ಮೈಸೂರಿನ ಮೇಟಗಳ್ಳಿಯಲ್ಲಿ ಪತ್ತೆಯಾದ ವೀರಗಲ್ಲುಗಳು.
1 min read
ಮೈಸೂರಿನ ಹೊರವಲಯದಲ್ಲಿರುವ ಜಯಪುರದಲ್ಲಿ ಕೆಲವು ತಿಂಗಳುಗಳ ಹಿಂದೆ ವೀರಗಲ್ಲುಗಳು ಪತ್ತೆಯಾಗಿದ್ದವು. ಈ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನ ಮೇಟಗಳ್ಳಿಯಲ್ಲಿಯೂ ವೀರಗಲ್ಲುಗಳು ಪತ್ತೆಯಾಗಿವೆ. ೧೫ ನೇ ಶತಮಾನದ ಮೂರು ವೀರಗಲ್ಲುಗಳು ಪತ್ತೆಯಾಗಿದ್ದು, ಇವುಗಳು ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯದ್ದೆಂದು ಹೇಳಲಾಗಿದೆ.

ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಗ್ರಾಮಸ್ಥರ ಕಣ್ಣಿಗೆ ಈ ವೀರಗಲ್ಲುಗಳು ಬಿದ್ದಿದೆ. ಮಣ್ಣಿನಲ್ಲಿ ಒಂದು ವೀರಗಲ್ಲು ಹುದುಗಿದ್ದು ಗಿಡಗಂಟಿಗಳ ಮಧ್ಯೆ ಎರಡು ವೀರಗಲ್ಲುಗಳು ಪತ್ತೆಯಾಗಿದೆ. ಕಪ್ಪುಶಿಲೆಯಲ್ಲಿ ನಿರ್ಮಿಸಿರುವ ಪುರಾತನ ವೀರಗಲ್ಲುಗಳಿವು. ಮಣ್ಣಿನಲ್ಲಿ ಮತ್ತಷ್ಟು ಇಂತಹದ್ದೇ ಕಲ್ಲುಗಳು ಹುದುಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳಾದ ಸುನಿಲ್ ಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೀರಗಲ್ಲಿನಲ್ಲಿ ಮೂರು ಭಾಗ ಇದೆ. ಕೆಳಗಿನ ಭಾಗದಲ್ಲಿ ವೀರರು ಹೋರಾಡುತ್ತಿರುವ ದೃಶ್ಯ, ಮಧ್ಯದ ಭಾಗದಲ್ಲಿ ಹೋರಾಟಗಾರರು ಮಡಿದ ನಂತರ ಅಪ್ಸರೆಯರು ಅವರನ್ನು ಸ್ವರ್ಗಕ್ಕೆ ಕೊಂಡೊಯ್ಯುವ ದೃಶ್ಯ, ಮೇಲಿನ ಭಾಗದಲ್ಲಿ ಹೋರಾಟದಲ್ಲಿ ಮಡಿದವರಿಗೆ ಸ್ವರ್ಗ ಪ್ರಾಪ್ತಿಯಾಗಿ ಸೂರ್ಯ ಚಂದ್ರರು ಇರುವವರೆಗೆ ಅಜರಾಮರವಾಗಿ ಇರುವ ದೃಶ್ಯ ಕೆತ್ತನೆಯಾಗಿದೆ.
ವೀರಗಲ್ಲುಗಳನ್ನು ಸಂರಕ್ಷಿಸಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಗತಕಾಲದ ಇತಿಹಾಸ ವನ್ನು ಪರಿಚಯಿಸುವ ಉದ್ದೇಶ ಪುರಾತತ್ವ ಇಲಾಖೆಯದ್ದು. ಆದರೆ ಗ್ರಾಮಸ್ಥರು ಇದನ್ನು ತಾವೇ ರಕ್ಷಿಸುವುದಾಗಿ ಹೇಳಿದ್ದಾರೆ. ಗ್ರಾಮಸ್ಥರ ನಿರ್ಧಾರಕ್ಕೆ ಪುರಾತತ್ವ ಇಲಾಖೆಯವರು ಮಣಿದು, ಸದ್ಯಕ್ಕೆ ಇವುಗಳನ್ನು ವಶಕ್ಕೆ ತೆಗೆದುಕೊಳ್ಳುವ ನಿರ್ಧಾರ ಕೈ ಬಿಟ್ಟಿದ್ದಾರೆ. ವಿಜಯನಗರ ಸಾಮ್ರಾಜ್ಯಕ್ಕೂ ಮೇಟಗಳ್ಳಿ ಗ್ರಾಮಕ್ಕೂ ಸಂಬಂಧ ಇರುವ ಬಗ್ಗೆ ಶಾಸನಗಳಲ್ಲಿ ಶೋಧನೆಗೆ ಮುಂದಾಗಲು ಪುರಾತತ್ವ ಇಲಾಖೆ ನಿರ್ಧರಿಸಿದೆ.