ತಾರಸಿ ಮನೆ ಮೇಲೆ ಬಿಸಿಲು ಕೊಯ್ಲು ಕೃಷಿ!
1 min read
ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿದವರ ಸಂಖ್ಯೆ ಅಪರೂಪ ಎನ್ನಬಹುದೇನೋ? ಅಂತಹ ಬಿಸಿಲು ಕೊಯ್ಲನ್ನು ಮೈಸೂರಿನ ಈ ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು ತಮ್ಮ ಮನೆಯಲ್ಲಿ ಬೆಳಕಿನ ಬೇಸಾಯ ಮಾಡಿ ಗಮನ ಸೆಳೆಯುತ್ತಿದ್ದಾರೆ. ಸೂರ್ಯನಿಂದ ನೇರವಾಗಿ ಭೂಮಿಗೆ ಬೀಳುವ ಬಿಸಿಲು ಹಾನಿಕಾರಕ. ಅವುಗಳು ಪ್ರಖರವಾಗಿ ಭೂಮಿ ಮೇಲೆ ಬೀಳದಂತೆ ಎಲ್ಲೆಡೆ ಹಸಿರು ಬೆಳೆಸಿ ಉರಿ ಬಿಸಿಲನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವ ಪದ್ಧತಿಯೇ ಬಿಸಿಲು ಕೊಯ್ಲು. ಇಂತಹ ಬಿಸಿಲು ಕೊಯ್ಲನ್ನು ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು ನಗರದ ಮಧ್ಯೆಯೇ ಇರುವ ತಮ್ಮ ಮನೆಯಲ್ಲಿ ಮಾಡುತ್ತಿದ್ದಾರೆ.


ಮನೆ ಮುಂದೆ ‘ತಾರಸಿ ತೋಟಕ್ಕೆ ಸ್ವಾಗತ’ ಎಂಬ ಫಲಕದೊಂದಿಗೆ ಬಂದವರನ್ನು ಸ್ವಾಗತಿಸುತ್ತಾರೆ. ಇವರ ಹೆಸರು ರುದ್ರಾರಾಧ್ಯ. 15 ವರ್ಷದ ಹಿಂದೆಯೇ ನಿವೃತ್ತಿಯಾಗಿರುವ ರುದ್ರಾರಾಧ್ಯ ಕೃಷಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಪ್ರಸ್ತುತ ವಿಜಯನಗರ 3ನೇ ಹಂತದ ಮೋರ್ ಸೂಪರ್ ಮಾರ್ಕೆಟ್ ಬಳಿಯ ಮಹಾಲಕ್ಷ್ಮಿ ಭಂಡಾರ್ ಸಮೀಪ ಇರುವ ಇವರ ಬಾಡಿಗೆ ಮನೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮನೆ ಪಕ್ಕದ ಖಾಲಿ ನಿವೇಶನದ ಮಾಲೀಕರು ಇವರ ಆಸಕ್ತಿ ನೋಡಿ ತಮ್ಮ 60*40 ಅಳತೆಯ ಜಾಗವನ್ನು ಇವರಿಗೆ ವ್ಯವಸಾಯ ಮಾಡಲು ಬಿಟ್ಟುಕೊಟ್ಟಿದ್ದಾರೆ.
ಮನೆಯ ಮೇಲೆ ಮಿನಿ ಉದ್ಯಾನವನ!:
ಕಳೆದ 3 ವರ್ಷಗಳಿಂದ ಟೆರೆಸ್ ಮೇಲೆ ಉದ್ಯಾನವನ ಮಾಡಿಕೊಂಡಿರುವ ಇವರು ಮನೆಗೆ ಬೇಕಾದ ಪುದೀನಾ, ಕರಿಬೇವು, ಟೊಮೆಟೊ, ಹೀರೇಕಾಯಿ, ಬೆಂಡೆ, ಬದನೆ, ಮೆಂತ್ಯ, ಸೇವಂತಿಗೆ, ಚಪ್ಪರದ ಅವರೇಕಾಯಿ, ನಿಂಬೆಹಣ್ಣು ಮುಂತಾದ ಗಿಡಗಳನ್ನು ಬೆಳೆಸಿದ್ದಾರೆ. ಔಷಧೀಯ ಸಸ್ಯಗಳಾದ ನಾಗದಾಳೆ, ಚಕ್ರಮುನಿ, ಅಗಸೆ, ಲೋಳೆಸರ, ಅಮೃತಬಳ್ಳಿ, ಬೇವು, ಒಂದೆಲಗ ಮುಂತಾದ ಗಿಡಗಳು ಹಾಗೂ ಬೆಳಿಗ್ಗೆ ಮಾತ್ರ ಅರಳುವ ‘ಒಂದು ಗಂಟೆ ರಾಣಿ’ ಎಂಬ ವಿಶೇಷ ಹೂವು ಸಹ ಇವರ ಸಂಗ್ರಹದಲ್ಲಿವೆ. ವಿಶೇಷವೆಂದರೆ ನರ್ಸರಿಯನ್ನೂ ಇವರೇ ಮಾಡುತ್ತಾರೆ.


ಮನೆ ಪಕ್ಕದ ನಿವೇಶನದಲ್ಲಿ ಮಾಡಿಕೊಂಡಿರುವ ಬಾಳೆ ತೋಟದಲ್ಲಿ 60 ಬಾಳೆಗಿಡಗಳ ಜೊತೆ ಟೊಮೆಟೊ, ಜೋಳ, ಮೆಂತ್ಯ ಸೊಪ್ಪು, ಹಸಿಮೆಣಸಿನಕಾಯಿ, ಹೊನಗೊನೆ ಸೊಪ್ಪಿನಂತಹ ಗಿಡಗಳನ್ನು ಹಾಕಿದ್ದಾರೆ. ಮೊದಲ ಕಟಾವಿನಲ್ಲೇ 500 ಕೆ.ಜಿ. ಟೊಮೆಟೊ, 150 ಕೆ.ಜಿ. ಹಸಿಮೆಣಸಿನಕಾಯಿ ಬಂದಿವೆ. ಎಲ್ಲಾ ಬಾಳೆ ಗಿಡಗಳಲ್ಲೂ 15-20 ಕೆ.ಜಿ. ತೂಗುವ ಬಾಳೆಗೊನೆಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿವೆ. ಎಲ್ಲವನ್ನೂ ನೋಡಿಕೊಳ್ಳಲು ಇವರೊಂದಿಗೆ ಸಹಾಯಕರೊಬ್ಬರಿದ್ದಾರೆ.

ಮನೆಗೆ ಬಂದವರನ್ನು ಆದರವಾಗಿ ಬರಮಾಡಿಕೊಳ್ಳುವ ಇವರ ಸರಳತೆ ಇಷ್ಟವಾಗುತ್ತದೆ. ಸಿಕ್ಕಿರುವ ಸ್ವಲ್ಪ ಜಾಗವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಎಲ್ಲೆಲ್ಲೂ ಹಸಿರು ಬೆಳೆಸಿ ನಗರದ ಮಧ್ಯಭಾಗದಲ್ಲೂ ಸುಂದರ ತೋಟ ನಿರ್ಮಿಸಬಹುದು, ಮನೆಯ ಅವಶ್ಯಕತೆಗಳು ಪೂರೈಸಿಕೊಳ್ಳುವುದರ ಜೊತೆಗೆ ಸಂಪಾದನೆಯನ್ನೂ ಮಾಡಬಹುದು..ಎಲ್ಲಕ್ಕಿಂತ ಹೆಚ್ಚಾಗಿ ವಾತಾವರಣ ಶುದ್ಧವಾಗಿಟ್ಟುಕೊಳ್ಳಬಹುದು ಎಂಬ ಪಾಠ ಇವರ ಕೆಲಸದಲ್ಲಿದೆ.