ್ಪಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದರು.

ಮೊದಲ ಬಾರಿ ಸಿಡುಬು ಕಾಣಿಸಿಕೊಂಡಿದ್ದು 1810ರಲ್ಲಿ. ಅದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲ. ಆಗ ಮೈಸೂರು ಸಂಸ್ಥಾನದ ಜನರಲ್ಲಿ ಸಿಡುಬು ಕಾಣಿಸಿಕೊಂಡಿತ್ತು. ಆಗ ಸಿಡುಬಿನಿಂದ ಸತ್ತ ಜನರನ್ನು ನೋಡಿದರೆ ಈಗ ಕರೊನಾದಿಂದ ಸಾಯುತ್ತಿರುವವರ ಸಂಖ್ಯೆ ತೃಣಸಮಾನ. ಪ್ರತಿದಿನ ಸಿಡುಬಿನಿಂದಾಗಿ 2-3 ಸಾವಿರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅಂದಹಾಗೆ ಈ ರೋಗ ಬರಲು ಕಾರಣ ಅಶುಚಿತ್ವ. ಈಗ ಕರ್ಜನ್ ಪಾರ್ಕ್ ಇರುವ ಜಾಗದಲ್ಲಿ ಪೂರ್ತಿ ಕೆರೆ ಆಗಿತ್ತು. ಡ್ರೈನೇಜ್ ವ್ಯವಸ್ಥೆ ಇರಲಿಲ್ಲ. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿತ್ತು. 

ಪ್ರಾಣ ಹೋದರೂ ಸರಿ, ವ್ಯಾಕ್ಸಿನೇಷನ್ ಬೇಡ!: 

ಸಿಡುಬು ರೋಗ ಗುಣಪಡಿಸಲು ಆ ಸಂದರ್ಭದಲ್ಲಿ ಯುರೋಪಿಯನ್ನರು ವ್ಯಾಕ್ಸಿನೇಷನ್ ಕಂಡುಹಿಡಿದಿದ್ದರು. ಆದರೆ ಪ್ರಜೆಗಳು ಮಾತ್ರ ‘ಪ್ರಾಣ ಹೋದರೂ ಸರಿ, ಕೆಂಪು ಮಂದಿಯ ಔಷಧಿ ಮುಟ್ಟೆವು ಎಂದು ಶಪಥ ಮಾಡಿದ್ದರು’. ಆಗ ಮುಮ್ಮಡಿ ಅರಮನೆಯಲ್ಲಿ ಜನರ ಮುಂದೆ ರಾಜಕುಮಾರಿಯರಿಗೆ ವ್ಯಾಕ್ಸಿನೇಶನ್ ಹಾಕಿಸುವ ಮೂಲಕ ಎಲ್ಲರೂ ಔಷಧಿ ಬಳಸಬೇಕು ಎಂಬ ಸಂದೇಶ ರವಾನಿಸುತ್ತಾರೆ.  ರಾಜರ ಈ ನಡೆ ಬ್ರಿಟಿಷರಿಗೆ ಇಷ್ಟವಾಗುತ್ತದೆ. ಬ್ರಿಟಿಷ್ ಅಧಿಕಾರಿಗಳು ಕಲ್ಕತ್ತಾ, ಮದ್ರಾಸ್ ಸೇರಿದಂತೆ ಬೇರೆ ಪ್ರಾಂತ್ಯಗಳ  ವೈಸರಾಯ್ ಗಳನ್ನು ಕರೆಸಿ ಮೈಸೂರು ರಾಜಮನೆತನದ ನಡೆಯನ್ನು ಅನುಸರಿಸುವಂತೆ ಹೇಳುತ್ತಾರೆ. ಈ ಮೂಲಕ ಮೈಸೂರು ವ್ಯಾಕ್ಸಿನೇಷನ್ ನಲ್ಲಿ ಇಡೀ ದೇಶಕ್ಕೆ ಮಾದರಿಯಾಗುತ್ತದೆ. 


ನಾಲ್ವಡಿ ಕಾಲದಲ್ಲಿ ಮತ್ತೆ ವಕ್ಕರಿಸಿತ್ತು ರೋಗ: 

೧೮೯೦ರ ದಶಕದಲ್ಲಿ ಒಮ್ಮೆ ಈ ರೋಗ ಮತ್ತೆ ವಕ್ಕರಿಸುತ್ತದೆ. ಮತ್ತೆ ಆ ರೋಗ ಬರುವುದಕ್ಕೆ ಕಾರಣ ಸ್ವಚ್ಛತೆಯ ಸಮಸ್ಯೆ, ಡ್ರೈನೇಜ್ ಸಮಸ್ಯೆ. ಆಗ ಅರಮನೆಯನ್ನು ದೊಡ್ಡಕೆರೆ ಸುತ್ತುವರೆದಿರುತ್ತದೆ. ಜನರು ಎಲ್ಲಕ್ಕೂ ಅದೇ ನೀರನ್ನು ಬಳಸುತ್ತಿರುತ್ತಾರೆ. ಆಗ ರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಪರವಾಗಿ ಆಳ್ವಿಕೆ ಮಾಡುತ್ತಿದ್ದುದು ಅವರ ತಾಯಿ ಕೆಂಪರಾಜಮ್ಮಣ್ಣಿ. ಆಕೆ ತಕ್ಷಣ ಕ್ರಮ ಕೈಗೊಂಡು ಕೆರೆ ಬಳಿ ಇದ್ದ ಜನರನ್ನೆಲ್ಲಾ ಬೇರೆಡೆಗೆ ಹೋಗುವಂತೆ ಮಾಡಿ ದೊಡ್ಡಕೆರೆ ನೀರನ್ನು ಖಾಲಿ ಮಾಡಿಸಿ ದಳವಾಯಿ ಕೆರೆಗೆ ತುಂಬಿಸುತ್ತಾರೆ. ಇದರಿಂದ ರೋಗ ಸ್ವಲ್ಪ ಹತೋಟಿಗೆ ಬರುತ್ತದೆ. ನಂತರ ೧೯೦೦ರ ದಶಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಸ್ಥಾಪಿಸುತ್ತಾರೆ. ಆಗ ಇಡೀ ನಗರಕ್ಕೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳು ಒದಗಿ ಬರುತ್ತದೆ. ನಗರ ಅಭಿವೃದ್ಧಿಯಾದ ಮೇಲೆ ರೋಗಗಳು ಅದಾಗದೇ ಕಡಿಮೆಯಾಗುತ್ತದೆ. 


ಆಗಲೂ ಇತ್ತು ಸಾಮಾಜಿಕ ಅಂತರ: 

ಸಿಡುಬು ಸಹ ಒಬ್ಬರಿಂದೊಬ್ಬರಿಗೆ ಹರಡುವ ರೋಗ. ಆದ್ದರಿಂದ ಸಿಡುಬು ಅಥವಾ ದಡಾರ ಬಂದವರನ್ನು ಜನಸಂಪರ್ಕದಿಂದ ದೂರ ಇರುವಂತೆ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಈಗ ಕೊರೊನಾ ಹರಡುವಿಕೆ ಕಡಿಮೆಯಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಇದೇ ಪರಿಸ್ಥಿತಿ ಒಂದು ಶತಮಾನದ ಹಿಂದೆಯೂ ಇತ್ತು ಎಂಬುದು ಕುತೂಹಲಕಾರಿ ವಿಚಾರ ಎನ್ನುತ್ತಾರೆ ಇತಿಹಾಸ ತಜ್ಞ ನಂಜರಾಜೇ ಅರಸ್.

Copyright © All rights reserved. | Designed by Savhn Tech Solutions.
error: Content is protected !!