ಇಲ್ಲಿ ಕೆ.ಜಿ. ಲೆಕ್ಕದಲ್ಲಿ ಸಿಗುತ್ತದೆ ಶುದ್ಧ ಹಾಲು!
1 min read
ತಕ್ಕಡಿಯಲ್ಲಿ ಹಾಲಿನ ತೂಕ. ಖರೀದಿ ಮಾಡೋದೂ ಕೆಜಿ ಲೆಕ್ಕ. ಮಾರಾಟ ಮಾಡೋದೂ ಕೆಜಿ ಲೆಕ್ಕ. ಲೀಟರ್, ಮಿ.ಲೀ. ಅನ್ನೋ ಲೆಕ್ಕಾಚಾರಾನೇ ಇಲ್ಲ ಇಲ್ಲಿ. ವ್ಯವಹಾರ ಹಾಲಿನಷ್ಟೇ ಶುಭ್ರ.. ಮೋಸಕ್ಕೆ ದಾರಿಯೇ ಇಲ್ಲ. ಇದು ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿರೋ ಖಾಸಗಿ ಡೈರಿ. ಹಾಲು ಉತ್ಪಾದಕರು ಇಲ್ಲಿಗೇ ಹಸುಗಳನ್ನು ಕರೆತರುತ್ತಾರೆ. ಸ್ಥಳದಲ್ಲೇ ಹಾಲು ಕರೆದು ಡೈರಿಗೆ ಕೊಡುತ್ತಾರೆ. ಕೆಜಿ ಲೆಕ್ಕದಲ್ಲಿ ಖರೀದಿ ಮಾಡುವ ಮಾಲೀಕ, ನಂತರ ಕೆಜಿ ಲೆಕ್ಕದಲ್ಲೇ ಮಾರುತ್ತಾರೆ. ಅಲ್ಲೇ ಕರೆದು ಅಲ್ಲೇ ಮಾರಾಟ ಮಾಡೋದ್ರಿಂದ ಗಟ್ಟಿ ಹಾಲು ಗ್ರಾಹಕರಿಗೆ ಸಿಗುತ್ತೆ.

ಎಲ್ಲಾ ಕಡೆ ಲೀಟರ್ ಲೆಕ್ಕದಲ್ಲಿ ಹಾಲು ಮಾರಾಟ ಮಾಡ್ತಾರೆ. ಆದ್ರೆ ಇಲ್ಲಿ ಮಾತ್ರ ಕಳೆದ 54 ವರ್ಷದಿಂದಲೂ ಇದೇ ರೀತಿಯ ವ್ಯವಹಾರ ಮಾಡ್ತಿದ್ದಾರಂತೆ. ಲೀಟರ್ ನಲ್ಲಿ ಅಳತೆ ಮಾಡಿ ಕೊಟ್ಟರೆ, ಕೊಂಚ ಹಾಲು ಕಡಿಮೆಯಾಗುತ್ತಂತೆ. ಅಳತೆ ಮಾಡುವಾಗಲೇ ಸೋರಿ ಹೋಗುತ್ತಂತೆ. ಹೀಗಾಗಿ ಗ್ರಾಹಕರಿಗೆ ಚೂರೂ ಮೋಸ ಮಾಡದಂತೆ ವ್ಯಾಪಾರ ನಡೆಸೋದು ಇವರ ಉದ್ದೇಶವಂತೆ.. ಹೀಗಾಗಿ, ತಗೋಳೋದೂ ಕೆಜಿ ಲೆಕ್ಕ, ಕೊಡೋದೂ ಕೆಜಿ ಲೆಕ್ಕ. ಇವರ ಹೆಸರು ಗಿರಿರಾಜ್.. ಇದೇ ಅಗ್ರಹಾರದಲ್ಲೇ ಹುಟ್ಟಿ ಬೆಳೆದವರು. ಇವರ ತಂದೆ ಕಾಲದಿಂದಲೂ ಹಾಲಿನ ವ್ಯಾಪಾರ ಮಾಡ್ತಿದ್ದಾರಂತೆ. ಪಾಕೆಟ್ ಹಾಲು ಬರೋಕೆ ಮುಂಚಿನಿಂದಲೂ ಸಾವಿರ ಲೀಟರ್ ವ್ಯಾಪಾರ ಮಾಡ್ತಿದ್ದರಂತೆ. ಈಗಲೂ ದಿನಕ್ಕೆ 2 ಸಾವಿರ ಲೀಟರ್ ಹಾಲು ವ್ಯಾಪಾರ ನಡೆಯುತ್ತೆ. ಇಲ್ಲಿಗೇ ಬಂದು ಗ್ರಾಹಕರು ಹಾಲು ತೆಗೆದುಕೊಂಡು ಹೋಗ್ತಾರೆ. ಉಳಿದ ಹಾಲನ್ನು ಹೋಟೆಲ್, ಟೀ ಸ್ಟಾಲ್ ಗಳಿಗೆ ಕೊಡ್ತಾರಂತೆ.
ಪಾಕೆಟ್ ಹಾಲಾದರೆ ರೈತರು ತಮ್ಮ ಮನೆಯಲ್ಲಿ ಹಾಲು ಕರೆದು ತಂದು ಡೈರಿಗೆ ಹಾಕ್ತಾರೆ. ಅಲ್ಲಿಂದ ಅದನ್ನು ಸಂಸ್ಕರಿಸಿ ಪಾಕೆಟ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಡೈರಿಗಳಲ್ಲಿ ಡಿಗ್ರಿ ಮೂಲಕ ಹಾಲಿನ ಗುಣಮಟ್ಟ ಪರೀಕ್ಷೆ ಮಾಡ್ತಾರೆ. ಆದರೂ ಕಲಬೆರಕೆ ಪ್ರಕರಣಗಳು ಇದ್ದೇ ಇರುತ್ತವೆ. ಅದರೆ ಇಲ್ಲಿ ಹಾಗಾಗಲ್ಲ. ಹಾಲು ಉತ್ಪಾದಕರು ಈ ಡೈರಿ ಬಳಿಯೇ ಹಸುಗಳನ್ನು ಕರೆತಂದು ಶುದ್ಧ ಹಾಲನ್ನಷ್ಟೇ ಕರೆದುಕೊಡುತ್ತಾರೆ. ಗುರುರಾಜ್ ಅವರು ಕೂಡಾ ಹೇಗೆ ಖರೀದಿ ಮಾಡಿದರೋ ಹಾಗೆಯೇ ಮಾರಾಟ ಮಾಡುತ್ತಾರೆ. ಒಂದು ಹನಿಯೂ ನೀರು ಬೆರೆಸುವುದಿಲ್ಲ.
ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ರಸ್ತೆ ತುಂಬಾ ಹಸುಗಳೇ ತುಂಬಿಕೊಂಡಿರುತ್ತವೆ.. ಹಸು ಸಾಕಾಣೆ ಮಾಡುವವರು ರಸ್ತೆಯಲ್ಲೇ ಹಾಲು ಕರೆಯುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯ. ಇನ್ನು ಹೊರಗಡೆ ಮೇಯಲು ಹೋಗಿರುವ ಹಸುಗಳು ಸಮಯಕ್ಕೆ ಸರಿಯಾಗಿ ಇಲ್ಲಿಗೆ ಬಂದ್ಬಿಡುತ್ತವೆ. ಹಾಲು ಕೊಟ್ಟು ಮತ್ತೆ ತಮ್ಮ ದಾರಿ ಹಿಡಿಯುತ್ತವೆ.