Mon. Jan 25th, 2021

Namma Mysuru

History, News, Stories and much more

ಅಂಜೂರಕ್ಕೆ, ಆಭರಣಕ್ಕೆ ಹೆಸರಾದ ಮೈಸೂರಿನ ಈ ಪುಟ್ಟ ಹಳ್ಳಿಯ ಪರಿಚಯ

1 min read
330 Views

ಗಂಜಾಂ ಹೆಸರನ್ನು ಎಲ್ಲರೂ ಕೇಳಿರುತ್ತೇವೆ. ಕೆಲವು ಆಭರಣ ಮಾರಾಟಗಾರರು ತಮ್ಮ ಅಂಗಡಿಗಳಿಗೆ ಈ ಹೆಸರನ್ನಿಟ್ಟುಕೊಂಡಿರುತ್ತಾರೆ. ಒರಿಸ್ಸಾದಲ್ಲಿ ಗಂಜಾಂ ಹೆಸರಿನ ಜಿಲ್ಲೆ ಒಂದಿದೆ. ಅದೇ ರೀತಿ ಮೈಸೂರಿನ ಬಳಿ ಇರುವ ಒಂದು ಪುಟ್ಟ ಗ್ರಾಮದ ಹೆಸರು ಗಂಜಾಂ. ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ, ಕೆಲವೇ ಕೆಲವು ಮನೆಗಳಿರುವ ಈ ಊರಿಗೆ ಐತಿಹಾಸಿಕ ಹಿನ್ನೆಲೆಯಿದೆ.

ಗಂಜಾಂ ಹಳ್ಳಿ ಅಂಜೂರ ಹಣ್ಣಿನ ಬೆಳೆಗೂ ಹೆಸರುವಾಸಿಯಾಗಿತ್ತು. ಒಂದು ಕಾಲದಲ್ಲಿ ಮೈಸೂರಿನ ರಾಜರಿಗೆ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಗಂಜಾಂ ಅಂಜೂರ ಒಂದಾಗಿತ್ತು. ಗಂಜಾಂನಲ್ಲಿ ಬೆಳೆಯುವ ಎಲ್ಲಾ ಅಂಜೂರ ಹಣ್ಣುಗಳನ್ನೂ ಅರಮನೆಯವರೇ ಖರೀದಿಸುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಗಂಜಾಂ ಅಂಜೂರ ಪ್ರಸಿದ್ಧಿ ಪಡೆದಿತ್ತು. ಮೊದಲು ಎಲ್ಲಿಂದಲೋ ಬೀಜವನ್ನು ತಂದ ಗಂಜಾಂ ನಿವಾಸಿಯೊಬ್ಬರು ತಮ್ಮ ಮನೆ ಮುಂದೆ ಅಂಜೂರ ಬೆಳೆದಿದ್ದರಿಂದ ಇನ್ನೊಂದಷ್ಟು ಮರಗಳು ಬೇರೆ ಬೇರೆ ಮನೆಗಳ ಮುಂದೆ ಕಾಣಿಸಿಕೊಂಡಿತ್ತಂತೆ. ತಮ್ಮ ಮನೆಯವರು ತಿನ್ನಲು ಹಾಕಿಕೊಂಡಿದ್ದ ಅಂಜೂರದ ಮರದಿಂದ ಒಮ್ಮೆ ಸರ್ ಮಿರ್ಜಾ ಇಸ್ಮಾಯಿಲ್ ಗೆ ಹಣ್ಣೊಂದನ್ನು ನೀಡಲಾಗಿತ್ತು. ಅದನ್ನು ತಿಂದ ಅವರು ಅದರ ರುಚಿಯ ಬಗ್ಗೆ ರಾಜರಿಗೆ ವಿವರಿಸಿ ರಾಜರು ಕೂಡಾ ಗಂಜಾಂ ಅಂಜೂರದ ರುಚಿ ನೋಡಿ ಮನಸೂರೆಗೊಂಡಿದ್ದರು.

ಹಣ್ಣು ಬೆಳೆಯಲು ಭೂಮಿ ಕೊಟ್ಟ ರಾಜರು!:
ನಂತರ ಗಂಜಾಂ ಅಂಜೂರದ ಅಭಿವೃದ್ಧಿಗೆ ಸೂಚನೆ ನೀಡಿ ಅಲ್ಲಿನ ಜನಕ್ಕೆ ಅಂಜೂರ ಬೆಳೆಯಲೆಂದೇ ಅರಮನೆ ಕಡೆಯಿಂದ ಜಾಗ ನೀಡಲಾಯಿತು. ಸುಮಾರು 150 ಜನರಿಗೆ ತಮ್ಮ ಮನೆ ಸುತ್ತಮುತ್ತಲಿನ ವಾತಾವರಣದಲ್ಲೇ ಅಂಜೂರ ಬೆಳೆಯಲು ಅನುಕೂಲವಾಗುವಂತೆ ತಲಾ 5 ರಿಂದ 10 ಗುಂಟೆಯಷ್ಟು ಜಾಗ ನೀಡಿ ನೀರಿಗೆ ತೊಂದರೆಯಾಗಬಾರದೆಂದು ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಗಂಜಾಂಗೆ ಬರುವಂತೆ ಮಾಡಲಾಗಿತ್ತು.

ಮೈಸೂರು ರಾಜಾಶ್ರಯದಲ್ಲಿ ಶ್ರೀರಂಗಪಟ್ಟಣಕ್ಕೆ ಸೇರಿದಂತಿರುವ ಗಂಜಾಂನಲ್ಲಿ ಅಂಜೂರ ಬೆಳೆಯಲಾಗುತ್ತಿತ್ತು. ಈ ಪ್ರದೇಶದಲ್ಲಿ ಬೆಳೆಯುವ ಕಾರಣಕ್ಕಾಗಿಯೇ ಇದಕ್ಕೆ ವಿಶಿಷ್ಟವಾದ ರುಚಿ ಇತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಇದನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮಿಸಿದರು. ಆದರೆ ಈಗ ಗಂಜಾಂ ಊರಿನಲ್ಲಿ ಅಂಜೂರದ ತೋಟವಿತ್ತೆ ಎಂಬ ಅನುಮಾನ ಕಾಡುವಷ್ಟರ ಮಟ್ಟಿಗೆ ಕೃಷಿ ನಾಶವಾಗಿವೆ. ತೋಟಗಾರಿಕಾ ಇಲಾಖೆ ಪ್ರಯತ್ನದಿಂದ ಒಂದಷ್ಟು ಪ್ರಾಯೋಗಿಕ ಸಸ್ಯಗಳು ಉಳಿದಿವೆ. ಗಂಜಾಂ ಅಂಜೂರಕ್ಕೆ ಆ ರಾಜವೈಭವ ಮತ್ತೆ ಸಿಕ್ಕರೆ ಗಂಜಾಂನ ಹೆಸರು ಮತ್ತೆ ಎಲ್ಲೆಡೆ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ.
ಗಂಜಾಂನಲ್ಲಿ ಐತಿಹಾಸಿಕ ನಿಮಿಷಾಂಬ ದೇಗುಲವಿದೆ. ಈ ದೇಗುಲದ ಕಾರಣದಿಂದ ಒಂದಷ್ಟು ಜನಕ್ಕೆ ಗಂಜಾಂ ಗ್ರಾಮ ಗೊತ್ತು. ಆದರೆ ರಾಜರಿಗೆ ಇಷ್ಟವಾಗಿದ್ದ ಅಂಜೂರ ಬೆಳೆಯುತ್ತಿದ್ದ ಗ್ರಾಮದಲ್ಲಿ ಅಂಜೂರ ಗಿಡಗಳು ಕೇವಲ ಕುರುಹಾಗಷ್ಟೇ ಉಳಿದುಕೊಂಡಿವೆ.

ಗಂಜಾಂ ಅಂಜೂರ

ಅಂಜೂರದ ಜೊತೆಗೆ ಈ ಗ್ರಾಮ ಆಭರಣಗಳಿಗೂ ಹೆಸರುವಾಸಿ. ಶತಶತಮಾನಗಳಿಂದ ಇಲ್ಲಿನ ಕಲಾವಿದರು ಸಾಂಪ್ರದಾಯಕ ಆಭರಣಗಳನ್ನು ತಯಾರು ಮಾಡುತ್ತಿದ್ದರು. ಇವರು ತಯಾರು ಮಾಡುವ ಆಭರಣಗಳು ಇಡೀ ರಾಜ್ಯದಲ್ಲೇ ಜನಪ್ರಿಯವಾಗಿದ್ದವು. ಜೊತೆಗೆ ದೇಶದ ನಾನಾ ಕಡೆಗಳಲ್ಲಿ ಗಂಜಾಂ ಆಭರಣಗಳಿಗೆ ತುಂಬಾ ಬೇಡಿಕೆ ಇತ್ತು ಎನ್ನುತ್ತದೆ ಇತಿಹಾಸ. ಹೀಗಾಗಿ ಟಿಪ್ಪು ಸುಲ್ತಾನ್ ಗಂಜಾಂ ಜನರ ಕಲೆಗೆ ಪ್ರೋತ್ಸಾಹ ಕೊಟ್ಟು ತುಮಕೂರು ಜಿಲ್ಲೆಯ ಶಿರಾದಿಂದ 500ಕ್ಕೂ ಹೆಚ್ಚು ಕಲಾವಿದರನ್ನು ಕರೆಸಿ, ಗಂಜಾಂ ಆಭರಣಗಳಿಗೆ ದೊಡ್ಡ ಮಾರುಕಟ್ಟೆ ಸಿಗುವಂತೆ ಮಾಡಿದ್ದು ಆ ಕಾಲದ ಮಾತು.

ಆದರೆ ಇತ್ತೀಚಿನ ದಿನಗಳಲ್ಲಿ ಗಂಜಾಂ ಗ್ರಾಮದಲ್ಲಿ ಆಭರಣ ತಯಾರಿಕೆ ಕಡಿಮೆಯಾಗಿಹೋಗಿದೆ.

Copyright © All rights reserved. | Designed by Savhn Tech Solutions.
error: Content is protected !!