Mon. Jan 25th, 2021

Namma Mysuru

History, News, Stories and much more

ಮೈಸೂರು ಅರಮನೆಯ ಭವ್ಯ ಇತಿಹಾಸದಲ್ಲಿದೆ ಏಳುಬೀಳಿನ ಹಾದಿ.

1 min read
369 Views

ಮೈಸೂರು ಅಂದರೆ ಅರಮನೆಗಳ ನಗರಿ. ರಾಜರ ಆಳ್ವಿಕೆ ಕಳೆದು ಎಷ್ಟು ದಶಕಗಳು ಕಳೆದರೂ ಮೈಸೂರಿನಲ್ಲಿ ಮಾತ್ರ ಅದರ ಕುರುಹುಗಳು ಇನ್ನೂ ದಟ್ಟವಾಗಿವೆ. ಮೈಸೂರು ಸಂಪ್ರದಾಯ, ಸಂಸ್ಕೃತಿಯನ್ನು ಮಾತ್ರವಲ್ಲ, ಸಾಂಸ್ಕೃತಿಕ ಕಟ್ಟಡಗಳನ್ನೂ ಹಾಗೇ ಉಳಿಸಿಕೊಂಡಿದೆ. ಅದಕ್ಕಾಗಿಯೇ ಇಂದಿಗೂ ಮೈಸೂರು ಅರಮನೆಗಳ ನಗರಿಯಾಗಿ ಉಳಿದುಕೊಂಡಿರುವುದು. ಈ ಹೆಸರಿಗೆ ಕಾರಣವಾಗಿರುವುದು ಮೈಸೂರಿನಲ್ಲಿರುವ ಹತ್ತಾರು ಅರಮನೆಗಳು. ಅದರಲ್ಲಿ ಪ್ರಮುಖವಾದುದು ಅಂಬಾವಿಲಾಸ ಅರಮನೆ.

ಅಂಬಾವಿಲಾಸ ಅರಮನೆ ನಮ್ಮ ಜನರನ್ನ ಮಾತ್ರವಲ್ಲ, ದೇಶ-ವಿದೇಶಗಳ ಜನರನ್ನು ಸೆಳೆಯುತ್ತದೆ. ಒಂದು ರೀತಿಯಲ್ಲಿ ಜಗತ್ತಿನ ಪ್ರಮುಖ‍ ಪ್ರವಾಸಿ ಸ್ಥಾನಗಳಲ್ಲಿ ಇದೂ ಕೂಡಾ ಒಂದು. ಅಂಬಾವಿಲಾಸ ಅರಮನೆಯನ್ನು 14ನೇ ಶತಮಾನದಲ್ಲಿಯೇ ಕಟ್ಟಲಾಗಿತ್ತು. ಇದರ ಅಳತೆ245*156 ಅಡಿ, ಅಂದರೆ 72 ಎಕರೆ ಪ್ರದೇಶ. ಅರಮನೆಯಲ್ಲಿ ಮೂರು ಮಹಡಿಗಳಿವೆ. ಅದರೊಂದಿಗೆ ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ. ಸಂಜೆಯ ಸಂದರ್ಭದಲ್ಲಿ ಲೈಟ್ ಗಳನ್ನು ಆನ್ ಮಾಡಿದ ಮೇಲಂತೂ ಇದರ ಅಂದ ನೋಡಲು ಎರಡು ಕಣ್ಣು ಸಾಲದು.

ಈ ಅರಮನೆ ಹಲವಾರು ಏಳುಬೀಳುಗಳನ್ನು ಕಂಡಿದೆ. 14ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಅರಮನೆ ಎಷ್ಟೋ ಬಾರಿ ನೆಲಕಚ್ಚಿ ಮತ್ತೆ ಎದ್ದುನಿಂತಿದೆ. ಉಳಿಪೆಟ್ಟು ತಿನ್ನುವ ಕಲ್ಲಿಗೆ ಮಾತ್ರ ಶಿಲೆಯಾಗುವ ಶಕ್ತಿ ಸಿಗುವುದು ಎಂಬುದಕ್ಕೆ ಈ ಅರಮನೆಯೇ ಸಾಕ್ಷಿ. ಇಷ್ಟು ವೈಭವಪೂರ್ಣವಾಗಿ ಕಟ್ಟಲ್ಪಟ್ಟಿದ್ದ ಅರಮನೆ ಮಧ್ಯದಲ್ಲಿ ಹಲವಾರು ಬಾರಿ ಬೀಳುತ್ತದೆ, ಏಳುತ್ತದೆ. ಅದು ನಡೆದುಬಂದ ಹಾದಿ ಕಠಿಣವಾದುದು.

  1. 1792- ಸಿಡಿಲು ಬಡಿದು ಭಾಗಶಃ ಹಾಳಾದ ಅರಮನೆ. ಆ ತಕ್ಷಣಕ್ಕೆ ನಡೆದ ರಿಪೇರಿ.
  2. 1794- ಟಿಪ್ಪು ಕಾಲದಲ್ಲಿ ಉರುಳಿಸಲ್ಪಟ್ಟ ಅರಮನೆ
  3. 1801- ಅದೇ ಸ್ಥಳದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಿಂದ ನಿರ್ಮಾಣವಾದ ಮರದ ಅರಮನೆ
  4. 1897-ರಾಜಕುಮಾರಿ ಜಯಲಕ್ಷಮ್ಮಣ್ಣಿ ಮದುವೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಬೆಂಕಿ
  5. 1897-ಹೊಸ ಅರಮನೆ ಕಾಮಗಾರಿ ಆರಂಭ
  6. 1912- ಇಂದು ಇರುವ ಅಂಬಾವಿಲಾಸ ಅರಮನೆಯ ಕಾಮಗಾರಿ ಸಂಪೂರ್ಣ

ಅಂಬಾವಿಲಾಸ ಅರಮನೆಯನ್ನ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ನೀಲಿನಕ್ಷೆ ತಯಾರಿಸಿದವರು ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್. ಆತ ಈ ಕೆಲಸ ಮಾಡಲು ಆ ಕಾಲಘಟ್ಟದಲ್ಲೇ 12,000 ರೂಪಾಯಿ ಪಡೆದಿದ್ದನಂತೆ. ಇದಕ್ಕೆ ವಿನ್ಯಾಸ ಮಾಡಿ, ಇದರ ಕೆಲಸ ಮಾಡುವ ಮುನ್ನ ಚಿತ್ರಕಲಾವಿದಾರನ್ನು ಯುರೋಪ್ ರಾಷ್ಟ್ರ, ಹಳೇಬೀಡು, ಬೇಲೂರು, ತಂಜಾವೂರು, ಮಧ್ಯಪ್ರದೇಶ, ಜಯಪುರ್ ಸೇರಿದಂತೆ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿತ್ತಂತೆ..! ಅವರೆಲ್ಲರ ಶ್ರಮಕ್ಕೆ ಪ್ರತಿಫಲವಾಗಿ ಇಂದಿಗೂ ಅರಮನೆ ಅಷ್ಟೇ ಭವ್ಯವಾಗಿ, ವಿಜೃಂಭಣೆಯಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಅರಮನೆ ಮುಂಭಾಗದಲ್ಲಿ ಏಳು ವಿಶಾಲವಾದ ಹಾಗೂ ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲೆ ಗಜಲಕ್ಷ್ಮಿಯ ಶಿಲ್ಪಕಲೆ ಕೂಡಾ ಇದೆ. ಚೌಕವಾದ ಕಂಬಗಳು. ಅಲ್ಲಿನ ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಅದರೊಂದಿಗೆ ಒಳಗೆ ಶುದ್ಧ ಚಿನ್ನದ ಲೇಪನವಿದೆ. ಅದರ ಮೇಲೆ ಗೋಪುರ, ವಿಶಾಲ ಮೈದಾನ, ನುಣುಪಾದ ನೆಲಹಾಸು, ಗಾಜಿನಿಂದ ವಿನ್ಯಾಸವಾಗಿರುವ ದರ್ಬಾರ್ ಹಾಲ್, ಗೊಂಬೆತೊಟ್ಟಿ..ಅದರ ಜೊತೆಗೆ ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು, ಸುಂದರ ಶಿಲ್ಪದ ಪ್ರವೇಶದ್ವಾರ.. ಇದು  ಅರಮನೆಯ ಸೊಬಗು.

ದರ್ಬಾರ್ ಹಾಲ್ ನಲ್ಲಿ ರಾಜರು ತಮ್ಮ ದರ್ಬಾರ್ ನಡೆಸಿತ್ತಿದ್ದರು. ಗೊಂಬೆತೊಟ್ಟಿಯಲ್ಲಿ ಆಗಿನ ಕಾಲದಲ್ಲಿ ಬಳಸುತ್ತಿದ್ದ ಗೊಂಬೆಗಳು ಇವೆ. ಅಲ್ಲೇ ಇರುವ ದಿವಾನ್-ಇ-ಆಮ್ ಕಲ್ಯಾಣ ಮಂಟಪದ ಗೋಡೆ ಮೇಲೆ ಬರೆದಿರುವ ಚಿತ್ತಾರಗಳು ನಮ್ಮ ಸಂಸ್ಕೃತಿ, ಆಗಿನ ಕಾಲದ ದಸರಾ ವೈಭವ, ನಮ್ಮ ಭವ್ಯ ಪರಂಪರೆ ಇವುಗಳನ್ನ ಸಾರುತ್ತದೆ.  ಆಗ ಅರಸರು ಕೂರುತ್ತಿದ್ದ 84 ಕೆ.ಜಿಯ ಚಿನ್ನದ ಕುಸುರಿ ಇರುವ ಮರದ ಅಂಬಾರಿ ಇಲ್ಲಿದೆ. ಅದರೊಂದಿಗೆ ಆಯುಧಶಾಲೆಯಲ್ಲಿ ಅಂದಿನ ಅರಸರು ಬಳಸುತ್ತಿದ್ದ ವಿವಿಧ ಆಯುಧಗಳು, ಖಡ್ಗ, ಸುರಗಿ, ವ್ಯಾಘ್ರನಖ (ಹುಲಿಯ ಉಗುರು), 20ನೇ ಶತಮಾನದ ಪಿಸ್ತೂಲು, ಬಂದೂಕುಗಳು ಇವೆ. ಅದರ ಜೊತೆಗೆ ವಿಶೇಷ ಆಕರ್ಷಣೆ ಎಂಬಂತೆ ರಣಧೀರ ಕಂಠೀರವ ಅವರು ಬಳಸುತ್ತಿದ್ದ ಖಡ್ಗ ವಜ್ರಮುಷ್ಠಿ ಕೂಡಾ ಇದೆ.

ಪ್ರಸ್ತುತ ಪ್ರತಿದಿನ ಅರಮನೆಗೆ ಸಾಕಷ್ಟು ಜನ ಪ್ರವಾಸಿಗರು ಬರುತ್ತಾರೆ. ದೇಶ-ವಿದೇಶಗಳಿಂದ ಬಂದು ಇಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಾರೆ. ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಬಂದು ಸಂಭ್ರಮಿಸುತ್ತಾರೆ. ರಜಾ ದಿನಗಳಲ್ಲಿ ಮೈಸೂರಿಗೆ ಬಂದರೆ ವಿಸಿಟಿಂಗ್ ಲಿಸ್ಟ್ ನಲ್ಲಿ ಬರುವ ಮೊದಲ ಸ್ಥಳವೇ ಅರಮನೆ.

Leave a Reply

Your email address will not be published. Required fields are marked *

Copyright © All rights reserved. | Designed by Savhn Tech Solutions.
error: Content is protected !!